ರಾಜ್ಯ

ಅಂತೂ ಸಿದ್ಧವಾಯ್ತು ಬೆಳ್ಳಂದೂರು ಕೆರೆ ಶುಚಿತ್ವ ಯೋಜನಾ ಪಟ್ಟಿ!

ಹಸಿರು ನ್ಯಾಯಾಧಿಕರಣದ ಛಾಟಿ ಬೆನ್ನಲ್ಲೇ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ನಗರದ ಬೆಳ್ಳಂದೂರು ಕೆರೆ ಶುಚಿತ್ವ ಕಾರ್ಯಕ್ಕೆ ಅಂತೂ ಯೋಜನಾ ಪಟ್ಟಿ ಸಿದ್ಧವಾಗಿದೆ.

ಅಂತೂ ಸಿದ್ಧವಾಯ್ತು ಬೆಳ್ಳಂದೂರು ಕೆರೆ ಶುಚಿತ್ವ ಯೋಜನಾ ಪಟ್ಟಿ!
ಸಂಗ್ರಹ ಚಿತ್ರ
Published On :

ಬೆಂಗಳೂರು: ಹಸಿರು ನ್ಯಾಯಾಧಿಕರಣದ ಛಾಟಿ ಬೆನ್ನಲ್ಲೇ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ನಗರದ ಬೆಳ್ಳಂದೂರು ಕೆರೆ ಶುಚಿತ್ವ ಕಾರ್ಯಕ್ಕೆ ಅಂತೂ ಯೋಜನಾ ಪಟ್ಟಿ ಸಿದ್ಧವಾಗಿದೆ.

ತಿಂಗಳುಗಳೊಳಗೆ ಬೆಳ್ಳಂದೂರು ಕೆರೆಯನ್ನು ಶುಚಿಗೊಳಿಸಿ ಎಂಬ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಎಚ್ಚರಿಕೆ ಬೆನ್ನಲ್ಲೇ ಇದೀಗ ಕಣ್ಣು ಬಿಟ್ಟಿರುವ ಸಾರ್ವಜನವಿಕ ಸಂಸ್ಥೆಗಳು ಕೆರೆ ಶುಚಿತ್ವ ಸಂಬಂಧ ಯೋಜನೆ ರೂಪಿಸಿವೆ.  ಅದರಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಕೆರೆಯಲ್ಲಿನ ಕಲ್ಮಶ ಮತ್ತು ಗಿಡಗಂಟೆಗಳನ್ನು ತೆರವುಗೊಳಿಸುವ ಕಾರ್ಯ ನೀಡಲಾಗಿದ್ದು, ಬಿಬಿಎಂಪಿಗೆ ಕೆರೆ ಸುತ್ತಮುತ್ತ ಸಿಸಿಟಿವಿ ಅಳವಡಿಸುವ ಜವಾಬ್ದಾರಿ ಹೊರಿಸಲಾಗಿದೆ.  ಅಂಚೆಯೇ ಬೆಂಗಳೂರು ಮಾಲಿನ್ಯ ನಿಯಂತ್ರಣ ಮಂಡಳಿಗೆ ಕೈಗಾರಿಕೆಗಳ ಮೇಲೆ ನಿಗಾ ಇಟ್ಟು ಕೈಗಾರಿಕೆಗಳಿಂದ ಕಲ್ಮಶ ನೀರು ಕೆರೆಗೆ ಹರಿಯದಂತೆ ನಿಗಾ ವಹಿಸುವಂತೆ ಜವಾಬ್ದಾರಿ ನೀಡಲಾಗಿದೆ.

900 ಎಕರೆ ವಿಸ್ತೀರ್ಣದ ಕೆರೆ ಪುನರುಜ್ಜೀವನಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಬುಧವಾರ ತಾಕೀತು ಮಾಡಿತ್ತು. ಈ ಹಿನ್ನಲೆಯಲ್ಲಿ ನಿನ್ನೆ ರಾಜ್ಯ ಸರ್ಕಾರದ ಮುಖ್ಯ  ಕಾರ್ಯದರ್ಶಿ ಸುಭಾಷ್‌ ಚಂದ್ರ ಖುಂಟಿಅ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದ್ದು, ಸಭೆಯಲ್ಲಿ  ಬೆಳ್ಳಂದೂರು ಕೆರೆಯ ಸುತ್ತ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಕೂಡಲೇ ಅಳವಡಿಸಬೇಕು ಎಂಬ ನಿರ್ಧಾರ ಕೈಗೊಳ್ಳಲಾಗಿದೆ.

