ಕರಾವಳಿಯಲ್ಲಿ ಅಭಿವೃದ್ಧಿಯ ಅಲೆ: 16 ಸಾವಿರ ಕೋಟಿ ರೂ ಪ್ಯಾಕೇಜ್‌ಗೆ ಸಂಪುಟ ಒಪ್ಪಿಗೆ; ಪ್ರವಾಸೋದ್ಯಮ, ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು..!
ಸಂಪುಟದ ನಿರ್ಧಾರಗಳಲ್ಲಿ ಪ್ರವಾಸೋದ್ಯಮಕ್ಕೆ ಪ್ರಮುಖ ಆದ್ಯತೆ ನೀಡಲಾಗಿದೆ. ಕರಾವಳಿ-ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ-2026ಕ್ಕೆ ಅನುಮೋದನೆ ನೀಡಲಾಗಿದ್ದು, ಇದರಡಿ 9 ಪ್ರವಾಸೋದ್ಯಮ ವಲಯಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

ಮಂಗಳೂರು: ಕರಾವಳಿ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸಚಿವ ಸಂಪುಟ ಶುಕ್ರವಾರ ರೂ. 16,000 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಪ್ಯಾಕೇಜ್ ಘೋಷಿಸಿದೆ.
ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರವಾಸೋದ್ಯಮ, ಮೂಲಸೌಕರ್ಯ, ಉನ್ನತ ಶಿಕ್ಷಣ, ಆರೋಗ್ಯ, ಮೀನುಗಾರಿಕೆ, ರಸ್ತೆ ಸಂಪರ್ಕ ಹಾಗೂ ನಗರಾಭಿವೃದ್ಧಿಗೆ ಸಂಬಂಧಿಸಿದ ಹಲವು ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಾಗರಿಕ ಮೂಲಸೌಕರ್ಯ ಮತ್ತು ಸಾರ್ವಜನಿಕ ಸೇವೆಗಳನ್ನು ಬಲಪಡಿಸುವುದರ ಜತೆಗೆ ಕರಾವಳಿ ಪ್ರದೇಶವನ್ನು ಪ್ರಮುಖ ಪ್ರವಾಸೋದ್ಯಮ ಹಾಗೂ ನೀಲಿ ಆರ್ಥಿಕತೆಯ ಕೇಂದ್ರವನ್ನಾಗಿ ರೂಪಿಸುವ ಉದ್ದೇಶದಿಂದ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಂಪುಟದ ನಿರ್ಧಾರಗಳಲ್ಲಿ ಪ್ರವಾಸೋದ್ಯಮಕ್ಕೆ ಪ್ರಮುಖ ಆದ್ಯತೆ ನೀಡಲಾಗಿದೆ. ಕರಾವಳಿ-ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ-2026ಕ್ಕೆ ಅನುಮೋದನೆ ನೀಡಲಾಗಿದ್ದು, ಇದರಡಿ 9 ಪ್ರವಾಸೋದ್ಯಮ ವಲಯಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಪ್ರವಾಸೋದ್ಯಮ ಯೋಜನೆಗಳನ್ನು ಮೂಲಸೌಕರ್ಯ ಯೋಜನೆಗಳೆಂದು ಪರಿಗಣಿಸುವುದರಿಂದ ಹೂಡಿಕೆದಾರರಿಗೆ ಹೆಚ್ಚಿನ ಅವಧಿಯ ಸಾಲ ಮರುಪಾವತಿ ಸೇರಿದಂತೆ ಹಲವು ಸೌಲಭ್ಯಗಳು ದೊರೆಯಲಿವೆ. ಕರಾವಳಿಯಲ್ಲಿ ಪ್ರವಾಸೋದ್ಯಮ ಸ್ನೇಹಿ ಅಭಿವೃದ್ಧಿಗೆ ಅನುಕೂಲವಾಗುವಂತೆ ಕರಾವಳಿ ನಿಯಂತ್ರಣ ವಲಯ ನಿಯಮಗಳಲ್ಲಿ ತಿದ್ದುಪಡಿ ತರಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಇದೇ ವೇಳೆ ಮಂಗಳೂರಿನ ಮೀನುಗಾರಿಕಾ ಕಾಲೇಜನ್ನು ಮೀನುಗಾರಿಕೆ ಮತ್ತು ನೀಲಿ ಆರ್ಥಿಕತೆ ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿಸಲು ಸಂಪುಟ ಅನುಮೋದನೆ ನೀಡಿದೆ.
