'POKನ ಸ್ಮಶಾನ ಮಾಡಿಟ್ಟಿದ್ದಾರೆ, ನಾಗರಿಕರಿಗೆ ರಕ್ಷಣೆ ಇಲ್ಲ, ಪ್ರತಿ ಹತ್ಯೆಯೂ ಸ್ವತಂತ್ರ ತನಿಖೆಗೆ ಒಳಪಡಲಿ': ವಿಶ್ವಸಂಸ್ಥೆಯಲ್ಲಿ ಪಾಕ್ ಮುಖವಾಡ ಕಳಚಿದ ಕಾಶ್ಮೀರಿ ಮಹಿಳೆ!
ಕಾಶ್ಮೀರದಲ್ಲಿನ ಭಯೋತ್ಪಾದನೆ ಸಂತ್ರಸ್ತರ ಸಂಘಟನೆ ‘ಅಸೋಸಿಯೇಷನ್ ಆಫ್ ಟೆರರ್ ವಿಕ್ಟಿಮ್ಸ್ ಇನ್ ಕಾಶ್ಮೀರ್’ (ಎಟಿವಿಕೆ) ಜತೆ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ-ರಾಜಕೀಯ ಕಾರ್ಯಕರ್ತೆ ತಸ್ಲೀಮಾ ಅಖ್ತರ್..

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಮೂಲಭೂತ ಹಕ್ಕುಗಳಿಗಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ನಾಗರಿಕರ ಮೇಲೆ ಪಾಕಿಸ್ತಾನ ಸರ್ಕಾರ ನಡೆಸಿದ ದಮನದ ವಿರುದ್ಧ ಬಾರಾಮುಲ್ಲಾದ ಯುವತಿ ತಸ್ಲೀಮಾ ಅಖ್ತರ್ ವಿಶ್ವಸಂಸ್ಥೆಯಲ್ಲಿ ಧ್ವನಿ ಎತ್ತಿದ್ದಾರೆ.
ಕಾಶ್ಮೀರದಲ್ಲಿನ ಭಯೋತ್ಪಾದನೆ ಸಂತ್ರಸ್ತರ ಸಂಘಟನೆ ‘ಅಸೋಸಿಯೇಷನ್ ಆಫ್ ಟೆರರ್ ವಿಕ್ಟಿಮ್ಸ್ ಇನ್ ಕಾಶ್ಮೀರ್’ (ಎಟಿವಿಕೆ) ಜತೆ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ-ರಾಜಕೀಯ ಕಾರ್ಯಕರ್ತೆ ತಸ್ಲೀಮಾ ಅಖ್ತರ್, ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 63ನೇ ಅಧಿವೇಶನದಲ್ಲಿ ಪಿಒಕೆಯ ಹದಗೆಡುತ್ತಿರುವ ಮಾನವ ಹಕ್ಕುಗಳ ಪರಿಸ್ಥಿತಿಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದರು.
ಮೂಲಭೂತ ಹಕ್ಕುಗಳಿಗಾಗಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ನಾಗರಿಕರ ಮೇಲೆ ಪಾಕಿಸ್ತಾನದ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿವೆ ಎಂದು ಆರೋಪಿಸಿದ ತಸ್ಲೀಮಾ ಅಖ್ತರ್, ಪ್ರತಿ ಹತ್ಯೆಯ ಬಗ್ಗೆಯೂ ಸ್ವತಂತ್ರ ತನಿಖೆ ನಡೆಯಬೇಕು. ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮುಕ್ತವಾಗಿ ಹಾಗೂ ನ್ಯಾಯಸಮ್ಮತವಾಗಿ ಪಡೆಯಲು ಅವಕಾಶ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.
ಜಿನೀವಾದಲ್ಲಿ ನಡೆದ ಯುಎನ್ ಮಾನವ ಹಕ್ಕುಗಳ ಮಂಡಳಿಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 'ಪಿಒಕೆಯಲ್ಲಿ ಇತ್ತೀಚೆಗೆ ಆಡಳಿತಾತ್ಮಕ ಹಾಗೂ ಆರ್ಥಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಜಾಯಿಂಟ್ ಅವಾಮಿ ಆ್ಯಕ್ಷನ್ ಕಮಿಟಿ ಮತ್ತು ನಾಗರಿಕ ಸಂಘಟನೆಗಳ ನೇತೃತ್ವದಲ್ಲಿ ನಿರಂತರ ಶಾಂತಿಯುತ ಪ್ರತಿಭಟನೆಗಳು ನಡೆದಿವೆ. ಆದರೆ ಈ ಪ್ರತಿಭಟನೆಗಳನ್ನು ಪಾಕಿಸ್ತಾನ ಸರ್ಕಾರ ಕ್ರೂರವಾಗಿ ಹತ್ತಿಕ್ಕಿದೆ' ಎಂದು ಹೇಳಿದರು.
