ಅಂಕಣಗಳು

ಪೂರ್ಣ ಸಾಮರ್ಥ್ಯದ ಉತ್ಪಾದನೆ, ಆದರೂ ಮನೆಗಳನ್ನು ತಲುಪದ ಸೌರ ವಿದ್ಯುತ್!

ಇದು ವಿದ್ಯುತ್ ತಂತಿಗಳನ್ನು ಅಳವಡಿಸುವ ನಿಟ್ಟಿನಲ್ಲಿ ಒಂದು ರಾಷ್ಟ್ರೀಯ ಯೋಜನೆಯಾಗಿದ್ದು, ಇದೇ ಮೊದಲ ಬಾರಿಗೆ ಸ್ವಚ್ಛ ಇಂಧನಕ್ಕೆ ಅಗತ್ಯವಾದ ಬೃಹತ್ ಬ್ಯಾಟರಿಗಳನ್ನು ಬಳಸಲಾಗುತ್ತದೆ.

ಪೂರ್ಣ ಸಾಮರ್ಥ್ಯದ ಉತ್ಪಾದನೆ, ಆದರೂ ಮನೆಗಳನ್ನು ತಲುಪದ ಸೌರ ವಿದ್ಯುತ್!
ಸಾಂಕೇತಿಕ ಚಿತ್ರ — online desk
Published On :

ರಾಜಸ್ಥಾನದ ಮರುಭೂಮಿ ಪ್ರದೇಶದಲ್ಲಿ ಮಧ್ಯಾಹ್ನದ ಸುಡು ಬಿಸಿಲನ್ನು ಕಲ್ಪಿಸಿಕೊಳ್ಳಿ. ಆ ಮರುಭೂಮಿಗಳಲ್ಲಿ ಸಾವಿರಾರು ಸೌರ ವಿದ್ಯುತ್ ಫಲಕಗಳು ಪೂರ್ಣ ಸಾಮರ್ಥ್ಯದಲ್ಲಿ ವಿದ್ಯುತ್ ಉತ್ಪಾದಿಸುತ್ತಿವೆ. ಆದರೆ, ಆ ಸ್ವಚ್ಛ ವಿದ್ಯುತ್ತಿನ ಒಂದು ಭಾಗ ಮಾತ್ರ ಯಾವುದೇ ಮನೆಯನ್ನು ತಲುಪುವುದಿಲ್ಲ.

ಆ ವಿದ್ಯುತ್ತನ್ನು ಸಾಗಿಸಬೇಕಾದ ವಯರ್‌ಗಳು ಈಗಾಗಲೇ ತುಂಬಿರುವುದು ಇದಕ್ಕೆ ಕಾರಣ. ಅತ್ಯಧಿಕ ಇಳುವರಿ ಪಡೆದ ರೈತನಿಗೆ ಬೆಳೆಯನ್ನು ಮಾರುಕಟ್ಟೆಗೆ ಒಯ್ಯಲು ಲಾರಿಯ ಕೊರತೆ ಉಂಟಾಗುವುದಕ್ಕೆ ಇದನ್ನು ಹೋಲಿಸಬಹುದು.

ಈಗ, ಆ ಹೆಚ್ಚುವರಿ ಸೂರ್ಯನ ಬೆಳಕಿನ ಶಕ್ತಿಯನ್ನು ಮಧ್ಯಾಹ್ನದ ವೇಳೆ ಸಂಗ್ರಹಿಸಿ, ಸೂರ್ಯಾಸ್ತವಾದ ಬಳಿಕ, ಫ್ಯಾನುಗಳು, ವಿದ್ಯುತ್ ದೀಪಗಳು, ಮತ್ತು ದೂರದರ್ಶನಗಳು ಆರಂಭಗೊಳ್ಳುವಾಗ ಬಳಸುವುದನ್ನು ಊಹಿಸಿಕೊಳ್ಳಿ. ಭಾರತ ಸರ್ಕಾರ ಸೆಪ್ಟೆಂಬರ್ 30, ಬುಧವಾರದಂದು ಹಸಿರು ಇಂಧನ ಕಾರಿಡಾರಿನ ಮೂರನೇ ಹಂತಕ್ಕೆ ಅನುಮತಿ ನೀಡಿದ್ದರ ಹಿಂದೆ ಇಂತಹದ್ದೇ ಉದ್ದೇಶ ಇದೆ.

