ಬಿಹಾರದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ? ಮಂದಾರ್ ಬೆಟ್ಟದಲ್ಲಿ ಯುವತಿಗೆ ಕಾಮುಕರಿಂದ ಕಿರುಕುಳ; ಒಂದೇ ವಾರದಲ್ಲಿ 3ನೇ ಪ್ರಕರಣ..!
ಅಷ್ಟಕ್ಕೇ ನಿಲ್ಲದ ಆರೋಪಿಗಳು, ಅಲ್ಲಿಂದ ಬಿಡಬೇಕಾದರೆ ಹಣ ನೀಡಬೇಕು ಎಂದು ಧಮಕಿ ಹಾಕಿದ್ದಾರೆ. ಅಂತಿಮವಾಗಿ ಮುಖ್ಯ ಆರೋಪಿ ಅಬ್ದುಲ್ಲಾ ಎಂಬಾತ ಯುವತಿಯ ಸ್ನೇಹಿತನಿಂದ ಆನ್‌ಲೈನ್ ಆಪ್ ಮೂಲಕ ರೂ,1,500 ಹಣವನ್ನು ಬಲವಂತವಾಗಿ ವರ್ಗಾಯಿಸಿಕೊಂಡು ನಂತರ ಅಲ್ಲಿಂದ ಹೋಗಲು ಬಿಟ್ಟಿದ್ದಾನೆ.

ಪಾಟ್ನಾ: ಬಿಹಾರದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯ ಪರಿಸ್ಥಿತಿ ದಿನದಿಂದ ದಿನಕ್ಕೆ ಆತಂಕಕಾರಿಯಾಗುತ್ತಿದೆ. ಇತ್ತೀಚೆಗಷ್ಟೇ ಜಮುಯಿ ಮತ್ತು ಸಮಸ್ತಿಪುರದಲ್ಲಿ ಯುವತಿಯರ ಮೇಲೆ ನಡೆದಿದ್ದ ದೌರ್ಜನ್ಯದ ಬೆನ್ನಲ್ಲೇ, ಇದೀಗ ಬಂಕಾ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮಂದಾರ್ ಬೆಟ್ಟದಲ್ಲಿ (Mandar Hill) ಯುವತಿಯೊಬ್ಬಳಿಗೆ ಸಾರ್ವಜನಿಕವಾಗಿ ಕಿರುಕುಳ ನೀಡಿರುವ ಮೂರನೇ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ಯುವತಿಯೊಬ್ಬಳು ತನ್ನ ಸ್ನೇಹಿತರೊಂದಿಗೆ ಮಂದಾರ್ ಬೆಟ್ಟಕ್ಕೆ ಭೇಟಿ ನೀಡಿದ್ದಾಗ ಸ್ಥಳೀಯ ಯುವಕರ ಗುಂಪೊಂದು ಆಕೆಯನ್ನು ಅಡ್ಡಗಟ್ಟಿದ್ದು, ಯುವತಿಯನ್ನು ಅಸಭ್ಯವಾಗಿ ಮುಟ್ಟಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದನ್ನು ತಡೆಯಲು ಬಂದ ಯುವತಿಯ ಸ್ನೇಹಿತರ ಮೇಲೂ ಕೋಲುಗಳಿಂದ ಹಲ್ಲೆ ನಡೆಸಿ, ಶರ್ಟ್ ಕಾಲರ್ ಹಿಡಿದು ಎಳೆದಾಡಿದ್ದಾರೆಂದು ತಿಳಿದುಬಂದಿದೆ.
ಅಷ್ಟಕ್ಕೇ ನಿಲ್ಲದ ಆರೋಪಿಗಳು, ಅಲ್ಲಿಂದ ಬಿಡಬೇಕಾದರೆ ಹಣ ನೀಡಬೇಕು ಎಂದು ಧಮಕಿ ಹಾಕಿದ್ದಾರೆ. ಅಂತಿಮವಾಗಿ ಮುಖ್ಯ ಆರೋಪಿ ಅಬ್ದುಲ್ಲಾ ಎಂಬಾತ ಯುವತಿಯ ಸ್ನೇಹಿತನಿಂದ ಆನ್‌ಲೈನ್ ಆಪ್ ಮೂಲಕ ರೂ.1,500 ಹಣವನ್ನು ಬಲವಂತವಾಗಿ ವರ್ಗಾಯಿಸಿಕೊಂಡು ನಂತರ ಅಲ್ಲಿಂದ ಹೋಗಲು ಬಿಟ್ಟಿದ್ದಾನೆ.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಬೌನ್ಸಿ ಪೊಲೀಸ್ ಠಾಣೆಯ ಅಧಿಕಾರಿಗಳು ತಕ್ಷಣವೇ ತನಿಖೆ ಆರಂಭಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಐಟಿ ಕಾಯ್ದೆಯಡಿ ಆರು ಮಂದಿ ವಿರುದ್ಧ FIR ದಾಖಲಿಸಿದ್ದಾರೆ.
ಪ್ರಮುಖ ಆರೋಪಿಗಳಾದ ಅಬ್ದುಲ್ಲಾ, ನಿತೀಶ್ ಕುಮಾರ್ ರೈ ಮತ್ತು ವಿಕಾಸ್ ಕುಮಾರ್ ಸೇರಿದಂತೆ ಇತರರನ್ನು ಬಂಧಿಸಲು ಪೊಲೀಸ್ ತಂಡಗಳು ವಿವಿಧೆಡೆ ತೀವ್ರ ದಾಳಿ ನಡೆಸುತ್ತಿವೆ.
ಈ ದೃಶ್ಯ ಜೂನ್ 3ರಂದು ಚಿತ್ರೀಕರಿಸಿರುವಂತೆ ಕಂಡುಬಂದಿದ್ದು, ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದೇ ವೇಳೆ, ಘಟನೆಯ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟವರು ಹಾಗೂ ಯುವತಿಯ ಗುರುತನ್ನು ಬಹಿರಂಗಪಡಿಸಲು ಯತ್ನಿಸಿದವರ ವಿರುದ್ಧವೂ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಗೆ ಕೆಲ ದಿನಗಳ ಮೊದಲು ಜಮುಯಿಯಲ್ಲಿ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಆರೋಪ ಕೇಳಿಬಂದಿತ್ತು. ಅದಕ್ಕೂ ಮುನ್ನ ಸಮಸ್ತಿಪುರದಲ್ಲಿ ಯುವತಿಯೊಬ್ಬರಿಗೆ ಕಿರುಕುಳ ನೀಡಿದ ದೃಶ್ಯವಿರುವ ವಿಡಿಯೊ ಹರಿದಾಡಿದ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



