ಪತ್ನಿಗೆ ಪೊಲೀಸರಿಂದ ಕಿರುಕುಳ ಆರೋಪ; ಬೆಂಗಳೂರಿನಲ್ಲಿ ರೌಡಿ ಶೀಟರ್ ಕಾರ್ತಿಕ್ ಆತ್ಮಹತ್ಯೆ!
ಪೊಲೀಸರ ಕಿರುಕುಳ ತಾಳಲಾರದೇ ರೌಡಿ ಶೀಟರ್ ವೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ.

ಬೆಂಗಳೂರು: ಪೊಲೀಸರ ಕಿರುಕುಳ ತಾಳಲಾರದೇ ರೌಡಿ ಶೀಟರ್ ವೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ.
ಬೆಂಗಳೂರಿನ ಬಾಣಸವಾಡಿಯ ಬಾಗಲೂರು ಲೇಔಟ್‌ನ ಭಾರತಿ ನಗರದ ರೌಡಿ ಕಾರ್ತಿಕ್ (27) ನಿನ್ನೆ ಬಾಗಲೂರು ಲೇಔಟ್‌ನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿಯೇ ಕಾರ್ತಿಕ್ ವಿಷ ಸೇವಿಸಿದ್ದು, ಕುಟುಂಬಸ್ಥರು ಕೂಡಲೇ ಆತನನ್ನು ಇಂದಿರಾ ನಗರದ ಅಸ್ಮತ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೂ ಚಿಕಿತ್ಸೆ ಫಲಕಾರಿಯಾಗದೇ ಕಾರ್ತಿಕ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಭಾರತಿ ನಗರದಲ್ಲಿ ರೌಡಿ ಚಟುವಟಿಕೆಯಲ್ಲಿ ತೊಡಗಿದ್ದ ಕಾರ್ತಿಕ್ ವಿರುದ್ಧ ಕೊಲೆ ಯತ್ನ, ಸುಲಿಗೆ, ಹಲ್ಲೆ, ಮಹಿಳೆಗೆ ಕಿರುಕುಳ ಸೇರಿದಂತೆ 12ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿತ್ತು ಎಂದು ತಿಳಿದುಬಂದಿದೆ. ಹಲ್ಲೆ, ಸುಲಿಗೆ, ಕೊಲೆಯತ್ನ, ಮಹಿಳೆಯರ ಮೇಲೆ ಕಿರುಕುಳ ಸೇರಿದಂತೆ ಭಾರತಿ ನಗರದಲ್ಲಿ 9ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ, ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ 1, ಕೆಜಿ ಹಳ್ಳಿಯಲ್ಲಿ 2 ಸೇರಿದಂತೆ 12 ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳ ಸಂಬಂಧ ಕಾರ್ತಿಕ್ ಪೊಲೀಸ್ ವಿಚಾರಣೆ ಎದುರಿಸುತ್ತಿದ್ದನಾದರೂ, ಜೀವನೋಪಾಯಕ್ಕಾಗಿ ಪೇಟಿಂಗ್ ಕೆಲಸ ಮಾಡಿಕೊಂಡಿದ್ದನಂತೆ.
ಕಾರ್ತಿಕ್‌ನ ಅಪರಾಧ ಪ್ರಕರಣಗಳ ಹಿನ್ನೆಲೆಯಲ್ಲಿ ಆತನನ್ನು ಭಾರತಿನಗರ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಭಾರತಿನಗರದ 3 ಹಾಗೂ ಕೆಜಿಹಳ್ಳಿಯ 2 ಪ್ರಕರಣಗಳಲ್ಲಿ ವಾರೆಂಟ್ ಎದುರಿಸುತ್ತಿದ್ದ ಕಾರ್ತಿಕ್, ಜೈಲಿಗೆ ಹೋಗಿ 6 ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ. ಇತ್ತೀಚೆಗೆ ವಾರೆಂಟ್ ನೀಡಿದ್ದರೂ ವಿಚಾರಣೆಗೆ ಠಾಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಆತನ ಪತ್ನಿ ಹಾಗೂ ಸಹೋದರಿಯನ್ನು ಭಾರತಿನಗರ ಪೊಲೀಸರು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿ ಮಾಹಿತಿ ಪಡೆದಿದ್ದರು.
ಇದನ್ನು ತಿಳಿದ ಕಾರ್ತಿಕ್ ಪೊಲೀಸರು ನನಗೆ ಕಿರುಕುಳ ನೀಡುತ್ತಿದ್ದು, ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸ್ನೇಹಿತರ ಬಳಿ ಹೇಳಿಕೊಂಡು ನಿನ್ನೆ ವಿಷ ಸೇವಿಸಿದ್ದಾನೆ ಎಂದು ಹೇಳಲಾಗಿದೆ. ಅಸ್ವಸ್ಥಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಕಾರ್ತಿಕ್ ಮೊದಲು ಭಾರತಿನಗರದಲ್ಲಿ ವಾಸಿಸುತ್ತಿದ್ದ. ಆಗಾಗ ಮನೆ ಬದಲಿಸುತ್ತಿದ್ದ ಆತ 2 ತಿಂಗಳಿನಿಂದ ಬಾಗಲೂರು ಲೇಔಟ್‌ನಲ್ಲಿ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿರುವ ಇಂದಿರಾನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


