T20 ವಿಶ್ವಕಪ್ 2026: ಇಂಗ್ಲೆಂಡ್ ಬೆವರಳಿಸಿದ ನೇಪಾಳಕ್ಕೆ Dale Steyn ಫಿದಾ; ಕೋಚಿಂಗ್ ಆಫರ್ ಕೊಟ್ಟ ದಕ್ಷಿಣ ಆಫ್ರಿಕಾ ಮಾಜಿ ವೇಗಿ!
ಹಾಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹೊಸ ತಂಡಗಳು ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಪಂದ್ಯಾವಳಿಯ ಮೊದಲ ಪಂದ್ಯದಲ್ಲಿಯೇ ನೆದರ್ಲ್ಯಾಂಡ್ಸ್, ಪಾಕಿಸ್ತಾನಕ್ಕೆ ಸೋಲಿನ ಭಯ ತೋರಿಸಿತ್ತು.

ನವದೆಹಲಿ: ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯದಲ್ಲೇ ಕ್ರಿಕೆಟ್ ಜನಕ ಇಂಗ್ಲೆಂಡ್ ಗೆ ಬೆವರಿಳಿಸಿದ್ದ ನೇಪಾಳಕ್ಕೆ ಜಗತ್ತಿನಾದ್ಯಂತ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.
ಹೌದು.. ಹಾಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹೊಸ ತಂಡಗಳು ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಪಂದ್ಯಾವಳಿಯ ಮೊದಲ ಪಂದ್ಯದಲ್ಲಿಯೇ ನೆದರ್ಲ್ಯಾಂಡ್ಸ್, ಪಾಕಿಸ್ತಾನಕ್ಕೆ ಸೋಲಿನ ಭಯ ತೋರಿಸಿತ್ತು.
ಯುಎಸ್ಎ ಕೂಡ ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ವಿರುದ್ಧ ಗಮನಾರ್ಹ ಪ್ರದರ್ಶನ ನೀಡಿತ್ತು. ಇದೀಗ ಫೆಬ್ರವರಿ 8 ರಂದು ನಡೆದ ಪಂದ್ಯದಲ್ಲಿ ನೇಪಾಳ, ಇಂಗ್ಲೆಂಡ್ ತಂಡಕ್ಕೆ ಸಮನಾದ ಹೋರಾಟ ನೀಡಿತು.
ಇಂಗ್ಲೆಂಡ್ ವಿರುದ್ಧ ನೇಪಾಳ ತಂಡದ ಹೋರಾಟ ಎಲ್ಲರ ಗಮನ ಸೆಳೆದಿದ್ದು, ಕೇವಲ 4 ರನ್ ಅಂತರದಲ್ಲಿ ನೇಪಾಳ ವೀರೋಚಿತ ಸೋಲು ಕಂಡಿತ್ತು. ನೇಪಾಳ ತಂಡದ ಪ್ರದರ್ಶನಕ್ಕೆ ಇಡೀ ವಿಶ್ವ ಕ್ರಿಕೆಟ್ ಸಲಾಂ ಹೊಡೆದಿದೆ. ಲೆಜೆಂಡರಿ ಆಟಗಾರರು ನೇಪಾಳ ತಂಡದ ಪ್ರದರ್ಶನವನ್ನು ಕೊಂಡಾಡಿದ್ದಾರೆ.