ಪಿಒಕೆಯಲ್ಲಿ ರಾಜಕೀಯ ಅಸ್ಥಿರತೆ
“ಪಾಕಿಸ್ತಾನ ಸರ್ಕಾರ ನೂರಾರು ಹೋರಾಟಗಾರರನ್ನು ಬಂಧಿಸಿದೆ. ಪ್ರಮುಖ ನಾಯಕರನ್ನು ವಶಕ್ಕೆ ಪಡೆದಿದೆ. ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಿದೆ. ಹಿಂಸಾತ್ಮಕ ಘರ್ಷಣೆಗಳಿಗೆ ಕಾರಣವಾಗಿದ್ದು, ಅವುಗಳಲ್ಲಿ ಹಲವು ಮಂದಿ ಮೃತಪಟ್ಟಿದ್ದಾರೆ. ಇದರಿಂದ ಪಿಒಕೆಯಲ್ಲಿನ ರಾಜಕೀಯ ಅಸ್ಥಿರತೆ ಹಾಗೂ ಜನರ ಅಸಮಾಧಾನ ಬಹಿರಂಗವಾಗಿದೆ” ಎಂದು ಅವರು ಹೇಳಿದರು.
ಪಿಒಕೆಯಲ್ಲಿ ನಾಗರಿಕರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವೇ ಇಲ್ಲದಂತಾಗಿದೆ ಎಂದು ಆರೋಪಿಸಿದ ತಸ್ಲೀಮಾ, ಈ ವಿಚಾರದಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.
“ಪಿಒಕೆಯಲ್ಲಿ ನಾಗರಿಕ ಸ್ವಾತಂತ್ರ್ಯಕ್ಕೆ ಯಾವುದೇ ಅವಕಾಶವಿಲ್ಲ. ಪಾಕಿಸ್ತಾನದ ಪಡೆಗಳು ನಡೆಸುತ್ತಿರುವ ವ್ಯಾಪಕ ಪ್ರತೀಕಾರದ ಕ್ರಮಗಳು ಹಾಗೂ ನಿರಪರಾಧ ನಾಗರಿಕರ ಹತ್ಯೆ ತಕ್ಷಣ ನಿಲ್ಲಬೇಕು. ನಾಗರಿಕ ಸ್ವಾತಂತ್ರ್ಯ ಮತ್ತು ಸಂವಹನ ವ್ಯವಸ್ಥೆಗಳನ್ನು ಮರುಸ್ಥಾಪಿಸಬೇಕು. ಪ್ರತಿಯೊಂದು ಹತ್ಯೆಯ ಬಗ್ಗೆಯೂ ಸ್ವತಂತ್ರ ತನಿಖೆ ನಡೆಸಬೇಕು,” ಎಂದು ಅವರು ಒತ್ತಾಯಿಸಿದರು.
ಭಾರತದ ಕಾಶ್ಮೀರದ ಅಭಿವೃದ್ಧಿ ಕುರಿತು ಮಾಹಿತಿ
ಇದೇ ವೇಳೆ, ಭಾರತದ ಜಮ್ಮು-ಕಾಶ್ಮೀರ ಮತ್ತು ಪಿಒಕೆಯ ಪರಿಸ್ಥಿತಿಯನ್ನು ಹೋಲಿಸಿದ ಅವರು, ಜಮ್ಮು-ಕಾಶ್ಮೀರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು. “ಇದಕ್ಕೆ ವಿರುದ್ಧವಾಗಿ, ಭಾರತದಲ್ಲಿನ ಜಮ್ಮು-ಕಾಶ್ಮೀರವು 2024ರಿಂದ ಕೌಶಲ್ಯಾಭಿವೃದ್ಧಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಿದೆ. ಇದರಿಂದ ಉದ್ಯೋಗ ಸೃಷ್ಟಿಯಾಗುತ್ತಿದ್ದು, ಸ್ಥಳೀಯ ವ್ಯಾಪಾರಗಳಿಗೆ ಉತ್ತೇಜನ ದೊರೆಯುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಗಳು ಮತ್ತು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಯೂ ಪ್ರಗತಿಗೆ ಮತ್ತಷ್ಟು ಬಲ ನೀಡುತ್ತಿವೆ,” ಎಂದು ತಸ್ಲೀಮಾ ಅಖ್ತರ್ ಹೇಳಿದರು.
ತಸ್ಲೀಮಾ ಅಖ್ತರ್ ಅವರ ಈ ಹೇಳಿಕೆ ಪಿಒಕೆಯಲ್ಲಿ ಪಾಕಿಸ್ತಾನದ ದಮನದ ಆರೋಪಗಳನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತಾಪಿಸುವುದರ ಜತೆಗೆ, ಜಮ್ಮು-ಕಾಶ್ಮೀರದಲ್ಲಿ ಶಾಂತಿ, ಅಭಿವೃದ್ಧಿ ಹಾಗೂ ಸಹಜ ಪರಿಸ್ಥಿತಿಯ ಚಿತ್ರಣವನ್ನು ಮುಂದಿಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



