ರಾಜ್ಯ

ವಿಧಾನಸಭಾ ಚುನಾವಣೆಗೆ ಬಿಬಿಎಂಪಿ ಸಿದ್ಧತೆ: ಇವಿಎಂ, ವಿವಿಪ್ಯಾಟ್ ಉಗ್ರಾಣ ಉದ್ಘಾಟನೆ ಮಾಡಿದ ಆಯುಕ್ತರು

ವಿಧಾನಸಭಾ ಚುನಾವಣೆಗೆ ಸಿದ್ಧತೆಗಳನ್ನು ಆರಂಭಿಸಿರುವ ಬಿಬಿಎಂಪಿ, ನಗರದಲ್ಲಿ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್ ಗಳ ಉಗ್ರಾಣವನ್ನು ನಗರದಲ್ಲಿ ಉದ್ಘಾಟನೆ ಮಾಡಿದೆ.

ವಿಧಾನಸಭಾ ಚುನಾವಣೆಗೆ ಬಿಬಿಎಂಪಿ ಸಿದ್ಧತೆ: ಇವಿಎಂ, ವಿವಿಪ್ಯಾಟ್ ಉಗ್ರಾಣ ಉದ್ಘಾಟನೆ ಮಾಡಿದ ಆಯುಕ್ತರು
ತುಷಾರ್ ಗಿರಿನಾಥ್
Published On :

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಸಿದ್ಧತೆಗಳನ್ನು ಆರಂಭಿಸಿರುವ ಬಿಬಿಎಂಪಿ, ನಗರದಲ್ಲಿ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್ ಗಳ ಉಗ್ರಾಣವನ್ನು ನಗರದಲ್ಲಿ ಉದ್ಘಾಟನೆ ಮಾಡಿದೆ.

2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಗೆ ಬರುವ 7 ವಿಧಾನಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್ ಗಳ ಉಗ್ರಾಣಕ್ಕಾಗಿ ಸರ್ವೇ ನಂಬರ್ 77ಪಿಲ್ಲಹಳ್ಳಿ ಗ್ರಾಮ, ದಾಸನಪುರ ಹೋಬಳಿ, ಬೆಂಗಳೂರು ಉತ್ತರ ತಾ. ವ್ಯಾಪ್ತಿಯಲ್ಲಿ 2 ಎಕರೆ ಪ್ರದೇಶದಲ್ಲಿ ಸ್ಥಾಪಿಸಿರುವ ಕಟ್ಟಡದ ಉದ್ಘಾಟನೆಯನ್ನು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ನೆರವೇರಿಸಿದರು.

ಉದ್ಘಾಟನೆಯ ನಂತರ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಬರುವ 7 ವಿಧಾನಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್ ಗಳ ಉಗ್ರಾಣಕ್ಕಾಗಿ ಸುಸಜ್ಜಿತ ಕಟ್ಟಡವನ್ನು ಪಿಲ್ಲಹಳ್ಳಿ ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

ಜಿಲ್ಲಾ ಚುನಾವಣಾ ಅಧಿಕಾರಿ-ಬೆಂಗಳೂರು ಅವರ ವ್ಯಾಪ್ತಿಯಲ್ಲಿ 4 ಅಪರ ಜಿಲ್ಲಾ ಚುನಾವಣಾ ಅಧಿಕಾರಿಗಳು(ಬೆಂಗಳೂರು ನಗರ, ಕೇಂದ್ರ, ಉತ್ತರ ಹಾಗೂ ದಕ್ಷಿಣ) ಬರಲಿದ್ದು, 4 ಉಗ್ರಾಣಗಳ ಪೈಕಿ ಪಿಲ್ಲಹಳ್ಳಿ ಗ್ರಾಮದಲ್ಲಿ ಹೊಸದಾಗಿ ಬೆಂಗಳೂರು ನಗರ ಜಿಲ್ಲೆಯ ಉಗ್ರಾಣವನ್ನು ಸ್ಥಾಪಿಸಲಾಗಿದೆ.

