ಯೋಗಿ ಆದಿತ್ಯಾನಾಥ್ ಬೆಂಗಳೂರು ಭೇಟಿ ಬಗ್ಗೆ ಟ್ವೀಟ್ ಸಮರ!
ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಗರಕ್ಕೆ ಆಗಮಿಸುತ್ತಿದ್ದಂತೆಯೇ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಟ್ವೀಟ್...

Published On :
ಬೆಂಗಳೂರು: ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಗರಕ್ಕೆ ಆಗಮಿಸುತ್ತಿದ್ದಂತೆಯೇ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಟ್ವೀಟ್ ಸಮರ ಆರಂಭವಾಗಿತ್ತು.
ಯೋಗಿ ಆದಿತ್ಯನಾಥ್ ಅವರು ನಗರಕ್ಕೆ ಆಗಮಿಸುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ನಾಯಕರು ಯೋಗಿ ಆದಿತ್ಯನಾಥ್ ಇನ್ ಬೆಂಗಳೂರು ಎಂದು ಹ್ಯಾಷ್ ಟ್ಯಾಗ್ ಆರಂಭಿಸಿದ್ದರೆ, ಕಾಂಗ್ರೆಸ್ ನಾಯಕರು ಹೋಗಪ್ಪ ಯೋಗಿ ಎಂದು ಹ್ಯಾಷ್ ಟ್ಯಾಗ್ ಆರಂಭಿಸಿದ್ದರು.
ರಾಜ್ಯ ಸರ್ಕಾರವನ್ನು ಟೀಕೆ ಮಾಡಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವಿಟರ್ ಮೂಲಕವೇ ಟಾಂಗ್ ನೀಡಿದ್ದಾರೆ.
ನಮ್ಮ ರಾಜ್ಯಕ್ಕೆ ಆಗಮಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರಿಗೆ ಸ್ವಾಗತ. ನಮ್ಮಿಂದ ನೀವು ಕಲಿಯುವುದು ಸಾಕಷ್ಟಿದೆ. ನೀವು ನಮ್ಮ ರಾಜ್ಯದಲ್ಲಿದ್ದಾಗ ಇಂದಿರಾ ಕ್ಯಾಂಟೀನ್ ಹಾಗೂ ನ್ಯಾಯಬೆಲೆ ಅಂಗಡಿಗೆ ಬೇಟಿ ನೀಡಿ. ನಿಮ್ಮಲ್ಲಿ ಇತ್ತೀಚೆಗೆ ಅಪೌಷ್ಠಿಕತೆಯಿಂದ ಮೃತಪಟ್ಟ ಪ್ರಕರಣಗಳು ಹೆಚ್ಚಾಗುತ್ತಿದ್ದು, ತಡೆಯಲು ಇದು ನೆರವಾಗಬಹುದು ಎಂದು ಟಾಂಗ್ ನೀಡಿದ್ದಾರೆ.
ಬಳಿಕ ಮತ್ತೊಂಡು ಟ್ವೀಟ್ ನಲ್ಲಿ ಯೋಗಿ ಆದಿತ್ಯನಾಥ್ ಅವರಿಗೆ ರಾಜ್ಯಕ್ಕೆ ಸ್ವಾಗತ, ಯೋಗಿ ಆದಿತ್ಯನಾಥ್ ಅವರು ತ್ತರಪ್ರದೇಶದಲ್ಲಿರುವ ಜಂಗಲ್ ರಾಜ್ ಮೊದಲು ಸರಿ ಮಾಡಲಿ. ಆಸ್ಪತ್ರೆಯಲ್ಲಿ ಸಾಯುತ್ತಿರುವ ಮಕ್ಕಳನಮ್ನು ಉಳಿಸಲಿ ಬಳಿಕ ನಮಗೆ ಬುದ್ದಿವಾದ ಹೇಳಲಿ ಎಂದು ತಿರುಗೇಟು ನೀಡಿದ್ದಾರೆ.
