ಟೋಲ್ ಗಳಲ್ಲಿ ಸರ್ಕಾರಿ ಸಾರಿಗೆಗೆ ವಿನಾಯಿತಿ ನೀಡಿ: ಡಿಸಿಎಂ ಲಕ್ಷ್ಮಣ ಸವದಿ ಕೇಂದ್ರಕ್ಕೆ ಮನವಿ
ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಸರ್ಕಾರಿ ಸಾರಿಗೆ ಇಲಾಖೆಗೆ ಭಾರಿ ನಷ್ಠ ಸಂಭವಿಸಿದ್ದು, ಇದೇ ಕಾರಣಕ್ಕೆ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ ಸರ್ಕಾರಿ ಸಾರಿಗೆ ವಾಹನಗಳಿಗೆ ವಿನಾಯಿತಿ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಸರ್ಕಾರಿ ಸಾರಿಗೆ ಇಲಾಖೆಗೆ ಭಾರಿ ನಷ್ಠ ಸಂಭವಿಸಿದ್ದು, ಇದೇ ಕಾರಣಕ್ಕೆ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ ಸರ್ಕಾರಿ ಸಾರಿಗೆ ವಾಹನಗಳಿಗೆ ವಿನಾಯಿತಿ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ. ಲಾಕ್ ಡೌನ್ ಪರಿಣಾಮವಾಗಿ ರಾಜ್ಯ ಕ್ಷೇತ್ರಕ್ಕೆ ತೀವ್ರ ನಷ್ಟವಾಗುತ್ತಿರುವುದರಿಂದ ಮುಂದಿನ ಆರು ತಿಂಗಳುಗಳ ಕಾಲ ಸಾರಿಗೆ ಸಂಸ್ಥೆಯ ಕೆ.ಎಸ್.ಆರ್.ಟಿ.ಸಿ ಬಸ್ಸುಗಳಿಗೆ ಟೋಲ್ ಗಳಲ್ಲಿ ವಿನಾಯಿತಿ ನೀಡಬೇಕೆಂದು ಮನವಿ ಮಾಡಿದ್ದಾರೆ.
ನಿತಿನ್ ಗಡ್ಕರಿ ಅವರೊಂದಿಗಿನ ವಿಡಿಯೋ ಸಂವಾದದಲ್ಲಿ ಸವದಿ ಅವರು, 'ಲಾಕ್ ಡೌನ್ ಇಂದಾಗಿ ಕರ್ನಾಟಕದ ಸಾರಿಗೆ ವಲಯದ ಮೇಲೆ ಯಾವ ರೀತಿ ದುಷ್ಪರಿಣಾಮ ಉಂಟಾಗಿದೆ ಎಂಬುದರ ಕುರಿತು ಮಾಹಿತಿ ನೀಡಿದರು. ಒಂದು ತಿಂಗಳಿಗಿಂತಲೂ ಹೆಚ್ಚುಕಾಲ ಲಾಕ್ ಡೌನ್ ಆಗಿರುವುದರಿಂದ ಸರ್ಕಾರಿ ಸಾರಿಗೆ ಸೇವಾಸಂಸ್ಥೆಗಳಾದ ಬಿ.ಎಂ.ಟಿ.ಸಿ, ಕೆ.ಎಸ್.ಆರ್.ಟಿ.ಸಿ ವಾಯುವ್ಯ ಸಾರಿಗೆ, ಈಶಾನ್ಯ ಸಾರಿಗೆ, ಸಂಸ್ಥೆಗಳ ಆದಾಯ ಸಂಪೂರ್ಣ ನಿಂತಿದೆ. ಸಿಬ್ಬಂದಿಗಳ ವೇತನ ನೀಡುವುದಕ್ಕೂ ಇಲಾಖೆ ಹರಸಾಹಸ ಪಡುವಂತಾಗಿದೆ. ಆದ್ದರಿಂದ ಕೇಂದ್ರ ಸರ್ಕಾರವು ಈ ಸಂಸ್ಥೆಗಳ ನೆರವಿಗೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
