ರಾಜ್ಯ

ಅಂಜನಾದ್ರಿ ಬೆಟ್ಟದ ವಿವಾದ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶಾಕ್; ಮುಜರಾಯಿ ಇಲಾಖೆಯ ಆದೇಶ ಸಂಪೂರ್ಣ ರದ್ದು!

ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಮುಜರಾಯಿ ಇಲಾಖೆಗೆ ಭಾರಿ ಹಿನ್ನಡೆಯಾಗಿದೆ. ಆ ಕುರಿತ ವರದಿ ಇಲ್ಲಿದೆ:

ಅಂಜನಾದ್ರಿ ಬೆಟ್ಟದ ವಿವಾದ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶಾಕ್; ಮುಜರಾಯಿ ಇಲಾಖೆಯ ಆದೇಶ ಸಂಪೂರ್ಣ ರದ್ದು!
ಆಂಜನೇಯ ಸ್ವಾಮಿ ದೇವಸ್ಥಾನ, ಅಂಜನಾದ್ರಿ ಬೆಟ್ಟ, ಕೊಪ್ಪಳ — Online Desk
Published On :

ಧಾರವಾಡ: ಹನುಮಂತನ ಜನ್ಮಸ್ಥಳವಾಗಿರುವ, ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ರಾಜ್ಯ ಸರ್ಕಾರಕ್ಕೆ ಭಾರಿ ಹಿನ್ನಡೆ ನೀಡುವ ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಅದರಂತೆ, ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ಅಂಜನಾದ್ರಿ ದೇವಸ್ಥಾನವನ್ನು ಸರ್ಕಾರದ ಹಿಂದೂ ಧಾರ್ಮಿಕ ಮತ್ತು ಧಾರ್ಮಿಕ ದತ್ತಿ (ಮುಜರಾಯಿ) ಇಲಾಖೆಯ ವ್ಯಾಪ್ತಿಗೆ ಒಳಪಡಿಸಿ ಹೊರಡಿಸಲಾಗಿದ್ದ ಅಧಿಸೂಚನೆ ಹಾಗೂ ಆಡಳಿತಾಧಿಕಾರಿ ನೇಮಕದ ಆದೇಶ ಎರಡನ್ನೂ ಸಂಪೂರ್ಣವಾಗಿ ರದ್ದುಗೊಳಿಸಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ವಿವಾದ?

2018 ರಲ್ಲಿ ಅಂದಿನ ರಾಜ್ಯ ಸರ್ಕಾರವು ಅಂಜನಾದ್ರಿ ದೇವಸ್ಥಾನವನ್ನು ಹಿಂದೂ ಧಾರ್ಮಿಕ ಮತ್ತು ಧಾರ್ಮಿಕ ದತ್ತಿ (ಮುಜರಾಯಿ) ಇಲಾಖೆಯ ವ್ಯಾಪ್ತಿಗೆ ಒಳಪಡಿಸಿ ಅಧಿಕೃತ ಅಧಿಸೂಚನೆ ಹೊರಡಿಸಿತು. ಅದರಂತೆ, ದೇವಸ್ಥಾನದ ಆಡಳಿತದಲ್ಲಿ ಅಕ್ರಮಗಳು ನಡೆಯುತ್ತಿವೆ ಮತ್ತು ಸೂಕ್ತ ನಿರ್ವಹಣೆ ಇಲ್ಲ ಎಂಬ ಕಾರಣ ನೀಡಿ, ಕೊಪ್ಪಳ ಜಿಲ್ಲಾಡಳಿತವು ದೇವಸ್ಥಾನದ ಉಸ್ತುವಾರಿಗೆ ತಹಶೀಲ್ದಾರ್ ದರ್ಜೆಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿತು.

ಆದರೆ, ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ಯಾದಾಸ ಬಾಬಾ ಅವರು ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿದರು. ತಮ್ಮ ಪೂರ್ವಜರ ಕಾಲದಿಂದಲೂ ತಾವೇ ದೇವಸ್ಥಾನದ ಪೂಜೆ ಹಾಗೂ ನಿರ್ವಹಣೆಯನ್ನು ಮಾಡಿಕೊಂಡು ಬರುತ್ತಿದ್ದು, ಇದು ತಮಗೆ ಸೇರಿದ ಪಾರಂಪರಿಕ ಹಕ್ಕಾಗಿದೆ ಎಂದು ವಾದಿಸಿದರು. ಜೊತೆಗೆ, ಸರ್ಕಾರ ಮತ್ತು ಜಿಲ್ಲಾಡಳಿತವು ತಮಗೆ ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ನೀಡದೆ, ಏಕಪಕ್ಷೀಯವಾಗಿ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಿದೆ ಹಾಗೂ ತಮಗೆ ಪೂಜೆ ಸಲ್ಲಿಸಲು ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದರು.

