ನಾವೂ ಮನುಷ್ಯರೇ, ಚರ್ಚೆ ಪಂದ್ಯಕ್ಕೇ ಸೀಮಿತವಾಗಿದ್ರೆ ಒಳ್ಳೇದು, ಗೌರವ ಕೊಟ್ಟು ಮಾತಾಡಿ: ಕಮೆಂಟೇಟರ್ ಗಳಿಗೆ Riyan Parag ಚಾಟಿ!
ರಾಜಸ್ತಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಮಂಗಳವಾರ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರೋಚಕ ಜಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಆಕ್ರಮಣಕಾರಿಯಾಗಿ ಮಾತನಾಡಿದರು.

ರಾಯ್ಪುರ: ಐಪಿಎಲ್ ಟೂರ್ನಿ 2026 ನಿರ್ಣಾಯಕ ಹಂತ ತಲುಪಿದ್ದು, ಪ್ಲೇಆಫ್ ಗೆ ಈಗಾಗಲೇ 3 ತಂಡಗಳು ಅರ್ಹತೆ ಪಡೆದು ನಾಲ್ಕನೇ ತಂಡಕ್ಕಾಗಿ 5 ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ನಡುವೆ ರಾಜಸ್ತಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ (Riyan Parag)ಮಾಜಿ ಕ್ರಿಕೆಟಿಗರ ವಿರುದ್ಧ ಗರಂ ಆಗಿದ್ದಾರೆ.
ಹೌದು.. ರಾಜಸ್ತಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಮಂಗಳವಾರ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರೋಚಕ ಜಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಆಕ್ರಮಣಕಾರಿಯಾಗಿ ಮಾತನಾಡಿದರು.
ಈ ಪಂದ್ಯದ ಜಯವು ರಾಜಸ್ತಾನ ರಾಯಲ್ಸ್ ತಂಡದ ಪ್ಲೇಆಫ್ ಪ್ರವೇಶದ ನಿರೀಕ್ಷೆಗೆ ದೊಡ್ಡ ಉತ್ತೇಜನ ನೀಡಿದ್ದು, ಮುಂದಿನ ಹಂತಕ್ಕೆ ಪ್ರವೇಶಿಸಲು ತಂಡಕ್ಕೆ ಈಗ ಕೇವಲ ಇನ್ನೊಂದು ಜಯದ ಅಗತ್ಯವಿದೆ.
ಪಂದ್ಯದ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದ 15 ವರ್ಷದ ಪ್ರತಿಭೆ ವೈಭವ್ ಸೂರ್ಯವಂಶಿ (Vaibhav Sooryavanshi) ಅವರ 38 ಎಸೆತಗಳಲ್ಲಿ 93 ರನ್‌ಗಳ ಆಟವನ್ನು ಪರಾಗ್ ಹೊಗಳಿದರೂ, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಟೀಕೆ ಮಾಡುತ್ತಿರುವ ಐಪಿಎಲ್ ಕಾಮೆಂಟೇಟರ್‌ಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಆಗಿದ್ದೇನು?
ಇತ್ತೀಚೆಗೆ ‘ವ್ಯಾಪಿಂಗ್ ವಿವಾದ’ದಲ್ಲಿ ಸಿಲುಕಿದ್ದ ಪರಾಗ್ ಅವರನ್ನು, ತಮ್ಮ ಬಗ್ಗೆ ಬರೆಯಲಾಗುತ್ತಿರುವ ಅಥವಾ ಮಾತನಾಡಲಾಗುತ್ತಿರುವ ವಿಷಯಗಳನ್ನು ಹೇಗೆ ಎದುರಿಸುತ್ತೀರಿ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ರಿಯಾನ್ ಪರಾಗ್, 'ಯಾವುದೇ ಕೆಲಸ ಮಾಡಿದರೂ ಜನರು ಮಾತನಾಡುತ್ತಾರೆ ಎಂಬುದನ್ನು ಒಪ್ಪಿಕೊಂಡಿದ್ದೇನೆ. ಯಾರು ಏನು ಹೇಳುತ್ತಾರೆ ಎಂಬುದಕ್ಕಿಂತ ತಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸುವುದು ಮುಖ್ಯ ಎಂದು ಹೇಳಿದರು.
"ಮೊದಲನೆಯದಾಗಿ, ನಾಲ್ಕು ವರ್ಷಗಳ ಬಗ್ಗೆ ನೀವು ಹೇಳಿದಂತೆ, ನಾನು ಏನು ಮಾಡಿದರೂ ಜನರು ಮಾತನಾಡುತ್ತಾರೆ ಎಂಬುದನ್ನು ಈಗ ಅರ್ಥ ಮಾಡಿಕೊಂಡಿದ್ದೇನೆ. ಎರಡನೆಯದಾಗಿ, ಏನೇ ಚರ್ಚೆಗಳು ನಡೆಯುತ್ತಿದ್ದರೂ ಅದು ನನ್ನ ಆಟ, ನನ್ನ ಫಾರ್ಮ್ ಅಥವಾ ನನ್ನ ಮನಸ್ಥಿತಿಗೆ ಪರಿಣಾಮ ಬೀರಬಾರದು ಎಂಬುದನ್ನೂ ಅರ್ಥ ಮಾಡಿಕೊಂಡಿದ್ದೇನೆ. ಏಕೆಂದರೆ ಕೀಬೋರ್ಡ್ ವಾರಿಯರ್ಸ್‌ಗಳು ಕೆಲಸದ ಹೊರಗಿನವರು, ಅದನ್ನು ಹೊರಗೇ ಬಿಡಬೇಕು. ನನ್ನ ಆಟದ ಬಗ್ಗೆ ನಾನು ಎಷ್ಟು ಯೋಚಿಸುತ್ತೇನೆ ಅಥವಾ ನನ್ನ ಆಟದ ಮೇಲೆ ಎಷ್ಟು ನಂಬಿಕೆ ಇಟ್ಟಿದ್ದೇನೆ ಎಂಬುದು ಅದರಿಂದ ದುರ್ಬಲಗೊಳ್ಳಬಾರದು ಎಂದು ನಾನು ಭಾವಿಸುತ್ತೇನೆ' ಎಂದರು.
