ವಿದ್ಯಾಸಿರಿ ವಿದ್ಯಾರ್ಥಿ ವೇತನ 2 ಸಾವಿರ ರೂ ಗೆ ಏರಿಕೆ: ಸಿಎಂ ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ನಂತರ ಜನರು ಪ್ರತಿ ವರ್ಷ ರೂ.50,000 ಉಳಿತಾಯ ಮಾಡುತ್ತಿದ್ದಾರೆ.

ಮೈಸೂರು: ಮುಂದಿನ ವರ್ಷದಿಂದ ವಿದ್ಯಾಸಿರಿ ವಿದ್ಯಾರ್ಥಿ ವೇತನವನ್ನು ತಿಂಗಳಿಗೆ 1,500 ರಿಂದ 2,000ಕ್ಕೆ ಏರಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಘೋಷಿಸಿದರು.
ಕನಕದಾಸರ ಜಯಂತೋತ್ಸವ ಸಮಿತಿ ಮೈಸೂರಿನಲ್ಲಿ ಆಯೋಜಿಸಿದ್ದ ‘ಶ್ರೀ ಭಕ್ತ ಕನಕದಾಸರ 537ನೇ ಜಯಂತೋತ್ಸವ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಖ್ಯಮಂತ್ರಿಗಳು ಮಾತನಾಡಿದರು.
ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ನಂತರ ಜನರು ಪ್ರತಿ ವರ್ಷ ರೂ.50,000 ಉಳಿತಾಯ ಮಾಡುತ್ತಿದ್ದಾರೆ. ಮಹಿಳೆಯರ ಶಕ್ತಿ ಯೋಜನೆಗೆ ವಾರ್ಷಿಕ ಒಟ್ಟು 57 ಸಾವಿರ ಕೋಟಿ ಕೊಡಲಾಗುತ್ತಿದೆ. ಆದರೆ, ನಮ್ಮ ವಿರೋಧಿಗಳು ಬೇರೆ ಬೇರೆ ರೀತಿಯಲ್ಲಿ ವಿರೋಧಿಸುತ್ತಿದ್ದಾರೆ. ಅವರಿಗೆ ಬಡವರು ಮತ್ತು ಮಹಿಳೆಯರನ್ನು ವಿರೋಧ ಕಟ್ಟಿಕೊಳ್ಳಲು ಆಗದ ಹಿನ್ನೆಲೆಯಲ್ಲಿ ಶಕ್ತಿ ಯೋಜನೆಯನ್ನು ಕೈಬಿಡುವುದಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆಂದು ಕಿಡಿಕಾರಿದರು.
ನಾವು ಅವರ ಬಳಿ ದುಡ್ಡು ಕೇಳುವುದಕ್ಕೆ ಹೋಗಿದ್ದವಾ. ನಮ್ಮ ರಾಜ್ಯದ ಬಜೆಟ್ ಗಾತ್ರ 3 ಲಕ್ಷ ಕೋಟಿ ಮೀರಿದೆ. ಇದರಲ್ಲಿ 57 ಸಾವಿರ ಕೋಟಿಯನ್ನು ಮಹಿಳಾ ಕಾರ್ಯಕ್ರಮಕ್ಕೆ ಮೀಸಲಿಡಲಾಗಿದೆ. ಇನ್ನು ಯಾರು ತೆರಿಗೆ ಪಾವತಿಸುತ್ತಿದ್ದಾರೋ ಅವರ ಹೆಸರಿನ ಬಿಪಿಎಲ್ ಕಾರ್ಡ್ ರದ್ದಾಗಲಿದೆ. ಈ ಆಹಾರ ಸಂರಕ್ಷಣಾ ಕಾಯ್ದೆ ತಂದಿದ್ದು ಮನಮೋಹನ್ ಸಿಂಗ್. ಆದರೆ, ಅದನ್ನು ಅಂದಿನ ಕೇಂದ್ರ ಸಚಿವ ಮುರಳಿ ಮನೋಹರ್ ಜೋಶಿ ಅವರು ಓಟ್ ಸೆಕ್ಯುರಿಟಿ ಆಕ್ಟ್ ಎಂದು ವಿರೋಧಿಸಿದ್ದಾಗಿ ಹೇಳಿದರು. ಆದ್ದರಿಂದ ಪ್ರತಿಯೊಬ್ಬರು ಇತಿಹಾಸ ತಿಳಿಯಬೇಕು ಎಂದರು.
