ರಾಜ್ಯದಲ್ಲಿ ಕೊರೋನಾ ಸಾವು ಮುಚ್ಚಿಡಲಾಗುತ್ತಿದೆಯೇ?: ಆರೋಗ್ಯ ಇಲಾಖೆಯಿಂದ ತಪ್ಪು ಮಾಹಿತಿ, ಜೂನ್ ಲೆಕ್ಕ ನೀಡಿ ಸಿಕ್ಕಿಬಿದ್ದ ಅಧಿಕಾರಿಗಳು!
ಕೊರೋನಾ ಸೋಂಕು ವ್ಯಾಪಕವಾಗುತ್ತಿದ್ದು, ಈ ಸಂದರ್ಭದಲ್ಲಿ ಯಾರನ್ನು ನಂಬಬೇಕು? ಯಾರನ್ನು ನಂಬಬಾರದು ಎಂಬುದು ಜನರಿಗೆ ತಿಳಿಯದಂತಾಗಿದೆ.

ಬೆಂಗಳೂರು: ಕೊರೋನಾ ಸೋಂಕು ವ್ಯಾಪಕವಾಗುತ್ತಿದ್ದು, ಈ ಸಂದರ್ಭದಲ್ಲಿ ಯಾರನ್ನು ನಂಬಬೇಕು? ಯಾರನ್ನು ನಂಬಬಾರದು ಎಂಬುದು ಜನರಿಗೆ ತಿಳಿಯದಂತಾಗಿದೆ... ಕೊರೋನಾ ವೈದ್ಯಕೀಯ ಸಲಕರಣೆ ಖರೀದಿಯಲ್ಲಿ ಗೋಲ್ ಮಾಲ್ ನಡೆದಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿರುವ ನಡುವಲ್ಲೇ, ಆರೋಗ್ಯ ಇಲಾಖೆ ಪ್ರತೀನಿತ್ಯ ನೀಡುತ್ತಿರುವ ಕೊರೋನಾ ಹೆಲ್ತ್ ಬುಲೆಟಿನ್ಗಳನ್ನೂ ಅನುಮಾನದಿಂದಲೇ ನೋಡುವಂತಾಗಿದೆ.
ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಮಾಡಿದ ಯಡವಟ್ಟಿನ ಬಗ್ಗೆ ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅವರು ಸಚಿವರು ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ತನಿಖೆಗೆ ಆಗ್ರಹಿಸಿದ್ದಾರೆ.
ಮದನ್ ಗೋಪಾಲ್ ಅವರು ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೆ, ಯಾವಾಗಲೋ ಸತ್ತವರನ್ನೂ ಕೊರೋನಾ ಸಾವಿಗೆ ಪಟ್ಟಿಗೆ ಸೇರುವ ಪ್ರಯತ್ನಗಳಾಗುತ್ತಿವೆಯೇ? ಕೊರೋನಾ ವಿಚಾರದಲ್ಲಿ ಸರ್ಕಾರ ಸುಳ್ಳು ಲೆಕ್ಕ ನೀಡಿ ಜನರು ಆತಂಕಕ್ಕೊಳಗಾಗುವಂತೆ ಮಾಡುತ್ತಿದೆಯೇ? ಎಂಬ ಪ್ರಶ್ನೆಗಳು ಇದೀಗ ಮೂಡಲು ಆರಂಭವಾಗಿದೆ.
ಕಳೆದ 10 ದಿನಗಳಿಂದ ಆರೋಗ್ಯ ಇಲಾಖೆಯು ಸರಿಯಾದ ಮಾಹಿತಿ ನೀಡುತ್ತಿಲ್ಲ. ಬದಲಿಗೆ ಹಿಂದಿನ ವಾರ ಅಥವಾ ಹಿಂದಿನ ತಿಂಗಳುಗಳಲ್ಲಿ ಸಂಭವಿಸಿದ ಸಾವಿನ ಸಂಖ್ಯೆಯನ್ನು ನೀಡುತ್ತಿದೆ ಎಂಬ ಬಗ್ಗೆ ಮುಖ್ಯಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದೇನೆಂದು ಗೋಪಾಲ್ ಅವರು ಹೇಳಿದ್ದಾರೆ.
ಸರ್ಕಾರ ಇಂತಹ ಮಾಹಿತಿಗಳನ್ನು ನೀಡುವುದರಿಂದ ಜನರಲ್ಲಿ ಆತಂಕ ಹೆಚ್ಚಾಗುತ್ತದೆ. ಪ್ರತೀನಿತ್ಯ ಆರೋಗ್ಯ ಇಲಾಖೆ ನೀಡುತ್ತಿರುವ ಸಾವಿನ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಪ್ರಕರಣಗಳನ್ನು ಗಮನಿಸಿದರೆ, ಪ್ರತೀನಿತ್ಯ 2-3 ಸಾವುಗಳು ಸಂಭಿಸುತ್ತಿವೆ ಎಂದೆನಿಸುತ್ತಿದೆ. ಆದರೆ, ಹೆಲ್ತ್ ಬುಲೆಟಿನ್ ನಲ್ಲಿ 60ಕ್ಕಿಂತಲೂ ಹೆಚ್ಚು ಸಾವಾಗಿದೆ ಎಂದು ತಿಳಿಸಲಾಗುತ್ತಿದೆ.
ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ನೈಜ ಮಾಹಿತಿಗಳನ್ನು ಸಾರ್ವಜನಿಕರಿಗೆ ನೀಡುವುದು ಮುಖ್ಯವಾಗುತ್ತದೆ. ನೈಜ ಮಾಹಿತಿಗಳು ಜನರಿಗೆ ತಲುಪದೇ ಹೋದಲ್ಲಿ ಸುಖಾಸುಮ್ಮನೆ ಆತಂಕ ಸೃಷ್ಟಿಯಾಗುತ್ತದೆ. ಜನರಲ್ಲಿ ವಿಶ್ವಾಸ, ಭರವಸೆಯನ್ನು ಹೆಚ್ಚಿಸಬೇಕೇ ವಿನಃ ಆತಂಕವನ್ನು ಸೃಷ್ಟಿಸುವ ಪ್ರಯತ್ನಗಳಾಗಬಾರದು ಎಂದಿದ್ದಾರೆ.
ಅಧಿಕಾರಿಗಳ ಬಳಿಗೇ ಸೂಕ್ತ ಮಾಹಿತಿಗಳು ಬರುತ್ತಿಲ್ಲ. ಸಹಕಾರದ ಕೊರತೆಗಳು ಇಲ್ಲಿ ಎದ್ದು ತೋರುತ್ತಿದೆ. ಹಲವರು ವರದಿಗಳು ಬರುವುದು ಬಾಕಿಯಿದ್ದು, ಆ ವರದಿಗಳೆಲ್ಲವೂ ಬಂದ ಬಳಿಕ ನೈಜ ವರದಿ ನೀಡುವುದಾಗಿ ಮುಖ್ಯ ಕಾರ್ಯದರ್ಶಿಗಳು ಭರವಸೆ ನೀಡಿದ್ದಾರೆ. ಜನರದಲ್ಲಿ ಆತಂಕದ ಬದಲು ಭರವಸೆ, ವಿಶ್ವಾಸ ಮೂಡಿಸಬೇಕೆಂಬುದು ನನ್ನ ಉದ್ದೇಶವಾಗಿದೆಯೇ ಹೊರತು ಸರ್ಕಾರದ ತಪ್ಪು, ದೋಷಗಳನ್ನು ಬಹಿರಂಗಪಡಿಸುವುದಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


