ನಿಮಗಿದು ತಿಳಿದಿರಲಿ: ಮನೆವಸ್ತು ಬಳಕೆಯ ಔಷಧೀಯ ಗುಣ
ಅಂಗೈಯಲ್ಲಿ ಮನೆ-ಮದ್ದು ಇದ್ದರೆ ಮುಂಗೈನಲ್ಲಿ ಆರೋಗ್ಯ ಇರುತ್ತದೆ. ನಮ್ಮ ಹಿರಿಯರು ಹಿಂದಿನಿಂದಲೂ ಹೇಳಿಕೊಂಡು ಬಂದಿರುವುದು ಇದನ್ನೇ. ಮನೆವಸ್ತುಗಳನ್ನು ಗೃಹಿಣಿ ಕಾಲಕ್ಕೆ ತಕ್ಕಂತೆ, ಮನೆಯವರ ಆರೋಗ್ಯ...

ಅಂಗೈಯಲ್ಲಿ ಮನೆ-ಮದ್ದು ಇದ್ದರೆ ಮುಂಗೈನಲ್ಲಿ ಆರೋಗ್ಯ ಇರುತ್ತದೆ. ನಮ್ಮ ಹಿರಿಯರು ಹಿಂದಿನಿಂದಲೂ ಹೇಳಿಕೊಂಡು ಬಂದಿರುವುದು ಇದನ್ನೇ. ಮನೆವಸ್ತುಗಳನ್ನು ಗೃಹಿಣಿ ಕಾಲಕ್ಕೆ ತಕ್ಕಂತೆ, ಮನೆಯವರ ಆರೋಗ್ಯ ಸ್ಥಿತಿಗತಿಗೆ ತಕ್ಕಂತೆ ಬಳಸಿದರೆ ಅಲ್ಲಿ ಅನಾರೋಗ್ಯಕ್ಕೆ ದಾರಿಯಾಗುವುದಿಲ್ಲ. ಮನೆಯವರ ಆರೋಗ್ಯ ಗೃಹಿಣಿಯ ಕೈಯಲ್ಲಿರುತ್ತದೆ ಎಂದು ಹೇಳುವುದು ಇದಕ್ಕೆ.
ಖಾಯಿಲೆ ಹಾಗೂ ದೈಹಿಕ ತೊಂದರೆಗಳ ನಿವಾರಣೆಗೆ ಆಸ್ಪತ್ರೆ ವೈದ್ಯರೆಂದು ಪ್ರತಿನಿತ್ಯ ಓಡಾಡುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಹೋಗಿದೆ. ಆದರೆ ಎಷ್ಟೋ ಮಂದಿಗೆ ಮನೆಯ ಆಹಾರ ಪದ್ಧತಿ ಹಾಗೂ ಅಡುಗೆಗೆ ಬಳಸುವ ವಸ್ತುಗಳಲ್ಲೇ ಔಷಧೀಯ ಗುಣಗಳು ಇವೆ ಎಂಬುದು ತಿಳಿದಿದ್ದರೂ, ಆ ವಸ್ತುಗಳಲ್ಲಿ ಯಾವ ರೀತಿಯ ಗುಣಗಳಿವೆ ಆ ವಸ್ತು ಯಾವ ಖಾಯಿಲೆಗಳನ್ನು ಗುಣಪಡಿಸಬಲ್ಲದು ಎಂಬುದು ತಿಳಿದಿರುವುದಿಲ್ಲ.
ಅಂತಹವರಿಗಾಗಿ ಮನೆಯಲ್ಲಿ ಅಡುಗೆಗೆ ಬಳಸುವ ವಸ್ತುಗಳ ಔಷಧೀಯ ಗುಣ ಹಾಗೂ ಲಕ್ಷಣದ ಕುರಿತಂತೆ ಇಲ್ಲಿದೆ ಮಾಹಿತಿ...
ಏಲಕ್ಕಿ