ಇದೇ ವೇಳೆ ವಿದ್ಯಾಸಿರಿ ಯೋಜನೆಯಡಿ ಒದಗಿಸುವ ವಿದ್ಯಾರ್ಥಿವೇತನ 1,500 ರೂ.ಗಳನ್ನು ಮುಂದಿನ ವರ್ಷದಿಂದ ರೂ.2 ಸಾವಿರಕ್ಕೆ ಏರಿಸಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಿಸಿದರು.
ಬಳಿಕ ತಮ್ಮ ಶಿಕ್ಷಣದ ದಿನಗಳನ್ನು ಸ್ಮರಿಸಿದ ಸಿಎಂ, ಶೇಕಡ 90 ಅಂಕಗಳನ್ನು ಪಡೆಯುವುದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾತ್ರ ಸಾಧ್ಯ. ಅದಕ್ಕಾಗಿ ಅವರು ಸಾಕಷ್ಟು ಶ್ರಮವಹಿಸಿರುತ್ತಾರೆ. ನಾನು ಕೂಡಾ ಹತ್ತನೇ ತರಗತಿವರೆಗೆ ವಿದ್ಯಾವರ್ಧಕ ಶಾಲೆಯಲ್ಲಿ ಮೊದಲಿಗನಾಗಿದ್ದೆ. ನಂತರ ಪಿಯುಸಿ ತರಗತಿಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಆಯ್ದುಕೊಂಡಿದ್ದರಿಂದ ಸ್ವಲ್ಪ ಶ್ರಮ ವಹಿಸಬೇಕಾಯಿತು. ಪಿಯುಸಿ ಹಾಗೂ ಬಿ ಎಸ್ ಸಿ ಮತ್ತು ಲಾ ವ್ಯಾಸಂಗವನ್ನು ಸೆಕೆಂಡ್ ಕ್ಲಾಸಿನಲ್ಲಿ ಪಾಸ್ ಮಾಡಿದೆ. ಆದರೆ, ವಿದ್ಯಾರ್ಥಿ ಜೀವನದಲ್ಲಿ ಒಮ್ಮೆಯೂ ಫೇಲ್ ಆಗಲಿಲ್ಲ.
ಶಿಕ್ಷಕರು ಮಾಡುವ ಪಾಠವನ್ನು ಆಯಾಯ ದಿನದಂದೇ ಅಭ್ಯಾಸ ಮಾಡಬೇಕು. ಪ್ರತಿದಿನ ಐದಾರು ಗಂಟೆಗಳ ಕಾಲ ಅಭ್ಯಾಸ ಮಾಡಬೇಕು. ಶಿಕ್ಷಣ ಹಾಗೂ ಪ್ರತಿಭೆ ಯಾರ ಅಥವಾ ಯಾವ ಜಾತಿ ಸ್ವತ್ತು ಅಲ್ಲ . ವಿವೇಕಾನಂದರು ಹೇಳಿದಂತೆ ಸುಪ್ತವಾದ ಪ್ರತಿಭೆಯನ್ನು ವಿಕಸನಗೊಳಿಸುವುದೇ ಶಿಕ್ಷಣ.
