ಸಿನಿಮಾ ಸುದ್ದಿ

ಬಿಕಿನಿ ಫೋಟೋ ವೈರಲ್: ಡೀಪ್‌ಫೇಕ್ ವಿರುದ್ಧ ನಟಿ ರುಕ್ಮಿಣಿ ವಸಂತ್ ಗರಂ; ಕಾನೂನು ಹೋರಾಟದ ಎಚ್ಚರಿಕೆ!

ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಒಬ್ಬರ ವ್ಯಕ್ತಿತ್ವ ಹಾಗೂ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ವಿಷಯಗಳನ್ನು ಸೃಷ್ಟಿಸುವುದು ಅತ್ಯಂತ ಬೇಜವಾಬ್ದಾರಿಯುತ ಕೃತ್ಯ.

ಬಿಕಿನಿ ಫೋಟೋ ವೈರಲ್: ಡೀಪ್‌ಫೇಕ್ ವಿರುದ್ಧ ನಟಿ ರುಕ್ಮಿಣಿ ವಸಂತ್ ಗರಂ; ಕಾನೂನು ಹೋರಾಟದ ಎಚ್ಚರಿಕೆ!
ನಟಿ ರುಕ್ಮಿಣಿ ವಸಂತ್
Published On :

ಎಐ (Artificial Intelligence) ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ನಕಲಿ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಹಿನ್ನೆಲೆ, ನಟಿ ರುಕ್ಮಿಣಿ ವಸಂತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕಾನೂನು ಹಾಗೂ ಸೈಬರ್ ಕ್ರೈಂ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಹೇಳಿಕೆಯಲ್ಲಿ ನೀಡಿರುವ ನಟಿ, “ನನ್ನ ತಂಡ ಮತ್ತು ನಾನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ಎಐ-ಜನರೇಟೆಡ್ ಚಿತ್ರಗಳನ್ನು ಗಮನಿಸಿದ್ದೇವೆ. ಅವುಗಳಲ್ಲಿ ನನ್ನನ್ನು ತೋರಿಸಿರುವ ರೀತಿ ಸಂಪೂರ್ಣ ನಕಲಿ, ಕೃತಕವಾಗಿ ಸೃಷ್ಟಿಸಲ್ಪಟ್ಟವಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಇಂತಹ ಚಿತ್ರಗಳನ್ನು ಸೃಷ್ಟಿಸಿ ಹರಡುವವರ ವಿರುದ್ಧ ಕಿಡಿಕಾರಿರುವ ನಟಿ, “ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಒಬ್ಬರ ವ್ಯಕ್ತಿತ್ವ ಹಾಗೂ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ವಿಷಯಗಳನ್ನು ಸೃಷ್ಟಿಸುವುದು ಅತ್ಯಂತ ಬೇಜವಾಬ್ದಾರಿಯುತ ಕೃತ್ಯ. ಇದು ಕೇವಲ ಸುಳ್ಳು ಮಾಹಿತಿ ಹಂಚುವುದಲ್ಲ, ವೈಯಕ್ತಿಕ ಗೌಪ್ಯತೆಯ ಗಂಭೀರ ಉಲ್ಲಂಘನೆಯೂ ಆಗಿದೆ ಎಂದು ಹೇಳಿದ್ದಾರೆ.

ಈ ಪ್ರಕರಣವನ್ನು ತುಂಬಾ ಗಂಭೀರವಾಗಿ ಪರಿಗಣಿಸಿರುವುದಾಗಿ ನಟಿ ತಿಳಿಸಿದ್ದು, ನಕಲಿ ಚಿತ್ರಗಳನ್ನು ಸೃಷ್ಟಿಸಿದವರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಿರುವವರ ವಿರುದ್ಧ ಕಾನೂನು ಕ್ರಮ ಹಾಗೂ ಸೈಬರ್ ಕ್ರೈಂ ದೂರು ದಾಖಲಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇಂತಹ ಕೃತಕ ಚಿತ್ರಗಳನ್ನು ಹಂಚಿಕೊಳ್ಳುವುದು, ಫಾರ್ವರ್ಡ್ ಮಾಡುವುದು ಅಥವಾ ಅವುಗಳೊಂದಿಗೆ ತೊಡಗಿಸಿಕೊಳ್ಳುವುದು ತಪ್ಪು ಮಾಹಿತಿಗೆ ಬೆಂಬಲ ನೀಡಿದಂತಾಗುತ್ತದೆ. ಆದ್ದರಿಂದ ಸಾರ್ವಜನಿಕರು ಇಂತಹ ಪೋಸ್ಟ್‌ಗಳನ್ನು ಹಂಚದಂತೆ ಮನವಿ ಮಾಡುತ್ತೇನೆಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಎಐ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಸೆಲೆಬ್ರಿಟಿಗಳ ನಕಲಿ ಫೋಟೋಗಳು, ಡೀಪ್‌ಫೇಕ್ ವಿಡಿಯೋಗಳು ಹಾಗೂ ಮಾರ್ಪಡಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಹಲವು ಸಿನಿಮಾ ನಟಿಯರು ಹಾಗೂ ಸಾರ್ವಜನಿಕ ವ್ಯಕ್ತಿಗಳು ಕೂಡ ಇಂತಹ ಡೀಪ್‌ಫೇಕ್ ಮತ್ತು ಎಐ ದುರುಪಯೋಗದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ರುಕ್ಮಿಣಿ ವಸಂತ್ ಅವರ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಅನೇಕ ಅಭಿಮಾನಿಗಳು ಹಾಗೂ ಸಿನಿ ವಲಯದವರು ನಟಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.