'ನೀವು ಗುಜರಾತಿ, ಆಡಲು ಕಾಯುವ ಬದಲು ಬ್ಯುಸಿನೆಸ್ ಬಗ್ಗೆ ಯೋಚಿಸಿ': BCCI ಮಾಜಿ ಆಯ್ಕೆಗಾರರ ಆಘಾತಕಾರಿ ಸಲಹೆ ನೆನೆದ ಪಾರ್ಥಿವ್ ಪಟೇಲ್!
ಅವರು ಭಾರತ ತಂಡಕ್ಕೆ ಮರುಪ್ರವೇಶವಂತೂ ಪಡೆದರು, ಆದರೆ ಅವರಿಗೆ ಹೆಚ್ಚು ಕಾಲ ಅವಕಾಶ ಸಿಗಲಿಲ್ಲ. ತಾವು ಧೋನಿ ಅವರೊಂದಿಗೆ ಯಾವುದೇ ಸ್ಪರ್ಧೆಯಲ್ಲಿರಲಿಲ್ಲ ಎಂದು ಪಾರ್ಥಿವ್ ಹೇಳಿದರು.
ಭಾರತದಂತಹ ದೇಶದಲ್ಲಿ, ಎಲ್ಲೆಡೆ ಕ್ರಿಕೆಟ್ ಅಕಾಡೆಮಿಗಳು ಮತ್ತು ತಂಡಗಳು ಹೇರಳವಾಗಿರುವಾಗ, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಕೇವಲ ಕಠಿಣ ಪರಿಶ್ರಮವಷ್ಟೇ ಸಾಲದು. ಬಿಸಿಸಿಐ ಆಯ್ಕೆಗಾರರಿಗೆ ಲಭ್ಯವಿರುವ ಆಯ್ಕೆಗಳ ಸಂಖ್ಯೆ ಹೆಚ್ಚಿರುವುದರಿಂದ, ಪ್ರತಿಭಾವಂತ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದ ಅನೇಕ ನಿದರ್ಶನಗಳಿವೆ. ಪಾರ್ಥಿವ್ ಪಟೇಲ್ ಅಂತಹ ಆಟಗಾರರಲ್ಲಿ ಒಬ್ಬರು. ಅವರು 2002ರಲ್ಲಿ, ತಮ್ಮ 17ನೇ ವರ್ಷ 152ನೇ ದಿನ ವಯಸ್ಸಿನಂದು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆದಾಗ್ಯೂ, ಅವರ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಅವರನ್ನು ಹಲವು ಬಾರಿ ದೀರ್ಘಕಾಲದವರೆಗೆ ತಂಡದಿಂದ ಕೈಬಿಡಲಾಯಿತು. ಎಂಎಸ್ ಧೋನಿ ಅವರ ಆಗಮನದೊಂದಿಗೆ ಅವರು ತಂಡದಲ್ಲಿನ ತಮ್ಮ ಸ್ಥಾನವನ್ನು ಕಳೆದುಕೊಂಡರು. ಪಟೇಲ್ 2008ರಲ್ಲಿ ಶ್ರೀಲಂಕಾ ವಿರುದ್ಧ ತಂಡಕ್ಕೆ ಮರಳಿದರಾದರೂ, ಮತ್ತೆ ಅವರನ್ನು ಕೈಬಿಡಲಾಯಿತು. ನಂತರ, 2009-10ರ ಅವಧಿಯಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಪಾರ್ಥಿವ್, 2010ರಲ್ಲಿ ರಾಷ್ಟ್ರೀಯ ಆಯ್ಕೆಗಾರರೊಬ್ಬರನ್ನು ತಮ್ಮ ಭವಿಷ್ಯದ ಅವಕಾಶಗಳ ಬಗ್ಗೆ ಕೇಳಿದಾಗ ಅವರಿಗೆ ಆಘಾತಕಾರಿ ಉತ್ತರ ಸಿಕ್ಕಿತು.
