ರಾಜ್ಯ

ಸಚಿವ ಸಂಪುಟ ಒಪ್ಪಿದರೆ RDSS ಸ್ಕೀಮ್ ಜಾರಿ; ಜೂನ್ 11ರಂದು ಕುಸುಮ್-ಸಿ ಯೋಜನೆಗೆ ಚಾಲನೆ: ಕೆ.ಜೆ ಜಾರ್ಜ್

ಸದ್ಯ ಕೆಲ ಮೀಟರ್‌ಗಳನ್ನು ಮಾತ್ರ ಸ್ಮಾರ್ಟ್​ಮೀಟರ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಮೀಟರ್​ಗಳನ್ನು ಸ್ಮಾರ್ಟ್​ ಮೀಟರ್​ ಮಾಡಲಾಗುವುದು. ಸ್ಮಾರ್ಟ್ ಮೀಟರ್ ಅಳವಡಿಕೆಯಿಂದ ಹೆಚ್ಚು ಅನುಕೂಲವಾಗಲಿದೆ.

ಸಚಿವ ಸಂಪುಟ ಒಪ್ಪಿದರೆ RDSS ಸ್ಕೀಮ್ ಜಾರಿ; ಜೂನ್ 11ರಂದು ಕುಸುಮ್-ಸಿ ಯೋಜನೆಗೆ ಚಾಲನೆ: ಕೆ.ಜೆ ಜಾರ್ಜ್
ಕೆ.ಜೆ ಜಾರ್ಜ್
Published On :

ಬೆಂಗಳೂರು: ಪರಿಷ್ಕೃತ ವಿತರಣಾ ವಲಯ ಯೋಜನೆ (RDSS)ಗೆ ಕೇಂದ್ರ ಸರ್ಕಾರ ಒಪ್ಪಿದೆ. ನಮ್ಮ ಸಚಿವ ಸಂಪುಟವೂ ಒಪ್ಪಿದರೇ RDSS ಸ್ಕೀಮ್ ಜಾರಿ ಮಾಡುತ್ತೇವೆ. ಹೊಸ ಸ್ಮಾರ್ಟ್ ಮೀಟರ್​ಗೆ ಸಿಮ್ ರೀತಿ ಅಳವಡಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಒಂದು ಸ್ಮಾರ್ಟ್​​ ಮೀಟರ್‌ಗೆ ಐದು ಸಾವಿರ ರೂಪಾಯಿ ಇದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮತ್ತು ಕೇಂದ್ರ ಇಲಾಖೆ ಸೂಚನೆಯಂತೆ ಪಡೆಯಬೇಕಿದೆ‌. ಹಳೇ ಮೀಟರ್ ಹಿಂಪಡೆಯುವುದಿಲ್ಲ ಎಂದು ತಿಳಿಸಿದರು. ಸದ್ಯ ಕೆಲ ಮೀಟರ್‌ಗಳನ್ನು ಮಾತ್ರ ಸ್ಮಾರ್ಟ್​ಮೀಟರ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಮೀಟರ್​ಗಳನ್ನು ಸ್ಮಾರ್ಟ್​ ಮೀಟರ್​ ಮಾಡಲಾಗುವುದು. ಸ್ಮಾರ್ಟ್ ಮೀಟರ್ ಅಳವಡಿಕೆಯಿಂದ ಹೆಚ್ಚು ಅನುಕೂಲವಾಗಲಿದೆ. ಮೊಬೈಲ್ ರೀಚಾರ್ಜ್ ರೀತಿ ಮೀಟರ್ ರೀಚಾರ್ಜ್ ಮಾಡಬಹುದು ಎಂದರು.

ಸ್ಮಾರ್ಟ್‌ ವಿದ್ಯುತ್‌ ಮೀಟರ್‌ ಒಂದು ರೀತಿಯಲ್ಲಿ ಮೊದಲೇ ಪಾವತಿಸಿ ವಿದ್ಯುತ್‌ ಬಳಸುವ ವ್ಯವಸ್ಥೆ. ಈ ನೂತನ ವ್ಯವಸ್ಥೆಯಲ್ಲಿ ಮೊಬೈಲ್‌ ಫೋನ್‌ಗಳ ಮಾದರಿಯಲ್ಲೇ ವಿದ್ಯುತ್‌ ಬಳಕೆಗೂ ಪ್ರೀಪೇಯ್ಡ್‌ ರೀಚಾರ್ಜ್‌ ಕಾರ್ಡ್‌ ಪರಿಚಯಿಸಲಾಗುತ್ತಿದೆ. ಗ್ರಾಹಕರು, ಪ್ರೀಪೇಯ್ಡ್‌ ಮೊಬೈಲ್‌ ಸಿಮ್‌ ಮಾದರಿಯಲ್ಲಿ ಮೊದಲೇ ಹಣ ಕಟ್ಟಿ ವಿದ್ಯುತ್‌ ಸಂಪರ್ಕ ಪಡೆಯಬೇಕಾಗುತ್ತದೆ. ಪ್ರೀಪೇಯ್ಡ್‌ ಸಿಮ್‌ ಕಾರ್ಡ್‌ಗಳ ರೀತಿಯಲ್ಲೇ ಪ್ರೀಪೇಯ್ಡ್‌ ಸ್ಮಾರ್ಟ್‌ ಮೀಟರ್‌ಗಳೂ ಕಾರ್ಯ ನಿರ್ವಹಿಸುತ್ತವೆ.

