ಅಂಕಣಗಳು

ಬಿಟ್ ಕಾಯಿನ್ ಬಗ್ಗೆ ನಿಮಗೆಷ್ಟು ಗೊತ್ತು ? ಹೂಡಿಕೆಗೆ ನೀಡಬಹುದೇ ಒತ್ತು?

ಒಂದು ವಾರದಲ್ಲಿ ಮೂರು ಜನ ಗೆಳೆಯರು ಬಿಟ್ ಕಾಯಿನ್ ಎನ್ನುವ ಹೆಸರು ಕೇಳಿದ್ದೇವೆ ಹಾಗೆಂದರೇನು? ಅದು ಹೇಗೆ ಕೆಲಸ ನಿರ್ವಹಿಸುತ್ತದೆ? ಅದರಲ್ಲಿ ಹೂಡಿಕೆ ಮಾಡಬಹುದೇ? ಎನ್ನುವ ಪ್ರಶ್ನೆಯನ್ನ ಕೇಳಿದ್ದಾರೆ...

ಬಿಟ್ ಕಾಯಿನ್ ಬಗ್ಗೆ ನಿಮಗೆಷ್ಟು ಗೊತ್ತು ? ಹೂಡಿಕೆಗೆ ನೀಡಬಹುದೇ ಒತ್ತು?
ಬಿಟ್ ಕಾಯಿನ್ (ಸಾಂಕೇತಿಕ ಚಿತ್ರ)
ಒಂದು ವಾರದಲ್ಲಿ ಮೂರು ಜನ ಗೆಳೆಯರು ಬಿಟ್ ಕಾಯಿನ್ ಎನ್ನುವ ಹೆಸರು ಕೇಳಿದ್ದೇವೆ ಹಾಗೆಂದರೇನು? ಅದು ಹೇಗೆ ಕೆಲಸ ನಿರ್ವಹಿಸುತ್ತದೆ? ಅದರಲ್ಲಿ ಹೂಡಿಕೆ ಮಾಡಬಹುದೇ? ಎನ್ನುವ ಪ್ರಶ್ನೆಯನ್ನ ಕೇಳಿದ್ದಾರೆ. ಗೆಳೆಯ ಅಶ್ವತ್ಥ ದೇಶಪಾಂಡೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ಚಿಕ್ಕಪ್ಪ ಹೂಡಿಕೆ ವಿಷಯದಲ್ಲಿ ಬಹಳ ಚುರುಕು ಅವರು ಬಿಟ್ ಕಾಯಿನ್ ನಲ್ಲಿ ಹೂಡಿಕೆ ಮಾಡಿದ್ದಾರೆ ಮತ್ತು ನಮ್ಮನ್ನೂ ಅದರಲ್ಲಿ ಹೂಡಿಕೆ ಮಾಡುವಂತೆ ಪ್ರೇರೇಪಿಸುತ್ತಾರೆ. ಆದರೆ ಇದು ಭಾರತದಲ್ಲಿ ಮಾನ್ಯತೆ ಪಡೆದಿದೆಯೇ? ಅಥವಾ ಇಲ್ಲವೇ ಎನ್ನುವ ಬಗ್ಗೆಯೂ ಗೊಂದಲಗಳಿವೆ ಏನು ಮಾಡುವುದು? ಎನ್ನುವ ಪ್ರಶ್ನೆಯನ್ನ ಮುಂದಿಟ್ಟಿದ್ದಾನೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಪಡೆಯಲು ಮುಂದಿನ ಸಾಲುಗಳಲ್ಲಿ ಪ್ರಯತ್ನಿಸೋಣ. 
ಬಿಟ್ ಕಾಯಿನ್ ಹಾಗೆಂದರೇನು? 