ಮುಂದುವರೆದು, ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ಧಾರವಾಡ ವಿಭಾಗೀಯ ಪೀಠದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, 1997ರ ಕರ್ನಾಟಕ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆಯಡಿ, ದೇವಸ್ಥಾನವನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತಂದಿದ್ದ 2018ರ ಸೆಪ್ಟೆಂಬರ್ 24ರ ಅಧಿಸೂಚನೆ ಮತ್ತು ಆಡಳಿತ ನಿರ್ವಹಣೆಗಾಗಿ ಕೊಪ್ಪಳ ಜಿಲ್ಲಾಧಿಕಾರಿಗಳು ಹೊರಡಿಸಿದ್ದ 2018ರ ಡಿಸೆಂಬರ್ 15ರ ಆಡಳಿತಾಧಿಕಾರಿ/ಕಾರ್ಯನಿರ್ವಾಹಕ ಅಧಿಕಾರಿ ನೇಮಕದ ಆದೇಶ ಎರಡನ್ನೂ ರದ್ದುಪಡಿಸಿದೆ.

ನೈಸರ್ಗಿಕ ನ್ಯಾಯದ ತತ್ವಗಳ ಉಲ್ಲಂಘನೆ

1997ರ ಧಾರ್ಮಿಕ ದತ್ತಿ ಕಾಯ್ದೆಯಡಿ ದೇವಸ್ಥಾನವನ್ನು ವಶಕ್ಕೆ ಪಡೆಯುವ ಮುನ್ನ ಸಂಬಂಧಪಟ್ಟ ಅರ್ಚಕರಿಗೆ ಅಥವಾ ಆಡಳಿತ ಮಂಡಳಿಗೆ ಯಾವುದೇ ಪೂರ್ವಭಾವಿ ಸೂಕ್ತ ನೋಟಿಸ್ ನೀಡಿಲ್ಲ ಮತ್ತು ಅವರ ವಾದ ಆಲಿಸಿಲ್ಲ. ಈ ಪ್ರಕ್ರಿಯೆಯಲ್ಲಿ ಜಿಲ್ಲಾಡಳಿತ ನಿಯಮ ಪಾಲಿಸದ ಕಾರಣ ಸರ್ಕಾರದ ಕ್ರಮ ದೋಷಪೂರಿತವಾಗಿದೆ ಎಂದ ಕೋರ್ಟ್, ಈ ಹಿಂದೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶಗಳ ಅನ್ವಯ, ಪ್ರಧಾನ ಅರ್ಚಕರಾದ ವಿದ್ಯಾದಾಸ ಬಾಬಾ ಅವರೇ ದೇವಸ್ಥಾನದಲ್ಲಿ ಪೂಜೆ ಮತ್ತು ಅರ್ಚಕ ಕರ್ತವ್ಯಗಳನ್ನು ಮುಂದುವರಿಸಲು ಪೂರ್ಣ ಪ್ರಮಾಣದ ಅನುಮತಿ ನೀಡಿದೆ.

ಹಾಗಾದ್ರೆ, ಸರ್ಕಾರಕ್ಕೆ ಇರುವ ಮುಂದಿನ ಅವಕಾಶಗಳೇನು?

ಏತನ್ಮಧ್ಯೆ, ಈ ತೀರ್ಪಿನಿಂದ ದೇವಸ್ಥಾನದ ಮೇಲೆ ಸರ್ಕಾರಕ್ಕೆ ಯಾವುದೇ ಶಾಶ್ವತ ಹಕ್ಕಿಲ್ಲ ಎಂದು ಅರ್ಥವಲ್ಲ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್, ಒಂದೊಮ್ಮೆ ರಾಜ್ಯ ಸರ್ಕಾರವು ಅಂಜನಾದ್ರಿ ದೇವಸ್ಥಾನವನ್ನು ತನ್ನ ವ್ಯಾಪ್ತಿಗೆ ತರಲು ಬಯಸಿದರೆ, ಕಾನೂನುಬದ್ಧ ಪ್ರಕ್ರಿಯೆಯನ್ನು ಅನುಸರಿಸಿ, ಸಂಬಂಧಪಟ್ಟವರಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸಿದ ಬಳಿಕ ಹೊಸದಾಗಿ ಅಧಿಸೂಚನೆ ಹೊರಡಿಸಬಹುದು ಎಂದು ಸರ್ಕಾರಕ್ಕೆ ಅವಕಾಶ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.