ಸ್ಮಾರ್ಟ್ ಮೀಟರ್‌ಗಳ ಅಳವಡಿಕೆ ಮತ್ತು ಕಾರ್ಯಾಚರಣೆಗಾಗಿ ವಿದ್ಯುತ್ ವಿತರಣಾ ಕಂಪನಿಗಳ (ESCOM) ಕಾರ್ಯಕ್ಷಮತೆಯನ್ನು ಸುಧಾರಿಸುವ ಗುರಿಯನ್ನು RDSS ಯೋಜನೆ ಹೊಂದಿದೆ. RDSS ಯೋಜನೆ ಡಿಸೆಂಬರ್‌ನಲ್ಲಿ ಕೊನೆಗೊಳ್ಳುತ್ತದೆ ಎಂದು ಹೇಳಿದರು.ಇತ್ತೀಚೆಗೆ ಕೇಂದ್ರ ಸರ್ಕಾರಿ ಅಧಿಕಾರಿಗಳೊಂದಿಗಿನ ಸಭೆಯಲ್ಲಿ, ಯೋಜನೆಯ ವಿಸ್ತರಣೆ ಮತ್ತು ಅನುಷ್ಠಾನದ ಬಗ್ಗೆ ಚರ್ಚಿಸಲಾಯಿತು.

ಜೂನ್ 11 ರಂದು ಗೌರಿಬಿದನೂರಿನಲ್ಲಿ ಕುಸುಮ್-ಸಿ ಯೋಜನೆಗೆ ಅಧಿಕೃತ ಚಾಲನೆ ನೀಲಾಗುವುದು, ವಿದ್ಯುತ್‌ ಫೀಡರ್‌ಗಳ ಬಳಿ ಸೌರವಿದ್ಯುತ್ ಉತ್ಪಾದಿಸಿ ಕೃಷಿ ಪಂಪ್‌ಸೆಟ್‌ಗಳಿಗೆ ಪೂರೈಸುವ ‘ಕುಸುಮ್ ಸಿ’ ಯೋಜನೆಯಡಿ ಮೊದಲ ಹಂತದಲ್ಲಿ ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ 2400 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ’ ಎಂದು ಕೆ.ಜೆ.ಜಾರ್ಜ್‌ ತಿಳಿಸಿದರು.

ರೈತರಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ಪೂರೈಸುವ ಉದ್ದೇಶದಿಂದ ಪ್ರತಿ ವಿದ್ಯುತ್ ಉಪಕೇಂದ್ರದ ವ್ಯಾಪ್ತಿಯಲ್ಲಿ ‘ಕುಸುಮ್ ಸಿ’ ಯೋಜನೆಯಡಿ ಸೌರವಿದ್ಯುತ್ ಘಟಕ ಸ್ಥಾ‍ಪಿಸಲಾಗುತ್ತಿದೆ. ಈ ಘಟಕದಿಂದ ಫೀಡರ್‌ಗಳ ಮೂಲಕ ಆಯಾ ಉಪಕೇಂದ್ರದ ವ್ಯಾಪ್ತಿಯಲ್ಲಿರುವ ಪಂಪ್‌ಸೆಟ್‌ಗಳಿಗೆ ಪೂರೈಸಲಾಗುವುದು. ಇದರಿಂದ ಗುಣಮಟ್ಟದ ವಿದ್ಯುತ್ ಲಭ್ಯವಾಗುತ್ತದೆ. ಪರಿವರ್ತಕಗಳ ಮೇಲಿನ ಹೊರೆಯೂ ತಗ್ಗುತ್ತದೆ ಎಂದು ವಿವರಿಸಿದರು.

ಮೊದಲ ಹಂತದಲ್ಲಿ ಈ ಯೋಜನೆಯಿಂದ ಸುಮಾರು 6.19 ಲಕ್ಷ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸುವ‌ ನಿಟ್ಟಿನಲ್ಲಿ ಕೆಲಸ ಪ್ರಗತಿಯಲ್ಲಿದೆ. ಈಗಾಗಲೇ ಸುಮಾರು 200 ಮೆಗಾವಾಟ್‌ ಸಾಮರ್ಥ್ಯದ ಸೌರ ಘಟಕಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಕೆಲವೇ ತಿಂಗಳುಗಳಲ್ಲಿ 93 ಸ್ಥಳಗಳಲ್ಲಿ 545 ಮೆಗಾವಾಟ್‌ ಸಾಮರ್ಥ್ಯದ ಸೌರ ಘಟಕಗಳು ಚಾಲನೆಗೊಳ್ಳಲಿವೆ’ ಎಂದು ಮಾಹಿತಿ ನೀಡಿದರು.

ಪಿಎಂ-ಸೂರ್ಯ ಘರ್ ಯೋಜನೆಯನ್ನು ಆಯ್ಕೆ ಮಾಡಿಕೊಂಡ ಗ್ರಾಹಕರಿಂದ ಕಳಪೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬಗ್ಗೆ ಮಾತನಾಡಿದ ಜಾರ್ಜ್, ಕರ್ನಾಟಕ ಸರ್ಕಾರದ ಗೃಹ ಜ್ಯೋತಿ ಯೋಜನೆಯಿಂದಾಗಿ 200 ಯೂನಿಟ್‌ಗಳವರೆಗಿನ ವಿದ್ಯುತ್ ಬಳಕೆಗೆ ಯಾವುದೇ ಬಿಲ್‌ಗಳು ಸಿಗುತ್ತಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.