ಏಲಕ್ಕಿ ಪರಿಮಳಯುಕ್ತ ಪದಾರ್ಥ. ಹೆಚ್ಚಾಗಿ ಸಾಂಬಾರ ಪದಾರ್ಥವಾಗಿ ಉಪಯೋಗವಾಗುವ ಇದು ಹೊಂದಿರುವ ಔಷಧೀಯ ಉಪಯೋಗಗಳು ಅಸಂಖ್ಯ. ಇತ್ತೀಚೆಗೆ ಕ್ಯಾನ್ಸರ್ ನಿರೋಧಕ ಶಕ್ತಿ ಏಲಕ್ಕಿಗಿದೆ ಎಂಬುದು ಬೆಳಕಿಗೆ ಬರುತ್ತಲೇ ವೈದ್ಯಕೀಯ ಸಂಶೋಧನಾ ರಂಗಗಳಲ್ಲಿ ಇದರ ಬೇಡಿಕೆ ಹೆಚ್ಚಾಗಿದೆ. ಏಲಕ್ಕಿ ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುವುದಕ್ಕೆ ಸಹಕಾರಿಯಾಗಿದೆ. ಪ್ರತೀ ನಿತ್ಯ ಏಲಕ್ಕಿಯನ್ನು ಅಗಿಯುವುದರಿಂದ ಹಾಗೂ ಅಡುಗೆಯಲ್ಲಿ ಬಳಸುವುದರಿಂದ ಶ್ವಾಸಕೋಶ ಸಂಬಂಧಿತ ತೊಂದರೆ ನಿವಾರಣೆಯಾಗುತ್ತದೆ.
ಚಕ್ಕೆ

ಚಕ್ಕೆಯನ್ನು ಪ್ರತೀನಿತ್ಯ ಅಡುಗೆಯಲ್ಲಿ ಬಳಸಿದರೆ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
ಲವಂಗ

ಅಡುಗೆ ಮಾಡುವಾಗ ಲವಂಗವನ್ನು ಬಳಸುವುದರಿಂದ ಬಾಯಿ ಮತ್ತು ಗಂಟಲಿನ ಆರೋಗ್ಯ ಉತ್ತಮವಾಗಿರುತ್ತದೆ. ಅಲ್ಲದೆ, ಬೊಜ್ಜನ್ನು ನಿಯಂತ್ರಣದಲ್ಲಿಡುತ್ತದೆ. ಹೊಟ್ಟೆಗೆ ಸಂಬಂಧಿಸಿದ ಖಾಯಿಲೆಗಳಿಗೆ ಇದು ಉತ್ತಮ ಪದಾರ್ಥವಾಗಿದೆ.
ಶುಂಠಿ

ಕಾಫಿ ಅಥವಾ ಟೀ ಮಾಡುವಾಗ ಸ್ವಲ್ಪ ಶುಂಠಿ ಹಾಕಿ ಕುಡಿದರೆ ಅಥವಾ ಶುಂಠಿ ರಸಕ್ಕೆ ಸ್ವಲ್ಪ ಕಾಳುಮೆಣಸಿನ ಪುಡಿ ಮತ್ತು ಜೇನುತುಪ್ಪ ಸೇರಿಸಿ ಕುಡಿದರೆ ಕೆಮ್ಮು ನಿವಾರಣೆಯಾಗುತ್ತದೆ.
ಮೆಣಸು

ಮೆಣಸು ಅಜೀರ್ಣ, ಮೊಡವೆ, ಜಂತುಹುಳ ಎಂಬ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಮೆಣಸನ್ನು ಚೆನ್ನಾಗಿ ಪುಡಿ ಮಾಡಿ ಶುಂಠಿಯ ರಸದೊಡನೆ ಸೇವಿಸುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ. ಮಕ್ಕಳಿಗೆ ಹೊಟ್ಟೆಯಲ್ಲಿ ಜಂತುಹುಳಗಳ ಉಪಟಳ ಜಾಸ್ತಿಯಾಗಿರುತ್ತದೆ. ಇಂತಹ ಸಮಯದಲ್ಲಿ ಬೆಳಗ್ಗೆ ಮತ್ತು ರಾತ್ರಿ ಮಕ್ಕಳ ವಯಸ್ಸಿಗೆ ತಕ್ಕಂತೆ ಸ್ವಲ್ಪ ಪ್ರಮಾಣದಲ್ಲಿ ಮೆಣಸಿನ ಕಷಾಯವನ್ನು ಕುಡಿಸುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ.
ಅರಿಶಿನ