ಬಿಟ್ ಕಾಯಿನ್ ಎನ್ನುವುದು ಡಿಜಿಟಲ್ ಕರೆನ್ಸಿ. ಇದು ಪ್ರಿಂಟ್ ರೂಪದಲ್ಲಿ ಇರುವುದಿಲ್ಲ. ಇದು ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿ ಮಾತ್ರ ಇರುತ್ತದೆ. ಅಂದರೆ ನಮ್ಮ ಟ್ರಡಿಷನಲ್ ಯುರೋ, ಡಾಲರ್ ಅಥವಾ ರೂಪಾಯಿಯಂತೆ ಇದು ಭೌತಿಕ ರೂಪದಲ್ಲಿ ಇರುವುದಿಲ್ಲ. ಅಲ್ಲದೆ ಇದನ್ನ ಯಾವುದೇ ದೇಶ ಅಥವಾ ಬ್ಯಾಂಕ್ ತನ್ನದು ಎಂದು ಎನ್ನುವಂತಿಲ್ಲ. ಇದು ಜನರಿಗೆ ಸೇರಿದ್ದು. ಗಣಿತದ ಸಮಸ್ಯೆಗಳನ್ನ ಪರಿಹರಿಸುವ ಸಾಫ್ಟ್ವೇರ್ ಮೂಲಕ ಇದನ್ನ ಸೃಷ್ಟಿಸಲಾಗುತ್ತದೆ. ಈ ತಂತ್ರಾಂಶದಲ್ಲಿ ಉಪಯೋಗಿಸುವ ಕೋಡ್ ಅನ್ನು ಮುಕ್ತವಾಗಿ ಸಾರ್ವಜನಿಕರಿಗೆ ತೆರೆದಿಡಲಾಗಿದೆ. ಅಂದರೆ ಇದೊಂದು ಓಪನ್ ಸೊರ್ಸ್ ಇದನ್ನ ಯಾರು ಯಾವಾಗ ಬೇಕಾದರೂ ಪರಾಮರ್ಶಿಸಬಹದು. 
ನಮ್ಮ ಟ್ರಡಿಷನಲ್ ಕರೆನ್ಸಿ ಚಿನ್ನದ ಮೇಲೆ ಆಧಾರವಾಗಿತ್ತು. ಬಿಟ್ ಕಾಯಿನ್ ಕಥೆಯೇನು? 
ನಮ್ಮ ಟ್ರಡಿಷನಲ್ ಕರೆನ್ಸಿ ಮುದ್ರಣ ಚಿನ್ನದ ಮೇಲೆ ಆಧಾರವಾಗಿತ್ತು. ಅಂದರೆ ನೀವು ನೂರು ರೂಪಾಯಿ ನೋಟನ್ನ ಬ್ಯಾಂಕಿಗೆ ಮರಳಿ ಕೊಟ್ಟರೆ ಅವರು ಅಷ್ಟು ಮೌಲ್ಯದ ಅಥವಾ ಅದರ ನಿರ್ಧಾರಿತ ಮೌಲ್ಯದ ಚಿನ್ನವನ್ನ ನಿಮಗೆ ವಾಪಸ್ಸು ಕೊಡುತ್ತಾರೆ ಎನ್ನುವ ನಂಬಿಕೆ ಅಥವಾ ನಿಯಮದೊಂದಿಗೆ ನಮ್ಮ ಟ್ರಡಿಷನಲ್ ನೋಟುಗಳು ಚಾಲ್ತಿಗೆ ಬಂದವು. ಆದರೆ ಇಂದೇನಾಗಿದೆ? ನಾವು ನೋಟು ಮರಳಿಸಿ ಚಿನ್ನ ಪಡೆಯಲು ಸಾಧ್ಯವೇ? ಇದೊಂದು ಪ್ರಾಕ್ಟಿಕಲ್ ಆಗಿ ಆಗದೆ ಇರುವ ವಿಷಯ ಎನ್ನುವುದನ್ನ ನಾವೆಲ್ಲಾ ಒಪ್ಪಿಕೊಂಡಾಗಿದೆ. ಬಿಟ್ ಕಾಯಿನ್ ಸೃಷ್ಟಿ ಗಣಿತದ ಆಧಾರದ ಮೇಲೆ ಆಗಿದೆ. ಇದಕ್ಕೆ ಬಳಸಿದ ಫಾರ್ಮುಲಾ ಸರಿಯೇ ತಪ್ಪೇ ಎನ್ನುವುದನ್ನ ಜಗತ್ತಿನ ಯಾರು ಬೇಕಾದರೂ ಲೆಕ್ಕ ಮಾಡಿ ನೋಡಬಹದು, ಸರಿಯಿಲ್ಲದಿದ್ದರೆ ತಿದ್ದಬಹದು ಏಕೆಂದರೆ ಇದೊಂದು ಮುಕ್ತ ತಾಣ. 
ಎಷ್ಟು ಬಿಟ್ ಕಾಯಿನ್ ಬೇಕಾದರೂ ಸೃಷ್ಟಿಸಬಹುದೇ? 