ಮಾಜಿ ಕ್ರಿಕೆಟಿಗ ಮತ್ತು ಖ್ಯಾತ ಕ್ರಿಕೆಟ್ ವಿಶ್ಲೇಷಕ ಹರ್ಷಭೋಗ್ಲೆ, ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಮತ್ತು ಯುವರಾಜ್ ಸಿಂಗ್ ನೇಪಾಳ ತಂಡದ ಸಾಂಘಿಕ ಹೋರಾಟವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಕೋಚಿಂಗ್ ಆಫರ್ ಕೊಟ್ಟ ಆಫ್ರಿಕಾ ಮಾಜಿ ವೇಗಿ
ಇನ್ನು ಇದರ ಜೊತೆಗೆ ದಕ್ಷಿಣ ಆಫ್ರಿಕಾ ತಂಡದ ಮಾಜಿ ಲೆಜೆಂಡರಿ ವೇಗಿ ಡೇಲ್ ಸ್ಟೈನ್, ನೇಪಾಳ ತಂಡದ ಕೋಚ್ ಆಗುವ ಆಫರ್ ನೀಡಿದ್ದಾರೆ. ನೇಪಾಳ ತಂಡದೊಂದಿಗೆ ಕೆಲಸ ಮಾಡುವ ಬಯಕೆಯನ್ನು ವ್ಯಕ್ತಪಡಿಸಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ಪಂದ್ಯದ ನಂತರ ಪೋಸ್ಟ್ ಹಂಚಿಕೊಂಡಿರುವ ಡೇಲ್ ಸ್ಟೇನ್, ‘ನೇಪಾಳ, ನಿಮಗೆ ಎಂದಾದರೂ ನನ್ನ ಅಗತ್ಯವಿದ್ದರೆ ನಾನು ನಿಮ್ಮ ತಂಡಕ್ಕೆ ಸೇವೆ ನೀಡಲು ಸಿದ್ಧನಿದ್ದೇನೆ’ ಎಂದು ಬರೆದಿದ್ದಾರೆ. ಡೇಲ್ ಸ್ಟೇನ್ ಅವರ ಈ ಪೋಸ್ಟ್ ಇದೀಗ ವೈರಲ್ ಆಗಿದೆ.
4 ರನ್ ವೀರೋಚಿತ ಸೋಲು
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್ಗಳಲ್ಲಿ 184 ರನ್ ಗಳಿಸಿತು. ತಂಡದ ಪರ ನಾಯಕ ಹ್ಯಾರಿ ಬ್ರೂಕ್ 32 ಎಸೆತಗಳಲ್ಲಿ 53 ರನ್ ಗಳಿಸಿದರೆ, ಜೇಕಬ್ ಬೆಥೆಲ್ 35 ಎಸೆತಗಳಲ್ಲಿ 55 ರನ್ ಮತ್ತು ವಿಲ್ ಜಾಕ್ಸ್ 18 ಎಸೆತಗಳಲ್ಲಿ ಔಟಾಗದೆ 39 ರನ್ ಗಳಿಸಿ ತಂಡವನ್ನು ಈ ಉತ್ತಮ ಸ್ಕೋರ್ಗೆ ಕೊಂಡೊಯ್ದರು.
ಈ 185 ರನ್ಗಳ ಗುರಿಯನ್ನು ಬೆನ್ನಟ್ಟುವಲ್ಲಿ ನೇಪಾಳ ಅದ್ಭುತ ಪ್ರದರ್ಶನ ನೀಡಿತು. ಆದರೆ ಅಂತಿಮವಾಗಿ ವಿಫಲವಾಯಿತು. ನೇಪಾಳ 20 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ ಕೇವಲ 180 ರನ್ಗಳನ್ನು ಗಳಿಸಲು ಸಾಧ್ಯವಾಯಿತು. ಅಂತಿಮ ಓವರ್ನಲ್ಲಿ ಗೆಲ್ಲಲು ಅವರಿಗೆ 10 ರನ್ಗಳು ಬೇಕಾಗಿದ್ದವು, ಆದರೆ ಕೇವಲ 5 ರನ್ಗಳನ್ನು ಗಳಿಸಲು ಮಾತ್ರ ಸಾಧ್ಯವಾಯಿತು. ಆ ಮೂಲಕ ಕೇವಲ 4 ರನ್ ಅಂತರದಲ್ಲಿ ನೇಪಾಳ ವೀರೋಚಿತ ಸೋಲು ಕಂಡಿತ್ತು.
ಕೊನೆಯ ಎಸೆತದವರೆಗೂ ಸೋಲೊಪ್ಪಿಕೊಳ್ಳದ ನೇಪಾಳದ ಹೋರಾಟಕ್ಕೆ ಕ್ರಿಕೆಟ್ ವಲಯ ವ್ಯಾಪಕ ಶ್ಲಾಘನೆ ವ್ಯಕ್ತಪಡಿಸುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



