ರಾಜ್ಯ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ನಿಜವಾಗಿಯೂ ಸ್ಟಿಂಗ್ ಆಪರೇಷನ್ ನಡೆಸಲು ಪ್ರಯತ್ನ ನಡೆದಿದ್ದರೆ, ಅದರ ಬಗ್ಗೆ ತನಿಖೆಯಾಗಲಿ. ತಮ್ಮನ್ನು ಸಿಲುಕಿಸಲು ಕೆಲವರು ಬಂದಿದ್ದರು, ಪೊಲೀಸರಿಗೆ ಈ ಬಗ್ಗೆ ತಿಳಿದಿತ್ತು ಹಾಗೂ ಛಾಯಾಚಿತ್ರ ಸೇರಿದಂತೆ ಇತರ ಸಾಕ್ಷ್ಯಗಳಿವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು
ಡಿ.ಕೆ. ಶಿವಕುಮಾರ್
Published On :

ಬೆಂಗಳೂರು: ಸ್ಟಿಂಗ್ ಆಪರೇಷನ್ ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಗುರುವಾರ ಸವಾಲು ಹಾಕಿದ್ದಾರೆ.

ನವದೆಹಲಿ‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮನ್ನು ಸಿಲುಕಿಸಲು ಕೆಲವರು ಪ್ರಯತ್ನಿಸಿದ್ದಾರೆ, ಈ ಬಗ್ಗೆ ಪೊಲೀಸರಿಗೆ ಮಾಹಿತಿ ಇತ್ತು. ಈ ಬಗ್ಗೆ ಛಾಯಾಚಿತ್ರ ಸೇರಿದಂತೆ ಸಾಕ್ಷ್ಯಗಳಿವೆ ಎಂದು ಮುಖ್ಯಮಂತ್ರಿಯವರೇ ಹೇಳಿದ್ದಾರೆ. ಹಾಗಿದ್ದರೆ ಆರೋಪಿತ ವ್ಯಕ್ತಿಗಳ ಗುರುತನ್ನು ಬಹಿರಂಗಪಡಿಸದಿರುವುದೇಕೆ ಎಂದು ಪ್ರಶ್ನಿಸಿದರು.

ನಿಜವಾಗಿಯೂ ಸ್ಟಿಂಗ್ ಆಪರೇಷನ್ ನಡೆಸಲು ಪ್ರಯತ್ನ ನಡೆದಿದ್ದರೆ, ಅದರ ಬಗ್ಗೆ ತನಿಖೆಯಾಗಲಿ. ತಮ್ಮನ್ನು ಸಿಲುಕಿಸಲು ಕೆಲವರು ಬಂದಿದ್ದರು, ಪೊಲೀಸರಿಗೆ ಈ ಬಗ್ಗೆ ತಿಳಿದಿತ್ತು ಹಾಗೂ ಛಾಯಾಚಿತ್ರ ಸೇರಿದಂತೆ ಇತರ ಸಾಕ್ಷ್ಯಗಳಿವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದೆಲ್ಲವೂ ನಿಜವಾಗಿದ್ದರೆ, ಆ ವ್ಯಕ್ತಿಗಳು ಯಾರು? ಅವರ ವಿವರಗಳನ್ನು ಸಾರ್ವಜನಿಕರ ಮುಂದೆ ಇಡಲು ಹಿಂದೇಟು ಹಾಕುತ್ತಿರುವುದೇಕೆ?

ಮುಖ್ಯಮಂತ್ರಿಯವರೇ ತಮ್ಮ ವಿರುದ್ಧ ಸಂಚು ರೂಪಿಸಲಾಗಿತ್ತು ಎಂದು ಹೇಳುತ್ತಿದ್ದೀರೆ. ಇದು ಸಾಮಾನ್ಯ ವಿಚಾರವಲ್ಲ. ಹೀಗಾಗಿ ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ನೈಸ್ ಯೋಜನೆಗೆ ಸಂಬಂಧಿಸಿದ ಅಕ್ರಮಗಳ ಆರೋಪದ ಕುರಿತು ತಾವು ಬಿಡುಗಡೆ ಮಾಡಿರುವ ದಾಖಲೆಗಳಿಂದ ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಈ ವಿವಾದವನ್ನು ಬಳಸಿಕೊಳ್ಳಲಾಗುತ್ತಿದೆ ಎಂದೂ ಆರೋಪಿಸಿದರು.

ನಾನು ನೈಸ್ ಯೋಜನೆಗೆ ಸಂಬಂಧಿಸಿದ ಅಕ್ರಮಗಳ ಆರೋಪದ ದಾಖಲೆಗಳನ್ನು ಬಿಡುಗಡೆ ಮಾಡಿದ ಬಳಿಕ ಸರ್ಕಾರ ಮುಜುಗರಕ್ಕೀಡಾಗಿದೆ. ಮಾಧ್ಯಮಗಳಲ್ಲಿ ಈ ವಿಚಾರದ ಬಗ್ಗೆ ಮತ್ತಷ್ಟು ಚರ್ಚೆಯಾಗದಂತೆ ತಡೆಯಲು ಹಾಗೂ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಕಾಣುತ್ತದೆ ಎಂದು ದೂರಿದರು.

