ಕೇಂದ್ರದ ಕೋಟ್ಯಂತರ ರೂ ಅನುದಾನವಿದ್ದರೂ ಪ್ರವಾಸೋದ್ಯಮ ಯೋಜನೆಗಳು ವಿಳಂಬ: ರಾಜ್ಯದ 3 ಯೋಜನೆಗಳಲ್ಲಿ ಶೂನ್ಯ ಪ್ರಗತಿ..!
ರಾಜ್ಯದ ಪ್ರವಾಸೋದ್ಯಮ ವಲಯಗಳ ಹಾಗೂ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ನೀಡಿದ ಉತ್ತರದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ಶಿವಮೊಗ್ಗ: ಕರ್ನಾಟಕದ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಮಂಜೂರಾಗಿದ್ದರೂ, ಹಲವು ಯೋಜನೆಗಳು ನಿರೀಕ್ಷಿತ ವೇಗದಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ.
ಸವದತ್ತಿಯ ಎರಡು ಯೋಜನೆಗಳು ಹಾಗೂ ಬೀದರ್‌ನ್ನು ಪಾರಂಪರಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಯೋಜನೆ ಸೇರಿದಂತೆ ಮೂರು ಪ್ರಮುಖ ಯೋಜನೆಗಳಲ್ಲಿ ಇದುವರೆಗೆ ಶೂನ್ಯ ಪ್ರಗತಿ ದಾಖಲಾಗಿದೆ.
ರಾಜ್ಯದ ಪ್ರವಾಸೋದ್ಯಮ ವಲಯಗಳ ಹಾಗೂ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ನೀಡಿದ ಉತ್ತರದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ಕೇಂದ್ರದ ವಿವಿಧ ಯೋಜನೆಗಳಡಿ ಮಂಜೂರಾದ ಇನ್ನೂ ಹಲವು ಕಾಮಗಾರಿಗಳೂ ನಿಧಾನಗತಿಯಲ್ಲಿ ಸಾಗುತ್ತಿದ್ದು, ಕೆಲವು ಯೋಜನೆಗಳು ಶೇ.10ರ ಆಸುಪಾಸಿನಲ್ಲಷ್ಟೇ ಪ್ರಗತಿ ಸಾಧಿಸಿವೆ.
ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಶೂನ್ಯ
ಪ್ರಸಾದ್ ಯೋಜನೆಯಡಿ 2024-25ರಲ್ಲಿ ಮಂಜೂರಾದ ರೂ.18.37 ಕೋಟಿ ವೆಚ್ಚದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಯೋಜನೆಯಲ್ಲಿ ಇದುವರೆಗೆ ಶೇ.0ರಷ್ಟು ಭೌತಿಕ ಪ್ರಗತಿ ದಾಖಲಾಗಿದೆ.
ಯೋಜನೆಯಡಿ ಯಾತ್ರಾರ್ಥಿಗಳ ಆಗಮನ ಕೇಂದ್ರ, ಕಾಯುವ ಸ್ಥಳಗಳು, ಮಾಹಿತಿ ಕೇಂದ್ರಗಳು, ಕೆಫೆಟೇರಿಯಾ, ಪ್ರಥಮ ಚಿಕಿತ್ಸಾ ಕೇಂದ್ರ, ಒಳಚರಂಡಿ ಸಂಸ್ಕರಣಾ ಘಟಕಗಳು, ಸೌರ ವಿದ್ಯುತ್ ಘಟಕ, ಪಾದಚಾರಿ ಮಾರ್ಗಗಳು ಹಾಗೂ ಉದ್ಯಾನವನ ಅಭಿವೃದ್ಧಿ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಿದೆ.
ಬೀದರ್ ಪರಂಪರಾ ಪ್ರವಾಸಿ ತಾಣ ಅಭಿವೃದ್ಧಿಯಲ್ಲೂ ಶೂನ್ಯ ಪ್ರಗತಿ
2025-26ರಲ್ಲಿ ರೂ.25 ಕೋಟಿ ವೆಚ್ಚದಲ್ಲಿ ಚಾಲೆಂಜ್ ಆಧಾರಿತ ಪ್ರವಾಸಿ ತಾಣ ಅಭಿವೃದ್ಧಿ ಯೋಜನೆಯಡಿ ಮಂಜೂರಾದ ಬೀದರ್‌ನ್ನು ಪಾರಂಪರಿಕ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸುವ ಯೋಜನೆಯಲ್ಲೂ ಶೇ.0ರಷ್ಟು ಪ್ರಗತಿ ದಾಖಲಾಗಿದೆ.
ಯೋಜನೆಯಡಿ ಪಾರಂಪರಿಕ ನಡಿಗೆ ಮಾರ್ಗ, ವಿದ್ಯುತ್ ವಾಹನಗಳ ಸಂಚಾರ ವ್ಯವಸ್ಥೆ, ವ್ಯವಸ್ಥಿತ ವಾಹನ ನಿಲುಗಡೆ, ಕುಡಿಯುವ ನೀರಿನ ಘಟಕಗಳು, ಕಥನ ಕೇಂದ್ರಗಳು ಹಾಗೂ ಪಾರಂಪರಿಕ ಬೆಳಕಿನ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ.
ಪಾಪನಾಶ್ ಕೆರೆಯಲ್ಲೂ ಶೌಚಾಲಯಗಳು, ಆಹಾರ ಮಳಿಗೆಗಳು, ವೀಕ್ಷಣಾ ಗೋಪುರ, ಸ್ಮರಣಿಕೆ ಅಂಗಡಿಗಳು, ಮಕ್ಕಳ ಉದ್ಯಾನ, ಅರಣ್ಯ ನಡಿಗೆ ಮಾರ್ಗ, 1.5 ಕಿ.ಮೀ ಸೈಕಲ್ ಟ್ರ್ಯಾಕ್, ಜಿಪ್‌ಲೈನ್ ಹಾಗೂ ರೋಪ್ ಕೋರ್ಸ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.