ನಮ್ಮ ಟ್ರಡಿಷನಲ್ ಕರೆನ್ಸಿಯಲ್ಲಿ ಜಗತ್ತಿನ ಯಾವುದೇ ದೇಶದ ಮೇಲೆ ಇಷ್ಟೇ ಮೊತ್ತದ ಹಣವನ್ನ ಮಾತ್ರ ಮುದ್ರಿಸಬೇಕು ಎನ್ನುವ ನಿಯಮವಿಲ್ಲ. ಅವಶ್ಯಕತೆಗೆ ಅನುಗುಣವಾಗಿ ಇದನ್ನ ಮುದ್ರಿಸುವ ಅವಕಾಶ ಎಲ್ಲರಿಗೂ ಇದೆ. ಹೀಗೆ ಹಣದ ಮೊತ್ತ ಹೆಚ್ಚುತ್ತಾ ಹೋದಂತೆಲ್ಲ ಹಣದ ಮೌಲ್ಯ ಕುಸಿಯುತ್ತದೆ. ಒಂದು ದೇಶದಿಂದ ಇನ್ನೊಂದು ದೇಶದ ಹಣದ ಮೌಲ್ಯದಲ್ಲಿ ಆಗುವ ವ್ಯತ್ಯಾಸಕ್ಕೆ ಇದೂ ಒಂದು ಕಾರಣ. ಆದರೆ ಬಿಟ್ ಕಾಯಿನ್ ನಲ್ಲಿ ಹೆಚ್ಚೆಂದರೆ 21 ಮಿಲಿಯನ್ ಮಾತ್ರ ಸೃಷ್ಟಿಸಬಹದು. ಹೀಗಾಗಿ ಬಿಟ್ ಕಾಯಿನ್ ಮೌಲ್ಯದಲ್ಲಿ ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ. 
ಬಿಟ್ ಕಾಯಿನ್ ಹೇಗೆ ಕೊಳ್ಳುವುದು? 
ನೀವು ರೂಪಾಯಿ ಕೊಟ್ಟು ಪೆಟಿಎಂ ಹಣ ಕೊಳ್ಳುವುದಿಲ್ಲವೇ? ಹಾಗೆ ಇದು ಕೂಡ.  ಮೊದಲಿಗೆ ಮಾರುಕಟ್ಟೆಯಲ್ಲಿ ಇರುವ ಹಲವಾರು ಆಪ್ ಗಳಲ್ಲಿ ಅತ್ಯಂತ ಹೆಚ್ಚು ಜನ ಬಳಸುತ್ತಿರುವ ಕಾಯಿನ್ ಬೇಸ್, ಬಿಟ್ ಕ್ವಿಕ್, ಕಾಯಿನ್ ಕಾರ್ನರ್ ಹೀಗೆ ಯಾವುದಾದರೊಂದು ತಂತ್ರಾಂಶವನ್ನ ನಿಮ್ಮ ಮೊಬೈಲ್ನಲ್ಲಿ ಅಥವಾ ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ನಂತರ ಡಾಲರ್, ಯುರೋ ಹಣವನ್ನ ನೀಡಿ ಬಿಟ್ ಕಾಯಿನ್ ಕೊಳ್ಳಬಹುದು. ಹೀಗೆ ನೀವು ಕೊಂಡ ಬಿಟ್ ಕಾಯಿನ್ ಮೂಲಕ ಜಗತ್ತಿನೆಲ್ಲೆಡೆ ಇದನ್ನ ವಿನಿಮಯ ಮಾಧ್ಯಮವನ್ನಾಗಿ ಬಳಸಬಹದು. ಈ ಲೇಖನ ಬರೆಯುವಾಗ ಒಂದು ಬಿಟ್ ಕಾಯಿನ್ ಕೊಳ್ಳಲು ಐದು ಲಕ್ಷ ಮೂವತ್ತಮೂರು ಸಾವಿರ ಒಂಬೈನ್ನೋರ ಐವತ್ತನಾಲ್ಕು ರೂಪಾಯಿ ನೀಡಬೇಕಾಗುತ್ತದೆ. 
ಬಿಟ್ ಕಾಯಿನ್ ಕೊಳ್ಳುವುದರಿಂದ ಆಗುವ ಲಾಭ ನಷ್ಟಗಳೇನು ? 
