Vomiting, unpaid fares: ಕುಡುಕ ಪ್ರಯಾಣಿಕರ ಹುಚ್ಚಾಟ; ಬೆಂಗಳೂರು ಕ್ಯಾಬ್ ಚಾಲಕರಿಗೆ ಸಮಸ್ಯೆ!
ವಿಶೇಷವಾಗಿ ಪ್ರಯಾಣ ಮುಗಿದ ನಂತರ ಆ್ಯಪ್‌ಗಳು ಗ್ರಾಹಕರ ಸಂಪರ್ಕ ವಿವರಗಳನ್ನು ಮರೆಮಾಚುವುದರಿಂದ (masking) ಹಣ ವಸೂಲಿ ಮಾಡುವುದು ಕಷ್ಟಕರವಾಗುತ್ತದೆ. ದೂರದ ಪ್ರಯಾಣ ಮತ್ತು ವಿಮಾನ ನಿಲ್ದಾಣದ ಟ್ರಿಪ್‌ಗಳ ಸಂದರ್ಭದಲ್ಲಿ ಈ ಸಮಸ್ಯೆ ಹೆಚ್ಚು ಗಂಭೀರವಾಗಿರುತ್ತದೆ.

ಬೆಂಗಳೂರು: ತಡರಾತ್ರಿ ಕುಡುಕ ಪ್ರಯಾಣಿಕರ ಹುಚ್ಚಾಟ ಮಿತಿ ಮೀರುತ್ತಿದ್ದು, ಅವರನ್ನು ಕರೆದೊಯ್ಯುವ ನಗರದ ಆ್ಯಪ್-ಆಧಾರಿತ ಕ್ಯಾಬ್ ಚಾಲಕರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕಾರಿನಲ್ಲಿ ವಾಂತಿ ಮಾಡಿಕೊಳ್ಳುವುದು, ಪ್ರಯಾಣದ ದರ ಪಾವತಿಸಲು ನಿರಾಕರಣೆ ಮತ್ತು ಸುರಕ್ಷಿತವಾಗಿ ಮನೆ ತಲುಪಿಸಲು ಭದ್ರತಾ ಸಿಬ್ಬಂದಿಯ ಸಹಾಯದ ಅಗತ್ಯವಿರುವುದು ಮುಂತಾದ ಘಟನೆಗಳು ವರದಿಯಾಗುತ್ತಿವೆ.
ರಾತ್ರಿ ವೇಳೆ ಪ್ರಯಾಣಿಕರು ಕೆಲವೊಮ್ಮೆ ತಮ್ಮ ಕಾರಿನಲ್ಲಿ ವಾಂತಿ ಮಾಡಿಕೊಳ್ಳುತ್ತಾರೆ. ಇದನ್ನು ಸ್ವಚ್ಛಗೊಳಿಸಲು 500 ರೂ.ವರೆಗೂ ಖರ್ಚಾಗಬಹುದು. ನಾವೇ ಅದನ್ನು ತೊಳೆಯಲು ಸಾಧ್ಯವಿಲ್ಲ, ಸ್ವಚ್ಛಗೊಳಿಸಲು ಕಾರನ್ನು ಬೇರೆಡೆಗೆ ನೀಡಬೇಕಾಗುತ್ತದೆ. ಪ್ರಯಾಣಿಕರು ಈ ವೆಚ್ಚವನ್ನು ಭರಿಸಲು ನಿರಾಕರಿಸಿದಾಗ ನಷ್ಟ ಇನ್ನಷ್ಟು ಹೆಚ್ಚಾಗುತ್ತದೆ ಎಂದು 2017ರಿಂದಲೂ ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಯಲಹಂಕದ ನಿವಾಸಿ ಅರ್ಫಾತ್ ವಿವರಿಸಿದರು.
ಕುಡಿದ ಮಹಿಳಾ ಪ್ರಯಾಣಿಕರಿಗೆ ತಮ್ಮ ಮನೆಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ ಅಥವಾ ಅವರು ತಲುಪಬೇಕಾದ ಸ್ಥಳ ಬರುವ ಮುನ್ನವೇ ನಿದ್ದೆಗೆ ಹೋಗುವುದು ಮುಂತಾದ ಸಮಸ್ಯೆಗಳ ಬಗ್ಗೆಯೂ ಚಾಲಕ ಪ್ರಸ್ತಾಪಿಸಿದರು. ಇಂತಹ ಸಂದರ್ಭಗಳಲ್ಲಿ, ಅಪಾರ್ಟ್ಮೆಂಟ್ ಭದ್ರತಾ ಸಿಬ್ಬಂದಿಯ ಸಹಾಯ ಪಡೆಯುವುದು ಅಥವಾ ಸಂಬಂಧಿಕರು ಬರುವವರೆಗೆ ಕಾಯುವುದು ಅನಿವಾರ್ಯವಾಗುತ್ತದೆ. ಅವರ ಸುರಕ್ಷತೆಯ ಬಗ್ಗೆ ನಮಗೆ ಆತಂಕವಿರುತ್ತದೆ ಎಂದು ಅರ್ಫಾತ್ ಹೇಳಿದರು.