ಎರಡು ವಾರಗಳಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಬಿಬಿಎಂಪಿ, ಜಲಮಂಡಳಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸುಭಾಷ್‌  ಚಂದ್ರ ಖುಂಟಿಅ ನಿರ್ದೇಶನ ನೀಡಿದರು."ಆರಂಭಿಕ ಹಂತದಲ್ಲಿ ಏಳು ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಅಗತ್ಯಕ್ಕೆ ತಕ್ಕಂತೆ ಅವುಗಳ ಸಂಖ್ಯೆ ಹೆಚ್ಚಿಸಲಾಗುತ್ತದೆ. ಯಮಲೂರು ಕೆರೆಯ ಪಕ್ಕದಲ್ಲಿ ಒಂದು ಹಾಗೂ  ಮೈದಾನದ ಸಮೀಪದ ಬಯಲಿನಲ್ಲಿ ಎರಡು ಕ್ಯಾಮೆರಾಗಳನ್ನು ಹಾಕಲಾಗಿದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಅಂತೆಯೇ ಕೆರೆಯಂಗಳದಲ್ಲಿ ಸುರಿದಿರುವ ತ್ಯಾಜ್ಯವನ್ನು ತೆರವು ಮಾಡಬೇಕು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಚಟುವಟಿಕೆಗೆ ಆಸ್ಪದ ನೀಡಬಾರದು. ಕೆರೆಯ ಸುತ್ತ ಬೇಲಿ ನಿರ್ಮಾಣಕ್ಕೆ ಇನ್ನಷ್ಟು ವೇಗ ನೀಡಬೇಕು ಹಾಗೂ  ಕಳೆಯನ್ನು ತ್ವರಿತವಾಗಿ ತೆರವು ಮಾಡಬೇಕು ಎಂದು ಬಿಡಿಎ ಅಧಿಕಾರಿಗಳಿಗೆ ಖುಂಟಿಅ ನಿರ್ದೇಶನ ನೀಡಿದರು.

ಕೆರೆಗೆ ಕಸ ಹಾಕಿದರೆ ರು.5  ಲಕ್ಷ ದಂಡ!
ಇನ್ನು ಕೆರೆ ಸಂರಕ್ಷಣೆ ಕುರಿತಂತೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದ ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಪಿ.ಎನ್‌. ನಾಯಕ್‌ ಅವರು, "ಕ್ಯಾಮೆರಾಗಳನ್ನು ಅಳವಡಿಸಿರುವ ಬಗ್ಗೆ ಮಾಹಿತಿ ಫಲಕಗಳನ್ನು  ಅಲ್ಲಲ್ಲಿ ಹಾಕಲಾಗುತ್ತದೆ. ಕೆರೆಗೆ ಕಸ ಹಾಕಿದರೆ ರು.5  ಲಕ್ಷ ದಂಡ ವಿಧಿಸಲಾಗುತ್ತದೆ ಎಂಬ ಎಚ್ಚರಿಕೆಯೂ ಫಲಕದಲ್ಲಿ ಇರಲಿದೆ" ಎಂದು ಮಾಹಿತಿ ನೀಡಿದರು. "ಕೆರೆಯ ಸುತ್ತ ಅಪಾಯಕ್ಕೆ ಸಿಲುಕಿರುವ ಪ್ರದೇಶಗಳನ್ನು ಗುರುತಿಸಿ  ಅವುಗಳ ಸಂರಕ್ಷಣೆ ಮಾಡಬೇಕು ಎಂದೂ ಅವರು ಹೇಳಿದರು.

30 ಅಧಿಕಾರಿಗಳ ತಂಡ ರಚನೆ
"ಎನ್‌ಜಿಟಿ ಆದೇಶ ಪಾಲನೆಗಾಗಿ 30 ಅಧಿಕಾರಿಗಳನ್ನೊಳಗೊಂಡ ತಂಡವನ್ನು ಸಜ್ಜುಗೊಳಿಸಿದ್ದೇವೆ. ನಾವು ಈಗಾಗಲೇ ಗುರುತಿಸಿರುವ ಕಾರ್ಖಾನೆಗಳನ್ನು ಮುಚ್ಚಿಸಲು ಆದೇಶದ ಪ್ರತಿ ಕೈಗೆ ಸೇರಿದ ತಕ್ಷಣವೇ  ಕ್ರಮ  ಕೈಗೊಳ್ಳುತ್ತೇವೆ’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್‌ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.