ಮತಗಳ್ಳತನ ಬಗ್ಗೆ ಖರ್ಗೆ, ರಾಹುಲ್ ಗಾಂಧಿ ಹೇಳಿದ್ದು ನಿಜವಾಗಿದೆ; ನಿಗಮ ಮಂಡಳಿ ನೇಮಕ ದೆಹಲಿಯಲ್ಲಿ ತೀರ್ಮಾನ: ಸಿಎಂ ಡಿ.ಕೆ ಶಿವಕುಮಾರ್
ಹೈಕಮಾಂಡ್ ನಾಯಕರು ಮತಗಳ್ಳತನ ವಿಚಾರವಾಗಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಕರೆದಿದ್ದು, ಈ ವಿಚಾರವಾಗಿ ಚರ್ಚೆ ಮಾಡಲು ಖರ್ಗೆ ಸಾಹೇಬರ ಮನೆಗೆ ಭೇಟಿ ನೀಡಿದ್ದೇನೆ. ಆಯೋಗದಲ್ಲಿನ ಅಪಸ್ವರ ಹಾಗೂ ಅಕ್ರಮಗಳು ಬೆಳಕಿಗೆ ಬಂದಿವೆ.

ಬೆಂಗಳೂರು: ಮತಗಳ್ಳತನ ವಿಚಾರವಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹೇಳಿದ್ದ ಅಂಶಗಳು ನಿಜವಾಗಿವೆ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಬೆಂಗಳೂರಿನ ಸದಾಶಿವನಗರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದ ಬಳಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು.
ಹೈಕಮಾಂಡ್ ನಾಯಕರು ಮತಗಳ್ಳತನ ವಿಚಾರವಾಗಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಕರೆದಿದ್ದು, ಈ ವಿಚಾರವಾಗಿ ಚರ್ಚೆ ಮಾಡಲು ಖರ್ಗೆ ಸಾಹೇಬರ ಮನೆಗೆ ಭೇಟಿ ನೀಡಿದ್ದೇನೆ. ಆಯೋಗದಲ್ಲಿನ ಅಪಸ್ವರ ಹಾಗೂ ಅಕ್ರಮಗಳು ಬೆಳಕಿಗೆ ಬಂದಿವೆ. ಈ ವಿಚಾರವಾಗಿ ದೇಶವೇ ಜಾಗೃತಗೊಂಡಿದ್ದು, ಪಕ್ಷದ ಮುಂದಿನ ಹೋರಾಟದ ರೂಪುರೇಷೆ ಕುರಿತು ಚರ್ಚೆ ಮಾಡಿದ್ದೇವೆ. ಕಾರ್ಯಕಾರಿ ಸಮಿತಿ ಸಭೆ ಬಳಿಕ ಎಲ್ಲಾ ವಿರೋಧ ಪಕ್ಷಗಳ ಸಭೆ ಕರೆಯಲಾಗಿದೆ" ಎಂದು ಮಾಹಿತಿ ನೀಡಿದರು.
ಚುನಾವಣಾ ಸೋಲಿನ ಹತಾಶೆಯಿಂದ ಕಾಂಗ್ರೆಸ್ ಹೋರಾಟ ಮಾಡುತ್ತಿದೆ ಎಂಬ ಬಿಜೆಪಿಯ ಟೀಕೆ ಬಗ್ಗೆ ಕೇಳಿದಾಗ, "ನಾವು ಹೇಳಿದ್ದನ್ನೇ ಚುನಾವಣಾ ಆಯೋಗದವರು ಹೇಳಿದ್ದಾರಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತದ ತೀರ್ಮಾನ ಆಗಬೇಕು. ಆದರೆ ಮೂವರಲ್ಲಿ ಇಬ್ಬರು ಆಯುಕ್ತರ ಭಿನ್ನಮತ ನಡುವೆ ತೀರ್ಮಾನ ಮಾಡಲಾಗಿದೆ. ಈಗ ಅವರ ಮಧ್ಯೆ ತೇಪೆ ಹಚ್ಚಿ ಕೂರಿಸಿದ್ದಾರೆ" ಎಂದು ತಿರುಗೇಟು ನೀಡಿದರು.
ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕದ ಕುರಿತು ಕೇಳಿದಾಗ, "ದೆಹಲಿಯಲ್ಲಿ ಈ ಬಗ್ಗೆ ತೀರ್ಮಾನವಾಗಿದೆ. ಹಿರಿಯ ಶಾಸಕರಿಗೆ ನಿಗಮ-ಮಂಡಳಿಗಳಲ್ಲಿ ಅವಕಾಶ ಕಲ್ಪಿಸುವುದು. ನಂತರ ಪಕ್ಷದ ಕಾರ್ಯಕರ್ತರಿಗೂ ಅವಕಾಶ ನೀಡಬೇಕು ಎಂಬ ತೀರ್ಮಾನವಾಗಿದೆ. ಉಳಿದ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದರು.
