ಕ್ರಿಕೆಟ್

IPL 2026: 'ನನ್ನ ಗಮನ ಸಿಕ್ಸರ್‌ಗಳ ಮೇಲೆ ಇತ್ತು, ಮುಂದೆ ಶತಕ ಗಳಿಸುತ್ತೇನೆ'- ವೈಭವ್ ಸೂರ್ಯವಂಶಿ; Video

ಕೇವಲ 29 ಚೆಂಡುಗಳಲ್ಲಿ 12 ಸಿಕ್ಸರ್ ಮತ್ತು ಐದು ಬೌಂಡರಿಗಳ ನೆರವಿನಿಂದ 97 ರನ್ ಸಿಡಿಸಿದರು. 334.48 ಅಚ್ಚರಿಯ ಸ್ಟ್ರೈಕ್‌ರೇಟ್‌ನೊಂದಿಗೆ ಅವರು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 47 ರನ್‌ಗಳ ಭರ್ಜರಿ ಜಯ ತಂದುಕೊಟ್ಟು, ಗುಜರಾತ್ ಟೈಟನ್ಸ್ ವಿರುದ್ಧದ ಕ್ವಾಲಿಫೈಯರ್-2 ಪಂದ್ಯಕ್ಕೆ ದಾರಿ ಮಾಡಿಕೊಟ್ಟರು.

IPL 2026: 'ನನ್ನ ಗಮನ ಸಿಕ್ಸರ್‌ಗಳ ಮೇಲೆ ಇತ್ತು, ಮುಂದೆ ಶತಕ ಗಳಿಸುತ್ತೇನೆ'- ವೈಭವ್ ಸೂರ್ಯವಂಶಿ; Video
ವೈಭವ್ ಸೂರ್ಯವಂಶಿ
Published On :

ರಾಜಸ್ಥಾನ್ ರಾಯಲ್ಸ್ ತಂಡದ ಸ್ಟಾರ್ ಆಟಗಾರ ಎಡಗೈ ಬ್ಯಾಟ್ಸ್ ಮನ್ ವೈಭವ್ ಸೂರ್ಯವಂಶಿ ಅವರು ಐಪಿಎಲ್ ಇತಿಹಾಸದ ವೇಗದ ಶತಕದ ದಾಖಲೆಯನ್ನು ಕೇವಲ ಮೂರು ರನ್ ಅಂತರದಲ್ಲಿ ತಪ್ಪಿಸಿಕೊಂಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ನಿನ್ನೆ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಾಗ ತಮ್ಮ ಗಮನ ಸಿಕ್ಸರ್‌ಗಳನ್ನು ಬಾರಿಸಿ ತಂಡಕ್ಕೆ ಗರಿಷ್ಠ ರನ್ ಗಳಿಸುವುದರ ಮೇಲೆಯೇ ಇತ್ತು ಎಂದು ಹೇಳಿದ್ದಾರೆ.

ಸೂರ್ಯವಂಶಿ ಕೇವಲ 29 ಚೆಂಡುಗಳಲ್ಲಿ 12 ಸಿಕ್ಸರ್ ಮತ್ತು ಐದು ಬೌಂಡರಿಗಳ ನೆರವಿನಿಂದ 97 ರನ್ ಸಿಡಿಸಿದರು. 334.48 ಅಚ್ಚರಿಯ ಸ್ಟ್ರೈಕ್‌ರೇಟ್‌ನೊಂದಿಗೆ ಅವರು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 47 ರನ್‌ಗಳ ಭರ್ಜರಿ ಜಯ ತಂದುಕೊಟ್ಟು, ಗುಜರಾತ್ ಟೈಟನ್ಸ್ ವಿರುದ್ಧದ ಕ್ವಾಲಿಫೈಯರ್-2 ಪಂದ್ಯಕ್ಕೆ ದಾರಿ ಮಾಡಿಕೊಟ್ಟರು.

ಈ ಬಾರಿಯ ಐಪಿಎಲ್ ಶತಕದ ದಾಖಲೆಯನ್ನು ಅಲ್ಪ ಅಂತರದಲ್ಲಿ ತಪ್ಪಿಸಿಕೊಂಡರೂ, ಒಟ್ಟು 65 ಸಿಕ್ಸರ್‌ಗಳನ್ನು ಬಾರಿಸಿ ಕ್ರಿಸ್ ಗೇಲ್ ಅವರ ಒಂದು ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನು ಮುರಿದರು.

ಪಂದ್ಯ ಮುಗಿದ ನಂತರವೇ ನನಗೆ ಅದರ ಬಗ್ಗೆ ತಿಳಿಯಿತು ಎಂದು ಪಂದ್ಯ ನಂತರ ವೇಗದ ಶತಕದ ದಾಖಲೆ ತಪ್ಪಿಸಿಕೊಂಡ ಬಗ್ಗೆ ಕೇಳಿದಾಗ ಅವರು ಹೇಳಿದರು.

