Cricket: ಪಾಕ್ ಕ್ರಿಕೆಟ್‌ನಲ್ಲಿ ಬಿರುಗಾಳಿ; 7 ಆಟಗಾರರ ಹೊರದಬ್ಬಿದ PCB; Imam-ul-Haqಗೆ ತನಿಖೆಯ ಸಂಕಷ್ಟ!
ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಪ್ರವಾಸದ ಮಧ್ಯದಲ್ಲೇ ಏಳು ಆಟಗಾರರನ್ನು ಬದಲಿಸುವುದರ ಜೊತೆಗೆ, ಮುಖ್ಯ ಕೋಚ್ ಮತ್ತು ಬೌಲಿಂಗ್ ಕೋಚ್‌ಗಳನ್ನೂ ಬದಲಿಸುವ ಕಠಿಣ ನಿರ್ಧಾರ ಕೈಗೊಂಡಿತ್ತು.

ಲಂಡನ್: ಬಹುಶಃ ವಿವಾದಗಳೇ ಇಲ್ಲದೇ ಪಾಕಿಸ್ತಾನ ಕ್ರಿಕೆಟ್ ತಂಡ ಟೂರ್ನಿ ಮುಕ್ತಾಯಗೊಳಿಸಿದ ಇತಿಹಾಸವೇ ಇಲ್ಲವೇನೋ.. ಇದಕ್ಕೆ ಹಾಲಿ ಇಂಗ್ಲೆಂಡ್ ಪ್ರವಾಸ ಕೂಡ ಹೊರತಾಗಿಲ್ಲ..
ಹೌದು.. ಪಾಕಿಸ್ತಾನ ಕ್ರಿಕೆಟ್ ನಲ್ಲಿ ದೊಡ್ಡ ಬಿರುಗಾಳಿಯೇ ಎದ್ದಿದ್ದು ಇಂಗ್ಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ತಾನ ತಂಡ ಅನುಭವಿಸಿದ ಹೀನಾಯ ಸೋಲು ಆ ತಂಡದಲ್ಲಿ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿ ಮಾಡಿದೆ.
ಇಂಗ್ಲೆಂಡ್ ವಿರುದ್ಧದ ನೀರಸ ಪ್ರದರ್ಶನದ ಬಳಿಕ ಪಾಕಿಸ್ತಾನದ ಬರೊಬ್ಬರಿ 7 ಆಟಗಾರರನ್ನು ತಂಡದ ಹೊರದಬ್ಬಲಾಗಿದ್ದು, ಈ ಏಳು ಆಟಗಾರರ ಪೈಕಿ ಒಬ್ಬರಾಗಿರುವ ಇಮಾಮ್-ಉಲ್-ಹಕ್ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಮಂಗಳವಾರ ಲಂಡನ್‌ನಿಂದ ಲಾಹೋರ್‌ಗೆ ಯಾವುದೇ ಸದ್ದು-ಗದ್ದಲವಿಲ್ಲದೆ ಮರಳಿದ ಇಮಾಮ್ ಗೆ ಇದೀಗ ತನಿಖೆಯ ತೂಗುಗತ್ತಿ ಎದುರಾಗಿದೆ.
ಇಷ್ಟಕ್ಕೂ ಆಗಿದ್ದೇನು?
ಲೀಡ್ಸ್ ಮತ್ತು ಲಾರ್ಡ್ಸ್‌ನಲ್ಲಿ ನಡೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ತಾನ ತಂಡ ಸೋಲನುಭವಿಸಿತ್ತು. ತಂಡದ ಕಳಪೆ ಪ್ರದರ್ಶನದ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಪ್ರವಾಸದ ಮಧ್ಯದಲ್ಲೇ ಏಳು ಆಟಗಾರರನ್ನು ಬದಲಿಸುವುದರ ಜೊತೆಗೆ, ಮುಖ್ಯ ಕೋಚ್ ಮತ್ತು ಬೌಲಿಂಗ್ ಕೋಚ್‌ಗಳನ್ನೂ ಬದಲಿಸುವ ಕಠಿಣ ನಿರ್ಧಾರ ಕೈಗೊಂಡಿತ್ತು.
PCB ಹಾಗೂ ತಂಡದ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಇಮಾಮ್ ಅವರ ಗಾಯದ ವಿಚಾರ ಮತ್ತು ಮೊಹಮ್ಮದ್ ರಿಜ್ವಾನ್ ಅವರ ನಿರ್ಲಕ್ಷ್ಯ ಧೋರಣೆ ಮಂಡಳಿಯ ಈ ಕಠಿಣ ಕ್ರಮಕ್ಕೆ ಪ್ರಮುಖ ಕಾರಣಗಳಾಗಿವೆ ಎನ್ನಲಾಗಿದೆ.
