ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ ಮಾಡಲು ರೋಗಿಗಳೇ ಇಲ್ಲ: ವೈದ್ಯಕೀಯ ಸಚಿವ ಕೆ ಸುಧಾಕರ್
ಕೊರೋನಾದಿಂದ ಗುಣಮುಖರಾದವರು ರಕ್ತದಾನ ಮಾಡಿದ್ದು ಪ್ಲಾಸ್ಮಾ ಸಿದ್ಧವಾಗಿದೆ. ಆದರೆ ಪ್ಲಾಸ್ಮಾ ಟ್ರಾನ್ಸ್ ಪ್ಲಾಂಟ್ ಮಾಡುವಂತಹ ರೋಗಿಗಳೇ ನಮ್ಮ ರಾಜ್ಯದಲ್ಲಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರ: ಕೊರೊನಾದಿಂದ ಗುಣಮುಖರಾದವರು ರಕ್ತದಾನ ಮಾಡಿದ್ದು ಪ್ಲಾಸ್ಮಾ ಸಿದ್ಧವಾಗಿದೆ. ಆದರೆ ಪ್ಲಾಸ್ಮಾ ಟ್ರಾನ್ಸ್ ಪ್ಲಾಂಟ್ ಮಾಡುವಂತಹ ರೋಗಿಗಳೇ ನಮ್ಮ ರಾಜ್ಯದಲ್ಲಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ನಗರದಲ್ಲಿ ಮೊಬೈಲ್ ಸ್ವಾಬ್ ಕಲೆಕ್ಷನ್ ಯೂನಿಟ್ ಉದ್ಗಾಟನೆ ಮಾಡಿದ ಬಳಿಕ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಚಿವ ಸುಧಾಕರ್ ಅವರು, ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ಪ್ರಸರಣ ನಿಯಂತ್ರಣದಲ್ಲಿದೆ. ರಾಜ್ಯದಲ್ಲಿನ 523 ಪ್ರಕರಣಗಳಲ್ಲಿ 198 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಉಳಿದ 325 ಮಂದಿಯಲ್ಲಿ 20 ಮಂದಿ ಮೃತಪಟ್ಟಿದ್ದಾರೆ. ಉಳಿದವರಲ್ಲಿ ಶೇ.90 ರಷ್ಟು ಮಂದಿ ಆರೋಗ್ಯಕರವಾಗಿದ್ದು ಯಾವುದೇ ತೊಂದರೆ ಇಲ್ಲದೆ ಚೇತರಿಸಿಕೊಳ್ಳುತ್ತಿದ್ದಾರೆ. ಹಲವರು ದಾನಿಗಳು ಮುಂದೆ ಪ್ಲಾಸ್ಮಾ ದಾನ ಮಾಡಿದರೂ ಪ್ಲಾಸ್ಮಾ ಥೆರೆಪಿ ಮಾಡಲು ರೋಗಿಗಳೇ ಇಲ್ಲ ಎಂದು ಹೇಳಿದರು.
ಅಂತೆಯೇ ಕೊರೋನಾ ವೈರಸ್ ಸೋಂಕು ವಿಚಾರವಾಗಿ ಪ್ಲಾಸ್ಮಾ ಥೆರಪಿ ಪರಿಣಾಮಕಾರಿ ಎಂಬ ಅಂಶ ತಿಳಿದ ಬೆನ್ನಲ್ಲೇ ಐಸಿಎಂಆರ್ ಬಳಿ ಕರ್ನಾಟಕ ಪ್ಲಾಸ್ಮಾ ಥೆರಪಿ ವೈದ್ಯಕೀಯ ಪ್ರಯೋಗಕ್ಕೆ ಅನುಮತಿ ಕೋರಿತ್ತು. ಕರ್ನಾಟಕದಲ್ಲಿ ಪ್ಲಾಸ್ಮಾ ಥೆರಪಿ ವೈದ್ಯಕೀಯ ಪ್ರಯೋಗಕ್ಕೆ ಐಸಿಎಂಆರ್ ಅನುಮತಿ ನೀಡಿದೆ. ಪ್ರಸ್ತುತ ನಮಗೆ ಗುಣಮುಖರಾದ ಸೋಂಕಿತರಿಂದ ಪ್ಲಾಸ್ಮಾ ದೊರೆತಿದೆ. ನಾವು ವೈದ್ಯಕೀಯ ಪರೀಕ್ಷೆಗೆ ಸಿದ್ದರಾಗಿದ್ದೇವೆ. ಆದರೆ ಪ್ಲಾಸ್ಮಾ ಟ್ರಾನ್ಸ್ ಪ್ಲಾಂಟ್ ಮಾಡುವಂತಹ ರೋಗಿಗಳೇ ನಮ್ಮ ರಾಜ್ಯದಲ್ಲಿಲ್ಲ. ರೋಗಿಗಳು ದೊರೆತರೆ ಪ್ಲಾಸ್ಮಾ ಥೆರಪಿಯ ವೈದ್ಯಕೀಯ ಪ್ರಯೋಗದ ಪ್ರಮಾಣವನ್ನು ಹೆಚ್ಚಿಸುತ್ತೇವೆ ಎಂದು ಹೇಳಿದರು.
