ರಾಜ್ಯ

ಕರ್ನಾಟಕ ನೂತನ ಕೈಗಾರಿಕಾ ನೀತಿ ಬಿಡುಗಡೆ; 7.5 ಲಕ್ಷ ಕೋಟಿ ರೂ ಹೂಡಿಕೆ ಗುರಿ

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ನೂತನ ಕೈಗಾರಿಕಾ ನೀತಿಯನ್ನು ಅನಾವರಣಗೊಳಿಸಿದರು.

ಕರ್ನಾಟಕ ನೂತನ ಕೈಗಾರಿಕಾ ನೀತಿ ಬಿಡುಗಡೆ; 7.5 ಲಕ್ಷ ಕೋಟಿ ರೂ ಹೂಡಿಕೆ ಗುರಿ
ಇನ್ವೆಸ್ಟ್ ಕರ್ನಾಟಕ 2025 ಉದ್ಘಾಟನಾ ಸಮಾರಂಭ.
Published On :

ಬೆಂಗಳೂರು: ರಾಜ್ಯ ಸರ್ಕಾರ ನೂಚನ ಕೈಗಾರಿಕಾ ನೀತಿ 2025-29 ಅನ್ನು ಮಂಗಳವಾರ ಬಿಡುಗಡೆ ಮಾಡಿದೆ.

ಮಂಗಳವಾರ ಇಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಭೆಯಲ್ಲಿ ಮುಂದಿನ 5 ವರ್ಷಗಳಲ್ಲಿ ರಾಜ್ಯದ ಕೈಗಾರಿಕಾ ಬೆಳವಣಿಗೆ ಹಾಗೂ ಆರ್ಥಿಕ ಅಭಿವೃದ್ಧಿಗೆ ಮಹತ್ತರ ಗುರಿಯನ್ನೊಳಗೊಂಡ ನೂತನ ಕೈಗಾರಿಕಾ ನೀತಿಯನ್ನು ಅನಾವರಣಗೊಳಿಸಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ನೂತನ ಕೈಗಾರಿಕಾ ನೀತಿಯನ್ನು ಅನಾವರಣಗೊಳಿಸಿದರು.

ಹೊಸ ನೀತಿಯಲ್ಲಿರುವ ಅಂಶಗಳನ್ನು ವಿವರಿಸಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು, ಈ ನೀತಿಯು ರಾಜ್ಯದಲ್ಲಿ 2029 ರ ವೇಳೆಗೆ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ನೀತಿಯ ಮೂಲಕ, ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ ನೀಡುವ ಪ್ರಕ್ರಿಯೆಯನ್ನು ಡಿಜಿಟಲೀಕರಣ ಮತ್ತು ಏಕ ಗವಾಕ್ಷಿ ವ್ಯವಸ್ಥೆಯ ಮೂಲಕ ಸುವ್ಯವಸ್ಥಿತಗೊಳಿಸಲಾಗುತ್ತದೆ ಎಂದು ಹೇಳಿದರು.

ಇದಲ್ಲದೆ, ಮುಂದಿನ 5 ವರ್ಷಗಳಲ್ಲಿ ರಾಜ್ಯಕ್ಕೆ 7.50 ಲಕ್ಷ ಕೋಟಿ ರು. ಬಂಡಾವಳ ತರುವಂಥ ಕ್ರಮಗಳನ್ನು ಕೈಗೊಳ್ಳುವುದು ಹಾಗೂ 20 ಲಕ್ಷ ಉದ್ಯೋಗ ಸೃಷ್ಟಿಸುವುದು, ಸನ್‌ರೈಸ್ ವಲಯದಲ್ಲಿ ರಾಜ್ಯವನ್ನು ದೇಶಕ್ಕೆ ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರ ನಗರಗಳಲ್ಲಿ, ಹಿಂದುಳಿದ, ಅತೀ ಹಿಂದುಳಿದ ಜಿಲ್ಲೆ-ತಾಲೂಕುಗಳಲ್ಲಿ ಹೆಚ್ಚಿನ ಹೂಡಿಕೆಗೆ ಒತ್ತು ನೀಡಿ, ಅದಕ್ಕಾಗಿ ಕೈಗಾರಿಕಾ ಬೆಳವಣಿಗೆ ಆಧರಿಸಿ ಪ್ರದೇಶವಾರು ಪ್ರೋತ್ಸಾಹಕ ಭತ್ಯೆಗಳನ್ನು ನೀಡುವುದಾಗಿ ನೂತನ ಕೈಗಾರಿಕಾ ನೀತಿಯಲ್ಲಿ ತಿಳಿಸಲಾಗಿದೆ ತಿಳಿಸಿದರು.

