ಬನ್ನೇರುಘಟ್ಟಕ್ಕೆ ಹೊಸ ಅತಿಥಿ ಆಗಮನ: Hippo ಮರಿ ಜನನ; ದತ್ತು ಪಡೆದವರಿಗೆ ಹೆಸರಿಡುವ ಅವಕಾಶ..!
ಕಳೆದ ಮೇ 27ರಂದು 17 ವರ್ಷದ ತಾಯಿ 'ದಶ್ಯಾ' ಮತ್ತು 23 ವರ್ಷದ ತಂದೆ 'ನಾಗ'ನಿಗೆ ಈ ಗಂಡು ಮರಿ ಜನಿಸಿತ್ತು. ಜನನದ ಆರಂಭಿಕ ದಿನಗಳಲ್ಲಿ ತಾಯಿ ಮತ್ತು ಮರಿಯನ್ನು ವೈದ್ಯರ ಕಟ್ಟುನಿಟ್ಟಾದ ನಿಗಾದಲ್ಲಿ ಇಡಲಾಗಿತ್ತು.

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ (BBP) ಹೊಸ ಅತಿಥಿಯ ಆಗಮನವಾಗಿದೆ. ಮೇ ತಿಂಗಳಲ್ಲಿ ಜನಿಸಿದ ಮುದ್ದಾದ ಗಂಡು ಹಿಪ್ಪೋ (Hippopotamus) ಮರಿಯನ್ನು ಸಾರ್ವಜನಿಕರ ವೀಕ್ಷಣೆಗಾಗಿ ಮುಕ್ತಗೊಳಿಸಲಾಗಿದ್ದು, ಈ ಮರಿಯನ್ನು ದತ್ತು ಪಡೆದು ಹೆಸರಿಡಲು ಸಾರ್ವಜನಿಕರಿಗೆ ಹಾಗೂ ಸಂಸ್ಥೆಗಳಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ.
ಕಳೆದ ಮೇ 27ರಂದು 17 ವರ್ಷದ ತಾಯಿ 'ದಶ್ಯಾ' ಮತ್ತು 23 ವರ್ಷದ ತಂದೆ 'ನಾಗ'ನಿಗೆ ಈ ಗಂಡು ಮರಿ ಜನಿಸಿತ್ತು. ಜನನದ ಆರಂಭಿಕ ದಿನಗಳಲ್ಲಿ ತಾಯಿ ಮತ್ತು ಮರಿಯನ್ನು ವೈದ್ಯರ ಕಟ್ಟುನಿಟ್ಟಾದ ನಿಗಾದಲ್ಲಿ ಇಡಲಾಗಿತ್ತು.
ಇದೀಗ ಎರಡು ತಿಂಗಳ ಬಳಿಕ ತಾಯಿ-ಮರಿ ಇಬ್ಬರೂ ಆರೋಗ್ಯವಾಗಿದ್ದು, ಸಾರ್ವಜನಿಕರ ವೀಕ್ಷಣೆಗಾಗಿ ಹಿಪ್ಪೋ ಮರಿಯನ್ನು ಆವರಣಕ್ಕೆ ಬಿಡಲಾಗಿದೆ. ಈ ಹೊಸ ಮರಿಯ ಸೇರ್ಪಡೆಯೊಂದಿಗೆ ಬನ್ನೇರುಘಟ್ಟದಲ್ಲಿರುವ ಹಿಪ್ಪೋಗಳ ಒಟ್ಟು ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಕಳೆದ ವರ್ಷ ಜನಿಸಿದ್ದ ಹಿಪ್ಪೋ ಮರಿ ನೀರಿನಲ್ಲಿ ಮುಳುಗಿ ಮೃತಪಟ್ಟ ಹಿನ್ನೆಲೆಯಲ್ಲಿ ಟೀಕೆಗೆ ಗುರಿಯಾಗಿದ್ದ ಉದ್ಯಾನವನಕ್ಕೆ ಈ ಹೊಸ ಜನನ ಸಂತಸದ ಸುದ್ದಿಯಾಗಿದೆ.
ಈ ನಡುವೆ ಮರಿ ಜನಿಸಿದ ಬಳಿಕ ತಾಯಿ ಮತ್ತು ಮರಿ ಮೇಲೆ ಪ್ರಾಣಿ ಪಾಲನಾ ಸಿಬ್ಬಂದಿ ನಿರಂತರ ನಿಗಾ ವಹಿಸಿದ್ದು, ಪ್ರಸವಾನಂತರದ ಆರಂಭಿಕ ಅವಧಿಯ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಅನಗತ್ಯ ಅಡಚಣೆ ಆಗದಂತೆ ಆವರಣವನ್ನು ನಿರ್ವಹಿಸುತ್ತಿದ್ದಾರೆ.
ತಾಯಿಗೆ ಒತ್ತಡ ಕಡಿಮೆಯಾಗುವಂತೆ ಹಾಗೂ ಸಹಜ ಮಾತೃತ್ವದ ಆರೈಕೆಗೆ ಅನುಕೂಲವಾಗುವಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.
ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ. ಸೂರ್ಯ ಸೇನ್ ಅವರು ಮಾತನಾಡಿ, ತಾಯಿ ಮತ್ತು ಮರಿ ಇಬ್ಬರೂ ಆರೋಗ್ಯವಾಗಿದ್ದು, ಆಗಸ್ಟ್ 5ರಿಂದ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ಸಾರ್ವಜನಿಕರು ಈ ಮುದ್ದಾದ ಹಿಪ್ಪೋ ಮರಿಯನ್ನು ಐದು ವರ್ಷಗಳ ಅವಧಿಗೆ ದತ್ತು ಪಡೆಯಬಹುದು. ದತ್ತು ಪಡೆಯುವವರು ಮರಿಗೆ ತಮ್ಮ ಇಚ್ಛೆಯ ಹೆಸರನ್ನೂ ಇಡಬಹುದು. ಸದ್ಯಕ್ಕೆ ಈ ಹಿಪ್ಪೋ ಮರಿಗೆ ಯಾವುದೇ ಹೆಸರು ನಿಗದಿಯಾಗಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