ನಾಪತ್ತೆಯಾಗಿರುವ ಎಇಇ ವಿರುದ್ಧ ದೂರುಗಳಿವೆ, ತನಿಖೆ ನಡೆಯುತ್ತಿದೆ
ಗದಗದ ಎಇಇ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ಬಗ್ಗೆ ಕೇಳಿದಾಗ, "ಆ ಅಧಿಕಾರಿ ವಿರುದ್ಧ ಈಗಾಗಲೇ ಹಲವು ದೂರುಗಳು ಬಂದಿದ್ದು, ತನಿಖೆ ನಡೆಯುತ್ತಿದೆ. ಕಾನೂನು ಪ್ರಕಾರ ಕೆಲಸ ಮಾಡುತ್ತಿರಲಿಲ್ಲ ಎಂಬ ದೂರು ಇದೆ. ನಾವು ಯಾವುದೇ ಕಾಮಗಾರಿ ನಡೆದರೂ ಕಾಮಗಾರಿಗೂ ಮುನ್ನ ಹಾಗೂ ನಂತರ ಆ ಸ್ಥಳ ಹೇಳಿದೆ ಎಂದು ವಿಡಿಯೋ ದಾಖಲೆ ಹೊಂದಿರಬೇಕು. ಆಮೂಲಕ ನಕಲಿ ಬಿಲ್ ವಂಚನೆ ತಡೆಯಬೇಕು ಎಂದು ಸೂಚಿಸಿದ್ದೇವೆ. ಆದರೆ ಈತ ಸ್ಥಳಗಳಿಗೆ ಭೇಟಿ ನೀಡುತ್ತಿರಲಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ಹಿಂದೆ ನಾಪತ್ತೆ ಆದ ಪ್ರಕರಣ ನಡೆದಿದ್ದವು. ಅಜ್ಮೀರ್, ಹೈದರಾಬಾದ್ಗೆ ಹೋಗಿರುವ ಬಗ್ಗೆಯೂ ಮಾಹಿತಿ ಇದೆ. ಎಲ್ಲವನ್ನೂ ಪರಿಶೀಲಿಸಲಾಗುತ್ತಿದೆ’’ ಎಂದರು.
ಬಲವಂತವಾಗಿ ಭೂಮಿ ಕೊಡಬೇಡಿ
ಬೈರಮಂಗಲದಲ್ಲಿ ರೈತರು ರಸ್ತೆ ತಡೆ ನಡೆಸಿದ ಪ್ರಕರಣದ ಕುರಿತು ಕೇಳಿದಾಗ, "ರಸ್ತೆ ತಡೆ ಯಾಕೆ ಮಾಡಬೇಕು? ರಸ್ತೆ ತಡೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಜಮೀನು ನೀಡುವಂತೆ ಯಾರ ಮೇಲೂ ಒತ್ತಡ ಹಾಕುತ್ತಿಲ್ಲ. ಜಮೀನು ಕೊಡಬೇಡಿ ಎಂದೇ ಹೇಳುತ್ತಿದ್ದೇನೆ. ತಮ್ಮ ಬದುಕು ಕಟ್ಟಿಕೊಳ್ಳಲು ಹಣದ ಅಗತ್ಯವಿರುವವರು ಭೂಮಿ ನೀಡುತ್ತಾರೆ, ಬೇಡ ಎನ್ನುವವರು ಕೊಡುವುದಿಲ್ಲ. ಈ ವಿಚಾರದಲ್ಲಿ ನನಗೆ ಆತುರ, ಪ್ರತಿಷ್ಠೆ ಇಲ್ಲ. ಕುಮಾರಸ್ವಾಮಿ ಅವರು ಆರಂಭಿಸಿರುವುದನ್ನು ನಾನು ಮುಂದುವರಿಸುತ್ತಿರುವೆ" ಎಂದು ಸ್ಪಷ್ಟಪಡಿಸಿದರು.
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ₹250 ಕೋಟಿ ಅನುದಾನ ನೀಡುವ ಕುರಿತು ಚರ್ಚೆಯಾಗುತ್ತಿದೆ ಎಂಬ ಪ್ರಶ್ನೆಗೆ, ‘‘ಈ ಬಗ್ಗೆ ಸದ್ಯ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಪರಿಶೀಲನೆ ಮಾಡುತ್ತೇನೆ’’ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