ಇಮಾಮ್‌ಗೆ ತನಿಖೆಯ ಸಂಕಷ್ಟ
ಪಾಕಿಸ್ತಾನ ತಂಡದ ಪ್ರಮುಖ ಆಟಗಾರ ಇಮಾಮ್ ಉಲ್ ಹಕ್ ಇದೀಗ ದೊಡ್ಡ ಸಂಕಷ್ಟದಲ್ಲಿದ್ದಾರೆ. ಮಂಡಳಿಯ ತನಿಖಾ ಸಮಿತಿಯ ಮುಂದೆ ವಿಚಾರಣೆಗೆ ಹಾಜರಾಗಬೇಕಾದ ಸಂದರ್ಭದಲ್ಲಿ ಅವರು ಕಾನೂನು ಸಲಹೆ ಪಡೆಯುವ ಸಾಧ್ಯತೆಯೂ ಇದೆ.
ಎರಡನೇ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ನೀಡದ ಅವರ ಕಾಲಿನ ಸ್ನಾಯು ಗಾಯದ ಕುರಿತು ಸಮಿತಿ ತನಿಖೆ ನಡೆಸಲಿದೆ” ಎಂದು PCBಗೆ ಆಪ್ತವಾಗಿರುವ ಮೂಲವೊಂದು ತಿಳಿಸಿದೆ.
ಗಾಯದ ನಾಟಕ ಮಾಡಿದ್ರಾ ಇಮಾಮ್?
ಇಂಗ್ಲೆಂಡ್ ವಿರುದ್ಧದ ಪಂದ್ಯದ ವೇಳೆ ತಂಡ ಸಂಕಷ್ಟದಲ್ಲಿರುವಾಗ ಇಮಾಮ್ ಉಲ್ ಹಕ್ ಉದ್ದೇಶ ಪೂರ್ವಕವಾಗಿಯೇ ಮೈದಾನದಲ್ಲಿ ಗಾಯದ ನಾಟಕವಾಡಿ ಕ್ರೀಸ್ ತೊರೆದರು ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ಇಮಾಮ್ ತಮ್ಮ ಗಾಯವನ್ನು ನಾಟಕವಾಡಿದ್ದಾರೆಯೇ ಅಥವಾ ನಿಜವಾಗಿಯೂ ಗಾಯಗೊಂಡಿದ್ದಾರೆಯೇ ಎಂಬ ಬಗ್ಗೆ ಪಿಸಿಬಿ ತನಿಖೆ ಆರಂಭಿಸಿದೆ.
ಆದರೆ ಎರಡನೇ ಟೆಸ್ಟ್‌ನ ಎರಡನೇ ದಿನದಂದು ತಂಡದ ನಿರ್ವಹಣಾ ಮಂಡಳಿ ಅಧಿಕೃತ ಹೇಳಿಕೆ ನೀಡಿ, ಇಮಾಮ್ ಅವರಿಗೆ ಕಾಲಿನ ಕಾಫ್ ಸ್ನಾಯುವಿನಲ್ಲಿ ಗಾಯವಾಗಿದೆ ಎಂದು ತಿಳಿಸಿತ್ತು. ಪಂದ್ಯದ ಮೊದಲ ದಿನ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಈ ಗಾಯವಾಗಿದ್ದು, ಬಳಿಕ ಅದು ಸ್ನಾಯುವಿನ ಹರಿತ (tear) ಎಂದು ದೃಢಪಟ್ಟಿತ್ತು.
ಹಳೆಯ ಆರೋಪ ಮತ್ತೆ ಮುನ್ನೆಲೆಗೆ
ಇಮಾಮ್‌ಗೆ ಇದೀಗ ಸಂಕಷ್ಟ ತಂದಿರುವ ಪ್ರಮುಖ ಅಂಶವೆಂದರೆ, ಪಾಕಿಸ್ತಾನ ತಂಡದ ಮುಖ್ಯ ಆಯ್ಕೆಗಾರ ಮೊಹಮ್ಮದ್ ವಾಸಿಂ ಅವರು ಈ ಹಿಂದೆ ನೀಡಿದ್ದ ಹೇಳಿಕೆ. 2022ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಸರಣಿಯ ಸಂದರ್ಭದಲ್ಲಿ, ತಂಡದ ಮಾಜಿ ಫಿಸಿಯೋ ಕ್ಲಿಫ್ ಡೀಕನ್, ಇಮಾಮ್ ಅವರ ಗಾಯದ ಮಾದರಿ ಬಗ್ಗೆ ಅನುಮಾನ ವ್ಯಕ್ತಪಡಿಸಿ ತಮ್ಮ ಗಮನಕ್ಕೆ ತಂದಿದ್ದರು ಎಂದು ವಾಸಿಂ ಸಾರ್ವಜನಿಕವಾಗಿ ಹೇಳಿದ್ದರು.