ಅರಿಶಿನದಲ್ಲಿ ರೋಗನಿರೋಧಕ ಶಕ್ತಿಯಿದ್ದು, ಪ್ರತೀನಿತ್ಯದ ಅಡುಗೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅರಿಶಿನವನ್ನು ಬಳಸುತ್ತಿರುವುದರಿಂದ ಅನಾರೋಗ್ಯ ಉಂಟಾಗುವುದಿಲ್ಲ. ಅರಿಶಿನದಲ್ಲಿ ಕ್ಯಾನ್ಸರ್ ಜೀವಕೋಶಗಳನ್ನು ಕೊಲ್ಲುವ ಶಕ್ತಿಯಿದೆ. ಇದಲ್ಲದೆ, ಅರಿಶಿನವು ಸಂಧಿನೋವು ಹಾಗೂ ಬುದ್ಧಿ ಮಾಂದ್ಯತೆ ದೂರ ಮಾಡುವ ಚಿಕಿತ್ಸೆಯಲ್ಲೂ ಹೆಚ್ಚಿನ ಪ್ರಯೋಜನಕಾರಿಯಾಗಿದೆ.
ಸಾಸಿವೆ

ಹಲ್ಲುನೋವು ಸಮಸ್ಯೆಗೆ ಉತ್ತಮ ಪದಾರ್ಥವಾಗಿದೆ. ಉಪ್ಪಿನಕಾಯಿಯಲ್ಲಿ ಸಾಸಿವೆಯನ್ನು ಸ್ವಲ್ಪ ಹೆಚ್ಚು ಬಳಸಿದರೆ, ಉಪ್ಪಿನಕಾಯಿ ಬೇಗ ಕೆಡುವುದಿಲ್ಲ. ಪ್ರತೀ ನಿತ್ಯ ಸಾಸಿವೆಯನ್ನು ಅಡುಗೆಯಲ್ಲಿ ಬಳಕೆ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಹಲ್ಲು ನೋವಿರುವವರು ಸ್ವಲ್ಪ ಸಾಸಿವೆ ಕಾಳನ್ನು ಅಗಿದು ಸ್ವಲ್ಪ ಹೊತ್ತಿನ ನಂತರ ಉಗಿಯಬೇಕು ಇದರಿಂದ ಹಲ್ಲುನೋವು ನಿವಾರಣೆಯಾಗುತ್ತದೆ.
ನಿಂಬೆಹಣ್ಣು

ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಇದ್ದು, ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಅಡುಗೆಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ನಿಂಬೆ ರಸವನ್ನು ಬಳಸುವುದು ಅತೀ ಉತ್ತಮ.
ಕರಿಬೇವಿನ ಎಲೆ

ಕರಿಬೇವಿನ ಎಲೆಯನ್ನು ದಿನನಿತ್ಯ ಬಳಸುತ್ತಿರುವತ್ತೇವೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. 3 ತಿಂಗಳವರೆಗೆ 8-10 ಕರಿಬೇವಿನ ಎಲೆಗಳನ್ನು ಪ್ರತಿದಿನ ಬೆಳ್ಳೆಗ್ಗೆ ತಿಂದರೆ ಮಧುಮೇಹವನ್ನು ತಡೆಗಟ್ಟಬಹುದು. ಅಲ್ಲದೆ, ಇದೂ ತೂಕ ಇಳಿಸುವಲ್ಲಿ ತುಂಬಾ ಸಹಕಾರಿಯಾಗಿರುತ್ತದೆ.
ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪಿನಲ್ಲಿ ಅನೇಕ ಔಷಧೀಯ ಗುಣಗಳಿದ್ದು, ಪ್ರತೀನಿತ್ಯ ಆಹಾರದಲ್ಲಿ ಇದನ್ನು ಬಳಸುವುದರಿಂದ ತಲೆನೋವು, ಬಾಯಿಯ ದುರ್ಗಂಧ ದೂರಾಗುತ್ತದೆ. ಬರೀ ಕೊತ್ತಂಬರಿಸೊಪ್ಪನ್ನು ಬಾಯಿಯಲ್ಲಿ ಜಗಿಯುವುದರಿಂದ ಬಾಯಿಯಲ್ಲಿ ದುರ್ಗಂಧ ಬರುವುದಿಲ್ಲ. ಇದರಿಂದ ದಂತ ಕ್ಷಯವೂ ನಿವಾರಣೆಯಾಗುತ್ತದೆ.
ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಮಧುಮೇಹ ಹಾಗೂ ಬೊಜ್ಜನ್ನು ನಿಯಂತ್ರಿಸುವ ಶಕ್ತಿಯಿದ್ದು, ಪ್ರತೀ ನಿತ್ಯ ಅಡುಗೆಯಲ್ಲಿ ಬೆಳ್ಳುಳ್ಳಿಯನ್ನು ಬಳಕೆ ಮಾಡುವುದರಿಂದ ಡಯಾಬಿಟಿಸ್ ಖಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
ಈರುಳ್ಳಿ

