ಬೆಂಗಳೂರು: ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಗೆ BBMP ಮುಂದು!
ಶೀಘ್ರದಲ್ಲಿಯೇ ಬೀದಿ ಬದಿ ವ್ಯಾಪಾರಿಗಳ ಪಟ್ಟಿಯನ್ನು ಸಿದ್ಧಪಡಿಸಿ ಬಿಡುಗಡೆ ಮಾಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಎಲ್ಲಾ 8 ವಲಯಗಳಲ್ಲಿ ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಿಗಳ ವಲಯ ಗುರುತಿಸುವುದು ಹಾಗೂ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಲು ಬಿಬಿಎಂಪಿ ಮುಂದಾಗಿದೆ.
ಶೀಘ್ರದಲ್ಲಿಯೇ ಬೀದಿ ಬದಿ ವ್ಯಾಪಾರಿಗಳ ಪಟ್ಟಿಯನ್ನು ಸಿದ್ಧಪಡಿಸಿ ಬಿಡುಗಡೆ ಮಾಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ವ್ಯಾಪಾರಿಗಳ ಸಮೀಕ್ಷೆ ಹಾಗೂ ಮಾರಾಟ ವಲಯಗಳನ್ನು ಗುರುತಿಸುವ ಸಂಬಂಧ ಬಿ.ಎಸ್.ಡಬ್ಲ್ಯೂ.ಎಂ.ಎಲ್ ನಲ್ಲಿ ಸಭೆ ನಡೆಸಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ವ್ಯಾಪಾರಿಗಳ ಸಮೀಕ್ಷೆಗಾಗಿ ಈಗಾಗಲೇ ಪ್ರಮಾಣಿತ ಕಾರ್ಯಾಚರಣೆಯ ವಿಧಾನ (ಎಸ್.ಒ.ಪಿ) ಬಿಡುಗಡೆಗೊಳಿಸಲಾಗಿದೆ. ಇದರ ಅನುಸಾರ ಆಯಾ ವಲಯಗಳಲ್ಲಿ ಬೀದಿ ವ್ಯಾಪಾರಿಗಳ ವ್ಯಾಪಾರ ವಲಯಗಳನ್ನು ಗುರುತಿಸಬೇಕು. ನಗರದಲ್ಲಿ ಎಷ್ಟು ಮಂದಿ ಬೀದಿ ವ್ಯಾಪಾರಿಗಳಿದ್ದಾರೆ ಎಂಬುದರ ನಿಖರವಾದ ಮಾಹಿತಿಯನ್ನು ಪಡೆಯುವ ನಿಟ್ಟಿನಲ್ಲಿ, ಬೀದಿ ವ್ಯಾಪಾರಿಗಳ ಸಮಿಕ್ಷೆ ಆಗಬೇಕಿದೆ. ಈ ಸಂಬಂಧ ಬೀದಿ ವ್ಯಾಪಾರಿಗಳ ಸಮೀಕ್ಷೆಗಾಗಿ ಕೂಡಲೆ ಅಗತ್ಯ ಸಿಬ್ಬಂದಿ ನಿಯೋಜಿಸಿ ನಿಗದಿತ ಸಮಯದಲ್ಲಿ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಕಲ್ಯಾಣ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ರವರು ಮಾತನಾಡಿ, ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಅಧಿನಿಯಮ, 2014 ಮತ್ತು ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ(ಜೀವನೋಪಾಯ ಸಂರಕ್ಷಣೆ, ಬೀದಿ ಬದಿ ವ್ಯಾಪಾರದ ನಿಯಂತ್ರಣ ಮತ್ತು ಪರವಾನಗಿ) ಯೋಜನೆ, 2020 ರಂತೆ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ಕೈಗೊಳ್ಳಬೇಕು. ಈ ಸಂಬಂಧ ಆಯಾ ವಲಯಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಗಾಗಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿಕೊಂಡು ಬೀದಿ ವ್ಯಾಪಾರಿಗಳನ್ನು ಗುರುತಿಸಬೇಕೆಂದು ಎಂದು ಹೇಳಿದರು.
ಆಯಾ ವಲಯದ ಜನಸಂಖ್ಯೆಗೆ ಅನುಗುಣವಾಗಿ ಶೇ. 2.5 ರಷ್ಟು ಮಾರಾಟ ವಲಯ ಗುರುತಿಸಬೇಕು. ಬೀದಿ ವ್ಯಾಪಾರಿಗಳ ಸಮೀಕ್ಷೆ ಮಾಡಲು ವೆಬ್ ಅಫ್ಲಿಕೇಷನ್ ಹಾಗೂ ಮೊಬೈಲ್ ಅಫ್ಲಿಕೇಷನ್ ಸಿದ್ದಪಡಿಸಲಾಗಿದೆ. ಅದರ ಮೂಲಕ ಬೀದಿ ವ್ಯಾಪಾರ ಮಾಡುತ್ತಿರುವ ಸ್ಥಳದಲ್ಲಿ ಜಿಯೋ ಟ್ಯಾಗಿಂಗ್ ಮೂಲಕ ಸಮೀಕ್ಷೆ ಮಾಡಲಾಗುತ್ತದೆ ಎಂದು ಹೇಳಿದರು.
ಆಯಾ ವಲಯಗಳಲ್ಲಿ ಸಮೀಕ್ಷೆ ನಡೆದ ನಂತರ ಪೂರ್ಣ ವಿವರಗಳುಳ್ಳ ಪಟ್ಟಿಯನ್ನು ಪಟ್ಟಣ ಮಾರಾಟ ಸಮಿತಿಯ ಮುಂದಿರಿಸಿ ಆಕ್ಷೇಪಣೆಗಳಿದ್ದಲ್ಲಿ ಸ್ವೀಕರಿಸಲು ಕಾಲಾವಕಾಶ ನೀಡಿ ಪಾಲಿಕೆಯ ಅಧಿಕೃತ ವೆಬ್‌ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ ಎಂದು ವಿವರಿಸಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



