IPL 2026: CSK ಫ್ಲೇಆಫ್ ಕನಸು ಛಿದ್ರ; GT ವಿರುದ್ಧ 89 ರನ್ ಹೀನಾಯ ಸೋಲು; Dhoni ಇಲ್ಲದೆಯೆ ಅಭಿಯಾನ ಮುಕ್ತಾಯ!
ಗುಜರಾತ್ ಟೈಟನ್ಸ್ ನೀಡಿದ್ದ 230 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 13.4 ಓವರ್ ನಲ್ಲೇ ಕೇವಲ 140 ರನ್ ಗಳಿಗೇ ಸರ್ವಪತನ ಕಂಡಿತು.

ಅಹ್ಮದಾಬಾದ್: ಐಪಿಎಲ್ 2026 ಟೂರ್ನಿಯ ಇಂದಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ಟೈಟನ್ಸ್ ವಿರುದ್ಧ ಮುಗ್ಗರಿಸಿದ್ದು, CSK ಫ್ಲೇಆಫ್ ಕನಸು ಛಿದ್ರಗೊಂಡಿದೆ.
ಇಂದು ಗುಜರಾತ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ಟೈಟನ್ಸ್ ಎದುರು 89 ರನ್ ಗಳ ಹೀನಾಯ ಸೋಲು ಕಂಡಿದೆ.
ಗುಜರಾತ್ ಟೈಟನ್ಸ್ ನೀಡಿದ್ದ 230 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 13.4 ಓವರ್ ನಲ್ಲೇ ಕೇವಲ 140 ರನ್ ಗಳಿಗೇ ಸರ್ವಪತನ ಕಂಡಿತು. ಆ ಮೂಲಕ 89 ರನ್ ಗಳ ಅಂತರದಲ್ಲಿ ಸೋತಿದ್ದು ಮಾತ್ರವಲ್ಲದೇ ಹಾಲಿ ಐಪಿಎಲ್ ಟೂರ್ನಿಯಿಂದಲೇ ಔಟ್ ಆಗಿದೆ.
ಪ್ಲೇಆಫ್ ಗೇರುವ ನಿಟ್ಟಿನಲ್ಲಿ ಇಂದಿನ ಪಂದ್ಯದ ಗೆಲುವು ಚೆನ್ನೈಗೆ ನಿರ್ಣಾಯಕವಾಗಿತ್ತು. ಆದರೆ ಈ ಪಂದ್ಯದಲ್ಲೇ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ಹೀನಾಯವಾಗಿ ಟೂರ್ನಿಯಿಂದ ಹೊರಬಿದ್ದಿದೆ.
ಚೆನ್ನೈ ಪರ ಶಿವಂ ದುಬೆ 47, ಮ್ಯಾಥ್ಯೂ ಶಾರ್ಟ್ 24, ಕಾರ್ತಿಕ್ ಶರ್ಮಾ ಮತ್ತು ಅನ್ಶುಲ್ ಕಂಬೋಜ್ ತಲಾ 19 ರನ್ ಗಳಿಸಿದರು. ಸಂಜು ಸ್ಯಾಮ್ಸನ್ ಸಹಿತ ಚೆನ್ನೈ ಮೂವರು ಬ್ಯಾಟರ್ ಗಳು ಶೂನ್ಯ ಸುತ್ತಿದರೆ, ಮೂವರು ಬ್ಯಾಟರ್ ಗಳು ಒಂದಂಕಿ ಮೊತ್ತಕ್ಕೇ ಔಟಾಗಿ ನಿರಾಶೆ ಮೂಡಿಸಿದರು.
ಅಂತಿಮವಾಗಿ ಚೆನ್ನೈ 13.4 ಓವರ್ ನಲ್ಲೇ ಕೇವಲ 140 ರನ್ ಗಳಿಗೆ ಆಲೌಟ್ ಆಯಿತು. ಇತ್ತ ಗುಜರಾತ್ ಪರ ಮಹಮದ್ ಸಿರಾಜ್, ಕಾಗಿಸೋ ರಬಾಡಾ ಮತ್ತು ರಷೀದ್ ಖಾನ್ ತಲಾ 3 ವಿಕೆಟ್ ಕಬಳಿಸಿದರು.
ಗುಜರಾತ್ ಭರ್ಜರಿ ಬ್ಯಾಟಿಂಗ್
ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಗುಜತಾರ್ ಟೈಟನ್ಸ್ ತಂಡ ಸಾಯಿ ಸುದರ್ಶನ್ (84 ರನ್), ಶುಭ್ ಮನ್ ಗಿಲ್ (64 ರನ್) ಮತ್ತು ಜಾಸ್ ಬಟ್ಲರ್ (ಅಜೇಯ 57 ರನ್) ಅವರ ಸ್ಫೋಟಕ ಬ್ಯಾಟಿಂಗ್ ಮೂಲಕ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 229 ರನ್ ಕಲೆಹಾಕಿತು.
ಪ್ಲೇಆಫ್ ಕನಸು ಛಿದ್ರ
ಈ ಪಂದ್ಯದ ಸೋಲಿನೊಂದಿಗೆ ಚೆನ್ನೈ ತಂಡದ ಪ್ಲೇ ಆಫ್ ಕನಸು ಛಿದ್ರವಾಗಿದ್ದು, ಸಿಎಸ್ ಕೆ ಟೂರ್ನಿಯಿಂದಲೇ ಹೊರಬಿದ್ದಿದೆ. ಇಂದಿನ ಪಂದ್ಯವೂ ಸೇರಿದಂತೆ ಒಟ್ಟು 14 ಪಂದ್ಯಗಳನ್ನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ 6 ಪಂದ್ಯಗಳಲ್ಲಿ ಗೆದ್ದು 8 ಪಂದ್ಯಳಲ್ಲಿ ಸೋತಿದೆ. ಅಂತೆಯೇ 12 ಅಂಕಗಳೊಂದಿಗೆ 7ನೇ ಸ್ಥಾನಕ್ಕೆ ಕುಸಿದಿದೆ.
Dhoni ಇಲ್ಲದೇ ಅಭಿಯಾನ ಮುಕ್ತಾಯ!
ಇನ್ನು ಹಾಲಿ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಹೇಂದ್ರ ಸಿಂಗ್ ಧೋನಿ ಇಲ್ಲದೇ ತನ್ನ ಅಭಿಯಾನ ಮುಗಿಸಿದೆ. ಆರಂಭದಲ್ಲಿ ಗಾಯದ ಸಮಸ್ಯೆಯಿಂದ ತಂಡದಿಂದ ದೂರ ಉಳಿದಿದ್ದ ಮಹೇಂದ್ರ ಸಿಂಗ್ ಧೋನಿ ಬಳಿಕ ಕಾರಣಾಂತರಗಳಿಂದ ತಂಡಕ್ಕೆ ಸೇರ್ಪಡೆಯಾಗಲೇ ಇಲ್ಲ. ಚೆನ್ನೈ ನಲ್ಲಿ ನಡೆದ ಕಳೆದ ಪಂದ್ಯದಲ್ಲಿ ಧೋನಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರಾದರೂ ತಂಡದ ಭಾಗವಾಗಲಿಲ್ಲ. ಬಹುಶಃ ಧೋನಿಗೆ ಇದೇ ಕೊನೆಯ ಐಪಿಎಲ್ ಟೂರ್ನಿಯಾಗಿರಬಹುದು ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



