India vs Afghanistan: ಭಾರತ ನೆಟ್ಸ್ನಲ್ಲಿ ಬೌಲಿಂಗ್ ಮಾಡಲು 7 ಆಟಗಾರರಿಗೆ ಆಹ್ವಾನ; ಏನಿದು BCCI ಹೊಸ ತಂತ್ರ?
ಟೀಂ ಇಂಡಿಯಾದ ಬ್ಯಾಟರ್ ಗಳಿಗೆ ನೆಟ್ಸ್ ನಲ್ಲಿ ಬೌಲಿಂಗ್ ಮಾಡಲು ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್ Auqib Nabi Dar, ಉತ್ತರ ಪ್ರದೇಶದ ಲೆಗ್ ಸ್ಪಿನ್ನರ್ Zeeshan Ansari ಸೇರಿದಂತೆ ಒಟ್ಟು 7 ಬೌಲರ್ ಗಳನ್ನು ಆಹ್ವಾನಿಸಲಾಗಿದೆ.

ಬೆಂಗಳೂರು: ಐಪಿಎಲ್ ಮುಕ್ತಾಯದ ಬೆನ್ನಲ್ಲೇ ರಾಷ್ಟ್ರೀಯ ತಂಡದತ್ತ ಆಟಗಾರರು ಮುಖ ಮಾಡಿರುವಂತೆಯೇ ಅಂತಾರಾಷ್ಟ್ರೀಯ ಆಟಗಾರರಿಗೆ ನೆಟ್ಸ್ ನಲ್ಲಿ ಬೌಲಿಂಗ್ ಮಾಡಲು ಬಿಸಿಸಿಐ ಬರೊಬ್ಬರಿ 7 ಆಟಗಾರರಿಗೆ ಆಹ್ವಾನ ನೀಡಿದೆ.
ಹೌದು.. ಆಫ್ಘಾನಿಸ್ತಾನ ಸರಣಿಯಲ್ಲಿ ಪಾಲ್ಗೊಳ್ಳಲಿರುವ ಟೀಂ ಇಂಡಿಯಾದ ಬ್ಯಾಟರ್ ಗಳಿಗೆ ನೆಟ್ಸ್ ನಲ್ಲಿ ಬೌಲಿಂಗ್ ಮಾಡಲು ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್ Auqib Nabi Dar, ಉತ್ತರ ಪ್ರದೇಶದ ಲೆಗ್ ಸ್ಪಿನ್ನರ್ Zeeshan Ansari ಸೇರಿದಂತೆ ಒಟ್ಟು 7 ಬೌಲರ್ ಗಳನ್ನು ಆಹ್ವಾನಿಸಲಾಗಿದೆ.
ಐಪಿಎಲ್ ಮತ್ತು ರಣಜಿ ಟೂರ್ನಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್ Auqib Nabi Dar ಅವರ ಉತ್ತಮ ಪ್ರದರ್ಶನದ ಹೊರತಾಗಿಯೂ ಅವರನ್ನು ಭಾರತ ಟೆಸ್ಟ್ ತಂಡದಲ್ಲಿ ಆಯ್ಕೆ ಮಾಡದಿರುವುದು ಸಾಕಷ್ಟು ಟೀಕೆಗೆ ಕಾರಣವಾಗಿತ್ತು.
ಇದೀಗ ಜೂನ್ 6ರಿಂದ ಆರಂಭವಾಗಲಿರುವ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಮುನ್ನ ಭಾರತ ತಂಡದ ನೆಟ್ಸ್ನಲ್ಲಿ ಬೌಲಿಂಗ್ ಮಾಡಲು ಅವರನ್ನು ಸೇರಿದಂತೆ ಏಳು ಆಟಗಾರರನ್ನು ತಂಡದ ಆಡಳಿತ ಮಂಡಳಿ ಆಹ್ವಾನಿಸಿದೆ.
ಏನಿದು BCCIನ ಹೊಸ ತಂತ್ರ?
ಅವರ ಜೊತೆಗೆ, ಐಪಿಎಲ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಉತ್ತರ ಪ್ರದೇಶದ ಲೆಗ್ ಸ್ಪಿನ್ನರ್ ಜೀಶನ್ ಅನ್ಸಾರಿ ಅವರನ್ನೂ ನೆಟ್ಸ್ ಬೌಲರ್ ಆಗಿ ಕರೆಯಲಾಗಿದೆ. ಅಫ್ಘಾನಿಸ್ತಾನ ತಂಡದಲ್ಲಿ ಕೆಲವು ರಿಸ್ಟ್ ಸ್ಪಿನ್ನರ್ಗಳು ಇರುವ ನಿರೀಕ್ಷೆಯಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಬಿಸಿಸಿಐ ಮೂಲಗಳ ಪ್ರಕಾರ, "ಔಕಿಬ್ ನಬಿಯನ್ನು ಮಾತ್ರವಲ್ಲ, ಇನ್ನೂ ಆರು ಬೌಲರ್ಗಳನ್ನು ಭಾರತ ತಂಡದ ನೆಟ್ಸ್ಗೆ ಕರೆಯಲಾಗಿದೆ.