ಹಿಂದುಳಿದ ವರ್ಗಗಳು 2ಎ ಕೆಟಗರಿಗೆ ಸೇರುತ್ತವೆ. ಆದರೆ, ಇದನ್ನು ಮೀರಿ ಮೆರಿಟ್ ನಲ್ಲಿ ಅಂಕ ಗಳಿಸಿ ಸೀಟ್ ಪಡೆಯಲು ಪ್ರಯತ್ನಿಸಬೇಕು, ಅದಕ್ಕಾಗಿ ಶ್ರಮವಹಿಸಬೇಕು. ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಲ್ಲಿ ಅವರು ಹೆಚ್ಚು ಅಂಕಗಳನ್ನು ತೆಗೆಯಲು ಸಹಕಾರಿಯಾಗುತ್ತದೆ. ಜೀವನದಲ್ಲಿ ಮೇಲೆ ಬಂದ ಮೇಲೆ ನಡೆದು ಬಂದ ಹಾದಿಯನ್ನು ಮರೆಯಬಾರದು. ಸಮಾಜದಲ್ಲಿ ತುಳಿತಕ್ಕೊಳಗಾದವರ, ಅವಕಾಶ ವಂಚಿತರ ಸೇವೆ ಮಾಡಬೇಕು. ಹುಟ್ಟು ಆಕಸ್ಮಿಕ - ಸಾವು ನಿಶ್ಚಿತ, ಇವೆರಡರ ನಡುವಿನ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕುವೆಂಪು ಹೇಳುತ್ತಾರೆ 'ಹುಟ್ಟುವಾಗ ಎಲ್ಲರೂ ವಿಶ್ವಮಾನವರು, ಬೆಳೆಯುತ್ತಾ ಬೆಳೆಯುತ್ತಾ ಜಾತಿ ಇತ್ಯಾದಿಗಳನ್ನು ರೂಢಿಸಿಕೊಂಡು ಅಲ್ಪಮಾನವರಾಗಿ ಬಿಡುತ್ತಾರೆ. ನಾವು ವಿಶ್ವಮಾನವರಾಗಲು ಪ್ರಯತ್ನಿಸೋಣ. ಅಲ್ಪ ಮಾನವರಾಗುವುದು ಬೇಡ. ಸಮಾಜವನ್ನು ಸರ್ವಜನಾಂಗದ ಶಾಂತಿಯ ತೋಟ ಮಾಡೋಣ, ಇದು ಶಿಕ್ಷಣದ ಮೂಲ ಧ್ಯೇಯವು ಆಗಿದೆ. 1988ರಲ್ಲಿ 37 ವರ್ಷಗಳ ಹಿಂದೆ ನಾನು ಸಾರಿಗೆ ಮಂತ್ರಿಯಾಗಿದ್ದಾಗ ಕನಕದಾಸ ಜಯಂತಿಯ 500ನೇ ವರ್ಷಾಚರಣೆಯನ್ನು ಆಚರಿಸಲಾಯಿತು. ಕನಕದಾಸರು ಒಬ್ಬ ಕವಿ, ಸಂತ, ದಾರ್ಶನಿಕ.
ಕನಕದಾಸರು ಹಿಂದುಳಿದ ಜಾತಿಗೆ ಸೇರಿದ್ದರಿಂದ ಅನೇಕ ಅಪಮಾನಗಳನ್ನು ಎದುರಿಸಬೇಕಾಯಿತು. ಅದನ್ನೆಲ್ಲಾ ಮೀರಿ ಅವರು ಸಂತರಾದ ಬಗೆ ಪ್ರತಿಯೊಬ್ಬರಿಗೂ ಆದರ್ಶ. ಕನಕದಾಸರ ಪ್ರತಿಮೆಯನ್ನು ಮೈಸೂರು ನಗರದಲ್ಲಿ ಸ್ಥಾಪಿಸಲಾಗುವುದು. ಈ ಮೂಲಕ ಅವರ ಜೀವನಾದರ್ಶ ಇನ್ನೂ ಹೆಚ್ಚು ಜನರನ್ನು ತಲುಪುವಂತಾಗಲಿ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