ಡಿ ಎಂ ನಂಜುಂಡಪ್ಪ ವರದಿ ಆಧರಿಸಿ ಕೈಗಾರಿಕಾ ಬೆಳವಣಿಗೆಯಲ್ಲಿ ಹಿಂದುಳಿದಿರುವ ಜಿಲ್ಲೆ/ತಾಲ್ಲೂಕುಗಳನ್ನು ಝೋನ್-1 ಮತ್ತು 2ರಡಿ ತರಲಾಗಿದ್ದು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು `ಝೋನ್-3’ ಎಂದು ಗುರುತಿಸಲಾಗಿದೆ. ಉದ್ಯಮಗಳ ಸಾಮರ್ಥ್ಯ ಮತ್ತು ಬೆಳವಣಿಗೆ ನಿಚ್ಚಳತೆಗೆ ಅನುಗುಣವಾಗಿ ವಲಯಗಳನ್ನಾಗಿ ಮಾಡಿದ್ದು, ರಾಜ್ಯದ ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗಸೃಷ್ಟಿಗೆ ಆದ್ಯತೆ ಇರುವಂತೆ ಎಚ್ಚರ ವಹಿಸಲಾಗಿದೆ.

ಹೈಟೆಕ್ ತಯಾರಿಕೆ ವಲಯದಲ್ಲಿ ಕರ್ನಾಟಕವನ್ನು ದೇಶದಲ್ಲೇ ಪ್ರಥಮ ಸ್ಥಾನಕ್ಕೆ ಏರುವಂತೆ ಮಾಡಲಾಗುವುದು. ಜೊತೆಗೆ ಸುಸ್ಥಿರ, ಪರಿಸರಸ್ನೇಹಿ, ಸಮತೋಲಿತ ಮತ್ತು ಎಲ್ಲರನ್ನೂ ಒಳಗೊಳ್ಳಲಿರುವ ಪ್ರಾದೇಶಿಕ ಬೆಳವಣಿಗೆಯನ್ನು ಉತ್ತೇಜಿಸಲಾಗುವುದು.

ಕೈಗಾರಿಕಾ ಕ್ಷೇತ್ರದಲ್ಲಿ ಖಾಸಗಿ ಮತ್ತು ಸರಕಾರಿ ಸಹಭಾಗಿತ್ವದ ಮೂಲಕ ವಿಶ್ವ ದರ್ಜೆಯ ಮೂಲಸೌಕರ್ಯ ಅಭಿವೃದ್ಧಿ ಪಡಿಸುವಂತಹ ವ್ಯವಸ್ಥೆ ಮುಂದೆ ಬರಲಿದೆ. ಭಾರೀ ಹೂಡಿಕೆ ಇರುವ ಕೈಗಾರಿಕಾ ಯೋಜನಗೆಳ ವ್ಯಾಪ್ತಿಯಲ್ಲಿ ಡಾರ್ಮಿಟರಿ ಮತ್ತು ವಸತಿ ವ್ಯವಸ್ಥೆಗೆ ಸರಕಾರ ಕೈಜೋಡಿಸಲಿದೆ.