ಸ್ಟಿಂಗ್ ಆಪರೇಷನ್ ನಡೆಸಲು ಬಂದಿದ್ದರೆನ್ನಲಾದ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಇತ್ತು ಎಂದಾದರೆ, ಅವರು ಮುಖ್ಯಮಂತ್ರಿಯವರನ್ನು ಸಂಪರ್ಕಿಸಲು ಹೇಗೆ ಸಾಧ್ಯವಾಯಿತು?

ನಿಮ್ಮನ್ನು ಸಿಲುಕಿಸಲು ಯಾರೋ ಬಂದಿದ್ದಾರೆ ಮತ್ತು ಅವರ ವಿರುದ್ಧ ಸಾಕ್ಷ್ಯಗಳಿವೆ ಎಂಬುದು ನಿಮಗೆ ತಿಳಿದಿದ್ದರೆ, ಅವರನ್ನು ಅಲ್ಲಿಂದ ಹೋಗಲು ಬಿಟ್ಟಿದ್ದೇಕೆ? ಬಂಧಿಸದಿರುವುದೇಕೆ? ಎಲ್ಲವೂ ಗೊತ್ತಿದ್ದರೆ ಯಾವ ಕ್ರಮ ಕೈಗೊಳ್ಳಲಾಗಿದೆ? ಎಂದು ಪ್ರಶ್ನಿಸಿದರು.

ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ

ಇದೇ ವೇಳೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ನೈತಿಕತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ 24 ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳ ನೇಮಕಾತಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಇನ್ನೂ ಉತ್ತರ ನೀಡದಿರುವುದೇಕೆ ಎಂದು ಪ್ರಶ್ನಿಸಿದರು.

ನಾನು ಸಿದ್ಧಾರ್ಥ ವಿಹಾರ ಟ್ರಸ್ಟ್ ಹೆಸರಿನಲ್ಲಿ ಅಕ್ರಮವಾಗಿ ಸರ್ಕಾರಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿಲ್ಲ. ಈ ವಿಚಾರದಲ್ಲಿ ಉತ್ತರಿಸಬೇಕಾದ ಗಂಭೀರ ಪ್ರಶ್ನೆಗಳಿವೆ. ವಿಷಯಗಳಿಂದ ನುಣುಚಿಕೊಳ್ಳುವ ಬದಲು, ನಮ್ಮ ಪ್ರಶ್ನೆಗಳಿಗೆ ಉತ್ತರಿಸಬೇಕು ಮತ್ತು ಗೌರವಯುತವಾಗಿ ಚರ್ಚಿಸಬೇಕು ಎಂದು ಹೇಳಿದರು.

ಎಫ್‌ಐಆರ್ ಏಕೆ ದಾಖಲಿಸಿಲ್ಲ?: ಆರ್. ಅಶೋಕ್ ಪ್ರಶ್ನೆ

ಇದೇ ವೇಳೆ, ಮುಖ್ಯಮಂತ್ರಿಯವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸಲು ಪ್ರಯತ್ನಿಸಲಾಗಿದೆ ಎಂಬ ಆರೋಪದ ಕುರಿತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರಶ್ನೆ ಎತ್ತಿದ್ದಾರೆ. ಈ ಸಂಬಂಧ ದೂರು ದಾಖಲಿಸದಿರುವುದೇಕೆ ಮತ್ತು ಎಫ್‌ಐಆರ್ ಏಕೆ ದಾಖಲಿಸಿಲ್ಲ ಎಂದು ಕೇಳಿದ್ದಾರೆ.

ಇದು ಕೇವಲ ವೈಯಕ್ತಿಕ ವಿಚಾರವಲ್ಲ. ಸರ್ಕಾರದ ಗೌರವ ಮತ್ತು ಭದ್ರತೆಗೆ ಸಂಬಂಧಿಸಿದ ವಿಷಯವಾಗಿದೆ. ಮುಖ್ಯಮಂತ್ರಿ ತಕ್ಷಣವೇ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿ, ಎಫ್‌ಐಆರ್ ದಾಖಲಿಸುವಂತೆ ಅವರು ಒತ್ತಾಯಿಸಿದ್ದಾರೆ.

ಇದೇ ವೇಳೆ ಸ್ಟಿಂಗ್ ಆಪರೇಷನ್ ಆರೋಪದ ಕುರಿತು ಸಚಿವ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆಯನ್ನೂ ಉಲ್ಲೇಖಿಸಿದ ಅಶೋಕ್, “ಸಚಿವ ಸಂಪುಟದ ಸಚಿವರೇ ಈ ಬಗ್ಗೆ ಹೇಳಿಕೆ ನೀಡಿರುವಾಗ ಸರ್ಕಾರ ಸ್ಪಷ್ಟನೆ ನೀಡಬೇಕು. ಮುಖ್ಯಮಂತ್ರಿಗಳು ಹೇಳಿರುವುದು ನಿಜವಾಗಿದ್ದರೆ ಎಫ್‌ಐಆರ್ ದಾಖಲಿಸಬೇಕು. ಅದು ಸುಳ್ಳಾಗಿದ್ದರೆ, ಮುಖ್ಯಮಂತ್ರಿಗಳೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.