ಅಂತೆಯೇ ಈ ಮಾರಕ ಪರಿಣಾಮ ಕೇವಲ ಸರಕಾರಿ ಸಾರಿಗೆ ಮಾತ್ರವಲ್ಲ ಖಾಸಗಿ ಸಾರಿಗೆ ವಲಯದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಖಾಸಗಿ ಚಾಲಕರು ಮತ್ತು ಅವರ ಪರಿಚಾರಕರುಗಳಿಗೆ (ಕ್ಲೀನರುಗಳಿಗೆ) ಇನ್ಶೂರೆನ್ಸ್ ಯೋಜನೆಯನ್ನು ಪ್ರಾರಂಭಿಸುವುದು ಅಗತ್ಯ ಎಂದು ಸವದಿ ಅವರು ಪ್ರತಿಪಾದಿಸಿದರು. ಸಾರಿಗೆ ಸಂಸ್ಥೆಗಳಿಗೆ ಉಪಯೋಗಿಸಲಾಗುವ ಡೀಸೆಲ್ ಮೇಲಿನ ಕೇಂದ್ರ ಸರ್ಕಾರದ ತೆರಿಗೆ ಗಳಿಗೆ ಸಂಪೂರ್ಣ ವಿನಾಯಿತಿ ನೀಡಬೇಕೆಂದು ಸವದಿ ಅವರು ಗಡ್ಕರಿಯವರನ್ನು ಒತ್ತಾಯಿಸಿದರು.
ಬಳಿಕ ಕರ್ನಾಟಕದಲ್ಲಿ ಕೊರೋನಾ ತಡೆಗಟ್ಟುವಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದ ಸವದಿ ಅವರು, ಮೊಬೈಲ್ ಕ್ಲಿನಿಕ್ ಗಳನ್ನು ಪ್ರಾರಂಭಿಸುವುದಕ್ಕೆ ಅಗತ್ಯವಾದ ವೆಚ್ಚವನ್ನು ಕೇಂದ್ರ ಸರ್ಕಾರವು ಭರಿಸಬೇಕೆಂದು ವಿನಂತಿಸಿಕೊಂಡರು. ಸವದಿ ಅವರು ಮುಂದಿಟ್ಟ ಈ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸುವುದಾಗಿ ಶ್ರೀ ಗಡ್ಕರಿ ಅವರು ಭರವಸೆ ನೀಡಿದರು.
ಕರ್ನಾಟಕದಲ್ಲಿ ಲೋಕೋಪಯೋಗಿ ಇಲಾಖೆಯು ಕೈಗೊಳ್ಳುತ್ತಿರುವ ರಸ್ತೆ ಮತ್ತು ಸೇತುವೆಗಳ ನಿರ್ಮಾಣ ಕಾಮಗಾರಿಗಳ ಬಗ್ಗೆ ಲೋಕೋಪಯೋಗಿ ಸಚಿವರು ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ವಿವರಿಸಿ, ಕೊರೋನಾ ನಿಯಂತ್ರಿಸುವಲ್ಲಿ ಕೇಂದ್ರದ ಎಲ್ಲ ಮಾರ್ಗಸೂಚಿಗಳನ್ನು ಚಾಚೂತಪ್ಪದೆ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ತಿಳಿಸಿದರು. ಅಪರ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಗೌರವ್ ಗುಪ್ತ, ಸಾರಿಗೆ ಇಲಾಖೆಯ ಆಯುಕ್ತರಾದ ಶಿವಕುಮಾರ್, ಕೆ.ಎಸ್. ಆರ್. ಟಿ. ಸಿ ವ್ಯವಸ್ಥಾಪಕ ನಿರ್ದೇಶಕರಾದ ಶಿವಯೋಗಿ ಕಳಸದ, ಬಿ.ಎಂ.ಟಿ.ಸಿ ವ್ಯವಸ್ಥಾಪಕ ನಿರ್ದೇಶಕಿ,ಸಿ. ಶಿಕಾ, ಲೋಕೋಪಯೋಗಿ ಇಲಾಖೆಯ ಬಿ. ಗುರುಪ್ರಸಾದ್ ಮುಂತಾದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