ಇದು ವಿದ್ಯುತ್ ತಂತಿಗಳನ್ನು ಅಳವಡಿಸುವ ನಿಟ್ಟಿನಲ್ಲಿ ಒಂದು ರಾಷ್ಟ್ರೀಯ ಯೋಜನೆಯಾಗಿದ್ದು, ಇದೇ ಮೊದಲ ಬಾರಿಗೆ ಸ್ವಚ್ಛ ಇಂಧನಕ್ಕೆ ಅಗತ್ಯವಾದ ಬೃಹತ್ ಬ್ಯಾಟರಿಗಳನ್ನು ಬಳಸಲಾಗುತ್ತದೆ.

ಇಲ್ಲಿ ಎರಡು ಅಳತೆಯ ಮಾಪಕಗಳು ನೆರವಾಗುತ್ತವೆ. ಮೊದಲನೆಯದು ಗಿಗಾವ್ಯಾಟ್ (GW). ಇದು ಒಂದು ಸಮಯದಲ್ಲಿ ಎಷ್ಟು ವಿದ್ಯುತ್ ಪ್ರವಹಿಸುತ್ತದೆ ಎನ್ನುವುದನ್ನು ಅಳೆಯುತ್ತದೆ. ಇದನ್ನು ಒಂದು ರೀತಿ ಟ್ಯಾಪ್‌ನಲ್ಲಿ ನೀರು ಹರಿಯುವ ವೇಗಕ್ಕೆ ಹೋಲಿಸಬಹುದು. ಎರಡನೆಯದು ಗಿಗಾವ್ಯಾಟ್ ಹವರ್ (GWh) ಆಗಿದ್ದು, ಇದು ಒಟ್ಟು ವಿದ್ಯುತ್ ಪ್ರಮಾಣವನ್ನು ಅಳೆಯುತ್ತದೆ. ಒಂದು ಬಕೆಟ್‌ನಲ್ಲಿ ಸಂಗ್ರಹಿತವಾದ ನೀರಿನ ಪ್ರಮಾಣವನ್ನು ಹೇಳುವುದಕ್ಕೆ ಇದನ್ನು ಹೋಲಿಸಬಹುದು.

ಸರ್ಕಾರಿ ಅಂಕಿಅಂಶಗಳ ಪ್ರಕಾರ, ಎಪ್ರಿಲ್ 2025ರಿಂದ ಮಾರ್ಚ್ 2026ರ ನಡುವಿನ 2025-26ನೇ ಹಣಕಾಸು ವರ್ಷದಲ್ಲಿ ಅಂದಾಜು 6,900 ಗಿಗಾವ್ಯಾಟ್ ಹವರ್ ಪ್ರಮಾಣದಷ್ಟು ಶುದ್ಧ ವಿದ್ಯುತ್ತನ್ನು ಸಂಪೂರ್ಣವಾಗಿ ಪೂರೈಸಲಾಗಿಲ್ಲ.

