ತಪ್ಪಿದ 2 ರೈಲು ಅವಫಡ: ಹಳಿ ತಪ್ಪಿದ ಮಾಲ್ಗುಡಿ ಎಕ್ಸ್'ಪ್ರೆಸ್, ಲೋಕೋ ಪೈಲಟ್ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಬಚಾವ್
ನಗರದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಂದು ರೈಲು ಹಳಿ ತಪ್ಪಿದ್ದು, ಮತ್ತೊಂದು ರೈಲಿನ ಬೋಗಿಗೆ ಬೆಂಕಿ ತಗುಲಿರುವ ಘಟನೆಗಳು ಜರುಗಿದ್ದು, ಅದೃಷ್ಟವಶಾತ್ ಎರಡೂ ಘಟನಗಳಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ.

ಬೆಂಗಳೂರು: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಂದು ರೈಲು ಹಳಿ ತಪ್ಪಿದ್ದು, ಮತ್ತೊಂದು ರೈಲಿನ ಬೋಗಿಗೆ ಬೆಂಕಿ ತಗುಲಿರುವ ಘಟನೆಗಳು ಜರುಗಿದ್ದು, ಅದೃಷ್ಟವಶಾತ್ ಎರಡೂ ಘಟನಗಳಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ.
ಮೈಸೂರಿನಿಂದ ಬರುತ್ತಿದ್ದ ಮೈಸೂರು-ಯಲಹಂಕ ಮಾಲ್ಗುಡಿ ಎಕ್ಸ್ ಪ್ರೆಸ್ ರೈಲು ಗುರುವಾರ ನಗರದ ನಾಯಂಡಹಳ್ಳಿ ಬಳಿ ಹಳಿ ತಪ್ಪಿದರೂ, ಲೋಕೋ ಪೈಲಟ್ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.
ಬೆಳಿಗ್ಗೆ 11ರ ಸುಮಾರಿಗೆ 16 ಬೋಗಿಯ ಮಾಲ್ಗುಡಿ ಎಕ್ಸ್ ಪ್ರೆಸ್ ರೈಲು ನಾಯಂಡಹಳ್ಳಿ ಬಳಿ ಬಂದಿದೆ. ಅಂದರೆ, ಕೆಎಸ್ಆರ್ ರೈಲು ನಿಲ್ದಾಣಕ್ಕೆ ಒಂದು ಕಿ.ಮೀ ಅಂತರದಲ್ಲಿ ರೈಲಿನ ಎಂಜಿನ್ ನ ಆಯ್ಕ್ಸೆಲ್ ಹಳಿ ತಪ್ಪಿದೆ. ರೈಲು ನಿಧಾನಗತಿಯಲ್ಲಿ ಸಂಚರಿಸುತ್ತಿದ್ದರಿಂದ ಎಂಜಿನ್ ಹಳಿ ತಪ್ಪಿದ್ದನ್ನು ಗ್ರಹಿಸಿದ ಲೋಕೋ ಪೈಲಟ್ ರಾಜೀವ್, ಎಂಜಿನ್ ಆಫ್ ಮಾಡಿ ತುರ್ತು ನಿಲುಗಡೆಗೆ ಮುಂದಾಗಿದ್ದಾರೆ. ಈ ವೇಳೆ ರೈಲು 22 ಮೀಟನ್ ನಷ್ಟು ಸಂಚಿರಿಸಿ ನಿಂತಿದೆ. ಘಟನೆಯಲ್ಲಿ ರೈಲಿನ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಲೋಕೋ ಪೈಲಟ್ ತೋರಿದ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.
