ರಾಜ್ಯ

ಕೊಪ್ಪಳ: ಟೈಮ್ ಪಾಸ್‌ಗೆಂದು ತಂದಿದ್ದ ಬೇರೆ ಮನೆಯ ಕೇರಂ ಬೋರ್ಡ್ ಲೈಫ್‌ನ್ನೇ ಚೇಂಜ್ ಮಾಡ್ತು!

ಕೊರೋನಾ ಮಹಾಮಾರಿಯಿಂದ ಇದ್ದ ಕೆಲಸವನ್ನು ಕಳೆದುಕೊಂಡವರ ಬಗ್ಗೆ, ಸರಕಾರ ಅವರಿಗೆ ಸಹಾಯಹಸ್ತ ಚಾಚಿರುವ ಬಗ್ಗೆ ಮಾಹಿತಿ ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ಕೊರೋನಾದಿಂದಾಗಿ ಸರಕಾರ ಜಾರಿ ಮಾಡಿದ ಲಾಕ್‌ಡೌನ್ ಹೊಸ ಬದುಕಿಗೆ ದಾರಿ ಮಾಡಿ ಕೊಟ್ಟ ಕಥೆ ಇಲ್ಲಿದೆ.

ಕೊಪ್ಪಳ: ಟೈಮ್ ಪಾಸ್‌ಗೆಂದು ತಂದಿದ್ದ ಬೇರೆ ಮನೆಯ ಕೇರಂ ಬೋರ್ಡ್ ಲೈಫ್‌ನ್ನೇ ಚೇಂಜ್ ಮಾಡ್ತು!
ಯಲ್ಲಪ್ಪ
Published On :

ಕೊಪ್ಪಳ: ಕೊರೋನಾ ಮಹಾಮಾರಿಯಿಂದ ಇದ್ದ ಕೆಲಸವನ್ನು ಕಳೆದುಕೊಂಡವರ ಬಗ್ಗೆ, ಸರಕಾರ ಅವರಿಗೆ ಸಹಾಯಹಸ್ತ ಚಾಚಿರುವ ಬಗ್ಗೆ ಮಾಹಿತಿ ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ಕೊರೋನಾದಿಂದಾಗಿ ಸರಕಾರ ಜಾರಿ ಮಾಡಿದ ಲಾಕ್‌ಡೌನ್ ಹೊಸ ಬದುಕಿಗೆ ದಾರಿ ಮಾಡಿ ಕೊಟ್ಟ ಕಥೆ ಇಲ್ಲಿದೆ.

ಕೊಪ್ಪಳ ಜಿಲ್ಲೆಯ ಭಾಗ್ಯನಗರದ ಯಲ್ಲಪ್ಪ‌ ಬಡಿಗೇರ, ಚಿಕ್ಕ ವಯಸ್ಸಿನಲ್ಲೇ ತಂದೆಯನ್ನ‌ ಕಳೆದುಕೊಂಡು, ತಾಯಿ ಆಶ್ರಯದಲ್ಲಿ ಬೆಳೆದಾತ. ಹಾಗೂ ಹೀಗೂ ಹತ್ತನೇ ತರಗತಿ ಓದಿದ. ಮುಂದೆ ವಿದ್ಯೆ ಕೈ ಹಿಡಿಯಲಿಲ್ಲ. ಕುಲ ಕಸಬು ಬಡಿಗ ವೃತ್ತಿಯನ್ನೇ ಈಗಷ್ಟೇ ಕಲಿತಿದ್ದ. ಅಂದಿನ ದುಡಿಮೆ, ಆ ದಿನದ ಬದುಕಿಗೆ ಸಾಕಾಗುತ್ತಿತ್ತಷ್ಟೇ. ಅಷ್ಟೊತ್ತಿಗೆ ಕೊರೋನಾ ಎಂಟ್ರಿಯಿಂದ ಒಪ್ಪತ್ತಿನ ಊಟಕ್ಕೂ ಕಲ್ಲೇಟು ಬಿದ್ದಂತಾಯಿತು.