ಬಳಿಕ, 2026ರ ಎಪ್ರಿಲ್‌ನಿಂದ ಆರಂಭಗೊಂಡ ಮುಂದಿನ ಹಣಕಾಸು ವರ್ಷ ಬಂತು. ಎಪ್ರಿಲ್‌ನಿಂದ ಜೂನ್ ನಡುವಿನ ಕೇವಲ ಮೂರು ತಿಂಗಳ ಅವಧಿಯಲ್ಲಿ 8,133 ಗಿಗಾವ್ಯಾಟ್ ಹವರ್ ಪ್ರಮಾಣದಷ್ಟು ಸೌರ ವಿದ್ಯುತ್ತನ್ನು ಒದಗಿಸಲಾಗಿಲ್ಲ ಎಂದು ಸರ್ಕಾರ ಸಂಸತ್ತಿಗೆ ತಿಳಿಸಿದೆ. ಅಂದರೆ, ಹಿಂದಿನ ಸಂಪೂರ್ಣ 12 ತಿಂಗಳಿನಲ್ಲಿ ಕಳೆದುಹೋದದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದ ವಿದ್ಯುತ್ ಈ ಮೂರು ತಿಂಗಳಲ್ಲಿ ನಷ್ಟವಾಗಿದೆ! ಇದರ ಪ್ರಮಾಣವೆಷ್ಟು ಎನ್ನುವುದನ್ನು ಅರ್ಥ ಮಾಡಿಕೊಳ್ಳಲು, ನಿಮ್ಮ ಮನೆಯ ವಿದ್ಯುತ್ ಬಿಲ್‌ನಲ್ಲಿ ದಾಖಲಿಸಿರುವ 'ಯುನಿಟ್' ಅನ್ನು ಯೋಚಿಸಿ. ಒಂದು ಯುನಿಟ್ ವಿದ್ಯುತ್ ಎನ್ನುವುದು 100 ವ್ಯಾಟ್ ಸಾಮರ್ಥ್ಯದ ಗೃಹೋಪಕರಣಗಳು ಹತ್ತು ಗಂಟೆಯಲ್ಲಿ ಬಳಸುವ ವಿದ್ಯುತ್. ಒಂದು ಗಿಗಾವ್ಯಾಟ್ ಹವರ್ ಎನ್ನುವುದು ಇಂತಹ ಹತ್ತು ಲಕ್ಷ ಯುನಿಟ್‌ಗಳಿಗೆ ಸಮನಾಗಿದೆ. ಆದ್ದರಿಂದ, 8,133 GWh ಎನ್ನುವುದು ಅಂದಾಜು 813 ಕೋಟಿ ಯುನಿಟ್‌ಗಳಿಗೆ ಸಮನಾಗುತ್ತದೆ. ಸಾಮಾನ್ಯ ಮನೆಯೊಂದರಲ್ಲಿ, ತಿಂಗಳಿಗೆ 100 ಯುನಿಟ್‌ಗಳು ಮತ್ತು ವಾರ್ಷಿಕವಾಗಿ 1,200 ಯುನಿಟ್‌ಗಳು ಬಳಕೆಯಾಗುತ್ತವೆ. ಈಗ ಬಳಕೆಗೆ ಸಿಗದ ಸೌರ ವಿದ್ಯುತ್ತನ್ನು ಲೆಕ್ಕಾಚಾರ ಮಾಡಿದರೆ, ಆ ಮೂರು ತಿಂಗಳ ವಿದ್ಯುತ್‌ನಿಂದ 68 ಲಕ್ಷ ಮನೆಗಳಿಗೆ ಒಂದು ವರ್ಷಕ್ಕೆ ಸಾಕಾಗುವಷ್ಟು ವಿದ್ಯುತ್ ಒದಗಿಸಬಹುದಿತ್ತು!