ನನ್ನ ಗಮನ ಸಿಕ್ಸರ್ ಹೊಡೆಯುವುದರ ಮೇಲೆಯೇ ಇತ್ತು. ಮುಂದಿನ ದಿನಗಳಲ್ಲಿ ನಾನು ಶತಕ ಗಳಿಸುತ್ತೇನೆ. ಆದರೆ ತಂಡಕ್ಕಾಗಿ ಗರಿಷ್ಠ ರನ್ ಗಳಿಸುವುದೇ ಮುಖ್ಯವಾಗಿತ್ತು. ನಾನು ನನ್ನ ಪ್ಲಾನ್ ಗಳ ಮೇಲೆ ಕೆಲಸ ಮಾಡುತ್ತೇನೆ. ಯಾವುದೇ ಕೊರತೆ ಕಂಡುಬಂದರೆ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತೇನೆ ಎಂದರು.

ಪಂದ್ಯಕ್ಕೆ ನಡೆಸಿದ ತಯಾರಿಯ ಕುರಿತು ಮಾತನಾಡಿದ ಅವರು, ಬೌಲರ್‌ಗಳನ್ನು ಹೇಗೆ ಎದುರಿಸಬೇಕು, ಬೌಂಡರಿಗಳ ಉದ್ದವನ್ನು ಹೇಗೆ ಅಂದಾಜಿಸಬೇಕು ಎಂಬುದನ್ನು ವಿಶ್ಲೇಷಿಸಲು ನಾನು ಪ್ರಯತ್ನಿಸುತ್ತೇನೆ. ನಾನು ಉತ್ತಮ ಉದ್ದೇಶದೊಂದಿಗೆ ಆಡಿದಾಗ ಬೌಲರ್ ಮೇಲೆ ಒತ್ತಡ ಉಂಟಾಗುತ್ತದೆ ಎಂದರು.

ನಾವು ಗೆದ್ದಿದ್ದೇವೆ, ಆದ್ದರಿಂದ ಸಂಭ್ರಮಿಸುತ್ತೇವೆ, ಮುಂದಿನ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ. ನಾನು ಬೌಲರ್‌ಗಳ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ, ನನ್ನ ಆಟವನ್ನೇ ಆಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಐಪಿಎಲ್‌ನ ಅತಿ ವೇಗದ ಶತಕದ ದಾಖಲೆ ತಪ್ಪಿಸಿಕೊಂಡ ವೈಭವ್ ಸೂರ್ಯವಂಶಿ

ರಾಜಸ್ಥಾನ್ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 29 ಚೆಂಡುಗಳಲ್ಲಿ ಅಬ್ಬರದ 97 ರನ್ ಗಳಿಸಿ ಐಪಿಎಲ್ ಇತಿಹಾಸ ನಿರ್ಮಾಣದ ಅಂಚಿನಲ್ಲಿ ನಿಂತಿದ್ದರು.

15 ವರ್ಷದ ಈ ಯುವ ಸಂಚಲನ ಆಟಗಾರ ಕ್ರಿಸ್ ಗೇಲ್ ಅವರ ಐಪಿಎಲ್‌ನ ಅತಿ ವೇಗದ ಶತಕದ ದಾಖಲೆಯನ್ನು ಮುರಿಯಲು ಕೇವಲ ಒಂದು ದೊಡ್ಡ ಹೊಡೆತದ ದೂರದಲ್ಲಿದ್ದರು. ಆದರೆ ಅಲ್ಪ ಅಂತರದಲ್ಲಿ ಆ ಐತಿಹಾಸಿಕ ಸಾಧನೆ ತಪ್ಪಿಹೋಯಿತು.

2013ರಲ್ಲಿ ಆರ್‌ಸಿಬಿಗಾಗಿ ಕ್ರಿಸ್ ಗೇಲ್ ಆಡಿದ್ದ ಐತಿಹಾಸಿಕ 175* ರನ್‌ಗಳ ಇನ್ನಿಂಗ್ಸ್ ವೇಳೆ ನಿರ್ಮಿಸಿದ್ದ 30 ಚೆಂಡುಗಳ ಶತಕದ ದಾಖಲೆ ಇನ್ನೂ ಅಜೇಯವಾಗಿದೆ. ಆದರೆ ಈ ಕಿರಿಯ ಆಟಗಾರ ವೈಭವ್ ಸೂರ್ಯವಂಶಿ ಆ ದಾಖಲೆಗೆ ಭಾರೀ ಸವಾಲು ಒಡ್ಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.