ನೂತನ ಕೈಗಾರಿಕಾ ನೀತಿಯಲ್ಲಿ ಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿ, ನಾವೀನ್ಯತೆಯ ಅಭಿವೃದ್ಧಿಗೆ ಕ್ವಿನ್ ಸಿಟಿಯನ್ನು ಅಭಿವೃದ್ಧಿ ಪಡಿಸಲಾಗುವುದು.

ಕೆಐಎಡಿಬಿ ಮೂಲಕ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಶೇಕಡ 30ರಷ್ಟು ಜಾಗವನ್ನು ಮೀಸಲಿಟ್ಟು, ತಂತ್ರಜ್ಞಾನದ ಉನ್ನತೀಕರಣ, ಕೌಶಲ್ಯಾಭಿವೃದ್ಧಿ, ಉತ್ಕೃಷ್ಟತಾ ಪುರಸ್ಕಾರ, ಕ್ಲಸ್ಟರ್ಸ್ ಅಭಿವೃದ್ಧಿ, ಆಕರ್ಷಕ ಪ್ರೋತ್ಸಾಹನಾ ಭತ್ಯೆ ಮತ್ತು ರಿಯಾಯಿತಿಗಳಿಗೆ ಗಮನ ಹರಿಸಲಾಗುವುದು.

ಕೆಲವು ಪ್ರದೇಶಗಳನ್ನು `ವಿಶೇಷ ಹೂಡಿಕೆ ಪ್ರದೇಶ’ (ಸ್ಪೆಷಲ್ ಇನ್ವೆಸ್ಟ್ಮೆಂಟ್ ರೀಜನ್) ಆಗಿ ಘೋಷಿಸಿ, ಉದ್ಯಮಗಳ ಆರ್ & ಡಿ ವಿಭಾಗ ಮತ್ತು ಉತ್ಪಾದನಾ ಘಟಕಗಳು ಒಂದೇ ಕಡೆ ಇರುವುದನ್ನು ಉತ್ತೇಜಿಸಲಾಗುವುದು.

ಹೂಡಿಕೆದಾರರು ತಮ್ಮ ಕೇಪೆಕ್ಸ್ ಸಬ್ಸಿಡಿ ಅಥವಾ ಉತ್ಪಾದನೆ ಆಧರಿತ ಪ್ರೋತ್ಸಾಹನಾ ಭತ್ಯೆ ನಡುವೆ ತಮಗೆ ಯಾವುದು ಅನುಕೂಲವೋ ಅದನ್ನು ಆರಿಸಿಕೊಳ್ಳಲು ಅವಕಾಶ ಇರಲಿದೆ.

ನೂತನ ಕೈಗಾರಿಕಾ ನೀತಿಯಡಿಯಲ್ಲಿ ಖಾಸಗಿ ಕೈಗಾರಿಕಾ ಪ್ರದೇಶಾಭಿವೃದ್ಧಿಗೂ ಅವಕಾಶ ಇರಲಿದೆ. ಇದರಂತೆ ಸಮಗ್ರ ಕೈಗಾರಿಕಾ ಪಾರ್ಕ್, ವಲಯವಾರು ಪಾರ್ಕ್, ಲಾಜಿಸ್ಟಿಕ್ಸ್ ಪಾರ್ಕ್ ಇತ್ಯಾದಿಗಳ ಅಭಿವೃದ್ಧಿ ಮಾಡಲಾಗುವುದು. ಜತೆಗೆ ಕೈಗಾರಿಕಾ ಪ್ರದೇಶಗಳ ಗರಿಷ್ಠ ಪ್ರಯೋಜನ ಪಡೆದುಕೊಳ್ಳಲು ಈಗಿರುವ ನಿರ್ಬಂಧಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶ ಎರಡರಲ್ಲೂ ತೆಗೆದು ಹಾಕಲಾಗುವುದು. ಜತೆಗೆ ನೇರ ಉದ್ಯೋಗ ಸೃಷ್ಟಿಗೆ ನೀತಿಯು ಒತ್ತು ಕೊಟ್ಟಿದೆ.

