ರಾಜ್ಯ

ಬೀದಿ ದೀಪಗಳ ನಿರ್ವಹಣೆಯಲ್ಲಿ ಲೋಪ: ಕಾರ್ಯಪಾಲಕ ಎಂಜಿನಿಯರ್‌ ಅಮಾನತುಗೊಳಿಸಿದ ಸಚಿವ ಕೃಷ್ಣ ಬೈರೇಗೌಡ

ಆಗಸ್ಟ್ 28ರಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ನಡೆಸಿದ ಪರಿಶೀಲನೆಯ ವೇಳೆ, ಹಡ್ಸನ್ ಸರ್ಕಲ್‌ನಿಂದ ಚಾಲುಕ್ಯ ಸರ್ಕಲ್‌ವರೆಗೆ ಇರುವ 222 ಬೀದಿ ದೀಪಗಳ ಪೈಕಿ 140 ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಪತ್ತೆಯಾಗಿತ್ತು

ಬೀದಿ ದೀಪಗಳ ನಿರ್ವಹಣೆಯಲ್ಲಿ ಲೋಪ: ಕಾರ್ಯಪಾಲಕ ಎಂಜಿನಿಯರ್‌ ಅಮಾನತುಗೊಳಿಸಿದ ಸಚಿವ ಕೃಷ್ಣ ಬೈರೇಗೌಡ
ಸಚಿವ ಕೃಷ್ಣ ಭೈರೇಗೌಡ
Published On :

ಬೆಂಗಳೂರು: ನಗರದ ಪ್ರಮುಖ ರಸ್ತೆಯೊಂದರಲ್ಲಿ ಬೀದಿ ದೀಪಗಳ ನಿರ್ವಹಣೆಯಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್‌ನ ಕಾರ್ಯಪಾಲಕ ಎಂಜಿನಿಯರ್ (ಎಲೆಕ್ಟ್ರಿಕಲ್) ಎಚ್.ವಿ. ರಮೇಶ್ ಅವರನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಮಾನತುಗೊಳಿಸಿದೆ.

ಆಗಸ್ಟ್ 28ರಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ನಡೆಸಿದ ಪರಿಶೀಲನೆಯ ವೇಳೆ, ಹಡ್ಸನ್ ಸರ್ಕಲ್‌ನಿಂದ ಚಾಲುಕ್ಯ ಸರ್ಕಲ್‌ವರೆಗೆ ಇರುವ 222 ಬೀದಿ ದೀಪಗಳ ಪೈಕಿ 140 ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

ಜಿಬಿಎ ವ್ಯಾಪ್ತಿಯಲ್ಲಿ ಬೀದಿ ದೀಪಗಳ ನಿರ್ವಹಣೆ ಕುರಿತು ಸಚಿವರು ಈ ಹಿಂದೆ ಎರಡು ಸಭೆಗಳನ್ನು ನಡೆಸಿ, ದೋಷಗಳನ್ನು ತ್ವರಿತವಾಗಿ ಸರಿಪಡಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆಗಸ್ಟ್ 4ರಂದು ನಡೆದ ಸಭೆಯಲ್ಲೂ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಮತ್ತೊಮ್ಮೆ ಸೂಚಿಸಲಾಗಿತ್ತು.

ಆಗಸ್ಟ್ 31ರಂದು ರಮೇಶ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಅದೇ ದಿನ ಅವರು ತಮ್ಮ ವಿವರಣೆಯನ್ನು ಸಲ್ಲಿಸಿದ್ದರು. ಆದರೆ, ಅವರ ಉತ್ತರದಲ್ಲಿ ತಪ್ಪು ಮಾಹಿತಿ ನೀಡಲಾಗಿದೆ ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.

ಹಡ್ಸನ್ ಸರ್ಕಲ್–ಚಾಲುಕ್ಯ ಸರ್ಕಲ್ ಮಾರ್ಗದಲ್ಲಿನ ಬಹುತೇಕ ಬೀದಿ ದೀಪಗಳನ್ನು ದುರಸ್ತಿ ಮಾಡಲಾಗಿದ್ದು, ಹಾನಿ ಅಥವಾ ಮರಗಳ ಕಾರಣದಿಂದ ಕೇವಲ 10–15 ದೀಪಗಳು ಮಾತ್ರ ಇನ್ನೂ ಕಾರ್ಯನಿರ್ವಹಿಸುತ್ತಿಲ್ಲ ಎಂದು ರಮೇಶ್ ತಮ್ಮ ಉತ್ತರದಲ್ಲಿ ಹೇಳಿದ್ದರು. ಆದರೆ, ಆಗಸ್ಟ್ 28ರಂದು ನಡೆಸಿದ ಸಮೀಕ್ಷೆಯಲ್ಲಿ 222 ದೀಪಗಳ ಪೈಕಿ ಕೇವಲ 82 ಮಾತ್ರ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿತ್ತು.

ಎಲ್‌ಇಡಿ ಬೀದಿ ದೀಪಗಳ ನಿರ್ವಹಣೆಯ ಜವಾಬ್ದಾರಿ ಹೊಂದಿರುವ ಶ್ನೆಲ್ ಮತ್ತು ಸಾಲ್ಜರ್ ಪ್ರೈವೇಟ್ ಲಿಮಿಟೆಡ್‌ನ ಒಕ್ಕೂಟವಾದ ಎಫ್ಲಿಯಮ್ ಪ್ರೈವೇಟ್ ಲಿಮಿಟೆಡ್‌ಗೆ ಕಳಪೆ ಕಾರ್ಯನಿರ್ವಹಣೆಗಾಗಿ ಹಲವು ನೋಟಿಸ್‌ಗಳನ್ನು ನೀಡಲಾಗಿತ್ತು ಎಂದು ಜಿಬಿಎ ತಿಳಿಸಿದೆ. ಆಗಸ್ಟ್ 31ರಂದು ನೀಡಿದ ನೋಟಿಸ್‌ನಲ್ಲಿ ಗುತ್ತಿಗೆದಾರರಿಗೆ 1 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ.

ಬೀದಿ ದೀಪಗಳ ನಿರ್ವಹಣೆಯ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿದ್ದ ಅಧಿಕಾರಿಯಾಗಿ ರಮೇಶ್ ಅವರು ಗಂಭೀರ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಜಿಬಿಎ ಹೇಳಿದೆ.

ಸರ್ಕಾರದ ಅನುಮೋದನೆ ಹಾಗೂ ಇಲಾಖಾ ತನಿಖೆ ಬಾಕಿ ಇರುವ ಹಿನ್ನೆಲೆಯಲ್ಲಿ ರಮೇಶ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.