"ಈ ವರ್ಷದ ಐಪಿಎಲ್‌ನಲ್ಲಿ ಹೊರಗೆ ಅನೇಕ ವಿಷಯಗಳು ನಡೆಯುತ್ತಿವೆ. ಈ ದೇಶವು ಕ್ರಿಕೆಟ್ ಅನ್ನು ತುಂಬಾ ಪ್ರೀತಿಸುತ್ತದೆ ಎಂದು ನನಗೆ ಅನಿಸುತ್ತದೆ. ಆಟಗಾರರಾಗಿ ನಾವು ಮೈದಾನಕ್ಕಿಳಿದಾಗ, ಬಂದಿರುವ ಅಭಿಮಾನಿಗಳಿಗಾಗಿ ಮತ್ತು ಅವರ ನಿರೀಕ್ಷೆಗಳಿಗಾಗಿ ನಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ. ಆಟಗಾರರು ತಪ್ಪು ಮಾಡುವುದು ಸಹಜ. ಆದರೆ ಅವರನ್ನೂ ಗೌರವಿಸಬೇಕು ಎಂದು ಹೇಳಿದರು.
ವೈಯುಕ್ತಿಕ ಜೀವನದ ಚರ್ಚೆ ಏಕೆ?
ಇದೇ ವೇಳೆ ಆಟಗಾರರ ವೈಯಕ್ತಿಕ ಜೀವನ ಅಥವಾ ಮೈದಾನದ ಹೊರಗಿನ ವಿಷಯಗಳ ಬಗ್ಗೆ ಕಾಮೆಂಟ್ರಿ ಬಾಕ್ಸ್‌ನಲ್ಲಿ ಕುಳಿತವರು ಮಾತನಾಡಿದಾಗ ಮಿತಿಮೀರುತ್ತಾರೆ ಎಂದು ಕಿಡಿಕಾರಿದ ಪರಾಗ್, "ಆಟಗಾರರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಒಂದು ತಂಡ 75 ಅಥವಾ 80 ರನ್‌ಗಳಿಗೆ ಆಲೌಟ್ ಆದಾಗ ಅವರು ಆಡಲು ಬಯಸುವುದಿಲ್ಲ ಅಥವಾ ಆಡಲು ಗೊತ್ತಿಲ್ಲ ಎಂದು ಹೇಳುವುದು ತುಂಬಾ ಸುಲಭ.
ಆ ಪಂದ್ಯದ ಮೊದಲು ಮೂರು ಅಥವಾ ನಾಲ್ಕು ದಿನಗಳ ಸಿದ್ಧತೆ ಇರುತ್ತದೆ. 220 ಅಥವಾ 250 ರನ್ ಹೇಗೆ ಗಳಿಸಬೇಕು ಎಂಬುದರ ಬಗ್ಗೆ ಸಿದ್ಧತೆ ಇರುತ್ತದೆ. ಆದರೆ ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ. ನಾವು ಕೂಡ ಮಾನವರೇ; ನಮ್ಮಿಂದಲೂ ತಪ್ಪುಗಳು ಆಗುತ್ತವೆ."
"ಹೊರಗೆ ನಡೆಯುತ್ತಿರುವ ವಿಷಯಗಳ ಬಗ್ಗೆ, ವಿಶೇಷವಾಗಿ ಜನರಿಗೆ ತಲುಪುವ ಧ್ವನಿಯುಳ್ಳ ಕಾಮೆಂಟೇಟರ್‌ಗಳಿಗೆ ನಾನು ಒಂದು ವಿನಂತಿ ಮಾಡುತ್ತೇನೆ. ಕ್ರಿಕೆಟ್ ಅನ್ನು ಪ್ರೀತಿಸಿ, ಕ್ರಿಕೆಟ್ ಬಗ್ಗೆ ಮಾತ್ರ ಮಾತನಾಡಿ. ದೇಶಕ್ಕೆ ಇಷ್ಟು ಮಹತ್ವವಾದ ಕ್ರೀಡೆಗೆ ಗೌರವ ನೀಡಬೇಕು ಮತ್ತು ಕ್ರಿಕೆಟ್ ಬಗ್ಗೆ ಮಾತ್ರ ಮಾತನಾಡಬೇಕು, ಬೇರೆ ಯಾವುದರ ಬಗ್ಗೆ ಅಲ್ಲ," ಎಂದರು.
ಪ್ಲೇಆಫ್ ನತ್ತ ರಾಜಸ್ತಾನ ಚಿತ್ತ
ಇನ್ನು ಹಾಲಿ ಟೂರ್ನಿಯಲ್ಲಿ ಲಖನೌ ವಿರುದ್ಧದ ಈ ಜಯದಿಂದ ರಾಜಸ್ಥಾನ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಈಗ ತಂಡ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಮುಂಬೈ ವಿರುದ್ಧ ಜಯ ಸಾಧಿಸಿದರೆ ರಾಜಸ್ಥಾನಕ್ಕೆ ಪ್ಲೇಆಫ್ ಸ್ಥಾನ ಖಚಿತವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



