97 ಕೆಜಿ ತೂಕವಿದ್ದರೂ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದ ಭಾರತೀಯ ಆಟಗಾರ; ಸ್ಫೋಟಕ ವರದಿ ಬಹಿರಂಗ, BCCIಗೆ ಸಂಕಷ್ಟ!
ಕಳೆದ ಒಂದು ವರ್ಷದಲ್ಲಿ, ಆಟಗಾರರಿಗಾಗಿ 'ಸೆಂಟರ್ ಆಫ್ ಎಕ್ಸಲೆನ್ಸ್' ವಿಭಿನ್ನ ಮಾನದಂಡಗಳನ್ನು ನಿಗದಿಪಡಿಸಿತ್ತು. ಫಿಟ್‌ನೆಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಕೆಲವು ಹಿರಿಯ ಆಟಗಾರರಿಗೆ ಹೆಚ್ಚು ಸುಲಭವಾದ ಗುರಿಗಳನ್ನು ನೀಡಲಾಗಿತ್ತು ಎಂಬ ವಿಷಯ ಈಗ ಬೆಳಕಿಗೆ ಬಂದಿದೆ.
ಬಿಸಿಸಿಐ ಕಾರಿಡಾರ್‌ಗಳಲ್ಲಿ ಫಿಟ್‌ನೆಸ್‌ಗೆ ಮತ್ತೆ ಹೆಚ್ಚಿನ ಗಮನ ನೀಡಲಾಗಿದೆ. ಇಂಗ್ಲೆಂಡ್ ಮತ್ತು ಐರ್ಲೆಂಡ್‌ನಲ್ಲಿ ಕಳಪೆ ಫಲಿತಾಂಶದ ನಂತರ, ಫಿಟ್‌ನೆಸ್‌ಗಾಗಿ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಇದೀಗ ಬೇಸ್‌ಲೈನ್ ಪ್ಯಾರಾಮೀಟರ್ ಹೊಂದಿಸುವ ಕೆಲಸ ಮಾಡುತ್ತಿದೆ ಎಂದು ವರದಿಯೊಂದು ತಿಳಿಸಿದೆ. ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ ಮತ್ತು ಇತರ ಉನ್ನತ ತಾರೆಯರ ಗಾಯಗಳು ಭಾರತೀಯ ತಂಡಕ್ಕೆ ಅಡ್ಡಿಯಾಗಿರುವ ಈ ಸಮಯದಲ್ಲಿ ಫಿಟ್‌ನೆಸ್ ಕುರಿತು ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಬಿಸಿಸಿಐ ವೈದ್ಯಕೀಯ ತಂಡ (ಸಿಒಇ ಮತ್ತು ಭಾರತೀಯ ತಂಡ) 'ಆಟಗಾರರ ಫಿಟ್‌ನೆಸ್ ಅನ್ನು ನಿರ್ಣಯಿಸಲು ಪರಿಣಾಮಕಾರಿಯಾಗಿ ಸಮನ್ವಯ ಸಾಧಿಸಿ ಕೆಲಸ ಮಾಡಲು ಹೆಣಗಾಡುತ್ತಿದೆ'.
ಕಳೆದ ವರ್ಷ ಸ್ಟ್ರೆಂತ್ ಮತ್ತು ಕಂಡೀಷನಿಂಗ್ ಕೋಚ್ ಆಗಿ ಸೋಹಮ್ ದೇಸಾಯಿ ಅವರ ಬದಲಿಗೆ ಆಡ್ರಿಯನ್ ಲೆ ರೂಕ್ಸ್ ಬಂದ ನಂತರ, 'ಯೋ-ಯೋ ಟೆಸ್ಟ್' (Yo-Yo Test) ಬದಲಿಗೆ 'ಬ್ರಾಂಕೋ ಟೆಸ್ಟ್' (Bronco Test) ಅನ್ನು ಪ್ರಾಥಮಿಕ ದೈಹಿಕ ಸಾಮರ್ಥ್ಯದ ಪರೀಕ್ಷೆಯನ್ನಾಗಿ ಮಾಡಲಾಯಿತು. ಆದಾಗ್ಯೂ, ಇಲ್ಲಿಯವರೆಗೆ ಇದಕ್ಕೆ ಯಾವುದೇ ನಿರ್ದಿಷ್ಟ ಮಾನದಂಡ (baseline parameter) ಇರಲಿಲ್ಲ. ಇನ್ನು ಮುಂದೆ, ಆಯ್ಕೆಗೆ ಅರ್ಹರೆಂದು ಪರಿಗಣಿಸಲ್ಪಡಲು ಮತ್ತು ನಿಗದಿತ ವ್ಯಾಯಾಮಗಳನ್ನು ಪೂರ್ಣಗೊಳಿಸಲು 5.15 ರಿಂದ 5.20 ನಿಮಿಷಗಳ ಸಮಯವನ್ನು ಮಾನದಂಡವನ್ನಾಗಿ ಬಿಸಿಸಿಐ ವೈದ್ಯಕೀಯ ತಂಡವು ನಿಗದಿಪಡಿಸಿದೆ.