ತೀವ್ರ ಹವಾಮಾನ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಪ್ರಮುಖ ವೇಗಿಗಳು ಮಹಮದ್ ಸಿರಾಜ್ ಮತ್ತು ಕನ್ನಡಿಗ ಪ್ರಸಿದ್ಧ್ ಕೃಷ್ಣ (Prasidh Krishna) ಅವರು ಸತತ ಏಳು ದಿನಗಳಲ್ಲಿ ಮೂರು ಪಂದ್ಯಗಳನ್ನು ಆಡಿರುವುದರಿಂದ ನೆಟ್ಸ್ನಲ್ಲಿ ಪೂರ್ಣ ಪ್ರಮಾಣದಲ್ಲಿ ಬೌಲಿಂಗ್ ಮಾಡಲು ಸಾಧ್ಯವಿಲ್ಲ. ಬ್ಯಾಟರ್ಗಳಿಗೆ ಸಮರ್ಪಕ ಅಭ್ಯಾಸ ಅಗತ್ಯವಿದೆ" ಎಂದು ತಿಳಿಸಲಾಗಿದೆ.
ಔಕಿಬ್ ನಬಿ ವಿಚಾರವಾಗಿ ವ್ಯಾಪಕ ವಿವಾದ
ರಣಜಿ ಟ್ರೋಫಿಯಲ್ಲಿ 60 ವಿಕೆಟ್ಗಳನ್ನು ಪಡೆದು ಜಮ್ಮು-ಕಾಶ್ಮೀರ ತಂಡದ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಔಕಿಬ್ ನಬಿ, ಭಾರತ ತಂಡದ ಆಯ್ಕೆಯಲ್ಲಿ ಪಂಜಾಬ್ನ ಎತ್ತರದ ವೇಗಿ ಗುರ್ನೂರ್ ಬ್ರಾರ್ (Gurnoor Brar) ಅವರಿಗೆ ಸ್ಥಾನ ಸಿಕ್ಕ ಕಾರಣ ಹೊರಗುಳಿದಿದ್ದರು.
ಈ ನಿರ್ಧಾರ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದು, ಭಾರತದ ಮಾಜಿ ನಾಯಕ ಹಾಗೂ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ದಿಲೀಪ್ ವೆಂಗ್ಸರ್ಕಾರ್ (Dilip Vengsarkar) ಅವರು ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಅವಕಾಶ ಸಿಗದಿದ್ದರೆ ಆ ಟೂರ್ನಿಯ ಮಹತ್ವವೇನು ಎಂದು ಪ್ರಶ್ನಿಸಿದ್ದರು.
ಪಿಟಿಐ ವರದಿ ಪ್ರಕಾರ, ಔಕಿಬ್ ನಬಿ ಅವರನ್ನು ಇನ್ನೂ 15 ಸದಸ್ಯರ ಮುಖ್ಯ ತಂಡದಲ್ಲಿ ಸೇರಿಸಲಾಗಿಲ್ಲ. ಆದರೆ ಅವರು ಮಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಮತ್ತು ಗುರ್ನೂರ್ ಬ್ರಾರ್ ಅವರೊಂದಿಗೆ ಸ್ಟ್ಯಾಂಡ್ಬೈ ಆಟಗಾರರ ಪಟ್ಟಿಯಲ್ಲಿದ್ದಾರೆ. ಭಾರತ ತಂಡವು ಮಂಗಳವಾರ ಮಧ್ಯಾಹ್ನ ಮೊದಲ ಅಭ್ಯಾಸ ನಡೆಸಲಿದ್ದು, ಐಪಿಎಲ್ ಫೈನಲ್ನಲ್ಲಿ ಆಡಿದ್ದ ಆಟಗಾರರು ಮೊದಲ ದಿನದ ಅಭ್ಯಾಸದಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ ಇದೆ.
ಗಮನಾರ್ಹವಾಗಿ, ಗುಜರಾತ್ ಟೈಟನ್ಸ್ ತಂಡದ ಏಳು ಆಟಗಾರರು ಅಂದರೆ ಶುಭಮನ್ ಗಿಲ್, ಬಿ. ಸಾಯಿ ಸುದರ್ಶನ್, ಗುರ್ನೂರ್ ಬ್ರಾರ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಮಾನವ್ ಸುತಾರ್ ಹಾಗೂ ವಾಷಿಂಗ್ಟನ್ ಸುಂದರ್ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