ಮತ್ತೊಬ್ಬ ಆ್ಯಪ್-ಆಧಾರಿತ ಕ್ಯಾಬ್ ಚಾಲಕ ಎನ್. ಅಶೋಕ್, ಪ್ರಯಾಣದ ದರ ಪಾವತಿಸದಿರುವುದು ಮತ್ತೊಂದು ಪ್ರಮುಖ ಸಮಸ್ಯೆ ಎಂದರು. ಪ್ರಯಾಣಿಕರು ತಾವು ತಲುಪಬೇಕಾದ ಸ್ಥಳ ತಲುಪಿದ ನಂತರ ನಿದ್ದೆ ಹೋಗುವುದು ಅಥವಾ ಹಣ ನೀಡಲು ನಿರಾಕರಿಸುವುದು ನಡೆಯುತ್ತದೆ ಎಂದು ಅವರು ತಿಳಿಸಿದರು.
ವಿಶೇಷವಾಗಿ ಪ್ರಯಾಣ ಮುಗಿದ ನಂತರ ಆ್ಯಪ್‌ಗಳು ಗ್ರಾಹಕರ ಸಂಪರ್ಕ ವಿವರಗಳನ್ನು ಮರೆಮಾಚುವುದರಿಂದ (masking) ಹಣ ವಸೂಲಿ ಮಾಡುವುದು ಕಷ್ಟಕರವಾಗುತ್ತದೆ. ದೂರದ ಪ್ರಯಾಣ ಮತ್ತು ವಿಮಾನ ನಿಲ್ದಾಣದ ಟ್ರಿಪ್‌ಗಳ ಸಂದರ್ಭದಲ್ಲಿ ಈ ಸಮಸ್ಯೆ ಹೆಚ್ಚು ಗಂಭೀರವಾಗಿರುತ್ತದೆ. ಏಕೆಂದರೆ ಇಂತಹ ಪ್ರಯಾಣಗಳಿಗೆ ದರವು 800 ರಿಂದ 1,000 ರೂ. ಅಥವಾ ಅದಕ್ಕಿಂತ ಹೆಚ್ಚಿರಬಹುದು ಎಂದು ಚಾಲಕರು ಹೇಳಿದರು.
ಅಲ್ಲದೆ, ಒಂದಕ್ಕಿಂತ ಹೆಚ್ಚು ಕಡೆ ಪ್ರಯಾಣಿಕರನ್ನು ಇಳಿಸುವುದು (multiple drops) ಮತ್ತು ಗುಂಪು ಪ್ರಯಾಣದ ಸಂದರ್ಭಗಳಲ್ಲಿಯೂ ವಿವಾದ ಹುಟ್ಟಿಕೊಳ್ಳುತ್ತವೆ. ಓಲಾ-ಊಬರ್ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ತನ್ವೀರ್ ಪಾಷಾ, ಕೋರಮಂಗಲದ ಗರುಡ ಮಾಲ್ ಬಳಿ ನಡೆದಿದೆ ಎನ್ನಲಾದ ಘಟನೆಯೊಂದನ್ನು ಹೇಳಿದರು. ವಿಪರೀತವಾಗಿ ಕುಡಿದಿದ್ದ ಮಹಿಳೆಯೊಬ್ಬಳು ವಾಂತಿ ಮಾಡುತ್ತಿದ್ದಳು ಹಾಗೂ ಸರಿಯಾಗಿ ನಿಲ್ಲಲು ಅಥವಾ ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಳು. ಚಾಲಕ ಆಕೆಗೆ ಸಹಾಯ ಮಾಡಲು ಮುಂದಾದಾಗ, ಅದನ್ನು ವಿರೋಧಿಸಿ ಆತನ ಮೇಲೆ ಆಕೆ ಕೂಗಾಡಿದಳು.
ಈ ಗದ್ದಲದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಬಳಿಕ ಆಕೆಯ ಗೆಳೆಯ ಅಲ್ಲಿಗೆ ಬಂದು, ಪ್ರಯಾಣದ ದರವನ್ನು ಪಾವತಿಸದೆಯೇ ಆಕೆಯನ್ನು ಕರೆದೊಯ್ದನು. ಮರುದಿನ ಆ ಜೋಡಿಯು ಚಾಲಕನ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿತು ಮತ್ತು ಆತ ಅತ್ಯಾಚಾರಕ್ಕೆ ಯತ್ನಿಸಿದನೆಂದು ಆರೋಪಿಸಿತು ಎಂದು ಪಾಷಾ ತಿಳಿಸಿದರು. ಜೀವನ ವೆಚ್ಚಗಳು ಏರುತ್ತಿರುವಾಗ ಮತ್ತು ಸಂಚಾರ ದಟ್ಟಣೆಯಿಂದಾಗಿ ದೈನಂದಿನ ಆದಾಯ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ಚಾಲಕರು ಇಂತಹ ಘಟನೆಗಳನ್ನು ಎದುರಿಸಬೇಕಾಗಿದೆ ಎಂದು ಪಾಷಾ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