ವಿದ್ಯಾರ್ಥಿಗಳ ಪ್ರವೇಶ ಸಾಮರ್ಥ್ಯವನ್ನು 60ರಿಂದ 200ಕ್ಕೆ ಹೆಚ್ಚಿಸಲಾಗುತ್ತಿದ್ದು, ಇದಕ್ಕಾಗಿ ರೂ. 11.5 ಕೋಟಿ ಮೀಸಲಿಡಲಾಗಿದೆ. ಈ ಪರಿವರ್ತನೆಯ ಮೇಲ್ವಿಚಾರಣೆಗೆ ವಿಶೇಷ ಅಧಿಕಾರಿಯನ್ನೂ ನೇಮಿಸಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ಕರ್ನಾಟಕ ಸಮುದ್ರ ಜೈವಿಕ ತಂತ್ರಜ್ಞಾನ ಮತ್ತು ನೀಲಿ ಆರ್ಥಿಕತೆ ಸಂಸ್ಥೆ ಸ್ಥಾಪಿಸುವ ಕುರಿತು ರೂಪುರೇಷೆ ಸಿದ್ಧಪಡಿಸುವಂತೆ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಗೆ ಸೂಚಿಸಲಾಗಿದೆ.
ಪ್ರಮುಖ ಮೂಲಸೌಕರ್ಯ ಯೋಜನೆಗಳ ಪೈಕಿ 12 ಕರಾವಳಿ ಕೇಂದ್ರಗಳನ್ನು ಸಂಪರ್ಕಿಸುವ 343 ಕಿ.ಮೀ. ಕರಾವಳಿ ಜಲಸಾರಿಗೆ ವ್ಯವಸ್ಥೆಗೆ ತಾತ್ವಿಕ ಅನುಮೋದನೆ ನೀಡಲಾಗಿದೆ. ಉತ್ತರ ಕನ್ನಡದ ಮಂಕಿ ಬಂದರಿನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ ರೂ.6,925 ಕೋಟಿ ವೆಚ್ಚದಲ್ಲಿ ಬಹುಉದ್ದೇಶದ ಬಂದರು ಮತ್ತು ಹಡಗು ನಿರ್ಮಾಣ ಘಟಕ ಅಭಿವೃದ್ಧಿಪಡಿಸುವ ಯೋಜನೆಗೂ ಒಪ್ಪಿಗೆ ನೀಡಲಾಗಿದೆ.
ಭಾರತೀಯ ನೌಕಾಪಡೆಯ ಅನುಮತಿಗೆ ಒಳಪಟ್ಟು ಕಾರವಾರ ವಿಮಾನ ನಿಲ್ದಾಣವನ್ನು ವಿಸ್ತರಿಸಲು ಹಾಗೂ ನಾಗರಿಕ ವಿಮಾನಗಳ ಕಾರ್ಯಾಚರಣೆಗೆ ಅವಕಾಶ ಕಲ್ಪಿಸಲು ಸಂಪುಟ ಅನುಮೋದನೆ ನೀಡಿದೆ.
ಆರೋಗ್ಯ ಕ್ಷೇತ್ರಕ್ಕೂ ವಿಶೇಷ ಆದ್ಯತೆ ನೀಡಲಾಗಿದ್ದು, ಮಂಗಳೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ ಮತ್ತು ಜಯದೇವ ಹೃದಯ ವಿಜ್ಞಾನ ಸಂಸ್ಥೆಯ ಘಟಕಗಳನ್ನು ಸ್ಥಾಪಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ 200 ಹಾಸಿಗೆಗಳನ್ನು ನಿರ್ಮಿಸಲು, ಪುತ್ತೂರು ವೈದ್ಯಕೀಯ ಕಾಲೇಜಿನ ಮೂಲಸೌಕರ್ಯ ಅಭಿವೃದ್ಧಿಗೆ ರೂ.425 ಕೋಟಿ ಹಾಗೂ ಕದ್ರಿಯಲ್ಲಿ 5 ಎಕರೆ ಪ್ರದೇಶದಲ್ಲಿ ಮಂಗಳೂರು ಕಣ್ಣಿನ ಆಸ್ಪತ್ರೆ ಯೋಜನೆಗೆ ಅನುಮೋದನೆ ನೀಡಲಾಗಿದೆ.
