ಮಾರ್ಗಮಧ್ಯೆ ಕೆಟ್ಟು ನಿಂತ ಬಸ್, ತಲೆಕೆಡಿಸಿಕೊಳ್ಳದ KKRTC: ಸಾರಿಗೆ ಇಲಾಖೆಯ ಬೆವರಿಳಿಸಿದ ವಿದ್ಯಾರ್ಥಿನಿ; ₹33,700 ಪರಿಹಾರಕ್ಕೆ ಕೋರ್ಟ್ ಆದೇಶ
ಮಾರ್ಗಮಧ್ಯೆ ಸ್ಲೀಪರ್ ಬಸ್ ಕೆಟ್ಟುನಿಂತು ಪ್ರಯಾಣಿಕರಿಗೆ ತೊಂದರೆಯಾದರೂ ಪರ್ಯಾಯ ವ್ಯವಸ್ಥೆ ಮಾಡದ ಕೆಕೆಆರ್‌ಟಿಸಿ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗವು ಮಹತ್ವದ ಆದೇಶ ಹೊರಡಿಸಿದ್ದು, ಸಂಕಷ್ಟಕ್ಕೀಡಾಗಿದ್ದ ವಿದ್ಯಾರ್ಥಿನಿಗೆ ಒಟ್ಟು 33,700 ಪರಿಹಾರ ನೀಡುವಂತೆ ಆಯೋಗವು ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:

ಕಲಬುರಗಿ: ನೀವು 400 ಕಿಲೋಮೀಟರ್ ದೂರದ ಸ್ಥಳಕ್ಕೆ ಪರೀಕ್ಷೆಗೆಂದು ಹೊರಟಿದ್ದೀರಿ ಎಂದುಕೊಳ್ಳಿ. ಕೈಯಲ್ಲಿ ಸ್ಲೀಪರ್ ಬಸ್ ಟಿಕೆಟ್ ಇದೆ, ಮನಸ್ಸಿನಲ್ಲಿ ಪರೀಕ್ಷೆಯ ಟೆನ್ಷನ್ ಇದೆ. ಆದರೆ ಮಧ್ಯರಾತ್ರಿ ನಡು ದಾರಿಯಲ್ಲಿ ಬಸ್ ಇದ್ದಕ್ಕಿದ್ದಂತೆ ಕೆಟ್ಟು ನಿಲ್ಲುತ್ತದೆ, ಡಿಪೋಗೆ ಎಳೆದೊಯ್ದರೂ ಸ್ಟಾರ್ಟ್ ಆಗುವುದಿಲ್ಲ, ಅಧಿಕಾರಿಗಳು ಪರ್ಯಾಯ ವ್ಯವಸ್ಥೆಯನ್ನೂ ಮಾಡುವುದಿಲ್ಲ. ಆಗ ನೀವು ಏನು ಮಾಡುತ್ತೀರಿ? ಅಯ್ಯೋ ದುರ್ವಿಧಿ ಎಂದುಕೊಂಡು, ನೀವೇ ಬೇರೆ ವ್ಯವಸ್ಥೆ ಮಾಡಿಕೊಂಡು ಹೋಗುತ್ತೀರಿ; ಹೋಗುವಾಗ ಸಾರಿಗೆ ಇಲಾಖೆಗೆ ಬಾಯಿಗೆ ಬಂದಂತೆ ಬೈಯುತ್ತೀರಿ.! ಆದರೆ ಇಲ್ಲೊಬ್ಬ ಹೆಣ್ಣುಮಗಳು ಹಾಗೆ ಸುಮ್ಮನಾಗಲಿಲ್ಲ, ಬೈದು ಸುಮ್ಮನಾಗುವ ಬದಲು ನೇರವಾಗಿ ಕಾನೂನು ಹೋರಾಟಕ್ಕೆ ಇಳಿದು ಸಾರಿಗೆ ಇಲಾಖೆಯ ಬೆವರಿಳಿಸಿದ್ದಾಳೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಬೀದರ್ ಮೂಲದ ತೇಜಸ್ವಿನಿ ಬಸವರಾಜ ಎಂಬ ವಿದ್ಯಾರ್ಥಿನಿ, 2025ರ ನವೆಂಬರ್ 16 ರಂದು ಬೀದರ್‌ನಿಂದ ದಾವಣಗೆರೆಗೆ ಪ್ರಯಾಣಿಸಲು ಕೆಕೆಆರ್‌ಟಿಸಿ ಸ್ಲೀಪರ್ ಕೋಚ್ ಬಸ್‌ನಲ್ಲಿ ಸೀಟ್ ಬುಕ್ ಮಾಡಿದ್ದರು. ಮರುದಿನ ಬೆಳಗ್ಗೆ 6 ಗಂಟೆಗೆ ಅವರಿಗೆ ದಾವಣಗೆರೆಯಲ್ಲಿ ಅತಿ ಮುಖ್ಯವಾದ ಪರೀಕ್ಷೆ ಇತ್ತು. ಆದರೆ, ನಿಗದಿತ ಸಮಯಕ್ಕೆ ಹೊರಟ ಬಸ್ ಹುಮ್ನಾಬಾದ್ ಬಳಿ ಕೆಟ್ಟುನಿಂತಿತ್ತು. ನಂತರ ಅದನ್ನು ಕಲಬುರಗಿ ಡಿಪೋಗೆ ತರಲಾಯಿತಾದರೂ, ಅಲ್ಲಿಯೂ ಬಸ್ ದುರಸ್ತಿ ಮಾಡಲು ಸಾಧ್ಯವಾಗಲಿಲ್ಲ. ಅದರಲ್ಲೂ, ತನಗೆ ಮರುದಿನ ಬೆಳಗ್ಗೆ ಪರೀಕ್ಷೆ ಇರುವುದರಿಂದ ಪರ್ಯಾಯ ಪ್ರಯಾಣದ ವ್ಯವಸ್ಥೆ ಮಾಡಿಕೊಡುವಂತೆ ವಿದ್ಯಾರ್ಥಿನಿ ಡಿಪೋ ಅಧಿಕಾರಿಗಳನ್ನು ಗೋಗರೆದರೂ ಸಾರಿಗೆ ಅಧಿಕಾರಿಗಳು ಯಾವುದೇ ಸೂಕ್ತ ವ್ಯವಸ್ಥೆ ಮಾಡಲಿಲ್ಲ.
ಬಾಡಿಗೆ ಕಾರಿನಲ್ಲಿ ಪ್ರಯಾಣ
ಪರೀಕ್ಷೆ ತಪ್ಪಿಹೋಗಬಾರದು ಎಂಬ ಅನಿವಾರ್ಯತೆಯಿಂದಾಗಿ ತೇಜಸ್ವಿನಿ ಅವರು ಕಲಬುರಗಿಯಿಂದ ದಾವಣಗೆರೆಗೆ ₹18,700 ಭರಿಸಿ ಖಾಸಗಿ ಬಾಡಿಗೆ ಕಾರನ್ನು ಮಾಡಿಕೊಂಡು ಪ್ರಯಾಣ ಬೆಳೆಸಬೇಕಾಯಿತು. ಆದರೆ, ಇದರಿಂದ ಧೃತಿಗೆಡದ ತೇಜಸ್ವಿನಿ ಬಸವರಾಜ, ಈ ಸೇವೆಯ ನ್ಯೂನತೆಯ ವಿರುದ್ಧ ವಿದ್ಯಾರ್ಥಿನಿ ಜಿಲ್ಲಾ ಗ್ರಾಹಕ ಫೋರಂ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಮಾಲತಿ ಗುರುಣ್ಣ ಮತ್ತು ಸದಸ್ಯ ಎಂ. ಲೋಕೇಶ್ ಅವರ ಪೀಠವು ಕೆಕೆಆರ್‌ಟಿಸಿಗೆ ದಂಡ ವಿಧಿಸಿದೆ. ಅದರಂತೆ, ವಿದ್ಯಾರ್ಥಿನಿ ಕಾರಿಗೆ ಖರ್ಚು ಮಾಡಿದ ₹18,700 ಅನ್ನು ಜನವರಿ 3, 2026 ರಿಂದ ಪಾವತಿಯಾಗುವ ದಿನಾಂಕದವರೆಗೆ ಶೇ. 6ರಷ್ಟು ಬಡ್ಡಿಯೊಂದಿಗೆ ಮರುಪಾವತಿಸಬೇಕು. ಜೊತೆಗೆ, ಮಾನಸಿಕ ಕಿರಿಕಿರಿ ಮತ್ತು ಸೇವಾ ನ್ಯೂನತೆಗಾಗಿ ₹10,000 ಪರಿಹಾರ ನೀಡಬೇಕು ಹಾಗೂ ಕಾನೂನು ಹೋರಾಟದ ವೆಚ್ಚವಾಗಿ ₹5,000 ನೀಡಬೇಕು. ಅರ್ಥಾತ್, ಒಟ್ಟಾರೆಯಾಗಿ, ಇವೆಲ್ಲವೂ ಸೇರಿ ಒಟ್ಟು ₹33,700 ಆಗುತ್ತದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