ಕೊರೋನಾ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್‌ಡೌನ್ ಮಾಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಸಾರ್ವಜನಿಕರು ಯಾರೂ ಮನೆಯಿಂದ ಹೊರ ಬರುವಂತಿಲ್ಲ ಎಂದು ಫರ್ಮಾನು ಹೊರಡಿಸಿದ ಸರಕಾರ ಗರೀಬ್ ಕಲ್ಯಾಣ ಯೋಜನೆಯಡಿ ಅಕ್ಕಿ, ಬೇಳೆ ವಿತರಣೆ ಮಾಡುತ್ತಿದೆ. ಗರೀಬ್ ಕಲ್ಯಾಣ ಈ ಕುಟುಂಬಕ್ಕೆ ಕೊಂಚ ಆಸರೆಯಾಗಿದ್ದು ಸುಳ್ಳಲ್ಲ. ಆದರೆ ಕೆಲಸವಿಲ್ಲದೇ ಮಾಡುವುದೇನು? ಅದಕ್ಕೆ ಯಲ್ಲಪ್ಪನ ತಾಯಿ ಪಕ್ಕದ ಮನೆಯ ಕೇರಂ‌ ಬೋರ್ಡ್ ತಂದು ಒಂದೆರಡು ದಿನ ಆಟವಾಡುತ್ತಾರೆ. ಆನಂತರ ಆ ಮನೆಯವರು ತಮ್ಮ ಕೇರಂ ಬೋರ್ಡ್ ವಾಪಸ್ ಒಯ್ಯುತ್ತಾರೆ. ಇದರಿಂದ ಯಲ್ಲಪ್ಪನ ಅಮ್ಮ ತಾಯವ್ವಳ ಮುಖ ಸಪ್ಪಗಾಗುತ್ತದೆ. ತಾಯಿ ಸಪ್ಪಗಾಗಿರುವುದನ್ನ ಕಂಡ ಮಗ ಆ ಸಮಯದಲ್ಲಿ ಭಾಗ್ಯನಗರ, ಕೊಪ್ಪಳದ ತುಂಬೆಲ್ಲ ಕೇರಂ ಬೋರ್ಡ್ ಖರೀದಿಸಲು ಸಿಕ್ಕ ಸಿಕ್ಕವರನ್ನ ಕೇಳಿದರೂ ಕೇರಂ ಮಾತ್ರ ಸಿಗಲ್ಲ.

ಆಗ ತಾನೇ ಯಾಕೆ ಕಟ್ಟಿಗೆಯಿಂದ ಕೇರಂ ಬೋರ್ಡ್ ರೆಡಿ ಮಾಡಬಾರದು ಎಂದು ಯೋಚಿಸಿ ಡ್ರಾಯಿಂಗ್ ಶೀಟ್‌ನಲ್ಲಿ ಕೇರಂ ಚಿತ್ರ ಬಿಡಿಸಲು ಶುರು ಮಾಡುತ್ತಾನೆ. ಎರಡು ದಿನಗಳವರೆಗೆ ಕಷ್ಟ ಪಟ್ಟರೂ ಇಷ್ಟದ ಪ್ರಕಾರ ಕೇರಂ ಸ್ಕೆಚ್ ರೆಡಿಯಾಗಲ್ಲ. ಕೊನೆಗೆ ಯಲ್ಲಪ್ಪನ ಸ್ನೇಹಿತರು ಸಾಮಾಜಿಕ ಜಾಲತಾಣದ ಮೂಲಕ ಕೇರಂ ಬೋರ್ಡ್ ರೆಡಿ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತಾರೆ. 

