BBMP ವೈಟ್ ಟಾಪಿಂಗ್ ಕಾಮಗಾರಿ: ಚಿಕ್ಕಪೇಟೆಯಲ್ಲಿ ವ್ಯಾಪಾರ ವಹಿವಾಟಿನಲ್ಲಿ ಭಾರಿ ಕುಸಿತ!
ರಾಜ್ಯ ರಾಜಧಾನಿ ಬೆಂಗಳೂರಿನ ಅತಿದೊಡ್ಡ ಸಗಟು ಮಾರುಕಟ್ಟೆಗಳಲ್ಲಿ ಒಂದಾದ ಚಿಕ್ಕಪೇಟೆಯಲ್ಲಿ ಬಿಬಿಎಂಪಿ ವೈಟ್ ಟಾಪಿಂಗ್ ಕಾಮಗಾರಿ ನಡೆಸುತ್ತಿದ್ದು, ಇದರಿಂದ ವ್ಯಾಪಾರ ವಹಿವಾಟಿನಲ್ಲಿ ಭಾರೀ ಕುಸಿತವಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಅತಿದೊಡ್ಡ ಸಗಟು ಮಾರುಕಟ್ಟೆಗಳಲ್ಲಿ ಒಂದಾದ ಚಿಕ್ಕಪೇಟೆಯಲ್ಲಿ ಬಿಬಿಎಂಪಿ ವೈಟ್ ಟಾಪಿಂಗ್ ಕಾಮಗಾರಿ ನಡೆಸುತ್ತಿದ್ದು, ಇದರಿಂದ ವ್ಯಾಪಾರ ವಹಿವಾಟಿನಲ್ಲಿ ಭಾರೀ ಕುಸಿತವಾಗಿದೆ ಎಂದು ತಿಳಿದುಬಂದಿದೆ.
ರಸ್ತೆಯ ಒಂದು ಬದಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ವಾಹನ ಸವಾರರು ಸಂಚಾರಕ್ಕೆ ಪರದಾಡುವಂತಾಗಿದೆ ಅಲ್ಲದೆ, ಚಿಕ್ಕಪೇಟೆಗೆ ಭೇಟಿ ನೀಡುವವರು ಕನಿಷ್ಠ ಮುಂದಿನ 100 ದಿನಗಳ ಕಾಲ ಅವ್ಯವಸ್ಥೆಯನ್ನು ಎದುರಿಸಲು ಸಿದ್ಧರಾಗಿರಬೇಕಾಗಿದೆ.
ಕಾಮಗಾರಿ ಮತ್ತು ಅವ್ಯವಸ್ಥೆಯಿಂದಾಗಿ ವ್ಯಾಪಾರದಲ್ಲಿ ಭಾರೀ ಕುಸಿತವಾಗಿದ್ದು, ಇದರಿಂದ ವ್ಯಾಪಾರಸ್ಥರೂ ಕೂಡ ಸಂಕಷ್ಟ ಎದುರಿಸುವಂತಾಗಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಗಾಂಧಿನಗರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಈ ಮಾರುಕಟ್ಟೆಯು ನೂರಾರು ಬಟ್ಟೆ ಅಂಗಡಿಗಳು, ಹೋಟೆಲ್, ಸಾಮಾನುಗಳ ಅಂಗಡಿಗಳು, ಎಲೆಕ್ಟ್ರಾನಿಕ್ಸ್ ಮಳಿಗೆಗಳು ಹಾಗೂ ಹಲವಾರು ಸಣ್ಣ ತಿನಿಸುಗಳಿಗೆ ನೆಲೆಯಾಗಿದೆ.
ಪ್ರತಿನಿತ್ಯ ಸಾವಿರಾರು ಜನರು ಈ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಆದರೀಗ, ಜನರು ಈ ರಸ್ತೆಯಲ್ಲಿ ನಡೆದುಕೊಂಡಲು ಹೋಗಲು ಸಹ ಹೆಣಗಾಡುವಂತಾಗಿದೆ.
ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿರುವ ಅಂಗಡಿ ಮತ್ತು ರೆಸ್ಟೋರೆಂಟ್ ಮಾಲೀಕರು ತಮ್ಮ ಆದಾಯವು ಶೇ.20-30 ರಷ್ಟು ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ರಸ್ತೆಗಳಲ್ಲಿ ಸಂಚರಿಸಲು ಗ್ರಾಹಕರಿಗೆ ಕಷ್ಟಕರವಾಗುತ್ತಿದ್ದು, ಹಾಗಾಗಿ ಹಲವರು ಭೇಟಿ ನೀಡುತ್ತಿಲ್ಲ. ಇದರಿಂದ ವ್ಯಾಪಾರ-ವಹಿವಾಟು ಕುಸಿತಕಂಡಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಬಿಡಬ್ಲ್ಯುಎಸ್‌ಎಸ್‌ಬಿ ಪೈಪ್‌ಲೈನ್‌ಗಳನ್ನು ಮಾತ್ರ ಹಾಕಿದೆ. ಇದರ ನಂತರ, ಪ್ರಮುಖ ಕಾಮಗಾರಿಗಳು ಆರಂಭವಾಗಲಿದೆ. ಒಟ್ಟಾರೆ ಯೋಜನೆಯು 100 ದಿನಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಒಂದು ತಿಂಗಳಿನಿಂದ ರಸ್ತೆ ಅಗೆದರೂ ಯಾವುದೇ ಮಹತ್ವದ ಪ್ರಗತಿಯಾಗಿಲ್ಲ. ಗ್ರಾಹಕರ ಸಂಖ್ಯೆ ಮತ್ತು ಮಾರಾಟ ಕಡಿಮೆಯಾಗಿದೆ. ಅಂಗಡಿಯವರು ಹೋಲ್ ಸೇಲ್ ನಲ್ಲಿ ವಸ್ತು ಖರೀದಿ ಮಾಡಲು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಆದರೆ, ಪ್ರಸ್ತುತ ಪರಿಸ್ಥಿತಿಗಳಿಂದಾಗಿ ಬೇರೆ ಪ್ರದೇಶಗಳಿಂದ ಖರೀದಿಸಲು ಪ್ರಾರಂಭಿಸಿದ್ದಾರೆ ಎಂದು ಹೋಟೆಲ್‌ವೇರ್ ಅಂಗಡಿ ಹೊಂದಿರುವ ಪಂಕಜ್ ಎಂಬುವವರು ಹೇಳಿದ್ದಾರೆ.
ಈ ಗೊಂದಲವನ್ನು ಸರಿಪಡಿಸಬೇಕು. ಇಲ್ಲದಿದ್ದರೇ, ಈ ಪ್ರಕ್ರಿಯೆಯಲ್ಲಿ ನಾವು ಗ್ರಾಹಕರನ್ನು ಕಳೆದುಕೊಳ್ಳುವ ಅಪಾಯವಿದೆ. ಈ 100 ದಿನಗಳಲ್ಲಿ ಗ್ರಾಹಕರು 100 ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಬಹುದು. ಗ್ರಾಹಕರ ಸಂಖ್ಯೆ ಕಡಿಮೆ ಆದರೆ, ನಾವು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ.
ಚಿಕ್ಕಪೇಟೆ ಮೆಟ್ರೋ ನಿಲ್ದಾಣದಿಂದ ಕೆಲವು ಮೀಟರ್ ದೂರದಲ್ಲಿ ಉಪಾಹಾರ ಗೃಹವನ್ನು ನಡೆಸುತ್ತಿರುವ ಬದರಿನಾಥ್ ಮಾತನಾಡಿ, ರಸ್ತೆಗಳು ಯೋಗ್ಯ ಸ್ಥಿತಿಯಲ್ಲಿದ್ದವು. ಹೊಸ ನಿರ್ಮಾಣ ಕಾರ್ಯವು ದೀರ್ಘಾವಧಿಯಲ್ಲಿ ಸಹಾಯಕವಾಗುತ್ತದೆ ಎಂದು ತೋರುತ್ತಿದೆ. ಆದರೂ, ಇದರಿಂದ ನಾವು ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದೇವೆ. ಈ ಹಿಂದೆ ಚಿಕ್ಕಪೇಟೆ ಮೆಟ್ರೋದಲ್ಲಿ ಇಳಿದ ನಂತರ ನಮ್ಮ ಅಂಗಡಿಯಲ್ಲಿ ತಿಂಡಿ ತಿನಿಸುಗಳಿಗೆ ಜನರು ನಿಲ್ಲುತ್ತಿದ್ದರು. ಆದರೆ, ಈಗ ಜನಸಂದಣಿ ಕಡಿಮೆಯಾಗುತ್ತಿದೆ. ಸಂಜೆಯ ಹೊತ್ತಿಗೆ ಗ್ರಾಹಕರೇ ಇಲ್ಲದಂತಾಗುತ್ತಿದೆ ಎಂದು ಹೇಳಿದ್ದಾರೆ.
