ರಾಜ್ಯ

COTPA ಕಾಯ್ದೆ ಉಲ್ಲಂಘನೆ: 11,507 ಪ್ರಕರಣ ದಾಖಲು, 21 ಲಕ್ಷ ರೂ ದಂಡ ವಸೂಲಿ

ನಗರದಾದ್ಯಂತ ವೈನ್‌ಶಾಪ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಲಾಡ್ಜ್‌ಗಳು, ಪಿ.ಜಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮೇ 31ರಿಂದ ಜೂನ್‌ 2ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, 11,507 ಪ್ರಕರಣ ದಾಖಲು, 21 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.

COTPA ಕಾಯ್ದೆ ಉಲ್ಲಂಘನೆ: 11,507 ಪ್ರಕರಣ ದಾಖಲು, 21 ಲಕ್ಷ ರೂ ದಂಡ ವಸೂಲಿ
ಸಂಗ್ರಹ ಚಿತ್ರ
Published On :

ಬೆಂಗಳೂರು: ವಿಶ್ವ ತಂಬಾಕು ವಿರೋಧಿ ದಿನ ಅಂಗವಾಗಿ ನಗರ ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ತಂಬಾಕು ಉತ್ಪನ್ನ ಮಾರಾಟ ವಿರುದ್ಧ ಕಾರ್ಯಾಚರಣೆ ನಡೆಸಿ 11 ಸಾವಿರ ಕೇಸ್ ದಾಖಲಿಸಿಕೊಂಡು 21 ಲಕ್ಷ ರೂ.ದಂಡವನ್ನು ವಸೂಲಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು, ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ (COTPA)ಯನ್ನು ಕಟ್ಟುನಿಟ್ಟಾಗಿ ಜಾರಿ ತರಲಾಗಿದ್ದು, ಕಾಯ್ದೆ ಉಲ್ಲಂಘಿಸಿದವರ ವಿರುದ್ದ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಹೇಳಿದರು.

'ವಿಶ್ವ ತಂಬಾಕು ರಹಿತ ದಿನ'ದ ಸಂದರ್ಭದಲ್ಲಿ ಜಾಗೃತಿ ಮೂಡಿಸಲು ಮೂರು ದಿನಗಳ ವಿಶೇಷ ಅಭಿಯಾನವನ್ನು ನಡೆಸಲಾಗಿದೆ. ಪೊಲೀಸ್ ಅಧಿಕಾರಿಗಳು, ಮಾರ್ಷಲ್‌ಗಳು ಮತ್ತು ಸ್ವಯಂಸೇವಕರ ಸಹಾಯದಿಂದ ಬೀದಿ ನಾಟಕಗಳು, ರ್ಯಾಲಿಗಳು ಮತ್ತು ಭಾಷಣಗಳಂತಹ ಅಭಿಯಾನಗಳನ್ನು ಆಯೋಜಿಸಲಾಗಿದೆ. ಹೆಚ್ಚುವರಿಯಾಗಿ, ವಿಶ್ವ ತಂಬಾಕು ರಹಿತ ದಿನದಂದು 5,667 ಪೊಲೀಸ್ ಸಿಬ್ಬಂದಿ ಮತ್ತು 6,448 ಸಾರ್ವಜನಿಕರು ಪ್ರತಿಜ್ಞೆ ಸ್ವೀಕರಿಸಿದರು.

ತಂಬಾಕು ನಿಷೇಧವನ್ನು ಉತ್ತೇಜಿಸಲು ನಗರದಾದ್ಯಂತ 60,000 ಕ್ಕೂ ಹೆಚ್ಚು ಜಾಗೃತಿ ಪೋಸ್ಟರ್‌ಗಳನ್ನು ಹಾಕಲಾಯಿತು. ಆರೋಗ್ಯಕರ, ಸುರಕ್ಷಿತ ಜೀವನ ಮತ್ತು ಬಲವಾದ ಸಮಾಜಕ್ಕಾಗಿ ನಾಗರಿಕರು ತಂಬಾಕು ತ್ಯಜಿಸಲು ಪ್ರೋತ್ಸಾಹಿಸುವ ಗುರಿಯನ್ನು ಈ ಅಭಿಯಾನಗಳು ಹೊಂದಿವೆ. ತಂಬಾಕು ಸೇವಿನೆ ವಿವಿಧ ರೀತಿಯ ಕ್ಯಾನ್ಸರ್‌ಗೆ ಕಾರಣವಾಗುತ್ತದೆ.