ಆಗ ಸಂಜೆ 5 ಗಂಟೆಗೆ ಕಟ್ಟಿಗೆಯಿಂದ ಕೇರಂ‌ ಬೋರ್ಡ್ ರೆಡಿ ಮಾಡಲು ಅಣಿಯಾದ ಯಲ್ಲಪ್ಪ ರಾತ್ರಿ 12ರವರೆಗೆ ಛಲ ಬಿಡದೇ ಕೆಲಸ ಮಾಡುತ್ತಾನೆ. ಮಾರುಕಟ್ಟೆಯಲ್ಲಿ ಸಿಗುವ ಯಾವ ಕೇರಂ‌ ಬೋರ್ಡ್‌ಗೂ ಕಡಿಮೆ ಇಲ್ಲ ಎನ್ನುವಂಥ ಕೇರಂ‌ ಬೋರ್ಡ್ ಸಿದ್ದಪಡಿಸುತ್ತಾನೆ.‌ ಮರುದಿನ ತಾಯಿ-ಮಗ ಕೇರಂ ಆಡುತ್ತಾರೆ. ಈ ವಿಷಯ ಸ್ನೇಹಿತರ ಮೂಲಕ ಪರಿಚಿತರಿಗೆ ಗೊತ್ತಾಗಿ ಎಲ್ಲರೂ ತಮಗೊಂದು ಕೇರಂ‌ ಬೋರ್ಡ್ ಮಾಡಿಕೊಡುವಂತೆ ದುಂಬಾಲು ಬೀಳುತ್ತಾರೆ. 
ಮಾತ್ರವಲ್ಲ ಕಾರಟಗಿ, ಕನಕಗಿರಿ ಭಾಗದಿಂದಲೂ ಬೇಡಿಕೆ ಬಂದು ಕೇರಂ‌ ಬೋರ್ಡ್ ತಯಾರಿಸುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾನೆ ಯಲ್ಲಪ್ಪ. 

ಬೇರೆ ಕಡೆ ಸಿಗುವ ಕೇರಂ‌ ಬೋರ್ಡ್‌ಗಳಿಗೂ, ಯಲ್ಲಪ್ಪ ತಯಾರಿಸುವ ಕೇರಂ‌ ಬೋರ್ಡ್‌ಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ. ರೆಡಿಮೇಡ್ ಕೇರಂ‌ ಬೋರ್ಡ್‌ಗೆ ಬಳಸುವ ಕಟ್ಟಿಗೆ ಗುಣಮಟ್ಟದ್ದಾಗಿರಲ್ಲ, ಜೊತೆಗೆ ಪೇಂಟ್ ಕೂಡ ಬೇಗನೇ ಮಾಸಿ ಹೋಗುತ್ತದೆ. ಜೊತೆಗೆ ಬೋರ್ಡ್ ಮೇಲೆ ನೀರು ಬಿದ್ದರೆ ಕೇರಂ ಆಡಲು ಕಷ್ಟಸಾಧ್ಯ. ಆದರೆ ಯಲ್ಲಪ್ಪ ತಯಾರಿಸುವ ಕೇರಂ‌ ಬೋರ್ಡ್ ಈ ಎಲ್ಲ ನ್ಯೂನ್ಯತೆಗಳನ್ನು‌ ಮೀರಿದ್ದು ಎಂಬುದು ವಿಶೇಷ. ಹಾಗಾಗಿ ಮಾರುಕಟ್ಟೆಯಲ್ಲಿ ಸಿಗುವ ಕೇರಂ‌ ಬೋರ್ಡ್ ದರಕ್ಕೆ ಹೋಲಿಸಿದರೆ ಯಲ್ಲಪ್ಪ ತಯಾರಿಸುವ ಕೇರಂ‌ ಬೋರ್ಡ್ ಕೊಂಚ ದುಬಾರಿ ಅನಿಸುತ್ತೆ. ಆದರೆ ಗುಣಮಟ್ಟದಲ್ಲಿ ರಾಜೀ ಇಲ್ಲ ಅಂತಾರೆ ಯಲ್ಲಪ್ಪ.

