ರಾಜ್ಯ

ಲೋಕಾಯುಕ್ತ ದಾಳಿ: ಚನ್ನೇನಹಳ್ಳಿ ಗ್ರಾಪಂ ಸದಸ್ಯನ ಬಳಿ 16 ಮನೆ ಸೇರಿ 25 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ!

ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ರಾಜ್ಯ ಆರು ಅಧಿಕಾರಿಗಳಿಗೆ ಸೇರಿದ 35 ಸ್ಥಳಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ರೂ.51.13 ಕೋಟಿ ಗಿಂತಲೂ ಹೆಚ್ಚು ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ.

ಲೋಕಾಯುಕ್ತ ದಾಳಿ: ಚನ್ನೇನಹಳ್ಳಿ ಗ್ರಾಪಂ ಸದಸ್ಯನ ಬಳಿ 16 ಮನೆ ಸೇರಿ 25 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ!
ಸಂಗ್ರಹ ಚಿತ್ರ
Published On :

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ರಾಜ್ಯ ಆರು ಅಧಿಕಾರಿಗಳಿಗೆ ಸೇರಿದ 35 ಸ್ಥಳಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ರೂ.51.13 ಕೋಟಿ ಗಿಂತಲೂ ಹೆಚ್ಚು ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ.

ಮಂಗಳವಾರ ನಡೆದ ದಾಳಿಯಲ್ಲಿ ಪತ್ತೆಯಾದ ಅಧಿಕಾರಿಗಳೆಲ್ಲರೂ ಕೋಟ್ಯಾಧಿಪತಿಗಳೇ ಆಗಿದ್ದಾರೆ. ಅವರ ಬಳಿ ಹಲವು ನಿವೇಶನ, ನಗದು, ಚಿನ್ನಾಭರಣ ಪತ್ತೆಯಾಗಿದೆ. ಬಲ್ಲ ಮೂಲಗಳಿಂದ ಬಂದ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಮತ್ತು ರಾಮನಗರ ವಿಭಾಗದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ಆರು ಜನರ ಪೈಕಿ ಚನ್ನೇನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಎಚ್.ಎಸ್.ಸುರೇಶ್ ಅವರ ಬಳಿ ಅತ್ಯಧಿಕ ಸಂಪತ್ತು ಪತ್ತೆಯಾಗಿದೆ. ಈ ಪೈಕಿ 16 ನಿವೇಶನ, 1 ವಾಸದ ಮನೆ, 7.6 ಎಕರೆ ಕೃಷಿ ಜಮೀನು ಸೇರಿ ರೂ.21.27 ಕೋಟಿಯಷ್ಟು ಸ್ಥಿರಾಸ್ತಿ ಪತ್ತೆಯಾಗಿದೆ. ಅಲ್ಲದೆ, ರೂ.11.97 ಲಕ್ಷ ನಗದು, ರೂ. 2.11 ಕೋಟಿ ಮೌಲ್ಯದ ಚಿನ್ನಾಭರಣ, ರೂ.2.07 ಕೋಟಿ ಮೌಲ್ಯದ ಬೆಲೆಬಾಳುವ ವಾಹನಗಳು ಸೇರಿ ಒಟ್ಟು ರೂ.4.30 ಕೋಟಿ ಮೊತ್ತದ ಚರಾಸ್ತಿ ಪತ್ತೆಯಾಗಿದೆ.

ಬೆಸ್ಕಾಂನ ಮುಖ್ಯ ಕಚೇರಿಯಲ್ಲಿ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಂ.ಎಲ್.ನಾಗರಾಜ್ ಅವರ ಬಳಿ ರೂ.6.37 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಇವರಿಗೆ ಸೇರಿದ ಏಳು ಕಡೆಗಳಲ್ಲಿ ಅಧಿಕಾರಿಗಳು ಶೋಧ ಕಾರ್ಯ ಕೈಗೊಂಡಿದ್ದರು. 13 ನಿವೇಶನ, 2 ವಾಸದ ಮನೆಗಳು, ಕೃಷಿ ಜಮೀನು ಸೇರಿ ಒಟ್ಟು ರೂ.5.35 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ.

ಅಲ್ಲದೆ, ರೂ. 6.77 ಲಕ್ಷ ನಗದು, ರೂ.16.44 ಲಕ್ಷ ಮೌಲ್ಯದ ಆಭರಣ, ರೂ. 13.50 ಲಕ್ಷ ಬೆಲೆಯ ವಾಹನಗಳು, ರೂ.11.19 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳ ಸಹಿತ ಒಟ್ಟು ರೂ.63.66 ಲಕ್ಷ ಬೆಲೆಯ ಚರಾಸ್ತಿಗಳು ಪತ್ತೆಯಾಗಿವೆ.

ದೇವನಹಳ್ಳಿ ತಾಲ್ಲೂಕಿನ ಗ್ರಾಮ ಪಂಚಾಯ್ತಿ ಅಧಿಕಾರಿ ಡಿ.ಎಂ.ಪದ್ಮನಾಭ ಬಳಿ ರೂ.5.98 ಕೋಟಿ ಮೌಲ್ಯದ ಆಸ್ತಿಯನ್ನು ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿದ್ದಾರೆ.

ಇವರಿಗೆ ಸೇರಿದ ಒಟ್ಟು 6 ಕಡೆಗಳಲ್ಲಿ ಪೊಲೀಸರು ದಾಳಿ ನಡೆಸಿದರು. ಒಂದು ಕೈಗಾರಿಕಾ ನಿವೇಶನ, 2 ವಾಸದ ಮನೆಗಳು, 8.18 ಎಕರೆ ಕೃಷಿ ಜಮೀನು, ಒಂದು ಫಾರ್ಮ್‌ ಹೌಸ್ ಸೇರಿ ಒಟ್ಟು ರೂ.5.35 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ.

