ವಿಚಾರಣೆಗೆ ಹಾಜರಾಗಿ: ಡಿಕೆ ಶಿವಕುಮಾರ್ ಗೆ ಆದಾಯ ತೆರಿಗೆ ಇಲಾಖೆ ಸಮನ್ಸ್ ಜಾರಿ
ಇತ್ತೀಚೆಗೆ ಇಡೀ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಕರ್ನಾಟಕ ಸಚಿವ ಡಿಕೆ ಶಿವಕುಮಾರ್ ಅವರ ವಿರುದ್ಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಬೆನ್ನಲ್ಲೇ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಡಿಕೆ ಶಿವಕುಮಾರ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ.

ಬೆಂಗಳೂರು: ಇತ್ತೀಚೆಗೆ ಇಡೀ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಕರ್ನಾಟಕ ಸಚಿವ ಡಿಕೆ ಶಿವಕುಮಾರ್ ಅವರ ವಿರುದ್ಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಬೆನ್ನಲ್ಲೇ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಡಿಕೆ ಶಿವಕುಮಾರ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ.
ದಾಳಿಯ ವೇಳೆ 300 ಕೋಟಿ ರು.ಗೂ ಅಧಿಕ ಅಘೋಷಿತ ಆಸ್ತಿ-ಪಾಸ್ತಿಯ ದಾಖಲೆ ಪತ್ರಗಳು ಪತ್ತೆಯಾಗಿದೆ ಎಂಬ ಮಾಧ್ಯಮಗಳ ವರದಿ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಅವರ ಕುಟುಂಬಕ್ಕೆ ಸಮನ್ಸ್ ಜಾರಿಗೊಳಿಸಿದ್ದಾರೆ. ಶಿವಕುಮಾರ್ ಅವರ ಮಾವ ತಿಮ್ಮಯ್ಯ, ಸೋದರಿ ಪದ್ಮ, ಗುರೂಜಿ ದ್ವಾರಕನಾಥ್, ಉದ್ಯಮಿ ಸಚಿನ್ ನಾರಾಯಣ್ ಮತ್ತವರ ಕುಟುಂಬದವರಿಗೆ ಸಮನ್ಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸಮನ್ಸ್ ಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್ ಅವರು, ವೈಯುಕ್ತಿಕ ಕಾರಣಗಳಿಂದಾಗಿ ವಿಚಾರಣೆಗೆ ಹಾಜರಾಗಲು 2 ದಿನಗಳ ಕಾಲಾವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಡಿಕೆಶಿ ಮನವಿಗೆ ಆದಾಯ ಇಲಾಖೆ ಅಧಿಕಾರಿಗಳು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಶಿವಕುಮಾರ್ ಅವರ ಜೊತೆಗೆ ಅವರ ಗುರುಗಳಾದ ಜ್ಯೋತಿಷಿ ದ್ವಾರಕಾನಾಥ್ ಅವರಿಗೂ ಅಘೋಷಿತ ಆಸ್ತಿಯ ವಿಚಾರಣೆಗಾಗಿ ಐಟಿ ಅಧಿಕಾರಿಗಳು ಸಮನ್ಸ್‌ಗೊಳಿಸಿದ್ದು, ನಾಳೆಯೇ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ದ್ವಾರಕನಾಥ್ ನಾಳೆ ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿ ತಮ್ಮ ಬಳಿ ಇರುವ ಆಸ್ತಿ ಪಾಸ್ತಿ ಕುರಿತು ಮಾಹಿತಿ ನೀಡುವುದು ಅನಿವಾರ್ಯವಾಗಿದೆ ಎಂದು ಹೇಳಲಾಗಿದೆ.
ಡಿಕೆಶಿ ನಿವಾಸಕ್ಕೆ ಕೈ ನಾಯಕರ ದಂಡು
ಏತನ್ಮಧ್ಯೆ ಐಟಿ ದಾಳಿ ಮತ್ತು ಇಂದು ಸಮನ್ಸ್ ಜಾರಿಯಾದ ಬೆನ್ನಲ್ಲೇ ಸಚಿವ ಡಿಕೆ ಶಿವಕುಮಾರ್ ನಿವಾಸಕ್ಕೆ ಕಾಂಗ್ರೆಸ್ ಪಕ್ಷದ ಹಲವು ನಾಯಕರು ದೌಡಾಯಿಸಿದ ಪ್ರಸಂಗ ನಡೆಯಿತು. ಸದಾಶಿವ ನಗರದ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್‌ಕರ್, ಸಚಿವ ಎಂ.ಬಿ.ಪಾಟೀಲ್, ಮೇಯರ್ ಪದ್ಮಾವತಿ ಸೇರಿದಂತೆ ಹಲವು ಸಚಿವರು ಭೇಟಿ ನೀಡಿ ಮಾತುಕತೆ ನಡೆಸಿದರು.
ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್ ಅವರು, ಐಟಿ ಇಲಾಖೆಯಿಂದ ಸಮನ್ಸ್ ಬಂದಿದೆ. ಆದರೆ ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೇಳಿದ್ದೇನೆ. ಕಾನೂನಿನ ಮುಂದೆ ಎಲ್ಲರೂ ಒಂದೇ..ನಾನು ಕೂಡ ವಿಚಾರಣೆಗೆ ಹಾಜರಾಗುತ್ತೇನೆ. ಅಂತೆಯೇ ಹೈಕಮಾಂಡ್ ದೆಹಲಿಗೆ ಬರುವಂತೆ ಕರೆದಿಲ್ಲ. ಕರೆದರೆ ಮಾತ್ರ ದೆಹಲಿಗೆ ತೆರಳುತ್ತೇನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