ಈರುಳ್ಳಿ ರಕ್ತಹೀನತೆ, ಗಾಯದ ನೋವು, ರಕ್ತಸ್ರಾವದಂತಹ ಸಮಸ್ಯೆಗಳಿಗೆ ಉತ್ತಮ ಪದಾರ್ಥವಾಗಿದೆ. ಊಟದ ಜತೆಗೆ ಪ್ರತಿ ನಿತ್ಯ ಹಸಿ ಈರುಳ್ಳಿಯನ್ನು ಸೇವಿಸುವುದರಿಂದ ರಕ್ತಹೀನತೆ ವಾಸಿಯಾಗುತ್ತದೆ. ಬಿದ್ದು ಗಾಯವಾಗಿರುವ ಜಾಗಕ್ಕೆ ಈರುಳ್ಳಿಯನ್ನು ಜಜ್ಜಿ ಕಟ್ಟುವುದರಿಂದ ನೋವು ಕಡಿಮೆಯಾಗುತ್ತದೆ.
ಕಡಲೆಬೇಳೆ

ತೂಕ ಹೆಚ್ಚಳ, ಬಿಕ್ಕಳಿಕೆಗೆ ಕಡಲೆಬೇಳೆ ಉತ್ತಮ ಔಷಧವಾಗಿದ್ದು, ಕಡಲೇಬೇಳೆಯನ್ನು ಚೆನ್ನಾಗಿ ಬೇಯಿಸಿ ಬೆಲ್ಲದೊಡನೆ ರುಬ್ಬಿ ತಯಾರಿಸಿದ ಹೂರಣವನ್ನು ಮಿತ ಪ್ರಮಾಣದಲ್ಲಿ ಹಲವು ದಿನಗಳವರೆಗೂ ತಿಂದರೆ ಶರೀರದ ತೂಕ ಹೆಚ್ಚಾಗುತ್ತದೆ. ಹುರಿದ ಕಡಲೆಯ ಹಿಟ್ಟನ್ನು ಕೆಂಡದ ಮೇಲೆ ಹಾಕಿ ಬಂದ ಹೊಗೆಯನ್ನು ಕುಡಿಯುವದರಿಂದ ಬಿಕ್ಕಳಿಕೆ ನಿಲ್ಲುತ್ತದೆ.
ಗೋಧಿ

ಗೋಧಿ ಹೊಟ್ಟೆ ಹುಣ್ಣು ಹಾಗೂ ಕೀಲು ನೋವುಗಳಿಗೆ ಉತ್ತಮ ಪದಾರ್ಥವಾಗಿದ್ದು, ಪ್ರತೀ ನಿತ್ಯ ಗೋಧಿ ಹಿಟ್ಟಿನಲ್ಲಿ ಚಪಾತಿ ಮಾಡಿ ತಿನ್ನುವುದರಿಂದ ಹೊಟ್ಟೆಯ ಸಮಸ್ಯೆ ನಿವಾರಣೆಯಾಗುತ್ತದೆ. ಗೋಧಿಹಿಟ್ಟಿನ ತಂಬಿಟ್ಟು ಮಾಡಿಕೊಂಡು ತಿನ್ನುವುದರಿಂದ ಕೀಲು ಮತ್ತು ಎಲುಬು ನೋವು ನಿವಾರಣೆಯಾಗುತ್ತದೆ.
-ಮಂಜುಳ.ವಿ.ಎನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


