ಕೊರೋನಾ 3ನೇ ಅಲೆ ವೇಳೆ ಮಕ್ಕಳ ಪ್ರಕರಣಗಳ ಮೇಲೆ ಹೆಚ್ಚಿನ ಗಮನಹರಿಸಬೇಕಿದೆ: ವೈದ್ಯರು
ಕೊರೋನಾ 3ನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಎದುರಿಸಲು ಆಸ್ಪತ್ರೆಗಳು ಸಜ್ಜಾಗುತ್ತಿದ್ದು, ಈ ನಡುವಲ್ಲೇ ಈ ಬಾರಿ ಮೂಲಭೂತ ಸೌಕರ್ಯಗಳಿಗಿಂತಲೂ ಮಾನವ ಸಂಪನ್ಮೂಲದ ಅಗತ್ಯ ಹೆಚ್ಚಾಗಿ ಬೀಳಲಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು: ಕೊರೋನಾ 3ನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಎದುರಿಸಲು ಆಸ್ಪತ್ರೆಗಳು ಸಜ್ಜಾಗುತ್ತಿದ್ದು, ಈ ನಡುವಲ್ಲೇ ಈ ಬಾರಿ ಮೂಲಭೂತ ಸೌಕರ್ಯಗಳಿಗಿಂತಲೂ ಮಾನವ ಸಂಪನ್ಮೂಲದ ಅಗತ್ಯ ಹೆಚ್ಚಾಗಿ ಬೀಳಲಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಸೋಂಕಿಗೊಳಗಾದ ಮಕ್ಕಳನ್ನು ಒಬ್ಬಂಟಿಯಾಗಿ ಬಿಡಲು ಸಾಧ್ಯವಿಲ್ಲ. ಮಕ್ಕಳ ಜೊತೆಗೆ ಪೋಷಕರು ಅಥವಾ ಸಂಬಂಧಿಕರು ಪಿಪಿಇ ಕಿಟ್ ಹಾಕಿಕೊಂಡು ಇರಬೇಕು. ಆ ಪಿಪಿಇ ಕಿಟ್ ಗಳನ್ನು ಪ್ರತೀನಿತ್ಯ ಬದಲಿಸುತ್ತಿರಬೇಕು. ಪಿಪಿಇ ಕಿಟ್ ಹಾಕಿಕೊಂಡು ಮಕ್ಕಳ ಹಾರೈಕೆ ಹೇಗೆ ಮಾಡಬೇಕು, ಪಿಪಿಇ ಕಿಟ್ ಗಳನ್ನು ಯಾವ ರೀತಿ ಬಳಕೆ ಮಾಡಬೇಕೆಂಬ ತರಬೇತಿಯನ್ನೂ ಅವರಿಗೆ ನೀಡಬೇಕಾಗುತ್ತದೆ. ಮಕ್ಕಳನ್ನು ನೋಡಿಕೊಳ್ಳಲು ಬರುವ ಪೋಷಕರಿಗೆ ಊಟ ಹಾಗೂ ವಸತಿಗೆ ವ್ಯವಸ್ಥೆಗಳನ್ನು ಕಲ್ಪಿಸಬೇಕಾಗುತ್ತದೆ ಎಂದು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಸಾಮಾನ್ಯವಾಗಿ ಚಿಕ್ಕ ಮಕ್ಕಳು ಇಂಟ್ರಾವೆನಸ್ (ಐವಿ)ಲೈನ್ ಇಂಜೆಕ್ಷನ್ ಕಿತ್ತು ಹಾಕಿ ಬಿಡುತ್ತಾರೆ. ಈ ವೇಳೆ ಮರಳಿ ಹಾಕಲು ನರ್ಸ್ ಗಳಿಗೆ ಸಮಯ ಬೇಕಾಗುತ್ತದೆ. ಮಕ್ಕಳು ಒಂದು ಜಾಗದಲ್ಲಿ ಕುಳಿತುಕೊಳ್ಳುವುದಿಲ್ಲ. ಅವರನ್ನು ಸಮಾಧಾನ ಪಡಿಸಲು ಜನರು ಬೇಕು. ಗಲೀಜು ಮಾಡಿಕೊಂಡಾಗ ಸ್ವಚ್ಛಗೊಳಿಸಲು ಸಿಬ್ಬಂದಿಗಳು ಬೇಕು. ಕೋವಿಡ್ ಕೇರ್ ಕೇಂದ್ರಗಳಲ್ಲಿ ಮಕ್ಕಳು ಬಿಝಿಯಾಗಿರುವಂತೆ ಮಾಡಲು ಟಿವಿ, ಗೇಮ್, ಆಟಿಕೆ ವಸ್ತುಗಳು ಹಾಗೂ ಮಕ್ಕಳ ಸ್ನೇಹಿ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಇದೆಲ್ಲಕ್ಕೂ ಮಾನವಶಕ್ತಿ ಹೆಚ್ಚಾಗಿ ಬೇಕಾಗುತ್ತದೆ. ಪ್ರಮುಖವಾಗಿ ನರ್ಸ್ ಗಳ ಸಂಖ್ಯೆ ಹೆಚ್ಚಾಗಿ ಬೇಕಾಗಬಹುದು ಎಂದು ತಿಳಿಸಿದ್ದಾರೆ.
ಅಪೌಷ್ಟಿಕ ಕೋವಿಡ್ -19 ಸೋಂಕಿತ ಮಕ್ಕಳಿಗೆ ಹೆಚ್ಚಿನ ಪೋಷಕಾಂಶವುಳ್ಳ ಆಹಾರ ನೀಡುವ ಅಗತ್ಯವಿರುತ್ತದೆ. ದಡಾರ, ಇನ್ಫ್ಲುಯೆನ್ಸ, ಹೆಪಟೈಟಿಸ್-ಎ, ಚಿಕನ್ಪಾಕ್ಸ್ ಇತ್ಯಾದಿಗಳಿ ಎಂದಿನ ಲಸಿಕೆಗಳು ತಪ್ಪಿಸಿಕೊಳ್ಳಂತೆ ನೋಡಿಕೊಳ್ಳಬೇಕು. ನವಜಾತ ಶಿಶುಗಳ ತೀವ್ರ ನಿಗಾ ಘಟಕಗಳಿಗೆ ಪ್ರತಿ ಮಗುವಿಗೆ ಒಬ್ಬ ನರ್ಸ್ ಗಳ ಅಗತ್ಯವಿರುತ್ತದೆ, ಇನ್ನು ಮಕ್ಕಳ ವಾರ್ಡ್‌ಗಳಿಗೆ ಪ್ರತಿ ಮೂರು ಮಕ್ಕಳಿಗೆ ಒಬ್ಬ ನರ್ಸ್ ಅಗತ್ಯವಿರುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘದ ಮಕ್ಕಳ ಸಮಿತಿಯ ಸ್ಥಾಯಿ ಸಮಿತಿಯ ಅಧ್ಯಕ್ಷ ಡಾ. ಶ್ರೀನಿವಾಸ ಎಸ್ ಅವರು ಹೇಳಿದ್ದಾರೆ.
ಪರಿಸ್ಥಿತಿ ಎದುರಿಸಲು ಇದೀಗ ಆಸ್ಪತ್ರೆಗಳೇ ಸ್ವಯಂ ಸಜ್ಜಾಗುತ್ತಿದ್ದು, ನಗರದ ಬೌರಿಂಗ್ ಆಸ್ಪತ್ರೆಯು 40 ವೈದ್ಯರು ಮತ್ತು 60 ನರ್ಸ್'ಗಳಿಗೆ ಮಕ್ಕಳ ಆರೈಕೆ ಕುರಿತು ತರಬೇತಿ ನೀಡುವ ಕಾರ್ಯ ಆರಂಭಿಸಿದ್ದು, ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಹಾಸಿಗೆಗಳ ಸಂಖ್ಯೆಯ್ನು 20 ರಿಂದ 30 ಕ್ಕೆ ಹೆಚ್ಚಿಸುತ್ತಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