ಈ ಸಮಸ್ಯೆಗೆ ಕಾರಣ ಸೂರ್ಯನ ಬೆಳಕಿನ ಕೊರತೆಯಲ್ಲ. ಬದಲಿಗೆ, ಲಾರಿಗಳ ಕೊರತೆ! ಸೌರ ಮತ್ತು ವಾಯು ವಿದ್ಯುತ್ ಘಟಕಗಳನ್ನು ಅತ್ಯಂತ ವೇಗವಾಗಿ ನಿರ್ಮಿಸಲಾಗುತ್ತಿದ್ದು, ಇವು ವಿದ್ಯುತ್ತನ್ನು ದೇಶಾದ್ಯಂತ ಸಾಗಿಸುವ ತಂತಿಗಳು ಮತ್ತು ಉಪ ಕೇಂದ್ರಗಳಂತಹ ಸಾಗಾಣಿಕಾ ಜಾಲಕ್ಕಿಂತಲೂ ಹೆಚ್ಚು ವೇಗವಾಗಿ ನಿರ್ಮಾಣಗೊಳ್ಳುತ್ತಿವೆ. ಒಂದು ವೇಳೆ ವಿದ್ಯುತ್ ಘಟಕ 120 ಯುನಿಟ್ ವಿದ್ಯುತ್ ಉತ್ಪಾದಿಸಿ, ತಂತಿಗಳು ಕೇವಲ 100 ಯುನಿಟ್ ಒಯ್ಯಬಲ್ಲವಾದರೆ, ಆ ಹೆಚ್ಚುವರಿ 20 ಯುನಿಟ್‌ಗಳಿಗೆ ತೆರಳಲು ಅವಕಾಶ ಇರುವುದಿಲ್ಲ. ಈ ತಂತಿಗಳ ರಾಷ್ಟ್ರೀಯ ಜಾಲವನ್ನು ಗ್ರಿಡ್ ಎಂದು ಕರೆಯಲಾಗುತ್ತದೆ. ಆಗ ಈ ಗ್ರಿಡ್‌ಗಳ ನಿರ್ವಾಹಕರು ವಿದ್ಯುತ್ ಘಟಕಗಳಿಗೆ ಕೊಂಚ ನಿಧಾನಿಸಲು ಅಥವಾ ಪೂರೈಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಸೂಚಿಸಬೇಕಾಗುತ್ತದೆ. ಈ ಪ್ರಕ್ರಿಯೆಯನ್ನು 'ಕರ್ಟೇಲ್‌ಮೆಂಟ್' ಎಂದು ಕರೆಯಲಾಗುತ್ತದೆ. ಇದು ಗ್ರಿಡ್ ಅನ್ನು ಸ್ಥಿರವಾಗಿರಿಸಿದರೂ, ಉತ್ತಮ ಪ್ರಮಾಣದ ವಿದ್ಯುತ್ ನಷ್ಟವಾಗುತ್ತದೆ.

ವಿದ್ಯುತ್ತಿನ ಸಂಗ್ರಹಣೆ ಈ ಉತ್ತರದ ಇನ್ನೊಂದು ಭಾಗ. ಭಾರತ ಎರಡು ರೀತಿಯ ಸಂಗ್ರಾಹಕಗಳನ್ನು ಬಳಸುತ್ತದೆ. ಮೊದಲನೆಯದು ಬ್ಯಾಟರಿ ವಿದ್ಯುತ್ ಸಂಗ್ರಹ ವ್ಯವಸ್ಥೆಯಾಗಿದ್ದು, ಮೊಬೈಲ್ ಫೋನ್ ಬ್ಯಾಟರಿಯನ್ನು ಒಂದು ದೊಡ್ಡ ಕಟ್ಟಡದ ಗಾತ್ರಕ್ಕೆ ಬೆಳೆಸಲಾಗುತ್ತದೆ. ಇನ್ನೊಂದು ಪಂಪ್ ಮಾಡಲಾದ ಜಲ ವಿದ್ಯುತ್ ಸಂಗ್ರಹ. ಇಲ್ಲಿ ಹೆಚ್ಚುವರಿ ವಿದ್ಯುತ್ ಹಗಲಿನ ವೇಳೆ ನೀರನ್ನು ಒಂದು ಎತ್ತರದ ಅಣೆಕಟ್ಟಿಗೆ ಎತ್ತುತ್ತದೆ. ಬಳಿಕ ಸಂಜೆಯಾದಾಗ ಅದೇ ನೀರು ಟರ್ಬೈನ್‌ಗಳ ಮೂಲಕ ಚಲಿಸಿ, ಮರಳಿ ವಿದ್ಯುತ್ ಉತ್ಪಾದಿಸುತ್ತದೆ. ಇಂದು ಭಾರತದ ಬಳಿ 2.9 ಗಿಗಾವ್ಯಾಟ್ ಬ್ಯಾಟರಿಗಳು ಮತ್ತು ಅಂದಾಜು 7.2 ಗಿಗಾವ್ಯಾಟ್ ಪಂಪ್ಡ್ ಹೈಡ್ರೋ ಸಂಗ್ರಹವಿದ್ದು, ಉತ್ಪಾದನೆಯಾಗುವ ಸೌರ ವಿದ್ಯುತ್‌ಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆಯಾಗಿದೆ.

ಭಾರತದ ಹೊಸ ಹಂತಕ್ಕೆ 1.86 ಲಕ್ಷ ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಇದು ಬಹುತೇಕ 135 ಗಿಗಾವ್ಯಾಟ್ ಮರುಬಳಕೆ ಮಾಡಬಲ್ಲ ವಿದ್ಯುತ್ತನ್ನು ಘಟಕದಿಂದ ಬಳಕೆದಾರರ ಬಳಿಗೆ ಒಯ್ಯಲಿದೆ. ಈ ಮೊತ್ತದಲ್ಲಿ, 50,000 ಕೋಟಿ ರೂಪಾಯಿ 50 ಗಿಗಾವ್ಯಾಟ್ ಹವರ್ ಸಾಮರ್ಥ್ಯದ ಬೃಹತ್ ಬ್ಯಾಟರಿಗಳ ಖರೀದಿಗೆ ಬಳಕೆಯಾಗಲಿದೆ. ಇನ್ನು 1.36 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತ ವಿದ್ಯುತ್ ತಂತಿಗಳು ಮತ್ತು ರಾಜ್ಯಗಳೊಳಗೆ ಉಪ ಕೇಂದ್ರಗಳನ್ನು ನಿರ್ಮಿಸಲು ಬಳಕೆಯಾಗಲಿದೆ.

ಈ ವ್ಯವಸ್ಥೆಗಳು ರಾಜ್ಯಗಳ ಗಡಿಗಳಾಚೆಗೆ ವಿದ್ಯುತ್ ಒಯ್ಯುವುದಕ್ಕಿಂತಲೂ, ಉದಾಹರಣೆಗೆ ಬೆಂಗಳೂರಿನಿಂದ ಮೈಸೂರಿನ ರೀತಿಯಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ವಿದ್ಯುತ್ ಸಾಗಿಸಲು ನೆರವಾಗಲಿವೆ. ಕೇಂದ್ರ ಸರ್ಕಾರ ಈ ಯೋಜನೆಗೆ 54,082 ಕೋಟಿ ರೂಪಾಯಿ ಬೆಂಬಲ ಒದಗಿಸಲಿದ್ದು, ಈ ವ್ಯವಸ್ಥೆ ವಿದ್ಯುತ್ ಸಾಗಾಣಿಕಾ ವೆಚ್ಚ ಮತ್ತು ಮನೆಗಳ ವಿದ್ಯುತ್ ಬಿಲ್ ಎರಡನ್ನೂ ಕಡಿಮೆಗೊಳಿಸಲಿದೆ ಎಂದಿದೆ. ಯಾವ ಕಂಪನಿ ಕನಿಷ್ಠ ಮೊತ್ತವನ್ನು ನಮೂದಿಸುತ್ತದೆಯೋ, ಆ ಕಂಪನಿಗೆ ನೂತನ ವಿದ್ಯುತ್ ಲೈನ್‌ಗಳು ಸಿಗಲಿವೆ. ಹಳೆಯ ವಿದ್ಯುತ್ ತಂತಿಗಳನ್ನು ಒಂದು ನಿರ್ಧರಿತ ಮೊತ್ತದಲ್ಲಿ ಬಲವರ್ಧಿಸಲಾಗುತ್ತದೆ. ಇದೆಲ್ಲ ಕಾರ್ಯಗಳೂ 2032-33ರಲ್ಲಿ ಪೂರ್ಣಗೊಳ್ಳಬೇಕು.

ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಸಂತೋಷ್ ಕುಮಾರ್ ಸಾರಂಗಿ ಅವರು ವಾಸ್ತವ ಸಮಸ್ಯೆಯನ್ನು ವಿವರಿಸಿದ್ದಾರೆ. 2030ರಿಂದ 2035-36ರ ನಡುವೆ ಭಾರತ ಅಂದಾಜು 400 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿ ಹೊಂದಿದ್ದು, ಇದನ್ನು ನಿರ್ವಹಿಸಲು ರಾಜ್ಯಗಳು 160 ಗಿಗಾವ್ಯಾಟ್ ಹೆಚ್ಚುವರಿ ತಂತಿಗಳನ್ನು ಹೊಂದಬೇಕಾಗುತ್ತದೆ. ನೂತನ ಹಂತ ಅದರಲ್ಲಿ 135 ಗಿಗಾವ್ಯಾಟ್ ಪೂರೈಸಲಿದೆ. ಇದು ಭಾರತದ ಪ್ರಯತ್ನವನ್ನು ಇನ್ನಷ್ಟು ವಿಸ್ತರಿಸಲಿದೆ. ಮೊದಲ ಹಂತ ಎಂಟು ರಾಜ್ಯಗಳನ್ನು ವ್ಯಾಪಿಸಿದರೆ, ಎರಡನೇ ಹಂತ ಏಳು ರಾಜ್ಯಗಳನ್ನು ವ್ಯಾಪಿಸಿತು. ಬಹುತೇಕ ನವೀಕರಿಸಬಹುದಾದ ಇಂಧನ ಯೋಜನೆಗಳು ಇಂದಿಗೂ ಕೇವಲ ಐದು ರಾಜ್ಯಗಳಲ್ಲಷ್ಟೇ ಇವೆ. ಆದರೆ, ಈ ಬಾರಿ ಕನಿಷ್ಠ 13 ರಾಜ್ಯಗಳು ಪ್ರಸ್ತಾವನೆ ಸಲ್ಲಿಸಿವೆ.

ಹಾಗೆಂದು ಇದಾವುದೂ ಸುಲಭ ಸಾಧ್ಯವಲ್ಲ. ಹಿಂದಿನ ಎರಡೂ ಹಂತಗಳು ವಿಳಂಬಗೊಂಡಿದ್ದವು. ಮೊದಲ ಹಂತ ಈಗ ಮಾರ್ಚ್ 2027ರಲ್ಲಿ ಮತ್ತು ಎರಡನೇ ಹಂತ 2028ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಗಳಿವೆ.

ಅದೇನೇ ಇದ್ದರೂ, ಅಂತಿಮ ಗುರಿ ನಿಜಕ್ಕೂ ಈ ತಾಳ್ಮೆಗೆ ಅರ್ಹವಾಗಿದೆ. ಇಂದಿನ ಬ್ಯಾಟರಿಗಳು ಅಂದಾಜು 2.9 ಗಿಗಾವ್ಯಾಟ್ ವಿದ್ಯುತ್ ಒದಗಿಸಿದರೆ, 2035-36ರ ವೇಳೆಗೆ ಇದಕ್ಕಿಂತ ಬಹುತೇಕ 30 ಪಟ್ಟು, ಅಂದರೆ 80 ಗಿಗಾವ್ಯಾಟ್ ಸಾಮರ್ಥ್ಯದ ಬ್ಯಾಟರಿ ಹೊಂದುವ ಗುರಿಯನ್ನು ಸೆಂಟ್ರಲ್ ಇಲೆಕ್ಟ್ರಿಸಿಟಿ ಅಥಾರಿಟಿ ಹೊಂದಿದೆ. ಇವೆಲ್ಲ ವಿದ್ಯುತ್ ಸಂಗ್ರಾಹಕಗಳನ್ನು ಇಂಜಿನಿಯರ್‌ಗಳು ಮತ್ತು ಸುಡು ಬಿಸಿಲು ಮತ್ತು ಧೂಳಿನಲ್ಲಿ ಕೆಲಸ ಮಾಡುವ ಕಾರ್ಮಿಕರು ತುಂಬಬೇಕಿದೆ. ಇವರ ಪರಿಶ್ರಮದ ಫಲವಾಗಿ, ಮನೆಯೊಳಗೆ ಸಂಜೆಯ ಮೇಲೆ ಹೋಮ್ ವರ್ಕ್ ಮಾಡಲು ಕೂರುವ ಮಗುವಿನ ತಲೆಯ ಮೇಲೆ ರಾಜಸ್ಥಾನದ ಮಧ್ಯಾಹ್ನದ ಬಿಸಿಲಿನ ಶಕ್ತಿ ಫ್ಯಾನ್ ತಿರುಗಿಸಲಿದೆ!

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.