ಲಾಭ: 
  • ಬಿಟ್ ಕಾಯಿನ್ ಬಳಸಿ ಜಗತ್ತಿನೆಲ್ಲೆಡೆ ವ್ಯವಹಾರ ಮಾಡಬಹದು.

  • ಮುಂಬರುವ ದಿನದಲ್ಲಿ ಇಡೀ ಜಗತ್ತಿಗೆ ಒಂದು ಕರೆನ್ಸಿ ಆಗುವ ಸಾಧ್ಯತೆಗಳಿವೆ ಆಗ ವಿನಿಮಯ ದರ ಮತ್ತು ಅದರಿಂದ ಆಗುವ ನಷ್ಟಗಳು ತಪ್ಪುತ್ತದೆ. 
  • ಇದು ಯಾವೊಂದು ನಿರ್ದಿಷ್ಟ ದೇಶದ ಹಿಡಿತದಲ್ಲಿಲ್ಲ ಹೀಗಾಗಿ ಇದರ ವಹಿವಾಟು ಮುಕ್ತವಾಗಿರುತ್ತದೆ. 

  • ಇಲ್ಲಿ ಮಧ್ಯವರ್ತಿಯಂತೆ ಕೆಲಸ ಮಾಡುವ ಬ್ಯಾಂಕ್ಗಳು ಇರುವುದಿಲ್ಲ ಹೀಗಾಗಿ ಬ್ಯಾಂಕಿಗೆ ಕೊಡುವ ಕಮಿಷನ್ ಹಣ ಉಳಿತಾಯಾವಾಗುತ್ತದೆ. 

  • ಇಲ್ಲಿನ ವಹಿವಾಟು ಅತಿ ಶೀಘ್ರದಲ್ಲಿ ಮುಗಿದು ಹೋಗುತ್ತದೆ. ಉದಾಹರಣೆ ನೋಡಿ ಟ್ರಡಿಷನಲ್ ಬ್ಯಾಂಕಿಂಗ್ ಪ್ರಕಾರ ಭಾರತದಿಂದ ಇಂಗ್ಲೆಂಡ್ ಅಥವಾ ಅಮೇರಿಕಾ ಎಲ್ಲಿಗಾದರೂ ಸರಿಯೇ ಹಣ ವರ್ಗಾವಣೆ ಮಾಡಲು ಅನುಮತಿ ಬೇಕು. ಈ ರೀತಿಯ ಹಣ ವರ್ಗಾವಣೆಗೆ ವಾರಗಟ್ಟಲೆ ಹಿಡಿಯುತ್ತಿದೆ. ಬಿಟ್ ಕಾಯಿನ್ ನಲ್ಲಿ ಎಲ್ಲವೂ ನಿಮಿಷ ಗಳಲ್ಲಿ ಮುಗಿದು ಹೋಗುತ್ತದೆ. 
ನಷ್ಟ :
  • ಟ್ರಡಿಶನಲ್ ಹಣಕಾಸು ನಿಯಮ ತಿಳಿಯದ ಜನಸಾಮಾನ್ಯ ಇದನ್ನ ಕಲಿಯುವುದು ಕಷ್ಟಸಾಧ್ಯ. 
  • ಸಧ್ಯದ ಮಟ್ಟಿಗೆ ಇದು ಜೂಜಾಟದಂತಿದೆ . ಬಿಟ್ ಕಾಯಿನ್ ಮೌಲ್ಯದಲ್ಲಿ ಸದಾ ಏರುಪೇರು ಆಗುತ್ತಲೇ ಇರುತ್ತದೆ.
  • ಒಮ್ಮೆ ಬಿಟ್ ಕಾಯಿನ್ ಮೂಲಕ ಹಣ ಸಂದಾಯವಾದರೆ ಮುಗಿಯಿತು ಮತ್ತೆ ಅದನ್ನ ಮರಳಿ ಪಡೆಯಲು ಸಾಧ್ಯವಿಲ್ಲ . ಅಂದರೆ ಆಕಸ್ಮಾತ್ ನೀವು ರಾಮನಿಗೆ ಹಣ ಕಳಿಸುವ ಬದಲು ತಪ್ಪಾಗಿ ಲಕ್ಷ್ಮಣನಿಗೆ ಹಣ ಕಳಿಸಿದರೆ ಮುಗಿಯಿತು . ಇಲ್ಲಿ ತಪ್ಪ ತಿದ್ದಲು ಬರುವುದಿಲ್ಲ . ಅಪ್ಪಿಗೆ ಬೆಲೆ ತೆತ್ತು ಸುಮ್ಮನಿರಬೇಕು ಇಲ್ಲವೇ ನೇರವಾಗಿ ಲಕ್ಷ್ಮಣನಿಂದ ಹೋಗಿ ಹಣ ಪಡೆಯಬೇಕು . 
