ಪತ್ನಿ ಮೇಲೆ ಅನುಮಾನ; ಜೆಲಟಿನ್ ಕಡ್ಡಿ ಇಟ್ಟು ಮಾವನ ಮನೆ ಸ್ಫೋಟಿಸಿದ ಅಳಿಯ! ಇಬ್ಬರು ಸಾವು
ಮಂಗಳವಾರ ಬೆಳಗ್ಗೆ ಆಳಂದ ತಾಲೂಕಿನ ಮಾಟಕಿ ತಾಂಡಾದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಮನೆಯೊಂದು ಸಂಪೂರ್ಣ ಧ್ವಂಸಗೊಂಡಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಕಲಬುರಗಿ: ಪತ್ನಿ ಮೇಲೆ ಅನುಮಾನಗೊಂಡ ಪತಿ ಮಹಾಶಯನೋರ್ವ ತನ್ನ ಮಾವನ ಮನೆಯನ್ನು ಜಿಲಟಿನ್ ಕಡ್ಡಿಯನ್ನು ಇಟ್ಟು ಸ್ಫೋಟಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಮಂಗಳವಾರ ಬೆಳಗ್ಗೆ ಆಳಂದ ತಾಲೂಕಿನ ಮಾಟಕಿ ತಾಂಡಾದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಮನೆಯೊಂದು ಸಂಪೂರ್ಣ ಧ್ವಂಸಗೊಂಡಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಸೇವಾಲಾಲ್ ಬಲಿರಾಮ್ ರಾಠೋಡ್ (50) ಹಾಗೂ ಅವರ ಪುತ್ರಿ ಮೀರಾ ಸೇವಾಲಾಲ್ ರಾಠೋಡ್ (15) ಎಂದು ಗುರುತಿಸಲಾಗಿದೆ.
ಕಲ್ಲುಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಸೇವಾಲಾಲ್, ಪತ್ನಿಯ ನಡತೆ ಬಗ್ಗೆ ಅನುಮಾನ ಹೊಂದಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಪತಿ-ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಸೋಮವಾರವೂ ಇಬ್ಬರ ನಡುವೆ ಜಗಳವಾಗಿತ್ತು. ಇದರಿಂದ ಬೇಸತ್ತ ಪತ್ನಿ ಸವಿತಾ (40) ರಾತ್ರಿ ಸಮೀಪದಲ್ಲೇ ಇರುವ ತನ್ನ ತವರು ಮನೆಗೆ ತೆರಳಿದ್ದರು.
ಪತ್ನಿ, ಮಕ್ಕಳು, ಅತ್ತೆ-ಮಾವ ಹಾಗೂ ತನ್ನನ್ನೂ ಸೇರಿಸಿ ಎಲ್ಲರನ್ನೂ ಕೊಲ್ಲಲು ಸೇವಾಲಾಲ್ ನಿರ್ಧರಿಸಿದ್ದ ಎನ್ನಲಾಗಿದೆ. ಬಳಿಕ ಕೆಲಸ ಮಾಡುತ್ತಿದ್ದ ಕ್ವಾರಿಯಿಂದ ಜೆಲಟಿನ್ ಕಡ್ಡಿಗಳನ್ನು ತೆಗೆದುಕೊಂಡು ಬಂದು, ಮಂಗಳವಾರ ಬೆಳಗ್ಗೆ ಸುಮಾರು 10.30ಕ್ಕೆ ಮಾವನ ಮನೆಯಲ್ಲೇ ಸ್ಫೋಟ ಸಂಭವಿಸುವಂತೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದಲ್ಲಿ ಸೇವಾಲಾಲ್ ಮತ್ತು ಮಗಳು ಮೀರಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸವಿತಾ, ಪುತ್ರ ಪ್ರಕಾಶ್ (19) ಹಾಗೂ ನಂದಿನಿ ಚೌಹಾಣ್ (30) ಮತ್ತು ಅವರ ಪುತ್ರ ವಿವೇಕ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಮೃತರ ದೇಹಗಳು ಛಿದ್ರಗೊಂಡಿವೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಆಳಂದ ಪೊಲೀಸ್ ಠಾಣೆಯಲ್ಲಿ ಸವಿತಾ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಯುತ್ತಿದೆ ಎಂದು ಕಲಬುರಗಿ ಎಸ್‌ಪಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



