ಸಿನಿಮಾ ಸುದ್ದಿ

'ಕ್ಷಮೆ ಕೇಳದ ಹೊರತು ಹೊರಗೆ ಕಳಿಸಲ್ಲ': ತೆಲುಗು ಬಿಗ್ ಬಾಸ್ ನಲ್ಲಿ ಹೈಡ್ರಾಮಾ; ನಟಿ ಸಂಜನಾ ಗಲ್ರಾನಿಗೆ ನಟ ನಾಗಾರ್ಜುನ ತಪರಾಕಿ! Video

ಮನೆಯಲ್ಲಿನ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಶೋ ನಿರೂಪಕ ನಟ ನಾಗಾರ್ಜುನ ಮತ್ತು ನಟಿ ಸಂಜನಾ ಗಲ್ರಾನಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ನಟಿ ಸಂಜನಾ ಶೋ ಬಿಟ್ಟು ಹೋಗುವ ಮಾತುಗಳನ್ನಾಡಿದ್ದಾರೆ.

'ಕ್ಷಮೆ ಕೇಳದ ಹೊರತು ಹೊರಗೆ ಕಳಿಸಲ್ಲ': ತೆಲುಗು ಬಿಗ್ ಬಾಸ್ ನಲ್ಲಿ ಹೈಡ್ರಾಮಾ; ನಟಿ ಸಂಜನಾ ಗಲ್ರಾನಿಗೆ ನಟ ನಾಗಾರ್ಜುನ ತಪರಾಕಿ! Video
ತೆಲುಗು ಬಿಗ್ ಬಾಸ್ ನಲ್ಲಿ ಹೈಡ್ರಾಮಾ
Published On :

ಹೈದರಾಬಾದ್: ಕನ್ನಡ ಬಿಗ್ ಬಾಸ್ ಷೋ ನಲ್ಲಿ ಸ್ಪರ್ಧಿಗಳ ಗಲಾಟೆ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಅತ್ತ ತೆಲುಗು ಬಿಗ್ ಬಾಸ್ ಶೋನಲ್ಲೂ ದೊಡ್ಡ ಹೈಡ್ರಾಮಾವೇ ನಡೆದಿದೆ.

ಮನೆಯಲ್ಲಿನ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಶೋ ನಿರೂಪಕ ನಟ ನಾಗಾರ್ಜುನ ಮತ್ತು ನಟಿ ಸಂಜನಾ ಗಲ್ರಾನಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ನಟಿ ಸಂಜನಾ ಶೋ ಬಿಟ್ಟು ಹೋಗುವ ಮಾತುಗಳನ್ನಾಡಿದ್ದಾರೆ.

ಆದರೆ ಇದಕ್ಕೆ ಆಸ್ಪದ ನೀಡದ ನಟ ನಾಗಾರ್ಜುನ ಸಂಜನಾರಿಂದ ಬಲವಂತವಾಗಿ ಕ್ಷಮೆ ಕೇಳುವಂತೆ ಮಾಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಈ ಹಿಂದೆ ಕನ್ನಡ ಬಿಗ್ ಬಾಸ್ ಶೋನಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ನಟಿ ಸಂಜನಾ ಗಲ್ರಾನಿ ಇದೀಗ ತೆಲುಗು ಬಿಗ್ ಬಾಸ್ ನಲ್ಲೂ ಸುದ್ದಿಗೆ ಗ್ರಾಸವಾಗಿದ್ದಾರೆ. ಸಂಜನಾ ಗಲ್ರಾನಿ ತೆಲುಗು ಬಿಗ್​​ ಬಾಸ್ ಸ್ಪರ್ಧಿಯಾಗಿ ಈ ವರೆಗೆ ಚೆನ್ನಾಗಿಯೇ ಆಡಿಕೊಂಡು ಬಂದಿದ್ದಾರೆ. ಹಲವರೊಟ್ಟಿಗೆ ಜಗಳ, ಮತ್ತೆ ಕೆಲವರೊಂದಿಗೆ ಸ್ನೇಹ ಮಾಡಿಕೊಂಡು ಟಾಸ್ಕ್ ಗಳಲ್ಲಿ ಭಾಗವಹಿಸಿದ್ದಾರೆ.