ತಾವು ಮೊದಲು ಅಂದಿನ ಮುಖ್ಯ ಆಯ್ಕೆಗಾರ ದಿಲೀಪ್ ವೆಂಗ್‌ಸರ್ಕಾರ್ ಅವರೊಂದಿಗೆ ಚರ್ಚಿಸಿದ್ದಾಗಿ ಪಟೇಲ್ ಹೇಳಿದರು. ಭಾರತದ ಆ ಶ್ರೇಷ್ಠ ಆಟಗಾರ ಪಾರ್ಥೀವ್ ಅವರಿಗೆ ಕಠಿಣ ಪರಿಶ್ರಮವನ್ನು ಮುಂದುವರಿಸುವಂತೆ ಸಲಹೆ ನೀಡಿದರು. ನಂತರ, ಹೊಸ ಆಯ್ಕೆ ಸಮಿತಿ ಬಂದಾಗ ಪಾರ್ಥೀವ್ ಅವರು ಮತ್ತೊಬ್ಬ ಆಯ್ಕೆಗಾರರೊಂದಿಗೆ ಮಾತನಾಡಿದರು.
'ಆ ಸಮಯದಲ್ಲಿ, ತಂಡದಿಂದ ಕೈಬಿಡಲ್ಪಟ್ಟಾಗ ನನಗೆ ಯಾವುದೇ ಬೇಸರವಾಗಲಿಲ್ಲ, ಏಕೆಂದರೆ ನನ್ನ ಪ್ರದರ್ಶನವು ಅದಕ್ಕೆ ತಕ್ಕಷ್ಟಿರಲಿಲ್ಲ ಎಂಬುದು ನನಗೆ ತಿಳಿದಿತ್ತು. ಆಗ ಭಾರತ ತಂಡವು ದೀರ್ಘಕಾಲದ ನಂತರ ಒಂದು ಸರಣಿಯನ್ನು ಸೋತಿತ್ತು. ಆದರೆ ನಂತರದ ವರ್ಷಗಳಲ್ಲಿ, 'ಇದಕ್ಕಿಂತ ಹೆಚ್ಚಾಗಿ ನಾನೇನು ಮಾಡಲು ಸಾಧ್ಯ?' ಎಂದು ನನಗೆ ಅನ್ನಿಸುವಂತಹ ಹಂತವೊಂದು ಬಂದಿತ್ತು. ಆ ಅವಧಿಯಲ್ಲೇ ನಾನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸತತ ಐದು ಇನಿಂಗ್ಸ್‌ಗಳಲ್ಲಿ 500 ರನ್‌ಗಳನ್ನು ಗಳಿಸಿದ್ದೆ. ವಾಸ್ತವವಾಗಿ ಇದೊಂದು ದಾಖಲೆಯಾಗಿದೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಅಥವಾ ಸುನೀಲ್ ಗವಾಸ್ಕರ್ ಹೀಗೆ ಯಾರೇ ಆಗಿರಲಿ, ಭಾರತದ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇಲ್ಲಿಯವರೆಗೆ ಯಾರೂ ಸತತ ಐದು ಇನಿಂಗ್ಸ್‌ಗಳಲ್ಲಿ 500 ರನ್‌ಗಳನ್ನು ಗಳಿಸಿಲ್ಲ' ಎಂದು ಪಾರ್ಥಿವ್ ಅವರು ಆಕಾಶ್ ಚೋಪ್ರಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.