ವ್ಯಾಪಾರ ಕಾರ್ಯಕರ್ತ ಸಜ್ಜನ್ ರಾಜ್ ಮೆಹ್ತಾ ಮಾತನಾಡಿ, ಇಂತಹ ಜನನಿಬಿಡದ ಪ್ರದೇಶಗಳಲ್ಲಿ ಕೆಲಸ ಮಾಡುವಾಗ ಅಧಿಕಾರಿಗಳ ಸಂಪರ್ಕ ಸಂಖ್ಯೆ ಹಾಗೂ ಕೆಲಸ ಮುಗಿಯುವ ಸಮಯ ಜೊತೆಗೆ ಅಧಿಕಾರಿಗಳ ಹೆಸರುಗಳನ್ನು ಪ್ರದರ್ಶನ ಮಾಡುವ ಬೋರ್ಡ್ ಹಾಕಬೇಕು. ನೀಡಿದ ಗಡುವಿನಲ್ಲಿ ಕೆಲಸ ಮುಗಿಸದವರ ಮೇಲೆ ದಂಡ ಹೇರಬೇಕು ಎಂದು ಹೇಳಿದ್ದಾರೆ.
ಬಿಡಬ್ಲೂಎಸ್‌ಎಸ್‌ಬಿ, ಬಿಬಿಎಂಪಿ ಸೇರಿದಂತೆ ಇತರ ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ ನಗರದಲ್ಲಿ ನಡೆಯುವ ದೈನಂದಿನ ಕಾರ್ಯಾಚರಣೆಗಳ ಮೇಲೆ ಇದು ನೇರವಾಗಿ ಪರಿಣಾಮ ಬೀರುತ್ತಿದೆ. ಕಾಮಗಾರಿಯಿಂದಾಗಿ ತಮ್ಮ ಜೀವನೋಪಾಯಕ್ಕಾಗಿ ಈ ಸ್ಥಳವನ್ನು ಅವಲಂಬಿಸಿರುವವರ ಜೀವನ ಮತ್ತಷ್ಟು ಕಷ್ಟಕರವಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಂಚಾರವನ್ನು ಏಕಮುಖವಾಗಿ ನಿಯಂತ್ರಿಸಲಾಗಿದ್ದರೂ, ಸಂಜೆಯ ವೇಳೆಗೆ, ದ್ವಿಚಕ್ರ ವಾಹನಗಳು ಇನ್ನೊಂದು ಬದಿಯಿಂದ ಬರಲು ಪ್ರಾರಂಭಿಸುತ್ತವೆ. ಈ ಪ್ರದಶವು ಬೆಂಗಳೂರಿನ ಉತ್ತರ ಮತ್ತು ದಕ್ಷಿಣ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿದೆ. ಆದರೂ ನಮಗೆ ತಿಳಿಸದೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಇಲ್ಲಿ ಹೆಚ್ಚಿನ ಜನಸಂದಣಿ ಇರುತ್ತದೆ. ಆದರೂ, ಏಕಾಏಕಿ ಈ ರೀತಿ ರಸ್ತೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಇದು ನಮ್ಮ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದೆ. ನಮಗೆ ಮಾಹಿತಿ ನೀಡದೆ, ನಮ್ಮನ್ನು ಸಂಪರ್ಕಿಸದೆ ಅಧಿಕಾರಿಗಳು ಕಾಮಗಾರಿ ಕೈಗೊಂಡಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