ರೂ.2.62 ಲಕ್ಷ ನಗದು, ರೂ.17.24 ಲಕ್ಷದ ಬೆಲೆಯ ಚಿನ್ನಾಭರಣ, ರೂ. 28.75 ಲಕ್ಷ ಬೆಲೆಯ ವಾಹನಗಳು ಮತ್ತು ರೂ.15 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿ ರೂ.63.66 ಲಕ್ಷ ಮೌಲ್ಯದ ಚರಾಸ್ತಿ ಪತ್ತೆಯಾಗಿದೆ.

ರಾಮನಗರ ಜಿಲ್ಲೆಯ ಕೆಆರ್‌ಯಡಿಎಲ್‌ ಕಚೇರಿಯ ಪ್ರಭಾರ ಕಾರ್ಯ ನಿರ್ವಾಹಕ ಎಂಜಿನಿಯರ್ ಸೈಯದ್ ಮುನೀರ್ ಅಹಮದ್ ಬಳಿ ರೂ.5.48 ಕೋಟಿ ಮೌಲ್ಯದ ಆಸ್ತಿಯನ್ನು ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿದ್ದಾರೆ.

ಸೈಯದ್ ಮುನೀರ್ (ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಕೆಆರ್ಐಡಿಎಲ್, ರಾಮನಗರ)  ಅವರಿಗೆ ಸೇರಿದ 6 ಸ್ಥಳಗಳಲ್ಲಿ ಮಂಗಳವಾರ ನಡೆದ ಶೋಧ ಕಾರ್ಯದಲ್ಲಿ, 2 ನಿವೇಶನ, ಒಟ್ಟು 7 ವಾಸದ ಮನೆಗಳು, ಕೃಷಿ ಜಮೀನು ಸೇರಿ ಒಟ್ಟು ರೂ.4.10 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ರೂ. 8.54 ಲಕ್ಷ ನಗದು, ರೂ.73.47 ಲಕ್ಷದ ಚಿನ್ನಾಭರಣ, ರೂ.21 ಲಕ್ಷ ಮೌಲ್ಯದ ವಾಹನಗಳು ಹಾಗೂ ರೂ.35 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿ ಒಟ್ಟು ರೂ. 1.38 ಕೋಟಿ ಮೌಲ್ಯದ ಚರಾಸ್ತಿ ಪತ್ತೆಯಾಗಿವೆ.

ಬೆಂಗಳೂರಿನ ಕೆ.ಆರ್.ವೃತ್ತದಲ್ಲಿರುವ ಲೋಕೋಪಯೋಗಿ ಇಲಾಖೆ ಕಚೇರಿಯ ಕಟ್ಟಡ ವೃತ್ತದ ಸೂಪರಿಂಟೆಂಡೆಂಟ್ ಎಂಜಿನಿಯರ್ ಎನ್.ಸತೀಶ್ ಬಾಬು ಅವರ ಬಳಿ ರೂ.4.52 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇವರಿಗೆ ಸೇರಿದ 5 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಮಂಗಳವಾರ ಶೋಧ ಕಾರ್ಯ ನಡೆಸಿದರು. ಇದರಲ್ಲಿ 1 ನಿವೇಶನ, 2 ವಾಸದ ಮನೆಗಳು, 15 ಎಕರೆ ಕೃಷಿ ಜಮೀನು ಸೇರಿ ಒಟ್ಟು ರೂ.3.70 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ರೂ.9 ಲಕ್ಷ ನಗದು, ರೂ.64.62 ಲಕ್ಷ ಮೌಲ್ಯದ ಚಿನ್ನಾಭರಣ, ರೂ.8.70 ಲಕ್ಷ ಬೆಲೆಯ ವಾಹನಗಳು ಸೇರಿ ಒಟ್ಟು ರೂ.82.32 ಲಕ್ಷ ಮೌಲ್ಯದ ಚರಾಸ್ತಿಗಳು ಪತ್ತೆಯಾಗಿವೆ.

ಆನೇಕಲ್ ತಾಲ್ಲೂಕಿನ ಯೋಜನಾ ಪ್ರಾಧಿಕಾರದ ನಗರ ಮತ್ತು ಯೋಜನೆ ವಿಭಾಗದ ಸದಸ್ಯ ಕಾರ್ಯದರ್ಶಿ ಮತ್ತು ಜಂಟಿ ನಿರ್ದೇಶಕ ಬಿ.ಮಂಜೇಶ್ ಬಳಿ ರೂ.3.18 ಕೋಟಿ ಮೌಲ್ಯದ ಆಸ್ತಿಯನ್ನು ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿದ್ದಾರೆ.

ಅವರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಮಂಗಳವಾರ ದಾಳಿ ನಡೆಸಿದ ಪೊಲೀಸರು, 11 ನಿವೇಶನಗಳು, 1 ವಾಸದ ಮನೆ ಸೇರಿ ಒಟ್ಟು ರೂ.1.20 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆ ಮಾಡಿದ್ದಾರೆ. ರೂ. 5.07 ಲಕ್ಷ ನಗದು, ರೂ.35.97 ಲಕ್ಷ ಮೌಲ್ಯದ ಚಿನ್ನಾಭರಣ, ರೂ. 7.71 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿ ರೂ. 1.98 ಕೋಟಿ ಮೌಲ್ಯದ ಚರಾಸ್ತಿ ಪತ್ತೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.