2024-25 ಶೈಕ್ಷಣಿಕ ವರ್ಷ ಆರಂಭ: ಶಾಲೆಗಳತ್ತ ಮುಖ ಮಾಡಿದ ಮಕ್ಕಳು!
ಬೇಸಿಗೆ ರಜೆ ಮುಗಿದಿದ್ದು, ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಶುರುವಾಗಿವೆ. ಬುಧವಾರದಿಂದ 2024-2025ನೇ ಸಾಲಿನ ಶೈಕ್ಷಣಿಕ ಅವಧಿ ಆರಂಭವಾಗಿದೆ.

ಬೆಂಗಳೂರು: ಬೇಸಿಗೆ ರಜೆ ಮುಗಿದಿದ್ದು, ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಶುರುವಾಗಿವೆ. ಬುಧವಾರದಿಂದ 2024-2025ನೇ ಸಾಲಿನ ಶೈಕ್ಷಣಿಕ ಅವಧಿ ಆರಂಭವಾಗಿದೆ.
ಕಳೆದ 2 ತಿಂಗಳಿಂದ ಬೇಸಿಗೆ ರಜೆಯಿಂದ ಬಂದ್ ಆಗಿದ್ದ ಶಾಲೆಗಳು ಇಂದಿನಿಂದ ಓಪನ್ ಆಗಿವೆ. ಹಲವು ಖಾಸಗಿ ಶಾಲೆಗಳು ಈಗಾಗಲೇ ತರಗತಿಗಳನ್ನು ಆರಂಭಿಸಿದ್ದು, ಸರ್ಕಾರಿ ಶಾಲೆಗಳು ಬುಧವಾರದಿಂದ ಅಧಿಕೃತವಾಗಿ ಪುನರಾರಂಭಗೊಂಡಿದೆ.
ಮಜಾ ಮುಗಿಸಿಕೊಂಡು ವಾಪಸ್ ಆಗಿರುವ ಚಿಣ್ಣರಿಗೆ, ಶಾಲಾ ಪ್ರಾರಂಭೋತ್ಸವದ ಮೂಲಕ ಸಿಹಿ ನೀಡಿ ಶಿಕ್ಷಕರು ಬರಮಾಡಿಕೊಳ್ಳುತ್ತಿದ್ದಾರೆ.
ಶಾಲೆಗಳಲ್ಲಿ ಪ್ರತಿಯೊಂದು ತರಗತಿ ಕೊಠಡಿ, ಹೊರಾಂಗಣ, ಬಿಸಿಯೂಟ ಕೊಠಡಿ, ಆಟದ ಮೈದಾನ, ಕಾಂಪೌಂಡ್ ಸೇರಿದಂತೆ ಶಾಲೆಯನ್ನು ಉತ್ತಮ ರೀತಿಯಲ್ಲಿ ಸ್ವಚ್ಛಗೊಳಿಸಿದ್ದಾರೆ. ತಳಿರು ತೋರಣ, ರಂಗೋಲೆ ಬಿಡಿಸಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮುಖ್ಯಶಿಕ್ಷಕರುಗಳಿಗೆ ಶಿಕ್ಷಣ ಇಲಾಖೆ ಸೂಚಿಸಿದೆ.
ಮಕ್ಕಳು ಶಾಲೆಗೆ ಬರುತ್ತಿದ್ದಂತೆ ಅವರಿಗೆ ಹೂವು, ಚಾಕೊಲೇಟ್ ಸೇರಿದಂತೆ ಯಾವುದಾದರೂ ಸಿಹಿ ನೀಡಿ ಸ್ವಾಗತಿಸುವಂತೆ ಸಲಹೆ ನೀಡಲಾಗಿದೆ.
ಈಗಾಗಲೇ ಸಮವಸ್ತ್ರ ಪೂರ್ಣ ಪ್ರಮಾಣದಲ್ಲಿ ತಾಲ್ಲೂಕು ಮಟ್ಟಕ್ಕೆ ರವಾನೆಯಾಗಿದ್ದು, ಪಠ್ಯಪುಸ್ತಕಗಳನ್ನು ಕೂಡ ಶೇ.75ರಿಂದ 80ರಷ್ಟು ಸರಬರಾಜು ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಉಳಿದ ಪಠ್ಯಪುಸ್ತಕಗಳ ಪೂರೈಕೆ ಮಾಡಲಾಗುವುದು. ಬಿಇಒ, ಡಿಡಿಪಿಐಗಳು ಶಾಲೆಗಳಿಗೆ ಅವುಗಳನ್ನು ತಲುಪಿಸಿ ಪ್ರಾರಂಭೋತ್ಸವದ ದಿನವೇ ವಿತರಣೆಗೆ ಕ್ರಮ ವಹಿಸಬೇಕೆಂದು ಕಳಪೆ ಗುಣಮಟ್ಟದ ವಸ್ತುಗಳಿಗೆ ಸಂಬಂಧಿಸಿದಂತೆ ಅಥವಾ ಶಾಲೆಯ ದುರಸ್ತಿ ಕಾರ್ಯಗಳು ಪೂರ್ಣಗೊಳ್ಳದಿದ್ದರೆ ವರದಿ ಮಾಡಬೇಕು ಎಂದು ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ತಜ್ಞರು ಮತ್ತು ಮಕ್ಕಳ ಹಕ್ಕುಗಳ ಕಾರ್ಯಕರ್ತರು ಶಾಲೆಗಳು ಮತ್ತು BEO ಗಳು ಪ್ರತೀಬಾರಿ ಅನುಸರಿಸುವ ಕ್ರಮಗಳ ಹೊರತಾಗಿ ಹೆಚ್ಚಿನದ್ದನ್ನು ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚೈಲ್ಡ್ ರೈಟ್ಸ್ ಟ್ರಸ್ಟ್ ನಿರ್ದೇಶಕ ನಾಗಸಿಂಹರಾವ್ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿ ಸ್ನೇಹಿ ವಾತಾವರಣ ನಿರ್ಮಿಸಬೇಕು. ರಾಜ್ಯದಲ್ಲಿ ತಾಪಮಾನ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಸಾಕಷ್ಟು ಮಕ್ಕಳು ತಮ್ಮ ಮನೆಯಿಂದ ಹೊರಬರಲು ಸಾಧ್ಯವಾಗದೆ, ತಮ್ಮ ಗೆಳೆಯರೊಂದಿಗೆ ಆಟವಾಡಲು ಸಾದ್ಯವಾಗಿರಲಿಲ್ಲ. ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಅವರ ದಿನಚರಿಯನ್ನು ಬದಲಾಯಿಸಲು ಸಹಾಯ ಮಾಡುವ ವಾತಾವರಣವನ್ನು ಸೃಷ್ಟಿಸಬೇಕೆಂದು ಹೇಳಿದ್ದಾರೆ.