ಈ ಹಿಂದೆ ನಗರದಲ್ಲೇ ಉಗ್ರಾಣಗಳ ವ್ಯವಸ್ಥೆಯಿತ್ತು. ಭಾರತ ಚುನಾವಣಾ ಆಯೋಗದ ಮಾರ್ಗಸೂಚಿ ಹಾಗೂ ನಿರ್ದೇಶನದಂತೆ ಇವಿಎಂ ಹಾಗೂ ವಿವಿಪ್ಯಾಟ್‌ಗಳ ಉಗ್ರಾಣಗಳನ್ನು ಪ್ರತ್ಯೇಕವಾಗಿ ಸ್ಥಾಪಿಸಲಾಗುತ್ತಿದೆ. ಅದರ ಸಲುವಾಗಿ ಮೊದಲ ಹಂತದಲ್ಲಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಉಗ್ರಾಣವನ್ನು ಸ್ಥಾಪಿಸಲಾಗಿದೆ. ಇದಲ್ಲದೆ ಇದೇ ಸ್ಥಳದಲ್ಲಿ ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣದ ಉಗ್ರಾಣಗಳ ಕಟ್ಟಡ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದ್ದು, ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ಉಗ್ರಾಣಗಳ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಿ ಸೇವೆಗೆ ಬಳಸಿಕೊಳ್ಳಲಾಗುವುದೆಂದು ತಿಳಿಸಿದರು.

ಮುಂಬರುವ ಸಾರ್ವತ್ರಿಕ ಚುನಾವಣೆಯ ಸಂಬಂಧ ಈಗಾಗಲೇ ಇವಿಎಂಗಳು ಬಂದಿದ್ದು, ಉಗ್ರಾಣದಲ್ಲಿ ಶೇಖರಿಸಿ ಇಡಲಾಗಿದೆ. ವಿವಿಪ್ಯಾಟ್ ಗಳು ಬರಬೇಕಿದ್ದು, ಅವು ಬಂದ ನಂತರ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಫೆ. 10 ರಿಂದ 19 ರೊಳಗಾಗಿ ದಿನಾಂಕವನ್ನು ನಿಗದಿಪಡಿಸಿಕೊಂಡು ಫಸ್ಟ್ ಲೆವೆಲ್ ಚೆಕ್ಕಿಂಗ್ ಮಾಡಲಾಗುವುದು ಎಂದರು.

ಬೆಂಗಳೂರು ನಗರ ಅಪರ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಮಾತನಾಡಿ, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಗೆ 7 ವಿಧಾನಸಭಾ ಕ್ಷೇತ್ರಗಳಿದ್ದು, ಒಟ್ಟು 3083 ಮತಗಟ್ಟೆಗಳಿವೆ. ಈ ಪೈಕಿ ಶೇ. 125 ಇವಿಎಂ ಈಗಾಗಲೇ ಸ್ವೀಕೃತವಾಗಿದ್ದು, ಉಗ್ರಾಣದಲ್ಲಿ ಶೇಖರಿಸಿ ಇಡಲಾಗಿದೆ. ಶೇ. 135 ವಿವಿಪ್ಯಾಟ್ ಸ್ವೀಕೃತವಾಗಬೇಕಿದ್ದು, ಇದೇ ಫೆ.6ರಂದು ಬರಲಿವೆ. ಈ ವೇಳೆಗೆ ಉಗ್ರಾಣದ ಸುತ್ತಲೂ ಕಾಂಪೌಂಡ್ ಗೋಡೆ ನಿರ್ಮಿಸಲಾಗಿದೆ. ಇದೇ ಸ್ಥಳದಲ್ಲಿ ಫಸ್ಟ್ ಲೆವೆಲ್ ಚೆಕ್ಕಿಂಗ್ ಮಾಡಲಾಗುವುದು ಎಂದು ತಿಳಿಸಿದರು.

ಬೆಂಗಳೂರು ನಗರ ವ್ಯಾಪ್ತಿಗೆ ಯಲಹಂಕ, ಯಶವಂತಪುರ, ಬ್ಯಾಟರಾಯನಪುರ, ಮಹದೇವಪುರ, ದಾಸರಹಳ್ಳಿ, ಆನೇಕಲ್ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳು ಬರಲಿವೆ. ಉಗ್ರಾಣದ ಸ್ಥಳದಲ್ಲಿ ಅಗತ್ಯ ಸಿಸಿ ಟಿವಿ, ಪೊಲೀಸ್ ಭದ್ರತಾ ಸಿಬ್ಬಂದಿಯ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈಗಾಗಲೇ ಬಂದಿರುವ ಇವಿಎಂಗಳನ್ನು ಹಳೆಯ ಉಗ್ರಾಣದಲ್ಲಿ ಶೇಖರಿಸಿಟ್ಟಿದ್ದು, ಅದನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.