ಮಂಗಳೂರು ನಗರದಲ್ಲಿ ರಸ್ತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ರೂ.400 ಕೋಟಿ ಮಂಜೂರು ಮಾಡಲಾಗಿದೆ. ಗುರುಪುರ ನದಿ, ಕೊಡಿಕಲ್, ತಣ್ಣೀರುಬಾವಿ, ತ್ರಾಸಿ, ಮಲ್ಪೆ ಸೇರಿದಂತೆ ಹಲವು ಕರಾವಳಿ ತಾಣಗಳಲ್ಲಿ ಪ್ರವಾಸೋದ್ಯಮ ಯೋಜನೆಗಳಿಗೂ ಅನುಮೋದನೆ ನೀಡಲಾಗಿದೆ. ಕುಡಿಯುವ ನೀರು, ಸೇತುವೆ, ಮೀನುಗಾರಿಕೆ, ಕ್ರೀಡೆ ಹಾಗೂ ನಗರ ಮೂಲಸೌಕರ್ಯಕ್ಕೆ ಸಂಬಂಧಿಸಿದ ಹಲವು ಯೋಜನೆಗಳಿಗೂ ಸಂಪುಟ ಒಪ್ಪಿಗೆ ನೀಡಿದೆ.
ಸಚಿವ ಸಂಪುಟದ ಪ್ರಮುಖ ಅನುಮೋದನೆಗಳು...
12 ಕರಾವಳಿ ಕೇಂದ್ರಗಳನ್ನು ಸಂಪರ್ಕಿಸುವ 343 ಕಿ.ಮೀ. ಕರಾವಳಿ ಜಲಸಾರಿಗೆ ವ್ಯವಸ್ಥೆ
ಮಂಗಳೂರು ನಗರದ ರಸ್ತೆ ಹಾಗೂ ಮೂಲಸೌಕರ್ಯಕ್ಕೆ ರೂ.400 ಕೋಟಿ
ಉಳ್ಳಾಲ-ಕೋಟೆಪುರದಲ್ಲಿ ದೋಣಿ ಆಶ್ರಯ ತಾಣಕ್ಕೆ ರೂ.20 ಕೋಟಿ
ಪುತ್ತೂರು ವೈದ್ಯಕೀಯ ಕಾಲೇಜಿನ ಕಟ್ಟಡ, ವಿದ್ಯಾರ್ಥಿ ನಿಲಯ ಮತ್ತು ವಸತಿ ಗೃಹಗಳಿಗೆ ರೂ.425 ಕೋಟಿ
ಉತ್ತರ ಕನ್ನಡದ ಕಾರವಾರ, ಭಟ್ಕಳ ಮತ್ತು ಅಂಕೋಲಾ ತಾಲೂಕುಗಳ 7 ದ್ವೀಪಗಳನ್ನು ಪರಿಸರ ಸ್ನೇಹಿ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ರೂ.307.71 ಕೋಟಿ
ಉಡುಪಿ ಜಿಲ್ಲೆಯ ಆಯಬ, ದರಿಯಾ ಮತ್ತು ಮಲ್ಪೆ ದ್ವೀಪಗಳನ್ನು ಪರಿಸರ ಪ್ರವಾಸೋದ್ಯಮ ತಾಣಗಳಾಗಿ ಅಭಿವೃದ್ಧಿಪಡಿಸಲು ರೂ.279.03 ಕೋಟಿ
ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ ಮಂಗಳೂರಿನ ಗುರುಪುರ ನದಿ ಅಭಿವೃದ್ಧಿಗೆ ರೂ.125.43 ಕೋಟಿ
ಕುಂದಾಪುರ, ಉಡುಪಿ ಮತ್ತು ಪುತ್ತೂರಿನಲ್ಲಿ ಬಾಕಿ ಉಳಿದಿರುವ ಕುಡಿಯುವ ನೀರಿನ ಕಾಮಗಾರಿಗಳಿಗೆ ರೂ.167.11 ಕೋಟಿ
ಮಂಗಳೂರಿನ ಲೈಟ್‌ಹೌಸ್ ಸುತ್ತಮುತ್ತ ಪ್ರವಾಸೋದ್ಯಮ ಮತ್ತು ಆತಿಥ್ಯ ಮೂಲಸೌಕರ್ಯ ಅಭಿವೃದ್ಧಿಗೆ ರೂ.60.34 ಕೋಟಿ
ವಿಟ್ಲ ಪಟ್ಟಣದಲ್ಲಿ ಕುಡಿಯುವ ನೀರು ಪೂರೈಕೆಗೆ ರೂ.94 ಕೋಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