'ಆಸ್ಟ್ರೇಲಿಯಾ ಪ್ರವಾಸಕ್ಕೆ ಆಟಗಾರರ ಆಯ್ಕೆ ನಡೆಯುತ್ತಿದ್ದಾಗ, ನಾನು ಆಯ್ಕೆಗಾರ ದಿಲೀಪ್ ವೆಂಗ್‌ಸರ್ಕಾರ್ ಅವರಿಗೆ ಕರೆ ಮಾಡಿ ನನ್ನ ಆಯ್ಕೆಯ ಸಾಧ್ಯತೆಗಳ ಬಗ್ಗೆ ವಿಚಾರಿಸಿದೆ. ಅದಕ್ಕೆ ಅವರು, 'ದುರದೃಷ್ಟವಶಾತ್ ಅವಕಾಶ ಸಿಗಲಿಲ್ಲ, ಕಠಿಣ ಪರಿಶ್ರಮವನ್ನು ಮುಂದುವರಿಸಿ' ಎಂದು ಹೇಳಿದರು. ಆದರೆ 2011ರ ವೇಳೆಗೆ, ಪ್ರತಿ ಸೀಸನ್‌ನಲ್ಲೂ ಸತತವಾಗಿ 700-800 ರನ್‌ಗಳನ್ನು ಗಳಿಸಿದ ನಂತರ, ಆಯ್ಕೆ ಸಮಿತಿಯಲ್ಲಿ ಬದಲಾವಣೆಯಾಗಿತ್ತು. ಆಗ ನಾನು ನನ್ನ ಆಯ್ಕೆಯ ಸಾಧ್ಯತೆಗಳ ಬಗ್ಗೆ ತಿಳಿಯಲು ಹೊಸ ಆಯ್ಕೆಗಾರರಿಗೆ ಕರೆ ಮಾಡಿದೆ; ಆಗ ನನಗೆ ಆಘಾತಕಾರಿ ಸಲಹೆಯೊಂದು ಸಿಕ್ಕಿತು' ಎಂದರು.
'ಅದಕ್ಕವರು, 'ನಿಮಗೆ 27-28 ವರ್ಷ ವಯಸ್ಸು, ನೀವು ಗುಜರಾತಿ. ಯಾವುದಾದರೂ ಬ್ಯುಸಿನೆಸ್ ಮಾಡಬಹುದೇನೋ ಯೋಚಿಸಿ' ಎಂದರು. ನಾನು ಅವರಿಗೆ ನೇರವಾಗಿಯೇ ಹೇಳಿದೆ, 'ನನ್ನನ್ನು ಆಯ್ಕೆ ಮಾಡಲು ನಿಮಗೆ ಇಷ್ಟವಿಲ್ಲದಿದ್ದರೆ ಬೇಡ. ಆದರೆ ಈ ರೀತಿ ಯಾರನ್ನೂ ನಿರುತ್ಸಾಹಗೊಳಿಸಬಾರದು. ಸರಿ, ಇದು ನಿಮ್ಮ ಆಲೋಚನೆ, ಆದರೆ ನಿಮ್ಮ ಅಧಿಕಾರಾವಧಿಯಲ್ಲಿ ಇನ್ನೂ ಎರಡು ವರ್ಷ ಬಾಕಿ ಇವೆ. ಆ ಎರಡು ವರ್ಷಗಳ ಅವಧಿಯಲ್ಲಿ ನಾನು ಮತ್ತೆ ತಂಡಕ್ಕೆ ಮರಳಿಯೇ ತೋರಿಸುತ್ತೇನೆ ಎಂದು ನಿಮಗೆ ಸವಾಲು ಹಾಕುತ್ತೇನೆ' ಎಂದು ಹೇಳಿದ್ದಾಗಿ ಪಾರ್ಥಿವ್ ತಿಳಿಸಿದರು.
ಅವರು ಮರುಪ್ರವೇಶವಂತೂ ಪಡೆದರು, ಆದರೆ ಅವರಿಗೆ ಹೆಚ್ಚು ಕಾಲ ಅವಕಾಶ ಸಿಗಲಿಲ್ಲ. ತಾವು ಧೋನಿ ಅವರೊಂದಿಗೆ ಯಾವುದೇ ಸ್ಪರ್ಧೆಯಲ್ಲಿರಲಿಲ್ಲ ಎಂದು ಪಾರ್ಥಿವ್ ಹೇಳಿದರು.
'ಎಂಎಸ್ ಧೋನಿ ಅವರು ಅತ್ಯುನ್ನತ ಮಟ್ಟದಲ್ಲಿದ್ದ ಕಾರಣ, ಅವರೊಂದಿಗೆ ನನಗೆ ಎಂದಿಗೂ ನೇರ ಪೈಪೋಟಿ ಇರಲಿಲ್ಲ. ಎರಡನೇ ವಿಕೆಟ್ ಕೀಪರ್ ಸ್ಥಾನಕ್ಕಾಗಿ ಮಾತ್ರ ಸ್ಪರ್ಧೆ ಇತ್ತು. ಅವರ ಪ್ರದರ್ಶನ, ಆಟಗಾರನಾಗಿ ಅವರಿಗಿದ್ದ ಸ್ಥಾನಮಾನ ಮತ್ತು ನಾಯಕತ್ವದ ಕಾರಣದಿಂದಾಗಿ, ಮೊದಲ ವಿಕೆಟ್ ಕೀಪರ್ ಸ್ಥಾನದ ಬಗ್ಗೆ ಚರ್ಚಿಸುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ. ನನಗೆ ಆಡುವ ಅವಕಾಶ ಸಿಗುವಂತೆ ಅವರು ಯಾವಾಗ ವಿಶ್ರಾಂತಿ ಪಡೆಯುತ್ತಾರೆ ಅಥವಾ ಪ್ರವಾಸಕ್ಕೆ ಹೋಗುವ ಅವಕಾಶ ನನಗೆ ಯಾವಾಗ ಸಿಗುತ್ತದೆ ಎಂಬುದು ಮಾತ್ರ ಮುಖ್ಯ ಪ್ರಶ್ನೆಯಾಗಿತ್ತು. ಆದರೆ ಒಂದು ಹಂತದಲ್ಲಿ ನನಗೆ ಅರಿವಾಯಿತು - ಭಾರತ, ಗುಜರಾತ್, ವೆಸ್ಟ್ ಝೋನ್ ಅಥವಾ ಕ್ಲಬ್ ತಂಡ - ಹೀಗೆ ಯಾವುದಕ್ಕಾಗಿ ಆಡುತ್ತಿದ್ದರೂ ನಾವು ಆಡುವುದು ಕ್ರಿಕೆಟ್ ಅನ್ನೇ. ನಾನು ಯಾವ ಮಟ್ಟದಲ್ಲಿ ಆಡುತ್ತಿದ್ದೇನೆ ಎಂಬುದನ್ನು ಲೆಕ್ಕಿಸದೆ ನನ್ನ ಆಟದ ತೀವ್ರತೆ ಅಥವಾ ಬದ್ಧತೆ ಕಡಿಮೆಯಾಗಬಾರದು. ರಣಜಿ ಟ್ರೋಫಿ ಪಂದ್ಯವನ್ನು ಶೇ 50-60 ರಷ್ಟು ತೀವ್ರತೆಯೊಂದಿಗೆ ಆಡಿ, ನಂತರ ಇದ್ದಕ್ಕಿದ್ದಂತೆ ಪಂದ್ಯದ ವೇಗ ಮತ್ತು ಗತಿಯ ಅರಿವಿಲ್ಲದೆ ಟೆಸ್ಟ್ ಪಂದ್ಯವನ್ನು ಆಡುವುದು ಸಾಧ್ಯವಿರಲಿಲ್ಲ. ನನ್ನ ಸಿದ್ಧತೆ ಯಾವಾಗಲೂ ನಾನು ಭಾರತ ತಂಡಕ್ಕಾಗಿ ಆಡುತ್ತಿದ್ದೇನೆ ಎಂಬಂತೆಯೇ ಇರಬೇಕಿತ್ತು. ಅವಕಾಶ ಸಿಕ್ಕಾಗಲೆಲ್ಲಾ ನಾನು ಸಿದ್ಧನಿರಬೇಕಿತ್ತು' ಎಂದು ಪಾರ್ಥಿವ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


