News Headlines 23-03-25 | ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜಿನಾಮೆ?; Honeytrap ಖರ್ಗೆ-ಸಿದ್ದು ಸುದೀರ್ಘ ಚರ್ಚೆ; HC ಬಾಲಕೃಷ್ಣ ಆಪ್ತನ ಕಗ್ಗೊಲೆ!

1. ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜಿನಾಮೆ?
ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಪ್ರಕರಣ ದೊಡ್ಡ ಕೋಲಾಹಲ ಸೃಷ್ಟಿಸಿದೆ. ಈ ಮಧ್ಯೆ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದ್ದು ಬಸವರಾಜ್ ಹೊರಟ್ಟಿ ಅವರು ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿತ್ತು. ವಿಧಾನ ಪರಿಷತ್ ಉಪಸಭಾಪತಿ ಪ್ರಾಣೇಶ್ ಅವರಿಗೆ ಬಸವರಾಜ್ ಹೊರಟ್ಟಿ ಅವರು ತಮ್ಮ ರಾಜಿನಾಮೆ ಪತ್ರವನ್ನು ರವಾನಿಸಿದ್ದು ಮೇ 1ರೊಳಗೆ ರಾಜೀನಾಮೆಯನ್ನು ಅಂಗೀಕರಿಸಿ ಸಭಾಪತಿ ಹುದ್ದೆಯಿಂದ ಮುಕ್ತಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ ಎಂಬ ರಾಜಿನಾಮೆ ಪತ್ರ ವೈರಲ್ ಆಗಿತ್ತು. ಈ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾತನಾಡಿದ ಸಭಾಪತಿ ಬಸವರಾಜ್ ಹೊರಟ್ಟಿ, ಆ ಪತ್ರದಲ್ಲಿ ಸಹಿ ಇಲ್ಲ. ಸಹಿ ಮಾಡಿರುವ ಪತ್ರ ಇನ್ನು ಲಾಕರ್ನಲ್ಲಿದೆ. ನನ್ನ ಪಿಎ ಆ ಪತ್ರವನ್ನು ವೈರಲ್ ಮಾಡಿದ್ದಾರೆ. ರಾಜೀನಾಮೆ ಕೊಡಬೇಕು ಅನ್ನೋ ನಿರ್ಧಾರ ಮಾಡಿದ್ದು ನಿಜ. ಆದರೆ ಇದೀಗ ಸಚಿವರು, ಪರಿಷತ್ ಸದಸ್ಯರು ನನಗೆ ಕಾಲ್ ಮಾಡುತ್ತಿದ್ದು, ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಎನ್ನುತ್ತಿದ್ದಾರೆ ಎಂದು ಹೇಳಿದರು.
2. HC ಬಾಲಕೃಷ್ಣ ಆಪ್ತನ ಕಗ್ಗೋಲೆ
ಮಾಗಡಿ ಶಾಸಕ ಎಚ್ .ಸಿ ಬಾಲಕೃಷ್ಣ ಆಪ್ತ ಲೋಕನಾಥ್ ಸಿಂಗ್ ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಬಿಜಿಎಸ್ ಲೇಔಟ್‌ನ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದಿದೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಲೋಕನಾಥ್ ಸಿಂಗ್ ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಸ್ನೇಹಿತರ ಜತೆ ಸೋಲದೇವನಹಳ್ಳಿಯ ಬಿಳಿಜಾಜಿಯ ಬಿಜಿಎಸ್ ಲೇಔಟ್‌ನಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಬಳಿ ಕಾರಿನಲ್ಲೇ ಕುಳಿತು ಮದ್ಯ ಸೇವಿಸುತ್ತಿದ್ದರು. ಈ ವೇಳೆ ಯಾವುದೋ ವಿಚಾರಕ್ಕೆ ಜತೆಯಲ್ಲಿದ್ದವರೇ ಲೋಕನಾಥ್ ಸಿಂಗ್ ಕುತ್ತಿಗೆಗೆ ಚಾಕುವಿನಿಂದ ಚುಚ್ಚಿದ್ದಾರೆ. ತೀವ್ರ ರಕ್ತಸ್ರಾವದಿಂದ ಲೋಕನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. CCTV ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.
3. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಎಫ್ಐಆರ್
ಮೀನು ಕದ್ದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆ ಬಂದರಿನಲ್ಲಿ ಮಲ್ಪೆ ಮೀನುಗಾರರ ಸಂಘ ಮತ್ತು ಇತರ ಸಂಘಟನೆಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರತಿಭಟನೆ ವೇಳೆ ಮಾತನಾಡಿದ್ದ ಮಧ್ವರಾಜ್, ಮಹಿಳೆಯನ್ನು ಕಟ್ಟಿಹಾಕಿ ಹಲ್ಲೆ ಮಾಡಿದ್ದನ್ನು ಸಮರ್ಥಿಸಿಕೊಂಡಿದ್ದರು. ಕಳ್ಳರು ನಮ್ಮ ಮನೆಗೆ ಪ್ರವೇಶಿಸಿದರೆ, ನಾವು ಏನು ಮಾಡಬೇಕು? ಪೊಲೀಸರು ಬರುವವರೆಗೂ ಕಾಯಬೇಕ. ಕಳ್ಳನಿಗೆ ಬುದ್ದಿ ಕಲಿಸಬೇಕಲ್ವ, ಥಳಿಸಿದ್ದು ಸರಿ ಎಂದು ಹೇಳಿದ್ದರು. ಹೀಗಾಗಿ ಮಲ್ಪೆ ಪೊಲೀಸರು ಮಧ್ವರಾಜ್ ವಿರುದ್ಧ ಸುಮೋಟೋ ಕೇಸು ದಾಖಲಿಸಿದ್ದಾರೆ. ಇನ್ನು ಪ್ರಕರಣ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ.
4. ಮದ್ದೂರಮ್ಮ ಜಾತ್ರೆ ತೇರು ಉರುಳಿ ಇಬ್ಬರು ಸಾವು
ಬೆಂಗಳೂರು ಗ್ರಾಮಾಂತರದ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ 150 ಅಡಿ ಎತ್ತರದ ತೇರು ಉರುಳಿಬಿದ್ದು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಜ್ಯೋತಿ ಇಂದು ಸಾವನ್ನಪ್ಪಿದ್ದಾರೆ. ನಿನ್ನೆ ಮದ್ದೂರಮ್ಮ ಜಾತ್ರೆ ನಡೆಯುತ್ತಿತ್ತು. ದೊಡ್ಡನಾಗಮಂಗಲ ಗ್ರಾಮಸ್ಥರು ತೇರನ್ನು ಕಟ್ಟಿ ಎತ್ತುಗಳ ಮೂಲಕ ಎಳೆದುಕೊಂಡು ಹುಸ್ಕೂರಿನತ್ತ ಹೊರಟಿದ್ದಾಗ ಚಿಕ್ಕನಾಗಮಂಗಲ ಸಮೀಪ ತೇರು ಆಯತಪ್ಪಿ ದಿಢೀರನೇ ಧರೆಗುರುಳಿತ್ತು. ಇನ್ನು ತೇರಿನ ಕೆಳಗೆ ಸಿಲುಕಿ ತಮಿಳುನಾಡಿನ ಹೊಸೂರು ಮೂಲದ 28 ವರ್ಷದ ಯುವಕ ಲೋಹಿತ್ ನಿನ್ನೆಯೇ ಸಾವನ್ನಪ್ಪಿದ್ದರು. ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮತ್ತೊಬ್ಬ ಯುವಕ ರಾಕೇಶ್ ಸದ್ಯ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
5. Honeytrap ಖರ್ಗೆ-ಸಿದ್ದು ಸುದೀರ್ಘ ಚರ್ಚೆ
ರಾಜ್ಯದಲ್ಲಿ ಹನಿಟ್ರ್ಯಾಪ್ ಜಟಾಪಟಿ ಜೋರಾಗಿರುವ ಹೊತ್ತಿನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಸುದೀರ್ಘ 1 ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದಾರೆ. ಬಜೆಟ್ ಅಧಿವೇಶನದ ಕೊನೆಯ ದಿನ ಸಚಿವ ಕೆ.ಎನ್ ರಾಜಣ್ಣ ಅವರು, ತಮ್ಮ ವಿರುದ್ಧ ಹನಿಟ್ರ್ಯಾಪ್ ಯತ್ನ ನಡೆದಿರುವುದಾಗಿ ಹೇಳಿಕೆ ನೀಡಿದ್ದರು. ಇದು ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಜಟಾಪಟಿ ಕಾರಣವಾಗಿತ್ತು. ಇದೇ ವಿಚಾರವನ್ನು ಮುಂದಿಟ್ಟು ಕಾಂಗ್ರೆಸ್ ಗೆ ಮುಜಗರ ಉಂಟು ಮಾಡಲು ಬಿಜೆಪಿ ಹವಣಿಸುತ್ತಿದೆ. ಹೀಗಾಗಿ ಮಧ್ಯಪ್ರವೇಶಿಸಿರುವ ಮಲ್ಲಿಕಾರ್ಜುನ ಖರ್ಗೆ, ರಾಜಣ್ಣ ದೂರು ನೀಡಿದರೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸಿಎಂಗೆ ಸೂಚಿಸಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