  • ಸದ್ಯದ ಮಟ್ಟಿಗೆ ಇದನ್ನ ಇನ್ನೂ ಜಗತ್ತಿನ ಬಹಳ ದೇಶಗಳಲ್ಲಿ ಇದಕ್ಕೆ ಮಾನ್ಯತೆ ಸಿಕ್ಕಿಲ್ಲ. 
  • ಹಣ ವರ್ಗಾವಣೆ ಬಹಳ ಸುಲಭವಾಗುವರಿಂದ ಇದನ್ನ  ದೇಶದ ಕೆಡುಕಿಗೆ , ಟೆರರಿಸಂ ನಂತ ಹೀನ ಕೃತ್ಯ ನೆಡೆಸಲು ಬಳಸಲು ಸುಲಭವಾಗುತ್ತದೆ. 
ಭಾರತದಲ್ಲಿ ಇದು ಕಾನೂನು ಬದ್ಧವೇ? 
ಸದ್ಯಕ್ಕೆ ಇದು ಭಾರತದಲ್ಲಿ ಕಾನೂನು ಬದ್ಧವಲ್ಲ. ನವಂಬರ್ 3 2017 ರಂದು ಭಾರತ ಸರಕಾರಕ್ಕೆ ಬಿಟ್ ಕಾಯಿನ್ ಡೀಲರ್ ಗಳನ್ನ ಅಮಾನ್ಯ ಮಾಡಲು ಮನವಿ ಮಾಡಲಾಗಿದೆ. ಹಾಗೇನಾದರು ಇದಕ್ಕಾಗಿ ನೇಮಕವಾಗಿದ್ದ ಪ್ಯಾನೆಲ್ ನ ಸಲಹೆ ಸ್ವೀಕಾರವಾದರೆ ಭಾರತದಲ್ಲಿ ಇದನ್ನ ನಿಷೇಧ ಮಾಡಲಾಗುತ್ತದೆ. ಆಕಸ್ಮಾತ್ ಇದನ್ನ ಕಾನೂನು ಬದ್ದ ಮಾಡಿದರೆ ಆಗ ಇದು ಆರ್ ಬಿ ಐ ನ ಕಾನೂನು ಕಟ್ಟಳೆಗಳ ಅಡಿಯಲ್ಲಿ ಬರುತ್ತದೆ. 
ಇದರಲ್ಲಿ ಹೂಡಿಕೆ ಮಾಡಬಹುದೇ? 
ಸದ್ಯದ ಪರಿಸ್ಥಿತಯಲ್ಲಿ ಇದರ ಮೇಲೆ ಹೂಡಿಕೆ ಮಾಡದಿರುವುದೇ ಮೇಲು. ಇನ್ನಷ್ಟು ಸಮಯ ಕಳೆದು ಇದೊಂದು ಉತ್ತಮ ಲೋಪದೋಷವಿಲ್ಲದ ಕರೆನ್ಸಿ ಆದಾಗ ಬೆಲೆಯೂ ಇಳಿಯಲೇಬೇಕು. ಸದ್ಯ ಇದರ ಮೇಲಿನ ಹೂಡಿಕೆ ಜೋಜಾಟಕ್ಕಿಂತ ಕಡಿಮೆಯೇನಲ್ಲ. ಬಿಟ್ ಕಾಯಿನ್ ಇರಲಿ ಅಥವಾ ಬೇರೇನೇ ಇರಲಿ ಹೂಡಿಕೆ ಮಾಡುವ ಮುನ್ನ ಅದರ ಪೂರ್ಣ ಜ್ಞಾನ ನಿಮ್ಮದಾಗಿರಲಿ. ನೆನಪಿರಲಿ ಒಮ್ಮೆ ಹಣ ನಿಮ್ಮಿಂದ ಹೊರ ಹೋದರೆ ಮುಗಿಯಿತು ಅದನ್ನ ಮರಳಿ ಸಂಪಾದಿಸುವುದು ಬಹು ಕಷ್ಟ. 
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.