ಶಾಲೆ ಆರಂಂಭವಾದ ಮೊದಲ ಮೂರು ದಿನ ಅವರೊಂದಿಗೆ ಮಾತುಕತೆ, ಚರ್ಚೆ ನಡೆಸಬೇಕು. ಇದರಿಂದ ಅವರ ನೈತಿಕತೆ ಹೆಚ್ಚಾಗುತ್ತದೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮವಾಗಿ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ ಖಾಲಿಯಿರುವ ಹುದ್ದೆಗಳನ್ನು ಭರ್ದಿ ಮಾಡುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸರ್ಕಾರಕ್ಕೆ ಪತ್ರ ಬರೆದಿದೆ.
50,000 ಕ್ಕೂ ಹೆಚ್ಚು ಪ್ರಾಥಮಿಕ ಶಿಕ್ಷಕರು ಮತ್ತು 10,000 ಕ್ಕೂ ಹೆಚ್ಚು ಉನ್ನತ ಶಿಕ್ಷಣ ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಹೀಗಾಗಿ ಶೈಕ್ಷಣಿಕ ವರ್ಷದ ಮೇಲೆ ಪರಿಣಾಮ ಬೀರದಂತೆ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸುವಂತೆ ಸಂಘವು ಸರ್ಕಾರಕ್ಕೆ ಮನವಿ ಮಾಡಿದೆ.
ಇದು ಪ್ರತಿವರ್ಷ ನಡೆಯುವ ಪ್ರಕ್ರಿಯೆಯಾಗಿದೆ. ಆದರೆ, ಈ ವರ್ಷ ಮೇ 29ರಿಂದ ಶಾಲೆಗಳು ಆರಂಭಗೊಂಡರೂ ರಾಜ್ಯ ಸರಕಾರದಿಂದ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಸಂಘ ದೂರಿದೆ.
ಬಿಎಂಟಿಸಿ ಪಾಸ್‌ಗಾಗಿ ಅರ್ಜಿ ಸಲ್ಲಿಸಿ
ಬುಧವಾರ (ಮೇ 29) ರಿಂದ ರಿಯಾಯಿತಿ ದರದಲ್ಲಿ 2024-25 ರ ಪಾಸ್‌ಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವಿತರಿಸುತ್ತಿದ್ದು, ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಶಕ್ತಿ ಯೋಜನೆಯಡಿ ಕರ್ನಾಟಕದ ನಿವಾಸಿಗಳಾದ ವಿದ್ಯಾರ್ಥಿನಿಯರಿಗೆ ಸಾಮಾನ್ಯ ಬಿಎಂಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದು ನಿಗಮ ತಿಳಿಸಿದೆ.
ಜೂನ್ 1 ರಿಂದ ಬೆಂಗಳೂರು ಒನ್ ಕೇಂದ್ರಗಳಲ್ಲಿ ಬಿಎಂಟಿಸಿ ಪಾಸ್ ವಿತರಿಸಲಾಗುತ್ತದೆ. 2024-25 ನೇ ಸಾಲಿನ ವಿದ್ಯಾರ್ಥಿ ಪಾಸ್‌ಗಳಿಗಾಗಿ ಆನ್‌ಲೈನ್ ಅರ್ಜಿಗಳು ಸೇವಾಸಿಂಧು ಪೋರ್ಟಲ್ https://sevasindhu.karnataka.gov.in ನಲ್ಲಿ ಲಭ್ಯವಿದೆ. ವಿದ್ಯಾರ್ಥಿಗಳು ಬೆಂಗಳೂರು ಒನ್ ಕೇಂದ್ರಗಳ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದ್ದು, ಬೆಂಗಳೂರು ಒನ್ ಕೇಂದ್ರಗಳು, ಕೆಂಪೇಗೌಡ ಬಸ್ ನಿಲ್ದಾಣ, ಕೆಂಗೇರಿ ಟಿಟಿಎಂಸಿ, ಶಾಂತಿನಗರ ಟಿಟಿಎಂಸಿ, ಹೊಸಕೋಟೆ, ಎಲೆಕ್ಟ್ರಾನಿಕ್ಸ್ ಸಿಟಿ ಡಿಪೋ-19, ಕೆಎಸ್‌ಆರ್‌ಟಿಸಿ ಆನೇಕಲ್ ಬಸ್ ನಿಲ್ದಾಣದಲ್ಲಿ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6.30 ರವರೆಗೆ ಪಾಸ್‌ಗಳನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ, BMTC ಸಹಾಯವಾಣಿ ಕೇಂದ್ರವನ್ನು 080-22483777 ಸಂಪರ್ಕಿಸಬಹುದು ಅಥವಾ BMTC ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