ಇದಕ್ಕಿಂತಲೂ ಗಂಭೀರವಾಗಿ, ಕಳೆದ ವರ್ಷ PCB ರಚಿಸಿದ್ದ ತನಿಖಾ ಸಮಿತಿಯ ವರದಿಯನ್ನೂ ಪಾಕಿಸ್ತಾನದ ಪ್ರಮುಖ ಮಾಧ್ಯಮಗಳು ಮತ್ತೆ ಮುನ್ನೆಲೆಗೆ ತಂದಿವೆ. ನ್ಯೂಜಿಲೆಂಡ್ ಪ್ರವಾಸದ ವೇಳೆ ಇಮಾಮ್ ಉದ್ದೇಶಪೂರ್ವಕವಾಗಿ ಕಾಲ್ಬೆರಳಿನ ಗಾಯದ ಬಗ್ಗೆ ಸುಳ್ಳು ಹೇಳಿದ್ದರು ಎಂದು ಸಮಿತಿ ತನ್ನ ವರದಿಯಲ್ಲಿ ಆರೋಪಿಸಿತ್ತು ಎನ್ನಲಾಗಿದೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಇಂಗ್ಲೆಂಡ್ ಪ್ರವಾಸ ಮುಗಿಸಿ ಆಟಗಾರರು ಈ ತಿಂಗಳ ಕೊನೆಯಲ್ಲಿ ತವರಿಗೆ ಮರಳಿದ ಬಳಿಕ ತಂಡದ ಪ್ರದರ್ಶನ, ಇಮಾಮ್ ಅವರ ಗಾಯ ಹಾಗೂ ಡ್ರೆಸ್ಸಿಂಗ್ ರೂಂನಲ್ಲಿನ ಇತರ ಸಮಸ್ಯೆಗಳ ಕುರಿತು ಸಮಗ್ರ ತನಿಖೆ ನಡೆಸಲು PCB ನಿರ್ಧರಿಸಿದೆ ಎನ್ನಲಾಗಿದೆ.
3ನೇ ಟೆಸ್ಟ್ ಮುಗಿಯುವ ಮುನ್ನವೇ ಕ್ರಮ ಸಾಧ್ಯತೆ
ಆದರೆ PCB ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಮುಗಿಯುವವರೆಗೂ ಕಾಯದೆ, ಹಿರಿಯ ಆಟಗಾರರನ್ನು ತವರಿಗೆ ಕಳುಹಿಸುವಂತಹ ಕಠಿಣ ಕ್ರಮ ಕೈಗೊಂಡಿರುವುದೇ ತಂಡದ ಒಳಗೆ ಗಂಭೀರ ಸಮಸ್ಯೆಗಳು ಉಂಟಾಗಿರುವ ಸೂಚನೆ ಎಂದು ಮತ್ತೊಂದು ಮೂಲ ಅಭಿಪ್ರಾಯಪಟ್ಟಿದೆ.
ಈ ಕ್ರಮದ ಹಿಂದೆ ಪಾಕಿಸ್ತಾನ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ನಡೆದಿರುವ ಕೆಲವು ಬೆಳವಣಿಗೆಗಳು ಕಾರಣವಾಗಿರಬಹುದು ಎನ್ನಲಾಗುತ್ತಿದೆ.
ಅಂದಹಾಗೆ ಮಾಜಿ ನಾಯಕ ಹಾಗೂ ಪಾಕಿಸ್ತಾನದ ಬ್ಯಾಟರ್ ಇಂಜಮಾಮ್-ಉಲ್-ಹಕ್ ಅವರ ಸೋದರಳಿಯ ಆಗಿರುವ ಇಮಾಮ್, 2017ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇಮಾಮ್-ಉಲ್-ಹಕ್ ಇದುವರೆಗೆ ಪಾಕಿಸ್ತಾನ ಪರ 31 ಟೆಸ್ಟ್, 75 ಏಕದಿನ ಹಾಗೂ 2 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