'ಭಾರತೀಯ ಆಟಗಾರರಿಗೆ 'ಬ್ರಾಂಕೋ ಟೆಸ್ಟ್' ಪರಿಚಯವಿಲ್ಲ. ಕಳೆದ ಒಂದು ವರ್ಷದಲ್ಲಿ, ಆಟಗಾರರಿಗಾಗಿ 'ಸೆಂಟರ್ ಆಫ್ ಎಕ್ಸಲೆನ್ಸ್' (CoE) ವಿಭಿನ್ನ ಮಾನದಂಡಗಳನ್ನು ನಿಗದಿಪಡಿಸಿತ್ತು. ಫಿಟ್‌ನೆಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಕೆಲವು ಹಿರಿಯ ಆಟಗಾರರಿಗೆ ಹೆಚ್ಚು ಸುಲಭವಾದ ಗುರಿಗಳನ್ನು ನೀಡಲಾಗಿತ್ತು ಎಂಬ ವಿಷಯ ಈಗ ಬೆಳಕಿಗೆ ಬಂದಿದೆ. ತಂಡದ ಆಡಳಿತ ಮಂಡಳಿಯ ಅಗತ್ಯಗಳಿಗೆ ಅನುಗುಣವಾಗಿ ಆಟಗಾರರನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು CoE ಸಿಬ್ಬಂದಿ, ಹರ್ಷಿತ್ ರಾಣಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರಂತಹ ಆಟಗಾರರಿಗೂ ಅನುಮೋದನೆ ನೀಡಿದ್ದರು' ಎಂದು ಬಿಸಿಸಿಐ ಮೂಲವೊಂದು TOIಗೆ ತಿಳಿಸಿದೆ.
ಹೊಸ ದೈಹಿಕ ಸಾಮರ್ಥ್ಯದ ವ್ಯಾಯಾಮಗಳ (ಫಿಟ್‌ನೆಸ್ ಡ್ರಿಲ್ಸ್) ಬಗ್ಗೆ ಭಾರತ ತಂಡದ ನಿಯಮಿತ ಆಟಗಾರರಿಗೆ ಸರಿಯಾಗಿ ಮಾಹಿತಿ ನೀಡಿರಲಿಲ್ಲ ಎಂದು ವರದಿ ತಿಳಿಸಿದೆ. ಶ್ರೀಲಂಕಾಕ್ಕೆ ತೆರಳುವ ಮುನ್ನ 'ಸೆಂಟರ್ ಆಫ್ ಎಕ್ಸಲೆನ್ಸ್' ನಲ್ಲಿ ನಡೆದ ಅನಿರೀಕ್ಷಿತ ದೈಹಿಕ ಸಾಮರ್ಥ್ಯ ಪರೀಕ್ಷೆಗಳಿಂದಾಗಿ ಅಚ್ಚರಿಗೊಳಗಾದ ಮೊಹಮ್ಮದ್ ಸಿರಾಜ್ ಅವರ ಉದಾಹರಣೆಯನ್ನು ಇದರಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ.
ಹರ್ಷಿತ್ ರಾಣಾ ಅವರ ವಿಷಯವೂ ಇದೇ ರೀತಿಯದ್ದಾಗಿದೆ. ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾದಾಗ, ಅವರ ದೇಹದ ತೂಕ ಮಿತಿಗಿಂತ ಹೆಚ್ಚಿರುವುದು ಕಂಡುಬಂದಿತ್ತು. ಅವರು ಮೊಣಕಾಲಿನ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳುತ್ತಿದ್ದರು.
'ಅವರ ತೂಕವು ನಿಗದಿತ ಮಿತಿಗಿಂತ 4 ಕೆಜಿ ಹೆಚ್ಚಿದೆ ಎಂದು ಭಾರತೀಯ ತಂಡದ ಆಡಳಿತ ಮಂಡಳಿ ಗಮನಕ್ಕೆ ತಂದಿತ್ತು. ಈ ವಿಷಯದಲ್ಲಿ 'ಸೆಂಟರ್ ಆಫ್ ಎಕ್ಸಲೆನ್ಸ್' ಜಾಗರೂಕತೆಯಿಂದ ವರ್ತಿಸಬೇಕಿತ್ತು. ಅವರ ತೂಕವು 96 ಕೆಜಿಗಿಂತ ಹೆಚ್ಚಿರಬಾರದು ಎಂದು CoE ಸಿಬ್ಬಂದಿ ಈಗ ಅವರಿಗೆ ಸೂಚಿಸಿದ್ದಾರೆ. ಸದ್ಯ ಅವರ ತೂಕ 94 ಕೆಜಿ ಇದ್ದು, ಮುಂದಿನ ವಾರ ಅವರಿಗೆ ಅನುಮೋದನೆ ಸಿಗುವ ನಿರೀಕ್ಷೆಯಿದೆ. ಆದರೆ, ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತೀಯ ತಂಡಕ್ಕೆ ಆಯ್ಕೆಯಾಗಲು ಅನುಮೋದನೆ ಪಡೆದಿದ್ದಾಗ ಅವರ ತೂಕ 97 ಕೆಜಿ ಇತ್ತು' ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