ಧಾರ್ಮಿಕ ಎಂದರೆ ನಮ್ಮ ಧರ್ಮವನ್ನು ಪ್ರೀತಿಸುವುದು. ಕೋಮವಾದಿ ಎಂದರೆ ಬೇರೆ ಧರ್ಮವನ್ನು ದ್ವೇಷಿಸುವುದು. ನಾವು ಧಾರ್ಮಿಕರಾಗಬೇಕು. ಕೋಮುವಾದಿಗಳಾಗಬಾರದು. ಸಾವಿನ ರಾಜಕೀಯ ಮಾಡುವವರನ್ನು ಸಮಾಜವೆಲ್ಲಾ ಒಕ್ಕೊಲರಿನಿಂದ ಖಂಡಿಸಬೇಕೆಂದು ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ಟ್ವೀಟ್'ಗೆ ತಿರುಗೇಟು ನೀಡಿದ ಯೋಗಿ ಆದಿತ್ಯನಾಥ್ ಅವರು, ಸ್ವಾಗತಿಸಿದ್ದಕ್ಕೆ ಧನ್ಯವಾದ ಸಿದ್ದರಾಮಯ್ಯ ಜೀ. ರೈತರ ಆತ್ಮಹತ್ಯೆ ಕರ್ನಾಟಕದಲ್ಲಿ ನಿಮ್ಮ ಅವಧಿಯಲ್ಲಿಯೇ ಹೆಚ್ಚು ಎಂದು ಕೇಳಿದ್ದೇನೆ. ದಕ್ಷ ಅಧಿಕಾರಿಗಳ ಸಾವು ಹಾಗೂ ವರ್ಗಕ್ಕೆ ಲೆಕ್ಕವಿಲ್ಲ. ನಾನು ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ನಿಮ್ಮ ಮಿತ್ರ ಪಕ್ಷಗಳು ಹಾಳು ಮಾಡಿದ್ದ ವ್ಯವಸ್ಥೆಯನ್ನು ಪ್ರಾಮಾಣಿಕವಾಗಿ ಸರಿಪಡಿಸುತ್ತಿದ್ದೇನೆಂದು ಹೇಳಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಟ್ವಿಟರ್ ನಲ್ಲಿ ಹರಿಹಾಯ್ದಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು, ಯೋಗಿ ಬಂದಿದ್ದೇ ತಡ, ಹಿಂದೂ ದ್ವೇಷ ಕಾರುತ್ತಿದ್ದ ಸಿದ್ದರಾಮಯ್ಯ ಧಾರ್ಮಿಕತೆ ಬಗ್ಗೆ ಮಾತನಾಡುತ್ತಿದ್ದಾರೆ. ಇನ್ನೆರಡು ಬಾರಿ ಯೋಗಿ ಆದಿತ್ಯನಾಥ್ ಅವರು ರಾಜ್ಯಕ್ಕೆ ಬಂದರೆ, ಸಿದ್ದರಾಮಯ್ಯ 'ಜೈ ಶ್ರೀರಾಮ್' ಎಂದು ಘೋಷಣೆ ಕೂಗಿದರೂ ಅಚ್ಚರಿ ಇಲ್ಲ ಎಂದಿದ್ದಾರೆ.
ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ ಅವರು, ಕೆಜೆಪಿಯಲ್ಲಿದ್ದಾಗ ಜೈ ಟಿಪ್ಪು, ಬಿಜೆಪಿಗೆ ಮರಳಿದಾಗ ಜೈ ಶ್ರೀರಾಂ ಮುಂದೆ ಯಾರಿಗೆ ಜೈ? ಎಂದು ಟಾಂಗ್ ನೀಡಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಹಾಗೂ ರ್ನಾಟಕ ಪರಿಸ್ಥಿತಿ ಕುರಿತಂತೆ ಮಾತನಾಡಿದ ಯೋಗಿ ಆದಿತ್ಯನಾಥ್ ಅವರಿಗೆ ಟ್ವೀಟಿಗರು ಕಿಡಿಕಾರಿದ್ದು, ಹಲವರು ಉತ್ತರಪ್ರದೇಶ ಪರಿಸ್ಥಿತಿ ಹಾಗೂ ಕರ್ನಾಟಕದ ಪರಿಸ್ಥಿತಿಯನ್ನು ಹೋಲಿಕೆ ಮಾಡಿ ಟ್ವೀಟ್ ಮಾಡಿ, ಕರ್ನಾಟಕ್ಕೆ ಬುದ್ಧಿ ಹೇಳಲು ಬರಬೇಡಿ ಎಂದು ಝಾಡಿಸಿದ್ದಾರೆ.
ಶರತ್ ಎಂಬುವವರು ಟ್ವೀಟ್ ಮಾಡಿ, ನಿಮ್ಮ ವಿರುದ್ಧ ಎಲ್ಲಾ ಪ್ರಕರಣಗಳನ್ನು ಕೈಬಿಡುವ ಮೂಲಕ ನೀವು ನಿಮ್ಮ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಣಕ್ಕೆ ತಂದಿದ್ದೀರಿ. #ಹೋಗಪ್ಪ ಯೋಗಿ ಎಂದು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುCongressಕಾಂಗ್ರೆಸ್BengalurubjpಬಿಜೆಪಿTwitterSiddaramaiahಸಿದ್ದರಾಮಯ್ಯಟ್ವಿಟರ್Yogi Adityanathಯೋಗಿ ಆದಿತ್ಯನಾಥ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