ಈಗಾಗಲೇ ಬೆಂಗಳೂರು, ಮೈಸೂರು, ಚಿತ್ರದುರ್ಗದಿಂದಲೂ ಅರ್ಡರ್ ಬರುತ್ತಿದ್ದು, ಸಾರಿಗೆ ಸಮಸ್ಯೆಯಿಂದ ಸದ್ಯಕ್ಕೆ ಡೆಲಿವರಿ ಮಾಡಲಾಗುತ್ತಿಲ್ಲ. ಜೂನ್ 1 ರಿಂದ ನೋಡಬೇಕು ಎನ್ನುವ ಯಲ್ಲಪ್ಪ, ಗಾಜಿನ ಕೇರಂ‌ ಬೋರ್ಡ್ ತಯಾರಿಸಿ ಗಮನ ಸೆಳೆದಿದ್ದಾನೆ. ಜೊತೆಗೆ ಟೈಲ್ಸ್ ಕೇರಂ‌ ಬೋರ್ಡ್ ತಯಾರಿಸುವ ಇಂಗಿತವಿದ್ದು ಸಾಧಕ-ಬಾಧಕಗಳ ಕುರಿತು ಯೋಚಿಸುತ್ತಿದ್ದಾನೆ.

ಮಗನ ಬಗ್ಗೆ ಹೆಮ್ಮೆ
ನಮಗೆ ಕುಲಕಸುಬು ಇದ್ದೇ ಇದೆ. ಆದರೆ ನನಗೆ ಬೇಸರವಾಗಿದ್ದಕ್ಕೆ ಛಲ ಬಿಡದೇ ಕೇರಂ‌ ಬೋರ್ಡ್ ತಯಾರಿಸುವುದನ್ನ ಕಲಿತ ಮಗನ ಬಗ್ಗೆ ಹೆಮ್ಮೆ ಇದೆ. ಲಾಕ್‌ಡೌನ್ ಯಾರ್ಯಾರಿಗೆ ಏನೇನು ಪಾಠ ಕಲಿಸಿದೆಯೋ ಗೊತ್ತಿಲ್ಲ. ನಮಗಂತೂ ಹೊಸ ಕೆಲಸದ ಮೂಲಕ ಅನ್ನಕ್ಕೆ ದಾರಿ ಮಾಡಿಕೊಟ್ಟಿದೆ ಎನ್ನುತ್ತಾರೆ ಯಲ್ಲಪ್ಪನ ತಾಯಿ  ತಾಯವ್ವ.

ಎಲ್ಲವೂ ಅಮ್ಮನಿಗಾಗಿ
ಮನೆಯಲ್ಲಿ ನಾನು, ಅಮ್ಮ ಇಬ್ಬರೇ. ಅಪ್ಪ, ಅಣ್ಣ-ತಮ್ಮ, ಅಕ್ಕ-ತಂಗಿ ಯಾರೂ ಇಲ್ಲ. ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿ ಖಾಲಿ ಕುಳಿತು ಬೇಸರವಾದಾಗ ಪಕ್ಕದ ಮನೆಯವರು ಕೇರಂ‌ ಬೋರ್ಡ್ ಕೊಟ್ಟು ಎರಡು ದಿನಗಳ ಮತ್ತೇ ವಾಪಾಸ್ ಒಯ್ದದ್ದು ನಮಗೆ ಹೊಸ ಬದುಕು ಕಟ್ಟಿ ಕೊಟ್ಟಿದೆ. ತಾಯಿ ಬೇಸರ ಕಳೆಯಲೆಂದು ಕಲಿತ ಕೆಲಸ ಕೈ ಹಿಡಿದಿದೆ. ಲಾಕ್‌ಡೌನ್ ಸಮಯದಲ್ಲಿ ಒಂದೆರಡು ದಿನ ಬಿಟ್ಟರೆ ಇನ್ನುಳಿದ ಎಲ್ಲ ದಿನವೂ ನಾನು ಕೆಲಸ ಮಾಡುತ್ತಿದ್ದೆ ಎಂದು ಯಲ್ಲಪ್ಪ ತಿಳಿಸಿದ್ದಾರೆ.
-ಬಸವರಾಜ ಕರುಗಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.