ಸಂಜನಾ ಇತಿಹಾಸ ಕೆದಕಿದ ನಾಗಾರ್ಜುನ

ಬರೊಬ್ಬರಿ 80 ದಿನಗಳಿಂದ ಬಿಗ್ ಬಾಸ್ ಮನೆಯಲ್ಲಿದ್ದ ನಟಿ ಸಂಜನಾ ಇದೀಗ ಸ್ಪರ್ಧಿಯೊಬ್ಬರ ಜಗಳ ವಿಚಾರಕ್ಕೆ ಸಂಬಂಧಿಸಿದಂತೆ ಷೋ ನಿರೂಪಕ ನಾಗಾರ್ಜುನ ಅವರಿಂದ ತಪರಾಕಿಗೆ ಗುರಿಯಾಗಿದ್ದಾರೆ. ಮಾತಿನ ಚಕಮಕಿ ವೇಳೆ ನಟ ನಾಗಾರ್ಜುನ ಸಂಜನಾ ಅವರ ಇತಿಹಾಸ ಕೂಡ ಕೆದಕಿ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಬೇರೆ ದಾರಿಯಿಲ್ಲದೆ ನಟಿ ಸಂಜನಾ ಶೋ ಬಿಟ್ಟು ಹೋಗುವ ಮಾತುಗಳನ್ನಾಡಿದ್ದು, ಇದಕ್ಕೆ ಸುತಾರಾಂ ಒಪ್ಪದ ನಟ ನಾಗಾರ್ಜುನ ಬಲವಂತವಾಗಿಯೇ ಸಂಜನಾರಿಂದ ಸ್ಪರ್ಧಿಗೆ ಮತ್ತು ವೀಕ್ಷಕರಿಗೆ ಕ್ಷಮೆ ಕೇಳಿಸಿದ್ದಾರೆ.

ಇಷ್ಟಕ್ಕೂ ಆಗಿದ್ದೇನು?

ಸಂಜನಾ ಅವರು ಸಹ ಸ್ಪರ್ಧಿಗಳಾದ ರಿತು ಮತ್ತು ಡಿಮನ್ ಪವನ್ ಬಗ್ಗೆ ಅನುಚಿತವಾದ ಹೇಳಿಕೆ ನೀಡಿದ್ದರು. ಅವರಿಬ್ಬರು ವರ್ತಿಸುವ ರೀತಿ ಅಶ್ಲೀಲವಾಗಿರುತ್ತದೆ ಎಂಬರ್ಥ ಬರುವಂತೆ ಸಂಜನಾ ಹೇಳಿದ್ದರು. ನೀವಿಬ್ಬರು ಮಾಡುವುದನ್ನು ಕಣ್ಣಿಂದ ನೋಡಲಾಗುವುದಿಲ್ಲ ಎಂದೆಲ್ಲ ಹೇಳಿದ್ದರು. ಇದು ಮನೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ರಿತು, ಪವನ್ ಮಾತ್ರವಲ್ಲದೆ ಸಂಜನಾಗೆ ಆಪ್ತರಾಗಿದ್ದ ಕೆಲವರು ಸಹ ಸಂಜನಾ ಹೇಳಿಕೆಯನ್ನು ಖಂಡಿಸಿದ್ದರು. ಆದರೆ ಸಂಜನಾ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿರಲಿಲ್ಲ. ಇದು ವಿವಾದಕ್ಕೆ ಕಾರಣವಾಗಿತ್ತು.