ರೂ.100 ಕೋಟಿ ಸವದತ್ತಿ ಯಲ್ಲಮ್ಮಗುಡ್ಡ ಯೋಜನೆಯೂ ಶೂನ್ಯ
2024-25ರಲ್ಲಿ ರಾಜ್ಯಗಳಿಗೆ ಬಂಡವಾಳ ಹೂಡಿಕೆಗಾಗಿ ವಿಶೇಷ ನೆರವು ಯೋಜನೆಯಡಿ ರೂ.100 ಕೋಟಿ ಅಂದಾಜು ವೆಚ್ಚದಲ್ಲಿ ಮಂಜೂರಾದ ಸವದತ್ತಿ ಯಲ್ಲಮ್ಮಗುಡ್ಡ ಅಭಿವೃದ್ಧಿ ಯೋಜನೆಯಲ್ಲೂ ಇದುವರೆಗೆ ಯಾವುದೇ ಭೌತಿಕ ಪ್ರಗತಿ ದಾಖಲಾಗಿಲ್ಲ.
ಯೋಜನೆಯಡಿ ಸರತಿ ಸಂಕೀರ್ಣ, 300 ಕಾರುಗಳ ವಾಹನ ನಿಲುಗಡೆ ವ್ಯವಸ್ಥೆ, ಅನ್ನದಾಸೋಹ ಸಂಕೀರ್ಣ, ವಿವರಣಾ ಕೇಂದ್ರ, ಆಡಳಿತ ಕಚೇರಿ ಹಾಗೂ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರ ನಿರ್ಮಿಸುವ ಉದ್ದೇಶವಿದೆ.
ಮಂದಗತಿಯಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಕಾಮಗಾರಿ
ಈ ಮೂರು ಯೋಜನೆಗಳಿಗೆ ಮಾತ್ರ ಪ್ರಗತಿಯ ಕೊರತೆ ಸೀಮಿತವಾಗಿಲ್ಲ. ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 2023-24ರಲ್ಲಿ ಪ್ರಸಾದ್ ಯೋಜನೆಯಡಿ ಮಂಜೂರಾದ ರೂ.45.38 ಕೋಟಿ ವೆಚ್ಚದ ಯೋಜನೆಯಲ್ಲೂ ಕೇವಲ ಶೇ.10.88ರಷ್ಟು ಪ್ರಗತಿ ದಾಖಲಾಗಿದೆ.
ದೇವಸ್ಥಾನದ ಆವರಣ ಅಭಿವೃದ್ಧಿ, ಮಹಿಷಾಸುರ ಪ್ಲಾಜಾದಲ್ಲಿ ಯಾತ್ರಾರ್ಥಿಗಳ ಸೌಲಭ್ಯಗಳು, ದೇವಿಕೆರೆ ಅಭಿವೃದ್ಧಿ, ನಂದಿ ಪ್ರತಿಮೆ ಮಂಟಪ ಅಭಿವೃದ್ಧಿ, ದೇವಿ ಪಾದ ಪುನರ್ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳು ಯೋಜನೆಯಲ್ಲಿವೆ.
ಇದರ ಜೊತೆಗೆ ಸಿಸಿಟಿವಿ ಕ್ಯಾಮೆರಾಗಳು, ಸಾರ್ವಜನಿಕ ಪ್ರಕಟಣಾ ವ್ಯವಸ್ಥೆ, ಲೋಹ ಪತ್ತೆ ಸಾಧನಗಳು, ಬ್ಯಾಗ್ ಸ್ಕ್ಯಾನರ್‌ಗಳು ಹಾಗೂ ಜನರ ಸಂಖ್ಯೆಯನ್ನು ಲೆಕ್ಕಹಾಕುವ ಸಾಧನಗಳ ಅಳವಡಿಕೆಯೂ ಯೋಜನೆಯ ಭಾಗವಾಗಿದೆ.
ತಾತಗುಣಿಯ ರೋರಿಕ್-ದೇವಿಕಾ ರಾಣಿ ಎಸ್ಟೇಟ್ ಯೋಜನೆಯೂ ತಡ
ಬೆಂಗಳೂರಿನ ತಾತಗುಣಿಯಲ್ಲಿರುವ ರೋರಿಕ್ ಮತ್ತು ದೇವಿಕಾ ರಾಣಿ ಎಸ್ಟೇಟ್ ಅಭಿವೃದ್ಧಿಗೆ 2024-25ರಲ್ಲಿ ಇದೇ ಬಂಡವಾಳ ಹೂಡಿಕೆ ಯೋಜನೆಯಡಿ ಮಂಜೂರಾದ ರೂ.99.17 ಕೋಟಿ ಯೋಜನೆಯಲ್ಲೂ ಕೇವಲ ಶೇ.10.45ರಷ್ಟು ಪ್ರಗತಿ ದಾಖಲಾಗಿದೆ.
ಯೋಜನೆಯಡಿ ಪ್ರವೇಶ ಪ್ಲಾಜಾ, ವಸತಿ ಪ್ಲಾಜಾ, ಜಲಾಭಿಮುಖ ಪ್ಲಾಜಾ, ಸುಗಂಧ ಸಸ್ಯಗಳ ಉದ್ಯಾನ, ಪರಿಸರ ಪ್ರವಾಸೋದ್ಯಮ ಸೌಲಭ್ಯಗಳು ಹಾಗೂ ಒಳಚರಂಡಿ ಸಂಸ್ಕರಣಾ ಘಟಕ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



