H5N1 ಭೀತಿ: ಸೋಂಕು ನಿಯಂತ್ರಣ ಕಾರ್ಯಾಚರಣೆ ಯಶಸ್ವಿ; ಮಾನವ ಸೋಂಕು ಪತ್ತೆಯಾಗಿಲ್ಲ- ಆರೋಗ್ಯ ಇಲಾಖೆ ಸ್ಪಷ್ಟನೆ
ಈ ಕೇಂದ್ರದ ಕೋಳಿಯಲ್ಲಿ ಎಚ್5ಎನ್1 ಸೋಂಕು ಏ.14ರಂದು ದೃಢಪಟ್ಟಿತ್ತು. ಭೋಪಾಲ್‌ನ ರಾಷ್ಟ್ರೀಯ ಹೈ ಸೆಕ್ಯುರಿಟಿ ಪ್ರಾಣಿ ರೋಗಗಳ ಸಂಸ್ಥೆ ನಡೆಸಿದ ಪ್ರಯೋಗಾಲಯ ಪರೀಕ್ಷೆಗಳ ನಂತರ ಈ ಸೋಂಕು ದೃಢಪಟ್ಟಿತ್ತು.

ಬೆಂಗಳೂರು: ಹೆಸರಘಟ್ಟದ ಕೋಳಿ ಸಾಕಣೆ ತರಬೇತಿ ಕೇಂದ್ರದಲ್ಲಿ ಕಾಣಿಸಿಕೊಂಡ ಎಚ್5ಎನ್1 (ಹಕ್ಕಿ ಜ್ವರ) ಸೋಂಕಿನ ಹಿನ್ನೆಲೆಯಲ್ಲಿ ಕೈಗೊಳ್ಳಲಾದ ತೀವ್ರ ನಿಗಾವಳಿ ಮತ್ತು ನಿಯಂತ್ರಣ ಕಾರ್ಯಾಚರಣೆ ಇದೀಗ ಯಶಸ್ವಿಯಾಗಿ ಪೂರ್ಣಗೊಂಡಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಕುರಿತು ಮಾಹಿತಿ ನೀಡಿದ್ದು, ಇದುವರೆಗೆ ಯಾವುದೇ ಮಾನವ ಸೋಂಕು ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಕೇಂದ್ರದ ಕೋಳಿಯಲ್ಲಿ ಎಚ್ 5ಎನ್1 ಸೋಂಕು ಏ.14ರಂದು ದೃಢಪಟ್ಟಿತ್ತು. ಭೋಪಾಲ್‌ನ ರಾಷ್ಟ್ರೀಯ ಹೈ ಸೆಕ್ಯುರಿಟಿ ಪ್ರಾಣಿ ರೋಗಗಳ ಸಂಸ್ಥೆ ನಡೆಸಿದ ಪ್ರಯೋಗಾಲಯ ಪರೀಕ್ಷೆಗಳ ನಂತರ ಈ ಸೋಂಕು ದೃಢಪಟ್ಟಿತ್ತು. ಬಳಿಕ ರಾಜ್ಯ ಮತ್ತು ಜಿಲ್ಲಾ ಕ್ಷಿಪ್ರ ಕಾರ್ಯಪಡೆ ತಂಡ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ತಂಡವು ಸ್ಥಳಕ್ಕೆ ಭೇಟಿ ನೀಡಿ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿತ್ತು. ಇದೀಗ ಇಲ್ಲಿಯವರೆಗೆ ಯಾವುದೇ ಮಾನವ ಸೋಂಕು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಸೋಂಕು ಕಂಡುಬಂದ ಪ್ರದೇಶದ ಸುತ್ತ 0–3 ಕಿಮೀ ವ್ಯಾಪ್ತಿಯನ್ನು ಸೋಂಕಿತ ವಲಯವಾಗಿ ಮತ್ತು 3–10 ಕಿಮೀ ವ್ಯಾಪ್ತಿಯನ್ನು ನಿಗಾವಳಿ ವಲಯವಾಗಿ ಘೋಷಿಸಲಾಗಿತ್ತು. ಈ ಪ್ರದೇಶಗಳಲ್ಲಿ ಕಠಿಣ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಾಗಿತ್ತು.
ಪಶು ಸಂಗೋಪನಾ ಇಲಾಖೆ ಎಲ್ಲಾ ಕೋಳಿಗಳನ್ನು ಕೊಲ್ಲುವ (culling) ಕ್ರಮ ಕೈಗೊಂಡಿದ್ದು, ಮೊಟ್ಟೆಗಳು ಹಾಗೂ ಸೋಂಕಿತ ಆಹಾರವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲಾಗಿದೆ. ಜೈವಿಕ ಭದ್ರತಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗಿದೆ.
ನಿಗಾವಳಿ ಕಾರ್ಯಾಚರಣೆಯ ಭಾಗವಾಗಿ, 10 ಕಿಮೀ ವ್ಯಾಪ್ತಿಯ 22 ಗ್ರಾಮಗಳಲ್ಲಿ ಒಟ್ಟು 28,172 ಜನರನ್ನು 10 ದಿನಗಳ ಕಾಲ ಆರೋಗ್ಯ ಪರಿಶೀಲನೆಗೆ ಒಳಪಡಿಸಲಾಯಿತು. ಈ ವೇಳೆ ಯಾವುದೇ ಮಾನವ ಸೋಂಕು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿರುವ ಅಧಿಕಾರಿಗಳು, ಅಸ್ವಸ್ಥ ಪಕ್ಷಿಗಳ ಮಾಂಸ ಅಥವಾ ಮೊಟ್ಟೆಗಳನ್ನು ಸೇವಿಸಬಾರದು ಹಾಗೂ ಅನಿರೀಕ್ಷಿತವಾಗಿ ಪಕ್ಷಿಗಳ ಸಾವು ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