ನಾಗಾರ್ಜುನ ಗರಂ

ಇನ್ನು ಇದೇ ವಿವಾದದ ಕುರಿತು ವೀಕೆಂಡ್ ಪಂಚಾಯಿತಿನಲ್ಲಿ ನಟ ನಾಗಾರ್ಜುನ ಸಂಜನಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಪ್ರಶ್ನಿಸಿದಾಗ ಸಂಜನಾ ಹಾರಿಕೆ ಉತ್ತರ ನೀಡಿದರು. 'ನಾನು ಅವರಿಬ್ಬರ ಆಪ್ತತೆಯನ್ನು ನನಗೆ ನೋಡಲು ಆಗುವುದಿಲ್ಲ ಎಂದಷ್ಟೆ ಹೇಳಿದ್ದೇನೆ ಬೇರೇನು ಹೇಳಿಲ್ಲ ಎಂದರು. ಆದರೆ ನಾಗಾರ್ಜುನ ವಿಡಿಯೋ ಹಾಕಿ ಸಂಜನಾ ಹೇಳಿದ್ದೇನು ಎಂಬುದನ್ನು ಎಲ್ಲರ ಮುಂದಿಟ್ಟರು. ಮಾತ್ರವಲ್ಲದೆ ಸಂಜನಾ, ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಇಲ್ಲವಾದರೆ ಮನೆಯಿಂದ ಹೊರಡಬಹುದು ಎಂದು ಸಹ ನಾಗಾರ್ಜುನ ಕಠಿಣವಾಗಿಯೇ ಮಾತನಾಡಿದರು.

ಮನೆಯಿಂದ ಹೊರಗೆ ಹೋಗುತ್ತೇನೆ ಎಂದ ಸಂಜನಾಗೆ ಶಾಕ್ ಕೊಟ್ಟ ನಾಗಾರ್ಜುನ

ಈ ವೇಳೆ ಸಂಜನಾ, ತಮಗೆ ಯಾರ ದಾಕ್ಷಿಣ್ಯ ಬೇಕಿಲ್ಲ ನಾನು ಕ್ಷಮೆ ಕೇಳುವುದಿಲ್ಲ ಮನೆಯಿಂದ ಹೊರಗೆ ಹೋಗುತ್ತೇನೆ ಎಂದರು. ಇದಕ್ಕೆ ಒಪ್ಪದ ನಟ ನಾಗಾರ್ಜುನ, 'ಅದು ಸಾಧ್ಯವಿಲ್ಲ, ಒಬ್ಬ ಯುವತಿಯ ವ್ಯಕ್ತಿತ್ವದ ಬಗ್ಗೆ ಕಪ್ಪು ಚುಕ್ಕೆಯಂಥ ಆರೋಪ ಮಾಡಿ ಹಾಗೆ ಹೋಗಲು ಬಿಡುವುದಿಲ್ಲ. ರಿತು ಬಳಿ ಕ್ಷಮೆ ಕೇಳಲೇ ಬೇಕು' ಎಂದರು. ಕೊನೆಗೆ ನಾಗಾರ್ಜುನ ಮಾತಿಗೆ ಬಗ್ಗಿದ ಸಂಜನಾ ಕ್ಷಮೆ ಕೇಳಿದರು.

ಸಂಜನಾ ಡ್ರಗ್ಸ್ ವಿಚಾರ ಕೆದಕಿದ ನಾಗಾರ್ಜುನ

ಇನ್ನು ಈ ಚರ್ಚೆಯ ವೇಳೆ, ನಾಗಾರ್ಜುನ ಅವರು ಪರೋಕ್ಷವಾಗಿ ಸಂಜನಾರ ಡ್ರಗ್ಸ್ ವಿಷಯವನ್ನೂ ಉಲ್ಲೇಖಿಸಿದರು. 'ನೀವು ಹೊರಗೆ ಅಪರಾಧ ಮಾಡಿದ್ದೀರಾ, ನಿಮ್ಮ ಪಕ್ಕ ಗುರುತಿಸಿಕೊಳ್ಳಲು ನನಗೆ ಅಸಹ್ಯ ಆಗುತ್ತದೆ ಎಂದು ಮತ್ತೊಬ್ಬ ಸ್ಪರ್ಧಿ ಹೇಳಿದ್ದರೆ ನಿಮಗೆ ಹೇಗೆ ಅನಿಸುತ್ತಿತ್ತು ಎಂದು ಹೇಳಿದರು. ಅಸಲಿಗೆ ಅದು ಸಂಜನಾರ ಡ್ರಗ್ಸ್ ಪ್ರಕರಣ ಕುರಿತಾಗಿಯೇ ಆಗಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.