ಲೋಕೋ ಪೈಲಟ್ ಅವರ ಈ ಕಾರ್ಯಕ್ಕೆ ರೈಲ್ವೇ ಅಧಿಕಾರಿಗಳೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರೈಲು ಎಂಜಿನ್ ಹಳಿ ತಪ್ಪಿರುವ ವಿಚಾರ ತಿಳಿದ ಕೂಡಲೇ ಕೆಎಸ್ಆರ್ ರೈಲು ನಿಲ್ದಾಣದಿಂದ ಪರಿಹಾರ ಮತ್ತು ಉಪಕರಪಣಗಳ ವಾಹನವನ್ನು ಸ್ಥಳಕ್ಕೆ ಕಳುಹಿಸಲಾಯಿತು. ಬೆಂಗಳೂರು ವಿಭಾಗೀಯ ರೈಲ್ವೇ ವ್ಯವಸ್ಥಾಪಕ ಅಶೋಕ್ ವರ್ಮಾ ಹಾಗೂ ಚೀಫ್ ರೋಲಿಂಗ್ ಸ್ಟಾಕ್ ಎಂಜಿನಿಯರ್ ಆರ್.ವಿ.ಎನ್.ಶರ್ಮಾ ಸ್ಥಳ ಪರಿಶೀಲಿಸಿದರು. ಹಳಿ ತಪ್ಪಿದ ರೈಲು ಎಂಜಿನ್ ಮರಳಿ ಹಳಿಗೆ ಕೂರಿಸಲು ಸಿಬ್ಬಂದಿಗೆ ಅಗತ್ಯ ಸಲಹೆ ಸೂಚನೆ ನೀಡಿದರು. ಸುಮಾರು ಒಂದೂವರೆಗಂಟೆ ಕಾರ್ಯಾಚರಣೆ ಬಳಿಕ ಯಶಸ್ವಿಯಾಗಿ ಎಂಜಿನ್ ಹಳಿಗೆ ಕೂರಿಸಲಾಯಿತು.
ಮಧ್ಯಾಹ್ನ 12.30ಕ್ಕೆ ಘಟನಾ ಸ್ಥಳದಿಂದ ಹೊರಟ ಈ ರೈಲವು ಮಧ್ಯಾಹ್ನ 1ಕ್ಕೆ ಮೆಜೆಸ್ಟಿಕ್ ನ ಕೆಎಸ್ಆರ್ ರೈಲು ನಿಲ್ದಾಣ ತಲುಪಿತು. ಘಟನೆ ಹಿನ್ನೆಲೆಯಲ್ಲಿ ಈ ರೈಲನ್ನು ಯಲಹಂಕದ ಬದಲು ಕೆಎಸ್ಆರ್ ರೈಲು ನಿಲ್ದಾಣಕ್ಕೆ ಸ್ಥಗಿತಗೊಳಿಸಲಾಯಿತು. ಬಳಿಕ ಯಲವಹಂಕದಿಂದ ಹೊರಡಬೇಕಿದ್ದ ಯಲಹಂಕ-ಮೈಸೂರು ಮಾಲ್ಗುಡಿ ಎಕ್ಸ್ ಪ್ರೆಸ್ ರೈಲು ಕೆಎಸ್ಆರ್ ರೈಲು ನಿಲ್ದಾಣದಿಂದ ಮೈಸೂರಿಗೆ ಕಾರ್ಯಾಚರಣೆ ಮಾಡಲಾಯಿತು.
ಎಂಜಿನ್ ಹಳಿ ತಪ್ಪಲು ನಿಖರ ಕಾರಣ ತಿಳಿದುಬಂದಿಲ್ಲ. ಘಟನೆ ಸಂಬಂಧ ತನಿಖೆಗೆ ಕ್ರಮ ಕೈಗೊಳ್ಳಲಾಗಿದೆ. ತನಿಖಾ ವರದಿ ಕೈಸೇರಿದ ಬಳಿಕ ನಿಖರ ಕಾರಣ ತಿಳಿದುಬರಲಿದೆ ಎಂದು ಅದಿಕಾರಿಗಳು ತಿಳಿಸಿದ್ದಾರೆ.
ಇನ್ನು ಚಿಕ್ಕಬಾಣಾವರ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಿದ್ದ ಯಶವಂತಪುರ-ಬಿಕಾನೇರ್ ರೈಲಿನ ಹವಾನಿಯಂತ್ರಿತ ಬೋಗಿಗೆ ಬೆಂಕಿ ಹೊತ್ತಿಕೊಂಡು 10ಕ್ಕೂ ಹೆಚ್ಚು ಆಸನಗಳಿಗೆ ಹಾನಿಯಾಗಿದೆ.
ರಾಜಸ್ಥಾನದ ಬಿಕಾನೇರ್ ನಿಂದ ಯಶವಂತಪುರಕ್ಕೆ ಬುಧವಾರ ಬಂದಿದ್ದ ರೈಲನ್ನು ಚಿಕ್ಕಬಾಣಾವನ ನಿಲ್ದಾಮದಲ್ಲಿ ನಿಲುಗಡೆ ಮಾಡಲಾಗಿತ್ತು. ಬೆಳಿಗ್ಗೆ 9.30ರ ಸುಮಾರಿಗೆ ಬಿ.4 ಬೋಗಿಯೊಳಗೆ ಬೆಂಕಿ ಕಾಣಿಸಿಕೊಂಡಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


