ಬೆಂಗಳೂರು: ವ್ಯಾಪಾರ ಪರವಾನಗಿ ನವೀಕರಣಕ್ಕೆ ಫೆಬ್ರವರಿ 28 ಕೊನೆಯ ದಿನ!
2025-26ನೇ ಹಣಕಾಸು ವರ್ಷದ ವ್ಯಾಪಾರ ಪರವಾನಗಿಗಳ ನವೀಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೋಮವಾರ ಸುತ್ತೋಲೆ ಹೊರಡಿಸಿದ್ದಾರೆ.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ವ್ಯಾಪಾರ ಪರವಾನಗಿ (ಟ್ರೇಡ್ ಲೈಸೆನ್ಸ್) ನವೀಕರಣಕ್ಕೆ ಫೆಬ್ರವರಿ 28 ಕೊನೆಯ ದಿನವಾಗಿದೆ.
2025-26ನೇ ಹಣಕಾಸು ವರ್ಷದ ವ್ಯಾಪಾರ ಪರವಾನಗಿಗಳ ನವೀಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೋಮವಾರ ಸುತ್ತೋಲೆ ಹೊರಡಿಸಿದ್ದಾರೆ.
ಸುತ್ತೋಲೆಯ ಪ್ರಕಾರ, ವ್ಯಾಪಾರ ಪರವಾನಗಿ ನವೀಕರಣ ಪಾವತಿಯನ್ನು ಆನ್‌ಲೈನ್ ಅಥವಾ ಕೆನರಾ ಬ್ಯಾಂಕ್‌ನಲ್ಲಿ ಬ್ಯಾಂಕ್ ಚಲನ್ ಮೂಲಕ ಪಾವತಿಸಬೇಕು. ನವೀಕರಣ ಮೊತ್ತವನ್ನು ಪಾವತಿಸಲು ಫೆಬ್ರವರಿ 28 ಕೊನೆಯ ದಿನಾಂಕವಾಗಿದೆ. ಮಾರ್ಚ್ 1 ಮತ್ತು ಮಾರ್ಚ್ 31 ರ ನಡುವೆ ಮಾಡಿದ ಪಾವತಿಗಳಿಗೆ ಶೇ.25ರಷ್ಟು ದಂಡ ಅನ್ವಯಿಸುತ್ತದೆ ಮತ್ತು ಏಪ್ರಿಲ್‌ನಿಂದ ಶೇ,100 ರಷ್ಟು ದಂಡವನ್ನು ವಿಧಿಸಲಾಗುತ್ತದೆ. ನವೀಕರಣ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಬೇಕು ಎಂದು ತಿಳಿಸಲಾಗಿದೆ.
ವಸತಿ ಪ್ರದೇಶದಲ್ಲಿ 40 ಅಡಿಗಿಂತ ಕಡಿಮೆ ಅಗಲದ ರಸ್ತೆಗಳಲ್ಲಿ 2015ರ ನಂತರ ಪ್ರಾರಂಭವಾಗಿರುವ ಉದ್ದಿಮೆ ಪರವಾನಗಿಯನ್ನು ತಡೆಹಿಡಿಯಬೇಕು. 40 ಅಡಿಗಳಿಗಿಂತ ಹೆಚ್ಚು ಅಗಲದ ರಸ್ತೆಗಳಲ್ಲಿ 2015ರ ನಂತರ ಪ್ರಾರಂಭವಾಗಿರುವ ಉದ್ದಿಮೆಗಳಿಗೆ ಮಾತ್ರ ಪರವಾನಗಿ ನವೀಕರಣ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ನಕ್ಷೆ ಉಲ್ಲಂಘನೆಯಾಗಿರುವ ಕಟ್ಟಡಗಳಲ್ಲಿ ಪೂರ್ತಿ ಅಥವಾ ಭಾಗಶಃವಾಗಿ ಉದ್ದಿಮೆಗಳಿದ್ದರೆ, ವಾಹನ ನಿಲುಗಡೆ ಪ್ರದೇಶದಲ್ಲಿ, ಚಾವಣಿ ಪ್ರದೇಶವನ್ನೂ ಬಳಸುತ್ತಿದ್ದರೆ, ಪರವಾನಗಿ ನವೀಕರಣ ಮಾಡುವಂತಿಲ್ಲ. ಉದ್ದಿಮೆಗಳು, ಕಲ್ಯಾಣ ಮಂಟಪಗಳು ಹೋಟೆಲ್, ರೆಸ್ಟೋರೆಂಟ್ ತ್ಯಾಜ್ಯ ವಿಲೇವಾರಿ, ಪ್ಲಾಸ್ಟಿಕ್ ನಿಷೇಧ ಪಾಲನೆ ಸೇರಿದಂತೆ ಘನತ್ಯಾಜ್ಯ ವಿಲೇವಾರಿ ನಿಯಮಗಳನ್ನು ಪಾಲಿಸುತ್ತಿರುವ ದಾಖಲೆಗಳನ್ನು ಪರಿಶೀಲಿಸಬೇಕು. ವಲಯ ಆರೋಗ್ಯಾಧಿಕಾರಿ, ಉಪ ಆರೋಗ್ಯಾಧಿಕಾರಿ, ಆರೋಗ್ಯ ವೈದ್ಯಾಧಿಕಾರಿಗಳು ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಎಲ್ಲ ಅಂಶಗಳನ್ನು ಪರಿಗಣಿಸಿ, 2025-26ನೇ ಸಾಲಿನ ಪರವಾನಗಿ ನವೀಕರಣ ನೀಡಬೇಕು ಎಂದು ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