ನಗರದಾದ್ಯಂತ ವೈನ್‌ಶಾಪ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಲಾಡ್ಜ್‌ಗಳು, ಪಿ.ಜಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮೇ 31ರಿಂದ ಜೂನ್‌ 2ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, 11,507 ಪ್ರಕರಣ ದಾಖಲು, 21 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.

ಕೋಟ್ಪಾ ಕಾಯ್ದೆಯ ಕಲಂ 4ರ ಅಡಿಯಲ್ಲಿ 11,324 ಪ್ರಕರಣ ದಾಖಲಿಸಿಕೊಂಡು ರೂ.20.91 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಕಲಂ 6ಎ ಅಡಿ 135 ಪ್ರಕರಣ ದಾಖಲು ಮಾಡಿಕೊಂಡು ರೂ.22 ಸಾವಿರ ದಂಡ ಸಂಗ್ರಹ ಮಾಡಲಾಗಿದೆ. ಕಲಂ 6ಬಿ ಅಡಿ 48 ಪ್ರಕರಣ ದಾಖಲಿಸಿಕೊಂಡು, ರೂ.5 ಸಾವಿರ ದಂಡ ವಸೂಲಿ ಮಾಡಲಾಗಿದೆ. ಒಟ್ಟು ರೂ.21.19 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ಹೇಳಿದರು.

ಕಾಯ್ದೆಯ ಕಲಂ 4ರ (ತಿದ್ದುಪಡಿ) ಪ್ರಕಾರ ಸಾರ್ವಜನಿಕ ಪ್ರದೇಶಗಳಲ್ಲಿ ಸಿಗರೇಟು ಸೇವನೆ ಮಾಡುವಂತಿಲ್ಲ ಹಾಗೂ ತಂಬಾಕು ಜಗಿದು ಉಗಿಯುವಂತಿಲ್ಲ. ಉಲ್ಲಂಘಿಸಿದರೆ ರೂ.1 ಸಾವಿರ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ಕಲಂ 4ಎ ಅನ್ವಯ ರೆಸ್ಟೋರೆಂಟ್‌ ಅಥವಾ ಹೋಟೆಲ್‌ಗಳಲ್ಲಿ ಹುಕ್ಕಾ ಬಾರ್ ಸ್ಥಾ‍ಪಿಸುವಂತಿಲ್ಲ. ಸಿಗರೇಟ್‌ಗಳು ಹಾಗೂ ಇತರೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲು ಪರವಾನಗಿ ಪಡೆದುಕೊಳ್ಳಬೇಕು. ಸಿಗರೇಟ್ ಹಾಗೂ ಇತರೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲು ಬಿಬಿಎಂಪಿ ಕಮಿಷನರ್‌ರಿಂದ ಪರವಾನಗಿ ಪಡೆದುಕೊಳ್ಳಬೇಕು. ಪರವಾನಗಿ ಪಡೆದುಕೊಳ್ಳದೇ ಮಾರಾಟ ಮಾಡಿದ್ದು ಕಂಡುಬಂದರೆ ದಂಡ ವಿಧಿಸಲಾಗುವುದು ಎಂದು ಮಾಹಿತಿ ನೀಡಿದರು.

ಕಲಂ 5ರ ಅಡಿ ತಂಬಾಕು ಉತ್ಪನ್ನಗಳ ಜಾಹೀರಾತು ಮತ್ತು ಪ್ರಚಾರದ ಮೇಲೆ ನೇರ/ ಪರೋಕ್ಷ ನಿಷೇಧ ಹೇರಲಾಗಿದೆ. ಮೊದಲ ಅಪರಾಧಕ್ಕೆ ಎರಡು ವರ್ಷ ಕಾರಾಗೃಹ ಶಿಕ್ಷೆ ಅಥವಾ ರೂ.1 ಸಾವಿರ ದಂಡ, ಪುನರಾವರ್ತಿತ ಅಪರಾಧಕ್ಕೆ ಐದು ವರ್ಷ ಕಾರಾಗೃಹ ಶಿಕ್ಷೆ ಅಥವಾ ರೂ.5 ಸಾವಿರ ದಂಡವಿದೆ ಎಂದು ಮಾಹಿತಿ ನೀಡಿದರು.

ಯಾವುದೇ ಹೋಟೆಲ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳು 30ಕ್ಕಿಂತ ಹೆಚ್ಚು ಆಸನಗಳು ಅಥವಾ 30ಕ್ಕಿಂತ ಹೆಚ್ಚು ಕೊಠಡಿಗಳನ್ನು ಹೊಂದಿದ್ದರೆ ಧೂಮಪಾನ ಪ್ರದೇಶವನ್ನು ನಿಗದಿ ಪಡಿಸಬೇಕು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.