ಕನ್ನಡ ಕೇವಲ ಸಂವಹನ ಭಾಷೆಯಾಗದೇ ಜ್ಞಾನದ ಭಾಷೆಯಾಗಬೇಕು: ಪ್ರೊ. ಜಾಫೆಟ್
ಕನ್ನಡ ಕೇವಲ ಸಂವಹನದ ಭಾಷೆಯಾಗದೇ ಜ್ಞಾನದ ಭಾಷೆಯೂ ಆಗಬೇಕಿದೆ ಎಂದು ಬೆಂಗಳೂರು ಕೇಂದ್ರ ....

Published On :
ಬೆಂಗಳೂರು: ಕನ್ನಡ ಕೇವಲ ಸಂವಹನದ ಭಾಷೆಯಾಗದೇ ಜ್ಞಾನದ ಭಾಷೆಯೂ ಆಗಬೇಕಿದೆ ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಸ್.ಜಾಫೆಟ್ ಅವರು ಹೇಳಿದ್ದಾರೆ.
ಇಂದು ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಭೌತವಿಜ್ಣಾನ ವಿಭಾಗದ ಸಿ.ವಿ.ರಾಮನ್ ಸಭಾಂಗಣದಲ್ಲಿ ಸಮಾಜಮುಖಿ ಪ್ರಕಾಶನ ಏರ್ಪಡಿಸಿದ್ದ ಲೇಖಕರ ಕಮ್ಮಟವನ್ನು ಉದ್ಘಾಟಸಿ ಮಾತನಾಡಿದ ಅವರು, ಕನ್ನಡವನ್ನು ಜ್ಞಾನದ ಭಾಷೆಯಾಗಿಸುವ ನಿಟ್ಟಿನಲ್ಲಿ ಸಮಾಜಮುಖಿ ಪ್ರಕಾಶನ ಏರ್ಪಡಿಸಿರುವ ಲೇಖಕರ ಕಮ್ಮಟ ತುಂಬ ಉಪಯುಕ್ತ ಎಂದರು.
ಇದೇ ವೇಳೆ ವಿಶ್ವದ ಶ್ರೇಷ್ಟ ವಿಜ್ಞಾನಿ ಸರ್.ಸಿ.ವಿ.ರಾಮನ್ ಹೆಸರಿನ ಸಭಾಂಗಣದ ಮಹತ್ವ ಮತ್ತು ಭವ್ಯ ಇತಿಹಾಸವನ್ನು ಮೆಲಕು ಹಾಕಿದ ಪ್ರೊ.ಜಾಫೆಟ್, 'ಸೆಂಟ್ರಲ್ ಕಾಲೇಜು ಈ ಹಿಂದೆ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಪ್ರಗತಿಪರ ಚಳವಳಿಗಳಿಗೆ ವೇದಿಕೆಯಾಗಿತ್ತು. ಈಗ ಪುನಃ ಅಂತಹ ಚಟುವಟಿಕೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಲಾಗುದು ಎಂದರು.
ಇನ್ನು ಸಮಾಜಮುಖಿ ಮಾಸಪತ್ರಿಕೆಯ ನವೆಂಬರ್ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಕರ್ನಾಟಕ ಸಾಹಿತ್ಯ ಆಕಾಡೆಮಿಯ ಮಾಜಿ ಅಧ್ಯಕ್ಷೆ ಹಾಗೂ ಸಾಹಿತಿ ಮಾಲತಿ ಪಟ್ಟಣಶೆಟ್ಟಿ ಅವರು, 'ಸಮಾಜಮುಖಿ ಮಾಸಪತ್ರಿಕೆ ಲೇಖಕರ ಕಮ್ಮಟ ಏರ್ಪಡಿಸಿರುವುದು ಬಹಳ ವಿಶೇಷವಾಗಿದೆ' ಎಂದು ನುಡಿದರು.
ಬಹಳಷ್ಟು ಪತ್ರಿಕೆಗಳು ಸೀಮಿತ ಲೇಖಕರ ಕೋಟೆಯನ್ನು ಕಟ್ಟಿಕೊಂಡಿರುತ್ತವೆ. ಆದರೆ ಸಮಾಜಮುಖಿ ಹೊಸ ಹೊಸ ಲೇಖಕರನ್ನು ಹುಡುಕಿ ವೈವಿಧ್ಯಮಯ ವಿಷಯದ ಲೇಖನಗಳನ್ನು ಬರೆಸುವ ಜೊತೆಗೆ ಗುಣಮಟ್ಟವನ್ನು ಕಾಯ್ದುಕೊಂಡಿದೆ. ಮುದ್ರಣ ಗುಣಮಟ್ಟ ಕೂಡ ಉತ್ತಮವಾಗಿದೆ ಎಂದರು.
ಸಾಹಿತಿಗಳೂ ಆದ ಚನ್ನೈ ಆದಾಯ ತೆರಿಗೆ ಆಯುಕ್ತ ಜಯರಾಮ ರಾಯಪುರ, ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪೃಥ್ವಿದತ್ತ ಚಂದ್ರಶೋಭಿ ಹಾಗೂ ಸಮಾಜಮುಖಿ ಪತ್ರಿಕೆಯ ಸಂಪಾದಕ ಚಂದ್ರಕಾಂತ ವಡ್ಡು ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ನಡೆದ ಕಮ್ಮಟದ ಉಪನ್ಯಾಸಗಳಲ್ಲಿ ಜಯರಾಮ ರಾಯಪುರ ಅವರು ಸೃಜನೇತರ ಬರವಣಿಗೆ ಕುರಿತು ಉಪನ್ಯಾಸ ನೀಡಿದರು. ಪ್ರಜಾವಾಣಿ ಪತ್ರಿಕೆಯ ಮಾಜಿ ಸಂಪಾದಕ ಪದ್ಮರಾಜ ದಂಡಾವತಿ ಅಂಕಣ ಬರೆಯುವ ಕಷ್ಟ-ಸುಖ, ಟಿ.ಆರ್.ಅನಂತರಾಮು ವಿಜ್ಞಾನ ಲೇಖನಗಳು, ಪ್ರಜಾವಾಣಿ ಪತ್ರಿಕೆಯ ಹಿರಿಯ ಪತ್ರಕರ್ತ ಎನ್.ಎ.ಎಂ.ಇಸ್ಮಾಯಿಲ್ ಲೇಖನಗಳ ಶಿಸ್ತು, ಶೈಲಿ,ಚೌಕಟ್ಟು ಕುರಿತು ಹಾಗೂ ಬಸು ಬೇವಿನಗಿಡದ ಅವರು ಅನುವಾದ ಕಲೆ ಬಗ್ಗೆ ಉಪನ್ಯಾಸ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