ಕೈಗಾರಿಕಾ ಬೆಳವಣಿಗೆಯಲ್ಲಿ ಹಿಂದುಳಿದಿರುವ ಜಿಲ್ಲೆ/ತಾಲ್ಲೂಕುಗಳಲ್ಲಿ ಹೂಡಿಕೆ ಮಾಡಿ, ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗುವ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ನೂತನ ಕೈಗಾರಿಕಾ ನೀತಿಯಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು. ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಶೇ 10ರಿಂದ 30ರಷ್ಟು ಕ್ಯಾಪಿಟಲ್ ಸಬ್ಸಿಡಿ, ಮುದ್ರಾಂಕ ಮತ್ತು ನೋಂದಣಿ ಶುಲ್ಕ ವಿನಾಯಿತಿ, ಭೂ ಪರಿವರ್ತನೆ ಶುಲ್ಕ ವಾಪಸ್, ಎಂಎಸ್ಎಂಇಗಳಿಗೆ ವಿದ್ಯುತ್ ಬಿಲ್ ಮೇಲಿನ ತೆರಿಗೆಯಿಂದ ವಿನಾಯಿತಿ, ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳಿಗೆ ವಿದ್ಯುತ್ ಸಬ್ಸಿಡಿ, ಮಳೆ ನೀರು ಸಂಸ್ಕರಣೆ ಮತ್ತು ತ್ಯಾಜ್ಯ ನೀರು ಮರುಪೂರಣಕ್ಕೆ ಪ್ರೋತ್ಸಾಹನ ಭತ್ಯ ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಾಪನೆಗೆ ಪ್ರೋತ್ಸಾಹನ ಭತ್ಯೆಗೆ ಒತ್ತು.

ಮೆಗಾ ಯೋಜನೆಗಳಿಗೆ ಸಿಗುವ ಸೌಲಭ್ಯಗಳು ಹಲವು. ಇದರಲ್ಲಿ ಪಿಎಲ್ಐ ಅಥವಾ ವಿಎಫ್ಎನ ಶೇ 10ರಿಂದ 25ರಷ್ಟು ಬಂಡವಾಳ ವೆಚ್ಚ ಸಬ್ಸಿಡಿ, ನಂಜುಂಡಪ್ಪ ವರದಿಯಲ್ಲಿ ಗುರುತಿಸಿರುವ ಹಿಂದುಳಿದ ಮತ್ತು ಅತೀ ಹಿಂದುಳಿದ ತಾಲ್ಲೂಕುಗಳಲ್ಲಿನ ಹೂಡಿಕೆಗೆ ಕ್ರಮವಾಗಿ ಶೇಕಡ 3 ಮತ್ತು ಶೇಕಡ 5ರಷ್ಟು ಹೆಚ್ಚುವರಿ ಸಬ್ಸಿಡಿ, ಖಾಸಗಿ ಕೈಗಾರಿಕಾ ಪಾರ್ಕ್ ಅಭಿವೃದ್ಧಿಗೆ ಪ್ರೋತ್ಸಾಹನ ಭತ್ಯೆ ಮತ್ತು ರಿಯಾಯಿತಿ, ಉದ್ಯೋಗಸೃಷ್ಟಿ ಮತ್ತು ಮಹಿಳಾ ಉದ್ಯೋಗಿಗಳ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಸಬ್ಸಿಡಿ, ಆರ್ & ಡಿ ಜತೆಗೆ ಉತ್ಪಾದನಾ ಘಟಕ ಸ್ಥಾಪನೆಗೆ ಉತ್ತೇಜನ, ಮುದ್ರಾಂಕ ಮತ್ತು ನೋಂದಣಿ ಶುಲ್ಕದಿಂದ ವಿನಾಯಿತಿ, ಭೂ ಪರಿವರ್ತನೆ ಶುಲ್ಕ ವಾಪಸ್ ಸೇರಿವೆ ಎಂದು ಸಚಿವರು ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.