ಗರ್ಭಕೋಶವನ್ನೇ ಕೈಯಿಂದ ಕಿತ್ತು ಬಿಸಾಕೋಣ ಅನಿಸಿತ್ತು; ವಿಪರೀತ ಮೂಡ್ ಸ್ವಿಂಗ್ಸ್: 'ಆ' ದಿನಗಳ ಭೀಕರತೆ ಬಿಚ್ಚಿಟ್ಟ ನಟಿ ಐಶ್ವರ್ಯಾ!
ಖ್ಯಾತ ಮಲೆಯಾಳಂ ನಟರಾದ ಮಮ್ಮುಟ್ಟಿ, ಮೋಹನ್‌ಲಾಲ್ ಅವರಂತಹ ಸ್ಟಾರ್ ನಟರ ಜೊತೆ ಮಿಂಚಿದ್ದ ಐಶ್ವರ್ಯ ಅವರು, ಜೀವನೋಪಾಯಕ್ಕಾಗಿ ಸೋಪು, ಕೇಕ್ ಮಾರುವ ಪರಿಸ್ಥಿತಿಗೆ ತಲುಪಿದ್ದರು.

ಮಲಯಾಳಿ ಪ್ರೇಕ್ಷಕರಲ್ಲಿ ಅತ್ಯಂತ ಹೆಚ್ಚು ಜನಪ್ರಿಯರಾಗಿರುವ ಖ್ಯಾತ ಹಿರಿಯ ನಟಿ ಐಶ್ವರ್ಯಾ ಭಾಸ್ಕರನ್ ಅವರು ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದ ಕಠಿಣ ಹಂತ ಹಾಗೂ 'ಮೆನೋಪಾಸ್'(ಮುಟ್ಟು ನಿಲ್ಲುವ ಸಮಯ) ಸಮಯದಲ್ಲಿ ತಾವು ಅನುಭವಿಸಿದ ದೈಹಿಕ ಮತ್ತು ಮಾನಸಿಕ ಕಿರುಕುಳದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಒಂದು ಕಾಲದಲ್ಲಿ ಖ್ಯಾತ ಮಲೆಯಾಳಂ ನಟರಾದ ಮಮ್ಮುಟ್ಟಿ, ಮೋಹನ್‌ಲಾಲ್ ಅವರಂತಹ ಸ್ಟಾರ್ ನಟರ ಜೊತೆ ಮಿಂಚಿದ್ದ ಐಶ್ವರ್ಯ ಅವರು, ಜೀವನೋಪಾಯಕ್ಕಾಗಿ ಸೋಪು, ಕೇಕ್ ಮಾರುವ ಪರಿಸ್ಥಿತಿಗೆ ತಲುಪಿದ್ದರು. ಈಗ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗುತ್ತಿರುವ ಅವರು ತಮ್ಮ 'ಟ್ರಾಮಾ' ದಿನಗಳನ್ನು ನೆನೆದಿದ್ದಾರೆ.
ಮೆನೋಪಾಸ್ ಹಂತದ ಸವಾಲುಗಳು
ನನಗೆ 46-47ನೇ ವಯಸ್ಸಿನಲ್ಲಿ ಮೆನೋಪಾಸ್ ಆರಂಭವಾಯಿತು ಎಂದು ತಿಳಿಸಿದ ಐಶ್ವರ್ಯಾ, ಆ ಸಮಯದಲ್ಲಿ ಎಸಿ ರೂಮ್‌ನಲ್ಲಿದ್ದರೂ ವಿಪರೀತ ಬೆವರುತ್ತಿದ್ದ ದಿನಗಳನ್ನು ಹಂಚಿಕೊಂಡಿದ್ದಾರೆ.
"ಮೂರು ತಿಂಗಳಿಗೊಮ್ಮೆ ಮುಟ್ಟಾಗುತ್ತಿದ್ದ ಕಾರಣ ಯಾವಾಗಲೂ ಪ್ಯಾಡ್ ಇಟ್ಟುಕೊಂಡು ಓಡಾಡಬೇಕಿತ್ತು. ವಿಪರೀತ ಮೂಡ್ ಸ್ವಿಂಗ್ಸ್, ಕಾರಣವಿಲ್ಲದೆ ಅಳು ಹಾಗೂ ಕೋಪ ನನ್ನನ್ನು ಕಾಡುತ್ತಿತ್ತು" ಎಂದು ನಟಿ ವಿವರಿಸಿದ್ದಾರೆ.
ಯೋಗದ ಮೂಲಕ ಬದಲಾವಣೆ
ಈ ಸಂಕಟದಿಂದ ಹೊರಬರಲು ನಾನು ಯೋಗಾಭ್ಯಾಸ ಆರಂಭಿಸಿದೆ. ಆರಂಭದಲ್ಲಿ 40 ದಿನಗಳ ಕಾಲ ಯೋಗ ಮಾಡಿದಾಗ ವಿಪರೀತ ರಕ್ತಸ್ರಾವ ಕಾಣಿಸಿಕೊಂಡಿತ್ತು. "ಕೇರಳದಲ್ಲಿ ಶೂಟಿಂಗ್‌ನಲ್ಲಿದ್ದಾಗ ವಿಪರೀತ ನೋವಿನಿಂದ ನನ್ನ ಗರ್ಭಕೋಶವನ್ನೇ ಕಿತ್ತು ಎಸೆಯೋಣ ಎನ್ನುವಷ್ಟು ಹಿಂಸೆಯಾಗಿತ್ತು" ಎಂದು ಆ ದಿನಗಳ ಭೀಕರತೆಯನ್ನು ಐಶ್ವರ್ಯ ಬಿಚ್ಚಿಟ್ಟಿದ್ದಾರೆ.
ಆದರೆ, ತಾಯಿಯ ಸಲಹೆಯಂತೆ ಯೋಗವನ್ನು ಮುಂದುವರಿಸಿದ ಐಶ್ವರ್ಯಾ ಅವರಿಗೆ ಅದ್ಭುತ ಫಲಿತಾಂಶ ಸಿಕ್ಕಿದೆ. ಸದ್ಗುರು ಅವರ ಯೋಗ ತರಗತಿಗಳಿಂದ ತಮ್ಮ ದೈಹಿಕ ಸಮಸ್ಯೆಗಳು, ಮೂಡ್ ಸ್ವಿಂಗ್ಸ್ ಮತ್ತು ಬೆವರುವಿಕೆ ಸಂಪೂರ್ಣವಾಗಿ ನಿಂತುಹೋಗಿದ್ದು, ಈಗ ಮನಸ್ಸು ಮತ್ತು ದೇಹ ಎರಡೂ ತಮ್ಮ ನಿಯಂತ್ರಣದಲ್ಲಿವೆ ಎಂದು ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ನಟಿಯ ಈ ಧೈರ್ಯದ ಮಾತುಗಳು ಮೆನೋಪಾಸ್ ಹಂತದಲ್ಲಿರುವ ಸಾವಿರಾರು ಮಹಿಳೆಯರಿಗೆ ಸ್ಫೂರ್ತಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



