ನಮ್ಮ ಮೆಟ್ರೋ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಕ್ರಮಗಳ ಕೈಗೊಳ್ಳಿ: ಬಿಬಿಎಂಪಿಗೆ ಹೈಕೋರ್ಟ್ ಚಾಟಿ
ಮೆಟ್ರೋ ರೈಲು ಯೋಜನೆ ಕಾಮಗಾರಿ ನಡೆಯುತ್ತಿರುವ ನಗರದ ಕಣ್ಣೂರು ಕ್ಯಾಂಪ್ ನಲ್ಲಿ 79 ಮಂದಿ ಕಾರ್ಮಿಕರಿಗೆ ಕೊರೋನಾ ಸೋಂಕು ತಗುಲಿರುವುದಕ್ಕೆ ಬಿಎಂಆರ್'ಸಿಎಲ್'ಗೆ ಚಾಟಿ ಬೀಸಿರುವ ಹೈಕೋರ್ಟ್, ಕೂಡಲೇ ಕಾರ್ಮಿಕರ ಕಾರ್ಮಿಕರ ಸುರಕ್ಷತೆಗೆ ಅಗತ್ಯ...

ಬೆಂಗಳೂರು: ಮೆಟ್ರೋ ರೈಲು ಯೋಜನೆ ಕಾಮಗಾರಿ ನಡೆಯುತ್ತಿರುವ ನಗರದ ಕಣ್ಣೂರು ಕ್ಯಾಂಪ್ ನಲ್ಲಿ 79 ಮಂದಿ ಕಾರ್ಮಿಕರಿಗೆ ಕೊರೋನಾ ಸೋಂಕು ತಗುಲಿರುವುದಕ್ಕೆ ಬಿಎಂಆರ್'ಸಿಎಲ್'ಗೆ ಚಾಟಿ ಬೀಸಿರುವ ಹೈಕೋರ್ಟ್, ಕೂಡಲೇ ಕಾರ್ಮಿಕರ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಮೆಟ್ರೋ ಯೋಜನೆಗೆ ತಡೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಮೆಟ್ರೋ ಕಾರ್ಮಿಕರ ಕ್ಯಾಂಪ್'ಗಳು ಕೊರೋನಾ ಹರಡುವ ಕೇಂದ್ರಗಳಾಗದಂತೆ ಎಚ್ಚರಿಕೆ ವಹಿಸುವಂತೆ ಸರ್ಕಾರ ಮತ್ತು ಬಿಎಂಆರ್'ಸಿಎಲ್'ಗೆ ತಾಕೀತು ಮಾಡಿತು.
ವಿಚಾರಣೆ ವೇಳೆ ಬಿಎಂಆರ್'ಸಿಎಲ್ ಪರ ವಕೀಲರು, ಕಣ್ಣೂರು ಕ್ಯಾಂಪ್ ನಲ್ಲಿ 211 ಮಂದಿ ಕಾರ್ಮಿಕರಿದ್ದಾರೆ. ಅದರಲ್ಲಿ 79 ಮಂದಿಗೆ ಕೊರೋನಾ ಸೋಂಗು ತಗುಲಿದೆ. ಸೋಂಕಿತರನ್ನು ಆಸ್ಪತ್ರೆ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ದಾಖಲಿಸಿದ್ದು, ಉಳಿದವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದರು.
ಅದಕ್ಕೆ ಗರಂ ಆದ ನ್ಯಾಯಪೀಠ, 211 ಮಂದಿಯಲ್ಲಿ 79 ಮಂದಿಯಲ್ಲಿ ಕೊರೋನಾ ಸೋಂಕು ತಗುಲಿದೆ ಎಂದರೆ ಸಾಮಾನ್ಯ ವಿಚಾರವಲ್ಲ. ಇದು ಬಿಎಂಆರ್'ಸಿಎಲ್ ನಿರ್ವಹಣೆ ಎಷ್ಟರ ಮಟ್ಟಿಗೆ ಉತ್ತಮವಾಗಿದೆ ಎಂಬುದನ್ನು ತಿಳಿಸುತ್ತದೆ ಎಂದು ತೀಕ್ಷ್ಣವಾಗಿ ನುಡಿಯಿತು.
ನಂತರ ನಗರದಲ್ಲಿ ಮತ್ತು ಕಣ್ಣೂರಿನಲ್ಲಿ ಮೆಟ್ರೋ ಕಾರ್ಮಿಕರ ಎಷ್ಟು ಕ್ಯಾಂಪ್'ಗಳಿವೆ? ಸೋಂಕಿತರನ್ನು ಪ್ರತ್ಯೇಕ ಕ್ಯಾಂಪ್ ನಲ್ಲಿ ಇರಿಸಲಾಗಿದೆಯೇ? ಕಾರ್ಮಿಕರ ಸುರಕ್ಷತೆಗೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಂಕು ತಗುಲಿರುವ ಮತ್ತು ಕ್ವಾರಂಟೈನ್ ಆಗಿರುವ ಕಾರ್ಮಿಕರಿಗೆ ವೇತನ ಪಾವತಿಸಲಾಗುತ್ತಿದೆಯೇ ಎಂದು ನ್ಯಾಯಪೀಠ ಪ್ರಶ್ನಿಸಿತು.
ಬಿಎಂಆರ್'ಸಿಎಲ್ ಪರ ವಕೀಲರು, ಈ ಎಲ್ಲಾ ವಿಷಯಗಳನ್ನು ತಿಳಿದು ಮಾಹಿತಿ ನೀಡುವುದಾಗಿ ತಿಳಿಸಿದರು.
ಅದರಿಂದ ಮತ್ತಷ್ಟು ಕೋಪಗೊಂಡ ನ್ಯಾಯಪೀಠ, ತಾನು ಎಲ್ಲರಂತೆ ಅಲ್ಲ ಎಂಬ ಭ್ರಮೆಯನ್ನು ಬಿಎಂಆರ್'ಸಿಎಲ್ ಬಿಡಬೇಕು. ಸರ್ಕಾರದ ಅಂಗ ಸಂಸ್ಥೆ ಎಂಬುದನ್ನು ಮರೆಯಬಾರದು. ಮೆಟ್ರೋ ಕೊರೋನಾ ಹರಡುವ ಕೇಂದ್ರವಾಗಬಾರದು. ಸಂಸ್ಥೆಯ ಮೇಲೆ ನ್ಯಾಯಾಲಯ ಇನ್ನೂ ನಂಬಿಕೆ ಇಟ್ಟಿದೆ, ಕೂಡಲೇ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಿದ್ದರೆ ಮೆಟ್ರೋ ಯೋಜನೆಗೆ ತಡೆ ನೀಡಬೇಕಾಗುತ್ತದೆ ಎಂದು ಮೌಖಿಕವಾಗಿ ಎಚ್ಚರಿಸಿತು.
ನಂತರ ಕಾರ್ಮಿಕರ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳ ಕುರಿತು ಮುಂದಿನ ವಿಚಾರಣೆ ವೇಳೆ ಸಮಗ್ರ ವರದಿ ಸಲ್ಲಿಸಬೇಕು ಎಂದು ಬಿಎಂಆರ್ ಸಿಎಲ್'ಗೆ ಸೂಚಿಸಿ ವಿಚಾರಣೆಯನ್ನು ಜೂ.23ಕ್ಕೆ ಮುಂದೂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