ಕೊರೋನಾ ವೈರಸ್ ಚಿಕಿತ್ಸೆಯಲ್ಲಿ ಬಳಸಲಾಗುವ ಥೆರಪಿಗಳಲ್ಲಿ ಪ್ಲಾಸ್ಮಾ ಥೆರಪಿ ಕೂಡ ಒಂದು. ವೈರಸ್ ಸೋಂಕಿನಿಂದ ಗುಣಮುಖರಾದ ವ್ಯಕ್ತಿಯ ರಕ್ತದಿಂದ ಪ್ಲಾಸ್ಮಾ ಪಡೆದು, ಅದನ್ನು ಸೋಂಕಿತ ವ್ಯಕ್ತಿಗೆ ನೀಡಲಾಗುತ್ತದೆ. ಇದರಿಂದ ಸೋಂಕಿತ ವ್ಯಕ್ತಿಯ ರೋಗ ನಿರೋಧಕ ಕಣಗಳು ವೈರಸ್ ವಿರುದ್ಧ ಹೋರಾಡಲು ಸಜ್ಜಾಗುತ್ತವೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಇಂದು 11 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 523 ಕ್ಕೆ ಏರಿಕೆಯಾಗಿದೆ. ಕಲಬುರಗಿ 6, ಗದಗ 1, ಬೆಂಗಳೂರು (ಪಾದರಾಯನಪುರ)1 ಮತ್ತು ಬಾಗಲಕೋಟೆಯ ಮೂವರಿಗೆ ಇಂದು ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಇನ್ನು ಹೊಂಗಸಂದ್ರದ 145 ಮತ್ತು ಪಾದರಾಯನಪುರದ 70 ಜನರ ವರದಿ ನೆಗೆಟಿವ್ ಬಂದಿದೆ.
ಪ್ಲಾಸ್ಮಾ ಥೆರಪಿ ಎಂದರೇನು?
ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಲ್ಲಿ ಆಂಟಿಬಾಡಿಗಳು ಇರುತ್ತವೆ. ಅವು ರೋಗ ನಿರೋಧಕ ಶಕ್ತಿ ಹೊಂದಿರುತ್ತವೆ. ಆ ಪ್ಲಾಸ್ಮಾವನ್ನು ತೆಗೆದು ಸೋಂಕಿತ ಅಥವಾ ಸೋಂಕು ಶಂಕೆ ಹೊಂದಿರುವ ವ್ಯಕ್ತಿಗೆ ನೀಡುವುದನ್ನೇ ಪ್ಲಾಸ್ಮಾ ಥೆರಪಿ ಎನ್ನಲಾಗುತ್ತದೆ. ಪ್ಲಾಸ್ಮಾ ಥೆರಪಿಗೆ ಒಳಗಾದ ವ್ಯಕ್ತಿಗಳು ಬೇಗನೆ ಕೊರೊನಾದಿಂದ ಗುಣಮುಖರಾಗುವುದು ವಿದೇಶಗಳಲ್ಲಿ ಸಾಬೀತಾಗಿದೆ. ಸೋಂಕು ಮುಕ್ತವಾದ ವ್ಯಕ್ತಿ ಚೇತರಿಸಿಕೊಂಡ 28 ದಿನಗಳ ಬಳಿಕ ಪ್ಲಾಸ್ಮಾವನ್ನು ದಾನ ಮಾಡಬಹುದು, ಮೊದಲ ಪರೀಕ್ಷೆಯಲ್ಲಿ ಪಾಸಿಟಿವ್ ಬಂದು, 2ನೇ ಪರೀಕ್ಷೆಯಲ್ಲಿ ನೆಗೆಟಿವ್ ಬಂದವರು ಕೂಡಾ ದಾನ ಮಾಡಬಹುದಾಗಿದೆ. ದಾನಿಯೊಬ್ಬನ ಪ್ಲಾಸ್ಮಾವನ್ನು ಅದೇ ರಕ್ತದ ಗುಂಪಿನ ರೋಗಿಗಳಿಗೆ ಮಾತ್ರ ನೀಡಬಹುದು ಎಂದು ತಜ್ಞರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


